ಸೋಮವಾರ, ಆಗಸ್ಟ್ 19, 2019
28 °C

30 ವರ್ಷದಲ್ಲಿ ಕನ್ನಡಕ್ಕೆ ವಿಶ್ವಮಾನ್ಯತೆ

Published:
Updated:

ಬೆಂಗಳೂರು: `ಕನ್ನಡ ಭಾಷೆ ತ್ವರಿತಗತಿಯಲ್ಲಿ ಬೆಳವಣಿಗೆ ಸಾಧಿಸುತ್ತಿದೆ. ಮುಂದಿನ 30 ವರ್ಷಗಳಲ್ಲಿ ಕನ್ನಡ ಭಾಷೆ ವಿಶ್ವದ 20 ಪ್ರಮುಖ ಭಾಷೆಗಳಲ್ಲಿ ಒಂದಾಗಲಿದೆ. ಪ್ರಮುಖ ಭಾಷೆಗಳಾದ ಜರ್ಮನಿ, ಫ್ರೆಂಚ್ ಹಾಗೂ ರಷ್ಯ ಭಾಷೆಗಳನ್ನು ಕನ್ನಡ ಹಿಂದಿಕ್ಕಲಿದೆ' ಎಂದು ಭಾರತೀಯ ಜನಭಾಷಾ ಸಮೀಕ್ಷೆ (ಪಿಎಲ್‌ಎಸ್‌ಐ) ತಿಳಿಸಿದೆ.ನಗರಕ್ಕೆ ಭೇಟಿ ನೀಡಿರುವ ಪಿಎಸ್‌ಎಲ್‌ಐ ಅಧ್ಯಕ್ಷ ಪ್ರೊ.ಜಿ.ಎನ್.ದೇವಿ ಈ ವಿಷಯ ಬಹಿರಂಗಪಡಿಸಿದರು. ಕಳೆದ 17 ವರ್ಷಗಳಿಂದ ಅಧ್ಯಯನ ನಡೆಸುತ್ತಿರುವ ಈ ಸಮೀಕ್ಷಾ ತಂಡ ದೇಶದಾದ್ಯಂತ 780 ಭಾಷೆಗಳು ಹಾಗೂ 66 ಲಿಪಿಗಳನ್ನು ದಾಖಲೀಕರಣ ಮಾಡಿದೆ. ಈ ಮಾದರಿಯ ಸಮೀಕ್ಷೆ ದೇಶದಲ್ಲೇ ಮೊದಲನೆಯದು.`ಕರಾವಳಿ ಹಾಗೂ ಬುಡಕಟ್ಟು ಸಮುದಾಯದ ಜನರು ತಮ್ಮ ಭಾಷೆಯೊಂದಿಗೆ ಕನ್ನಡವನ್ನೂ ಬಳಸುತ್ತಿದ್ದಾರೆ. ಈ ಅಂಶ ಕನ್ನಡ ಭಾಷೆಯ ತೀವ್ರ ಬೆಳವಣಿಗೆಗೆ ಪೂರಕ ವಾಗಿದೆ. ಇದಲ್ಲದೆ ಕನ್ನಡ ಭಾಷೆ ಅಧಿಕ ಸಂಖ್ಯೆಯ ಜ್ಞಾನಪೀಠ ಪ್ರಶಸ್ತಿಗಳನ್ನು ಗಳಿಸಿದ ಹಿರಿಮೆಗೆ ಪಾತ್ರವಾಗಿದೆ. ಇವೆಲ್ಲ ಉತ್ತಮ ಬೆಳವಣಿಗೆಗಳು' ಎಂದು ದೇವಿ ತಿಳಿಸಿದರು.`ಒಂದು ಕಡೆಯಲ್ಲಿ ಕನ್ನಡ ಭಾಷೆ ಬೆಳವಣಿಗೆ ಹೊಂದುತ್ತಿದೆ. ಅದೇ ಹೊತ್ತಿಗೆ ರಾಜ್ಯದ ಕೆಲವು ಭಾಷೆಗಳು ಅಪಾಯದ ಅಂಚಿನಲ್ಲಿವೆ. ಕೊರಗ, ಬಡಗ, ಯೆರವ, ಇರುವ, ಸೋಲಿಗ, ಗೌಲಿ, ಬೆಟ್ಟ ಕುರುಬ, ಜೇನು ಕುರುಬ ಭಾಷೆಗಳು ಅಪಾಯ ಎದುರಿಸುತ್ತಿವೆ. ಹಕ್ಕಿಪಿಕ್ಕಿ ಹಾಗೂ ಸಿದ್ಧಿ ಭಾಷೆಗಳು ಹೆಚ್ಚಿನ ಅಪಾಯ ಎದುರಿಸುತ್ತಿವೆ. ಹಿರಿಯರು ಬಳಸುತ್ತಿರುವ ಕೆಲವು ಶಬ್ದಗಳು ಕಿರಿಯರಿಗೆ ಅರ್ಥವಾಗುತ್ತಿಲ್ಲ. ಇದು ಭಾಷೆ ಅವನತಿ ಹೊಂದುತ್ತಿರುವ ಸೂಚನೆ' ಎಂದು ಅವರು ವಿಶ್ಲೇಷಿಸಿದರು. ಯುನೆಸ್ಕೊ ಪ್ರಕಾರ ಭಾರತದಲ್ಲಿ 191 ಭಾಷೆಗಳು ಅಪಾಯದಲ್ಲಿವೆ' ಎಂದು ಅವರು ಮಾಹಿತಿ ನೀಡಿದರು.

`10,000 ಕ್ಕಿಂತ ಕಡಿಮೆ ಜನರು ಮಾತನಾಡುವ ಭಾಷೆಯನ್ನು ಅಪಾಯದಂಚಿನಲ್ಲಿರುವ ಭಾಷೆ ಎಂದು ಗುರುತಿಸಲಾಗಿದೆ.

Post Comments (+)