30 ವರ್ಷಗಳ ನಿರಂಕುಶ ಆಡಳಿತಕ್ಕೆ ತಕ್ಕ ಶಾಸ್ತಿ: ಹೋಸ್ನಿ ಪದತ್ಯಾಗ

7

30 ವರ್ಷಗಳ ನಿರಂಕುಶ ಆಡಳಿತಕ್ಕೆ ತಕ್ಕ ಶಾಸ್ತಿ: ಹೋಸ್ನಿ ಪದತ್ಯಾಗ

Published:
Updated:

ಕೈರೊ (ಡಿಪಿಎ, ಪಿಟಿಐ): ಈಜಿಪ್ಟ್‌ನ ವಿವಾದಿತ ಅಧ್ಯಕ್ಷ ಹೋಸ್ನಿ ಮುಬಾರಕ್ ಕೊನೆಗೂ ರಾಜೀನಾಮೆ ಸಲ್ಲಿಸಿದ್ದಾರೆ. ದೇಶದ ಆಡಳಿತವನ್ನು ಸೇನೆ ವಹಿಸಿಕೊಂಡಿದೆ. ಈ ಮೂಲಕ ನಿರಂತರ 30 ವರ್ಷಗಳ ಕಾಲ ನಡೆದ ಮುಬಾರಕ್ ಸರ್ವಾಧಿಕಾರಕ್ಕೆ ತೆರೆ ಬಿದ್ದಂತಾಗಿದೆ.

ಮುಂಬಾರಕ್ ರಾಜೀನಾಮೆ ನೀಡಿದ ನಿರ್ಧಾರವನ್ನು ಸರ್ಕಾರಿ ಟಿವಿಯಲ್ಲಿ ಉಪಾಧ್ಯಕ್ಷ ಒಮರ್ ಸುಲೇಮಾನ್ ಶುಕ್ರವಾರ ರಾತ್ರಿ ಪ್ರಕಟಿಸಿದರು. ಪ್ರತಿಭಟನಾಕಾರರಿಂದ ತಪ್ಪಿಸಿಕೊಳ್ಳಲು ಕೈರೊದಿಂದ ಪಲಾಯನ ಮಾಡಿದ್ದಾರೆ. ಉದ್ರಿಕ್ತ ಜನರು ಮುಬಾರಕ್‌ರನ್ನು ಪದಚ್ಯುತಿಗೊಳಿಸಲೇಬೇಕೆಂಬ ಉದ್ದೇಶದೊಂದಿಗೆ ಅಧ್ಯಕ್ಷರ ಅರಮನೆಯತ್ತ ಮುನ್ನುಗ್ಗುತ್ತಿದ್ದಾಗಲೇ, ಬೆದರಿದ ಅವರು ತಮ್ಮ ಸ್ಥಾನ ತೊರೆದಿದ್ದಾರೆ. ನಂತರ ದೇಶದ ದಕ್ಷಿಣ ಭಾಗದಲ್ಲಿನ ಸಮುದ್ರ ತಟದ ರೆಸಾರ್ಟ್ ಶರ್ಮ್-ಅಲ್-ಶೇಖ್‌ನತ್ತ ಅವರು ಪಲಾಯನ ಮಾಡಿದ್ದಾರೆ.

ವಿಜಯೋತ್ಸವ: ಅಧಿಕಾರ ತ್ಯಜಿಸುವಂತೆ ಜನತೆ ದೇಶದಾದ್ಯಂತ ಸತತ 18 ದಿನಗಳಿಂದ ಭಾರಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಈ ನಿರ್ಧಾರ ಹೊರಬಿದ್ದಿದೆ. ಮುಬಾರಕ್ ರಾಜೀನಾಮೆ ಪ್ರಕಟಣೆ ಹೊರಬೀಳುತ್ತಿದ್ದಂತೆಯೇ ಪ್ರತಿಭಟನಾಕಾರರು ಬೀದಿಗಿಳಿದು ವಿಜಯೋತ್ಸವ ಆಚರಿಸಿದರು.

ಸೆಪ್ಟೆಂಬರ್ ತನಕ ಪದತ್ಯಾಗ ಮಾಡುವುದಿಲ್ಲ ಎಂದು ಗುರುವಾರ ರಾತ್ರಿ ಖಡಾಖಂಡಿತವಾಗಿ ಮುಬಾರಕ್ ಹೇಳಿದ್ದರಿಂದ ಜನ ರೊಚ್ಚಿಗೆದ್ದಿದ್ದರು. ಪ್ರತಿಭಟನಾಕಾರರು ‘ಮಾಡು ಇಲ್ಲವೇ ಮಡಿ’ ಎಂಬ ನಿರ್ಧಾರಕ್ಕೆ ಬಂದಿದ್ದರು. ತಕ್ಷಣ ಪದತ್ಯಾಗ ಮಾಡಿಸುವ ಶಪಥ ತೊಟ್ಟಿದ್ದರು. ಅಧ್ಯಕ್ಷರಿಗೆ ಸೇನೆ ಸಹ ಪರೋಕ್ಷ ಬೆಂಬಲ ನೀಡುತ್ತಿರುವುದರಿಂದ ಜನರು ಇನ್ನಷ್ಟು ಕ್ರೋಧಗೊಂಡಿದ್ದರು. ಕೊನೆಗೂ ಮುಬಾರಕ್ ಜನರ ಕ್ರೋಧದ ಬಿಸಿಗೆ ಕರಗಿ ಹೋಗಿದ್ದಾರೆ.

ಮುಬಾರಕ್ ಸೇನಾಪಡೆಗಳ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಸಮಿ ಅನ್ನಾನ್ ಅವರೊಂದಿಗೆ ಸೇನಾ ವಿಮಾನದಲ್ಲಿ ಶರ್ಮ್ ಎಲ್ ಶೇಖ್‌ನ ಸಿನಾಯಿ ರೆಸಾರ್ಟ್‌ಗೆ ತೆರಳಿದ್ದಾರೆ ಎಂದು ಅಲ್ ಅರೇಬಿಯಾ ಟಿವಿ ಪ್ರಕಟಿಸಿದೆ. ಆದರೆ ಅಮೆರಿಕ ಮೂಲದ ಅಲ್-ಹುರ್ರಾ ಟಿವಿಯು ಅಧ್ಯಕ್ಷರು ಯುಎಇಯತ್ತ ಪ್ರಯಾಣ ಬೆಳೆಸಿದ್ದು ಶೀಘ್ರ ದುಬೈ ಸೇರುವ ನಿರೀಕ್ಷೆಯಿದೆ ಎಂದು ಹೇಳಿದೆ.

ಗುರುವಾರ ರಾತ್ರಿ ರಾಷ್ಟ್ರವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಮುಬಾರಕ್ ಅವರು ತಮ್ಮ ನಿರ್ಧಾರ ಪ್ರಕಟಿಸಿದರು. ಅಮೆರಿಕ, ಐರೋಪ್ಯ ದೇಶಗಳ ಒತ್ತಡಕ್ಕೆ ತಾವು ಮಣಿಯುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನೂ ನೀಡಿದ್ದರು.  ಈ ಮಾತನ್ನು ಕೇಳಿ ಕೈರೋದ ತಹ್ರೀರ್ ಸ್ಕ್ವೇರ್‌ನಲ್ಲಿ ಜಮಾಯಿಸಿದ್ದ ಪ್ರತಿಭಟನಾಕಾರರು ಒಂದರೆ ಘಳಿಗೆ ಸ್ತಂಭೀಭೂತರಾದರೂ ಬಳಿಕ ಸಾವರಿಸಿಕೊಂಡು ಪ್ರತಿಭಟನೆಯನ್ನು ಶುಕ್ರವಾರ ತೀವ್ರಗೊಳಿಸುವ ಪಣ ತೊಟ್ಟಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry