ಬುಧವಾರ, ಏಪ್ರಿಲ್ 14, 2021
32 °C

30 ರಂದು ಮೇಯರ್ ಚುನಾವಣೆ: ಶಾರದಮ್ಮ , ರೂಪಾ ನಡುವೆ ಪೈಪೋಟಿ

ಪ್ರಜಾವಾಣಿ ವಾರ್ತೆ / ಎಂ. ಕೀರ್ತಿಪ್ರಸಾದ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಬಿಎಂಪಿ ನೂತನ ಮೇಯರ್ ಹಾಗೂ ಉಪಮೇಯರ್ ಆಯ್ಕೆಗೆ ಇದೇ 30ರಂದು ಚುನಾವಣೆ ನಡೆಯಲಿದ್ದು, ಪರಿಶಿಷ್ಟ ಜಾತಿ ಮಹಿಳೆಗೆ ಮೀಸಲಾಗಿರುವ ಮೇಯರ್ ಸ್ಥಾನಕ್ಕೆ ಬಿಜೆಪಿಯ ಆರು ಸದಸ್ಯೆಯರು ತೀವ್ರ ಪೈಪೋಟಿ ಆರಂಭಿಸಿದ್ದಾರೆ.

ಶೆಟ್ಟಿಹಳ್ಳಿ ವಾರ್ಡ್‌ನ ಶಾರದಮ್ಮ ಹಾಗೂ ಬಿಳೇಕಹಳ್ಳಿ ವಾರ್ಡ್‌ನ ರೂಪಾ ರಮೇಶ್ ಮೇಯರ್ ಹುದ್ದೆಗೆ ಪ್ರಬಲ ಪ್ರತಿಸ್ಪರ್ಧಿಗಳಾಗಿದ್ದಾರೆ. ಬಿಬಿಎಂಪಿಯ ಮೇಯರ್ ಮತ್ತು ಉಪಮೇಯರ್ ಹುದ್ದೆಗಳಿಗೆ 12ನೇ ಅವಧಿಗೆ ಚುನಾವಣೆ ನಡೆಯುತ್ತಿದೆ. ರಾಜ್ಯ ಸರ್ಕಾರ ನಿಗದಿಪಡಿಸಿರುವ ಮೀಸಲಾತಿಯ ಪ್ರಕಾರ ಮೇಯರ್ ಹುದ್ದೆ ಪರಿಶಿಷ್ಟ ಜಾತಿ ಮಹಿಳೆ ಮತ್ತು ಉಪಮೇಯರ್ ಹುದ್ದೆ ‘ಹಿಂದುಳಿದ ವರ್ಗಗಳ-ಎ’ ಪ್ರವರ್ಗಕ್ಕೆ ಮೀಸಲಾಗಿದೆ. ಎರಡೂ ಸ್ಥಾನಗಳ ಮೇಲೆ ಕಣ್ಣಿಟ್ಟಿರುವ ಆಕಾಂಕ್ಷಿಗಳು ತೆರೆಮರೆಯಲ್ಲೇ ಕಸರತ್ತು ಆರಂಭಿಸಿದ್ದಾರೆ.

ಬಿಜೆಪಿಯಲ್ಲಿ ಪರಿಶಿಷ್ಟ ಜಾತಿಗೆ ಸೇರಿದ ಆರು ಮಹಿಳೆಯರಿದ್ದಾರೆ. ಶೆಟ್ಟಿಹಳ್ಳಿ ವಾರ್ಡ್‌ನ ಶಾರದಮ್ಮ, ಸರ್ವಜ್ಞನಗರದ ಜಿ.ಭುವನೇಶ್ವರಿ, ಹೊಯ್ಸಳನಗರದ ಸವಿತಾ ರಮೇಶ್ ಅವರು ಪರಿಶಿಷ್ಟ ಜಾತಿಗೆ ಮೀಸಲಿಡಲಾದ ವಾರ್ಡ್‌ಗಳಿಂದ ಆಯ್ಕೆಯಾಗಿದ್ದಾರೆ.

ಸಾಮಾನ್ಯ ವರ್ಗಕ್ಕೆ ಮೀಸಲಾಗಿದ್ದ ವಾರ್ಡ್‌ಗಳನ್ನು ಪ್ರತಿನಿಧಿಸುತ್ತಿರುವ ಛಲವಾದಿಪಾಳ್ಯದ ರೇಖಾ ಕದಿರೇಶ್, ಬಿಳೇಕಹಳ್ಳಿಯ ಎಂ. ರೂಪಾ ರಮೇಶ್ ಹಾಗೂ ನಾಯಂಡನಹಳ್ಳಿಯ ಎಚ್.ಎಸ್. ರಾಜೇಶ್ವರಿ ಆಯ್ಕೆಯಾಗಿದ್ದು, ರೂಪಾ ರಮೇಶ್ ಹೆಸರು ಮೇಯರ್ ಹುದ್ದೆಗೆ ಬಲವಾಗಿ ಕೇಳಿಬರುತ್ತಿದೆ.

ಸರ್ವಜ್ಞನಗರ ಹಾಗೂ ಹೊಯ್ಸಳನಗರ ವಾರ್ಡ್‌ಗಳು ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಒಳಪಟ್ಟಿವೆ. ಇದೇ ಕ್ಷೇತ್ರ ವ್ಯಾಪ್ತಿಯ ಬೆನ್ನಿಗಾನಹಳ್ಳಿ ವಾರ್ಡ್ ಸದಸ್ಯ ಎನ್. ದಯಾನಂದ್ ಅವರಿಗೆ ಈಗಾಗಲೇ ಉಪಮೇಯರ್ ಸ್ಥಾನ ನೀಡಲಾಗಿದೆ. ಹಾಗಾಗಿ ಈ ಇಬ್ಬರು ಮಹಿಳೆಯರಿಗೆ ಮೇಯರ್‌ಗಿರಿ ದೊರೆಯುವ ಸಾಧ್ಯತೆ ಕಡಿಮೆ ಎನ್ನಲಾಗಿದೆ.

ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದ ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಶೆಟ್ಟಿಹಳ್ಳಿ ವಾರ್ಡ್‌ನಿಂದ ಆಯ್ಕೆಯಾಗಿರುವ ಶಾರದಮ್ಮ ಆಯ್ಕೆ ಬಹುತೇಕ ಖಚಿತ ಎನಿಸಿದೆ.

ಉಪಮೇಯರ್ ಸ್ಥಾನಕ್ಕೂ ಸ್ಪರ್ಧೆ: ಉಪ ಮೇಯರ್ ಸ್ಥಾನವನ್ನು ‘ಹಿಂದುಳಿದ ವರ್ಗ-ಎ’ಗೆ ಮೀಸಲಿಡಲಾಗಿದೆ. ಉಪಮೇಯರ್ ಸ್ಥಾನಕ್ಕೆ ಶಾಕಂಬರಿನಗರ ವಾರ್ಡ್‌ನ ಸದಸ್ಯ, ಕುರುಬ ಸಮುದಾಯಕ್ಕೆ ಸೇರಿದ ಬಿ.ಸೋಮಶೇಖರ್ ಪ್ರಮುಖ ಆಕಾಂಕ್ಷಿ ಎನಿಸಿದ್ದಾರೆ. ಇವರಿಗೆ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರ ಕೃಪಾಕಟಾಕ್ಷವಿದೆ ಎನ್ನಲಾಗಿದೆ.

ಇದೇ ಸಮುದಾಯಕ್ಕೆ ಸೇರಿದ ಮಾರುಕಟ್ಟೆ ಸ್ಥಾಯಿ ಸಮಿತಿ ಅಧ್ಯಕ್ಷ ಪದ್ಮರಾಜ್ ಕೂಡ , ಉಪಮೇಯರ್ ಸ್ಥಾನಕ್ಕಾಗಿ ಲಾಬಿ ಆರಂಭಿಸಿದ್ದಾರೆ. ಆದರೆ ರಾಜಾಜಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್‌ಗಳಿಂದ ಗೆದ್ದುಬಂದಿರುವ ಕೆ.ರಂಗಣ್ಣ ಹಾಗೂ ಪದ್ಮರಾಜ್ ಅವರಿಗೆ ಈಗಾಗಲೇ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ನೀಡಿರುವ ಕಾರಣ ಪದ್ಮರಾಜ್ ಅವರನ್ನು ಪರಿಗಣಿಸದೇ ಇರುವ ಸಾಧ್ಯತೆಯೂ ಇದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಪ್ರಾದೇಶಿಕ ಆಯುಕ್ತರಿಂದ ಪತ್ರ: ಬಿಬಿಎಂಪಿಯ ನೂತನ ಮೇಯರ್, ಉಪಮೇಯರ್ ಚುನಾವಣೆಯ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಲಿರುವ ಬೆಂಗಳೂರು ಪ್ರಾದೇಶಿಕ ಆಯುಕ್ತ ಎಸ್.ಎನ್.ಜಯರಾಂ ಅವರಿಗೆ ಸಲ್ಲಿಸಿರುವ ಪ್ರಸ್ತಾವದಲ್ಲಿ ಮಾಹಿತಿಯ ಕೊರತೆ ಇದ್ದು, ಗೊಂದಲಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಕೆಲ ವಿಷಯಗಳ ಬಗ್ಗೆ ಸ್ಪಷ್ಟೀಕರಣ ಕೇಳಿ ಅವರು ಬಿಬಿಎಂಪಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

‘ನೂತನ ಮೇಯರ್, ಉಪಮೇಯರ್ ಚುನಾವಣೆಗೆ ಸಂಬಂಧಪಟ್ಟಂತೆ ಪಾಲಿಕೆ ಆಯುಕ್ತರು ನೀಡಿರುವ ಮಾಹಿತಿಯಲ್ಲಿ ಮೀಸಲಾತಿಯ ವಿವರ ಸ್ಪಷ್ಟವಾಗಿಲ್ಲ. ಹಾಗಾಗಿ ಮೀಸಲಾತಿಯ ನಿಖರ ವಿವರ ನೀಡುವಂತೆ ಆಯುಕ್ತರಿಗೆ ಪತ್ರ ಬರೆಯಲಾಗಿದೆ. ಮೇಯರ್, ಉಪಮೇಯರ್ ಆಯ್ಕೆಗೆ ಚುನಾವಣೆ ನಡೆಯುವ ದಿನವೇ ಎಲ್ಲ ಸ್ಥಾಯಿ ಸಮಿತಿಗಳಿಗೂ ಚುನಾವಣೆ ನಡೆಯಬೇಕು ಎಂಬ ನಿಯಮವಿದೆ. ಆ ಹಿನ್ನೆಲೆಯಲ್ಲಿ ಸ್ಪಷ್ಟ ಮಾಹಿತಿ ನೀಡುವಂತೆ ನಗರಾಭಿವೃದ್ಧಿ ಇಲಾಖೆ ಮತ್ತು ಪಾಲಿಕೆ ಆಯುಕ್ತರಿಗೆ ಪ್ರತ್ಯೇಕ ಪತ್ರ ಬರೆಯಲಾಗಿದೆ’ ಎಂದು ಜಯರಾಂ ‘ಪ್ರಜಾವಾಣಿ’ಗೆ ತಿಳಿಸಿದರು.

ಕೋರ್ಟ್ ಮೆಟ್ಟಿಲೇರಿದ ವಿವಾದ: ಕರ್ನಾಟಕ ಪ್ರದೇಶ ಕುರುಬರ ಸಂಘವು ಬಿಬಿಎಂಪಿ ಮೇಯರ್ ಸ್ಥಾನವನ್ನು ‘ಹಿಂದುಳಿದ ವರ್ಗ ಎ’ ಅಭ್ಯರ್ಥಿಗೆ ಕಾಯ್ದಿರಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿರುವ ವಿಶೇಷ ಮೇಲ್ಮನವಿ ವಿಚಾರಣೆಯನ್ನು ಇದೇ 18ಕ್ಕೆ ಮುಂದೂಡಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.