ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

30 ವರ್ಷವಾದರು ನೂಲು ಬಿಚ್ಚದ ಕಾರ್ಖಾನೆ

Last Updated 1 ಆಗಸ್ಟ್ 2013, 10:09 IST
ಅಕ್ಷರ ಗಾತ್ರ

ಮಳವಳ್ಳಿ: ಇಚ್ಚಾಶಕ್ತಿ ಕೊರತೆಯಿಂದಾಗಿ ನೂರಾರು ಜನರಿಗೆ ಉದ್ಯೋಗ ಒದಗಿಸಬೇಕಿದ್ದ ನೂಲು ಬಿಚ್ಚುವ ಕಾರ್ಖಾನೆಯ ಕಟ್ಟಡ ನಿರ್ಮಾಣ ಕಾರ್ಯ ಆರಂಭವಾಗಿ 30 ವರ್ಷ ಕಳೆದರೂ ಪೂರ್ಣವಾಗಿಲ್ಲ.

ತಾಲ್ಲೂಕಿನ ಪುರದದೊಡ್ಡಿ ಬಳಿ ಮಾಜಿ ಸಚಿವ ಬಿ. ಸೋಮಶೇಖರ್ ಅವರು ಚಿಂತನೆಯಿಂದ ಚಾಲನೆಗೊಂಡಿತ್ತು. ನೂಲು ಬಿಚ್ಚುವ ಕಾರ್ಖಾನೆ ಅಸ್ತಿತ್ವಕ್ಕಾಗಿ 1983ರಲ್ಲಿ `ಮಹದೇಶ್ವರ ಸಿಲ್ಕ್‌ಫಿಲೇಚರ್ ಪ್ಯಾಕ್ಟರಿ ಮತ್ತು ಕೈಗಾರಿಕಾ ಸಹಕಾರ ಸಂಘ(ನಿ) ಹೆಸರಿನಲ್ಲಿ ನೋಂದಣಿ ಮಾಡಿಸಲಾಗಿತ್ತು.

2,600 ಮಂದಿಯಿಂದ ಷೇರು ಹಣವಾಗಿ ರೂ.6,34,200, ಬೆಂಗಳೂರು ರೇಷ್ಮೆ ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘದಿಂದ ರೂ.1 ಲಕ್ಷ, ಸರ್ಕಾರದ ಷೇರು ರೂ.40,ಸಾವಿರ ಸೇರಿ ಒಟ್ಟು ರೂ.7,74,200 ಸಂಗ್ರಹ ಮಾಡಲಾಗಿತ್ತು. 1000 ಎಂಡ್ಸ್ ರೀಲಿಂಗ್, 500 ಎಂಡ್ಸ್ ರೀರೀಲಿಂಗ್ ಹಾಗೂ 40 ಕಕ್ಕೂನ್ ಕುಕ್ಕಿಂಗ್ ಸಾಮರ್ಥ್ಯದ ರೇಷ್ಮೆ ಪಿಲೇಚರ್ ಕಾರ್ಖಾನೆ ನಿರ್ಮಾಣ ಮಾಡುವ ಯೋಜನೆ ಇದಾಗಿದೆ.

ಕಾರ್ಖಾನೆ ನಿರ್ಮಾಣಕ್ಕಾಗಿ 8 ಎಕರೆ ಜಮೀನು ಖರೀದಿಸಿ, ಅಲ್ಲಿ 26 ಲಕ್ಷ ರೂ ವೆಚ್ಚದಲ್ಲಿ ಕಟ್ಟಡ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಕಟ್ಟಡ ಕಾಮಗಾರಿ ಅರ್ಧಕ್ಕೆ ನಿಂತಿದೆ.

1986-87ನೇ ಸಾಲಿನಲ್ಲಿ ರೂ.85 ಲಕ್ಷಗಳಿಗೆ ಅನುಮೋದನೆಯಾಗಿದ್ದ ಈ ಯೋಜನೆ, 1993-94ರಲ್ಲಿ ಪರಿಷ್ಕೃತಗೊಂಡು ರೂ.1.60 ಕೋಟಿಗೆ ನಿಗದಿಯಾಗಿದೆ. ಇದರಲ್ಲಿ ಸರ್ಕಾರವು 55 ಲಕ್ಷ ರೂಪಾಯಿಯನ್ನು ಮೂರು ಹಂತಗಳಲ್ಲಿ ಬಿಡುಗಡೆ ಮಾಡಿದೆ. ಈಗಾಗಲೇ 40 ಲಕ್ಷ ರೂ ಮೌಲ್ಯದ ಯಂತ್ರಗಳನ್ನು ಖರೀದಿಸಿದ್ದು, ಅವು ಪಟ್ಟಣದ ಟಿಎಪಿಸಿಎಂಎಸ್ ಉಗ್ರಾಣ ಮಳಿಗೆಯಲ್ಲಿ ವ್ಯರ್ಥವಾಗಿ ಬಿದ್ದಿವೆ.
ತಾಲ್ಲೂಕಿನಲ್ಲಿ 13 ಸಾವಿರ ರೇಷ್ಮೆ ಬೆಳೆಗಾರರು ಇದ್ದು, ವಾರ್ಷಿಕ 5950 ಮೆಟ್ರಿಕ್ ಟನ್ ರೇಷ್ಮೆ ಗೂಡು ಬೆಳೆಯಲಾಗುತ್ತದೆ. ರೇಷ್ಮೆಗೂಡು ಮಾರಾಟಕ್ಕೆ ಮಳವಳ್ಳಿ ಪಟ್ಟಣದ ಹೊರವಲಯದ ಬುಗತಗಹಳ್ಳಿ ಬಳಿ ಮಾರುಕಟ್ಟೆ ಇದೆ. ಆದರೆ, ರೇಷ್ಮೆ ನೂಲು ಬಿಚ್ಚುವ ಕಾರ್ಖಾನೆ ಮಾತ್ರ ಆರಂಭಿಸಲು ಸಾಧ್ಯವಾಗಿಲ್ಲ ಎಂಬುದು ವಿಪರ್ಯಾಸ.

ಪ್ರಸ್ತುತ 7 ಲಕ್ಷ ರೂ ವಂತಿಗೆ ಸಂಗ್ರಹ ಮಾಡಿದ್ದು, ಜೊತೆಗೆ ಸರ್ಕಾರವೂ 18 ಲಕ್ಷ ರೂ ಬಿಡುಗಡೆ ಮಾಡಿದೆ. ಕೂಡಲೇ ಸಿವಿಎಲ್ ಕಾಮಗಾರಿ ಪ್ರಾರಂಭಿಸಲಾಗುವುದು ಎನ್ನುತ್ತಾರೆ ಪ್ಯಾಕ್ಟರಿ ಆಡಳಿತ ಮಂಡಳಿ ಅಧ್ಯಕ್ಷ ಪ್ರಕಾಶ್.

ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕ ಮಲ್ಲಿಕಾರ್ಜುನ ಸ್ವಾಮಿ ಪ್ರತಿಕ್ರಿಯಿಸಿ, ಸಹಕಾರ ನಿಯಮದಲ್ಲಿ ಶೇ 50 ರಷ್ಟು ಹಣವನ್ನು ಆಡಳಿತ ಮಂಡಳಿ ಪಾವತಿಸಿದರೆ ಶೇ 50ರಷ್ಟು ಹಣವನ್ನು ಸರ್ಕಾರ ನೀಡುತ್ತದೆ. ಆದರೆ, ಆಡಳಿತ ಮಂಡಳಿ ಹಣ  ಪಾವತಿಸದ ಕಾರಣ ವಿಳಂಬವಾಗಿದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT