ಬುಧವಾರ, ಜನವರಿ 22, 2020
16 °C

300 ಮೆ.ವಾ ವಿದ್ಯುತ್ ಖರೀದಿ?

ಎ.ಎಂ.ಸುರೇಶ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಈ ವರ್ಷದ ಬೇಸಿಗೆಯಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ 190 ದಶಲಕ್ಷ ಯೂನಿಟ್‌ಗೆ ಏರುವ ಸಾಧ್ಯತೆ ಇರುವುದರಿಂದ ರಾಜ್ಯದಲ್ಲಿನ ವಿವಿಧ ಸಕ್ಕರೆ ಕಾರ್ಖಾನೆಗಳಿಂದ ಲಭ್ಯವಾಗುವ 300 ಮೆಗಾವಾಟ್ ವಿದ್ಯುತ್ ಖರೀದಿಸಲು ಸರ್ಕಾರ ಸಿದ್ಧತೆ ನಡೆಸಿದೆ.ರಾಜ್ಯದಲ್ಲಿನ ವಿದ್ಯುತ್ ಕೊರತೆಯನ್ನು ನೀಗಿಸಲು ಈಗಾಗಲೇ ನಿತ್ಯ ಒಂದು ಸಾವಿರ ಮೆಗಾವಾಟ್ ವಿದ್ಯುತ್ ಖರೀದಿ ಮಾಡಲಾಗುತ್ತಿದೆ. ಆದರೂ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ. ಅಲ್ಲದೆ ಬೇಸಿಗೆಯಲ್ಲಿ ಬೇಡಿಕೆಯು ಮತ್ತಷ್ಟು ಹೆಚ್ಚಾಗುವ ಹಿನ್ನೆಲೆಯಲ್ಲಿ ವಿದ್ಯುತ್ ಖರೀದಿಯನ್ನು ಹೆಚ್ಚಿಸಲು ನಿರ್ಧರಿಸಲಾಗಿದೆ.ಕಳೆದ ವರ್ಷ ಬೇಸಿಗೆಯಲ್ಲಿ ಪೂರೈಕೆಯಾದ 176 ದಶಲಕ್ಷ ಯೂನಿಟ್ ಇದುವರೆಗಿನ ಗರಿಷ್ಠ ಬಳಕೆಯ ದಾಖಲೆ. ಆದರೆ ಈ ವರ್ಷ ಬೇಡಿಕೆ ಪ್ರಮಾಣ 185-190 ದಶಲಕ್ಷ ಯೂನಿಟ್‌ಗೆ ಹೆಚ್ಚಾಗುವ ಮೂಲಕ ಹೊಸ ದಾಖಲೆ ನಿರ್ಮಾಣವಾಗುವ ಸಂಭವ ಇದೆ.ಸಾಮಾನ್ಯವಾಗಿ ಫೆಬ್ರುವರಿ, ಮಾರ್ಚ್ ತಿಂಗಳಲ್ಲಿ ವಿದ್ಯುತ್ ಬೇಡಿಕೆ ಪ್ರಮಾಣ ಹೆಚ್ಚಾಗಿರುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಈಗ ಖರೀದಿ ಮಾಡುತ್ತಿರುವ ಸಾವಿರ ಮೆಗಾವಾಟ್ ಜೊತೆಗೆ, ಫೆಬ್ರುವರಿಯಲ್ಲಿ ಇನ್ನೂ 300 ಮೆ.ವಾಖರೀದಿಸಲು ಪ್ರಯತ್ನ ನಡೆದಿದೆ ಎಂದು ಇಂಧನ ಇಲಾಖೆಯ ಅಧಿಕಾರಿಯೊಬ್ಬರು `ಪ್ರಜಾವಾಣಿ~ಗೆ ತಿಳಿಸಿದರು.ಸಕ್ಕರೆ ಕಾರ್ಖಾನೆ ಮಾಲೀಕರು ಪ್ರತಿ ಯೂನಿಟ್‌ಗೆ ರೂ 5.50 ಕೇಳುತ್ತಿದ್ದಾರೆ. ಆದರೆ ಅಂತಿಮವಾಗಿ ದರ ಎಷ್ಟು ಎಂಬುದನ್ನು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗ ನಿರ್ಧರಿಸಲಿದೆ. ಅಗತ್ಯಬಿದ್ದರೆ ಕಡಿಮೆ ದರಕ್ಕೆ ವಿದ್ಯುತ್ ನೀಡುವಂತೆ ಕಾರ್ಖಾನೆ ಮಾಲೀಕರ ಮನವೊಲಿಸಲಾಗುವುದು ಎಂದರು.ಹಾಲಿ ಖರೀದಿಸುತ್ತಿರುವ ಸಾವಿರ ಮೆಗಾವಾಟ್ ಜೊತೆಗೆ ಹೆಚ್ಚುವರಿಯಾಗಿ ಇನ್ನೂ ಸಾವಿರ ಮೆಗಾವಾಟ್ ಖರೀದಿ ಮಾಡಿದರೆ, ಗ್ರಾಮೀಣ ಭಾಗದಲ್ಲಿ ನಿತ್ಯ 6 ಗಂಟೆ ಸಿಂಗಲ್ ಫೇಸ್ ಮತ್ತು ತ್ರಿಫೇಸ್ ವಿದ್ಯುತ್ತನ್ನು ಬೇಸಿಗೆಯಲ್ಲಿ ನೀಡಬಹುದು ಎಂದು ಅಧಿಕಾರಿಯೊಬ್ಬರು ಹೇಳಿದರು.ಬರುವ ಜೂನ್‌ನಿಂದ ಒಂದು ವರ್ಷ ಕಾಲ ನಿತ್ಯ 1,200 ಮೆಗಾವಾಟ್ ವಿದ್ಯುತ್ ಖರೀದಿಸಲು ಈಗಾಗಲೇ ನಿರ್ಧರಿಸಲಾಗಿದೆ. ಹೀಗಾಗಿ ಅದಕ್ಕೂ ಮೊದಲಿನ ನಾಲ್ಕು ತಿಂಗಳಿಗೆ (ಫೆಬ್ರುವರಿ, ಮಾರ್ಚ್, ಏಪ್ರಿಲ್, ಮೇ) ಹೆಚ್ಚುವರಿಯಾಗಿ ಬೇಕಾಗುವ ವಿದ್ಯುತ್ ಖರೀದಿಸಲು ಈಗ ಟೆಂಡರ್ ಕರೆಯುವ ಸಾಧ್ಯತೆಗಳು ಕಡಿಮೆ. ಈ ಅವಧಿಯಲ್ಲಿ ಬೇಡಿಕೆಯನ್ನು ಆಧರಿಸಿ ನಿತ್ಯ ವಿನಿಮಯ ಕೇಂದ್ರದಿಂದ ಖರೀದಿಸುವ ನಿರೀಕ್ಷೆ ಇದೆ.ಒಂದು ವೇಳೆ ವಿನಿಮಯ ಕೇಂದ್ರದಿಂದ ರಾಜ್ಯಕ್ಕೆ ಅಗತ್ಯವಿರುವಷ್ಟು ವಿದ್ಯುತ್ ಲಭ್ಯವಾಗದಿದ್ದರೆ ಲೋಡ್‌ಶೆಡ್ಡಿಂಗ್ ಮಾಡುವುದು ಅನಿವಾರ್ಯವಾಗಲಿದ್ದು ಫೆಬ್ರುವರಿಯಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಮೂಲಗಳು ತಿಳಿಸಿವೆ.ನಿರೀಕ್ಷೆ: ಫೆಬ್ರುವರಿಯಲ್ಲಿ ಗಾಳಿ, ಮಳೆಯಾದರೆ ಸ್ವಲ್ಪಮಟ್ಟಿಗೆ ಪರಿಸ್ಥಿತಿ ಸುಧಾರಿಸಬಹುದು. ಸದ್ಯಕ್ಕೆ 200ರಿಂದ 250 ಮೆಗಾವಾಟ್ ಪವನ ವಿದ್ಯುತ್ ಲಭ್ಯವಾಗುತ್ತಿದೆ. ಹಿಂದೆಲ್ಲ ಫೆಬ್ರುವರಿಯಲ್ಲಿ ಮಳೆಯಾದ ಉದಾಹರಣೆಗಳಿವೆ. ಈ ಬಾರಿಯೂ ಆ ರೀತಿ ಆದರೆ ಕೊರತೆ ನೀಗಿಸಲು ಅನುಕೂಲವಾಗಲಿದೆ ಎನ್ನುತ್ತಾರೆ ಅಧಿಕಾರಿಗಳು.ಈಗ ಸರಾಸರಿ 165 ದಶಲಕ್ಷ ಯೂನಿಟ್ ವಿದ್ಯುತ್ ಪೂರೈಸಲಾಗುತ್ತಿದೆ. ಆದರೂ ಗ್ರಾಮೀಣ ಭಾಗದಲ್ಲಿ ಸಮರ್ಪಕವಾಗಿ ನಿತ್ಯ 6 ಗಂಟೆ ಸಿಂಗಲ್ ಫೇಸ್ ಮತ್ತು ತ್ರಿಫೇಸ್ ವಿದ್ಯುತ್ ನೀಡಲು ಸಾಧ್ಯವಾಗುತ್ತಿಲ್ಲ. ಕಲ್ಲಿದ್ದಲು ಕೊರತೆ, ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ಸಮತೋಲನ ಕಾಪಾಡಲು ಸಾಧ್ಯವಾಗುತ್ತಿಲ್ಲ ಎಂಬುದು ಅಧಿಕಾರಿಗಳ ಸಮಜಾಯಿಷಿ.ಕಳೆದ 2-3 ದಿನಗಳಿಂದ ಕೇಂದ್ರದಿಂದ ನಿಗದಿಗಿಂತ 100 ಮೆಗಾವಾಟ್ ಹೆಚ್ಚಿಗೆ ವಿದ್ಯುತ್ ಪೂರೈಕೆಯಾಗುತ್ತಿದೆ. ಹೀಗಾಗಿ ಆರ್‌ಟಿಪಿಎಸ್‌ನ ಎರಡು ಘಟಕಗಳ ಸ್ಥಗಿತದಿಂದ ಉಂಟಾಗಿರುವ ಕೊರತೆ ನೀಗಿಸಲು ಸ್ವಲ್ಪಮಟ್ಟಿಗೆ ನೆರವಾಗಿದೆ. ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಕೋಟಾ 1,700 ಮೆಗಾವಾಟ್. ಆದರೆ ಶನಿವಾರ 1,793 ಮತ್ತು ಭಾನುವಾರ 1,803 ಮೆಗಾವಾಟ್ ವಿದ್ಯುತ್ ಪೂರೈಕೆ ಆಗಿದೆ.ಆರ್‌ಟಿಪಿಎಸ್‌ನಲ್ಲಿ ಕೇವಲ 12 ಸಾವಿರ ಟನ್ ಕಲ್ಲಿದ್ದಲು ಸಂಗ್ರಹವಿದ್ದು, ಆರು ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಇದರಿಂದಾಗಿ 1,720 ಮೆಗಾವಾಟ್ ವಿದ್ಯುತ್ ಉತ್ಪಾದನೆಯಾಗಬೇಕಾದ ಆರ್‌ಟಿಪಿಎಸ್‌ನಲ್ಲಿ 1,150ರಿಂದ 1,200 ಮೆಗಾವಾಟ್ ವಿದ್ಯುತ್ ಮಾತ್ರ ಲಭ್ಯವಾಗುತ್ತಿದೆ.

 

ಈಗ ನಿತ್ಯ ಪೂರೈಕೆಯಾಗುವ ಕಲ್ಲಿದ್ದಲಿನ ಮೇಲೆ ಅವಲಂಬನೆಯಾಗಿದ್ದು, ಪೂರೈಕೆ ಪ್ರಮಾಣ ಹೆಚ್ಚಾಗದ ಹೊರತು ಸ್ಥಗಿತಗೊಂಡಿರುವ ಘಟಕಗಳನ್ನು ಪುನರಾರಂಭಿಸಲು ಸಾಧ್ಯವಿಲ್ಲ ಎಂದು ಮೂಲಗಳು ತಿಳಿಸಿವೆ.

ಪ್ರತಿಕ್ರಿಯಿಸಿ (+)