300 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ

7

300 ಹಳ್ಳಿಗಳಿಗೆ ಕುಡಿಯುವ ನೀರು ಪೂರೈಕೆ

Published:
Updated:

ಮಾಲೂರು: ಮಾರ್ಕಂಡಯ್ಯ ಡ್ಯಾಂ ಕುಡಿಯುವ ನೀರಿನ ಯೋಜನೆಯ 50 ಕೋಟಿ ರೂಪಾಯಿ ವೆಚ್ಚದ ಕಾಮಗಾರಿ ಏಪ್ರಿಲ್ ಅಂತ್ಯದ ವೇಳೆ ಮುಗಿಯಲಿದ್ದು, ಈ ಯೋಜನೆಯಿಂದ ತಾಲ್ಲೂಕಿನ 300 ಗ್ರಾಮಗಳಿಗೆ ಶುದ್ಧವಾದ ಕುಡಿಯುವ ನೀರನ್ನು ಸರಬರಾಜು ಮಾಡಲಾಗುವುದು ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಶಾಸಕ ಎಸ್.ಎನ್. ಕೃಷ್ಣಯ್ಯ ಶೆಟ್ಟಿ ತಿಳಿಸಿದರು.ತಾಲ್ಲೂಕಿನ ಟೇಕಲ್ ಬೆಟ್ಟದ ಬಳಿ ಮಾರ್ಕಂಡಯ್ಯ ಡ್ಯಾಂನಿಂದ ಬರುವ ನೀರನ್ನು ಬೆಟ್ಟದ ಕೆಳಗೆ ಶುದ್ಧೀಕರಣ ಮಾಡುವ ಘಟಕ ಮತ್ತು ಶುದ್ಧೀಕರಣ ನೀರನ್ನು ಬೆಟ್ಟದ ಮೇಲೆ ನೀರಿನ ಸಂಗ್ರಹಣಾ ಟ್ಯಾಂಕ್ ನಿರ್ಮಾಣ  ಕಾಮಗಾರಿಯನ್ನು ಆರ್.ಡಿ.ಬಿ.ಆರ್ ಅಧಿಕಾರಿಗಳೊಂದಿಗೆ ವೀಕ್ಷಿಸಿ ಮಾತನಾಡಿದರು.ತಾಲ್ಲೂಕಿನ 300 ಹಳ್ಳಿಗಳಿಗೆ ಶುದ್ಧವಾದ ಕುಡಿಯುವ ನೀರನ್ನು ನಲ್ಲಿಗಳ ಮೂಲಕ ಪ್ರತಿ ಮನೆಗೆ ತಲುಪಿಸಲು 50 ಕೋಟಿ ರೂ ವೆಚ್ಚದಲ್ಲಿ ಕಾಮಗರಿ ಶೇ.90ರಷ್ಟು ಮುಗಿದಿದೆ. ಟೇಕಲ್ ಗ್ರಾಮದ ಬೆಟ್ಟದ ಮೇಲೆ ಟ್ಯಾಂಕ್ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಏಪ್ರಿಲ್ ತಿಂಗಳೊಳಗೆ ತಾಲ್ಲೂಕಿನ ಎಲ್ಲ ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುವುದು ಎಂದು ತಿಳಿಸಿದರು.ಈ ಯೋಜನೆ ರಾಜ್ಯದಲ್ಲೇ ಪ್ರಾಯೋಗಿಕವಾಗಿ ತಾಲ್ಲೂಕಿನಲ್ಲಿ ಆರಂಭಿಸಲಾಗಿದ್ದು, ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆ ಇರುವ ಭಾಗಗಳಲ್ಲಿ ಈ ಯೋಜನೆಯನ್ನು ಆರಂಭಿಸುವ ಚಿಂತನೆ ಸರ್ಕಾರದ ಮುಂದೆ ಇರುವುದಾಗಿ ಹೇಳಿದರು.ಯರಗೋಳು ಕುಡಿಯುವ ನೀರಿನ ಕಾಮಗಾರಿ ತೀವ್ರ ಗತಿಯಲ್ಲಿ ನಡೆಯುತ್ತಿದ್ದು, ಪೈಪ್‌ಲೈನ್ ಅಳವಡಿಸುವ ಕಾಮಗಾರಿಯು ಶೇ. 90ರಷ್ಟು ಮುಗಿದಿದೆ. ಮುಂದಿನ 18 ತಿಂಗಳಲ್ಲಿ ಕಾಮಗಾರಿ ಮುಕ್ತಾಯಗೊಳ್ಳಲಿದ್ದು, ಜಿಲ್ಲೆಯ ಕೋಲಾರ, ಮಾಲೂರು ಮತ್ತು ಬಂಗಾರಪೇಟೆ ಸೇರಿದಂತೆ 3 ತಾಲ್ಲೂಕುಗಳಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲಾಗುವುದು ಎಂದರು.ಆರ್.ಡಿ.ಬಿ.ಆರ್ ಕಾಮಗಾರಿಯ ತಾಂತ್ರಿಕಾಧಿಕಾರಿ ರಾಮಚಂದ್ರರಾವ್, ಇ.ಇ.ದೇವರಾಜ್, ಜಿ.ಪಂ ಸಿ.ಇ.ಒ ಶಾಂತಪ್ಪ, ತಾಲ್ಲೂಕು ಜಿ.ಪಂ ಉಪ ವಿಭಾಗದ ಎ.ಇ.ಇ ಬದರಿನಾಥ್, ಎಂಜಿನಿಯರ್ ನಾರಾಯಣಸ್ವಾಮಿ, ತಾಲ್ಲೂಕು ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ. ಆಂಜಿನಪ್ಪ, ಪುರಸಭಾ ಉಪಾಧ್ಯಕ್ಷ ಎ.ರಾಜಪ್ಪ, ತಾ.ಪಂ ಸದಸ್ಯ ಲೋಕೇಶ್, ತಾಲ್ಲೂಕು ಬಿಜೆಪಿ ಅಧ್ಯಕ್ಷ ಸಿ.ಎಂ.ನಾರಾಯಣಗೌಡ ಹಾಜರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry