31ಕ್ಕೆ `ಪ್ರಜಾಪ್ರಭುತ್ವ ರಕ್ಷಣಾ ದಿನ'

7

31ಕ್ಕೆ `ಪ್ರಜಾಪ್ರಭುತ್ವ ರಕ್ಷಣಾ ದಿನ'

Published:
Updated:

ಗುಲ್ಬರ್ಗ: ಕರ್ನಾಟಕ ದಲಿತ ಸಂಘರ್ಷ ಸಮಿತಿಯ ವತಿಯಿಂದ ಡಾ. ಎಸ್.ಎಂ. ಪಂಡಿತ ರಂಗಮಂದಿರದಲ್ಲಿ ಡಾ. ಅಂಬೇಡ್ಕರ್‌ರ 56ನೇ ಪರಿನಿರ್ವಾಣ ದಿನ ನಿಮಿತ್ತ `ಪ್ರಜಾಪ್ರಭುತ್ವ ರಕ್ಷಣಾ ದಿನ' ವಿಚಾರ ಸಂಕಿರಣವನ್ನು ಡಿ. 31ರಂದು ಮಧ್ಯಾಹ್ನ 2ಕ್ಕೆ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಡಿ.ಜಿ. ಸಾಗರ ನರೋಣಾ ಬುಧವಾರ ಇಲ್ಲಿ ತಿಳಿಸಿದರು.ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಗುತ್ತೆದಾರ, ಶಾಸಕಿ ಅರುಣಾ ಪಾಟೀಲ, ಮಾಜಿ ಸಚಿವ ಎಸ್.ಕೆ. ಕಾಂತಾ, ಜಿಲ್ಲಾ ಜೆಡಿಎಸ್ ಕಾರ್ಯಧ್ಯಕ್ಷ ಜಿ.ಎಸ್.  ರಹಮತ್, ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ ತಡಕಲ್, ಜಿಲ್ಲಾ ಕೋಶಾಧ್ಯಕ್ಷ ಶರಣಬಸಪ್ಪ ಪಾಟೀಲ ಅಷ್ಟಗಿ, ನಾಗೇಂದ್ರಪ್ಪ ಪಾಟೀಲ ಹಾಗೂ ಜೆಡಿಎಸ್‌ನ ಅನೇಕ ಮುಖಂಡರು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸುವರು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.ಬಿಜೆಪಿ ಸರ್ಕಾರದ ದುರಾಡಳಿತದಿಂದಾದ ಅವಘಡಗಳ ಬಗ್ಗೆ ಚರ್ಚಿಸಲಾಗುವುದು. ಪ್ರತಿಭಾವಂತ ಶಿಕ್ಷಕರಾದ ಮಹ್ಮದ ಖದೀರ ಮತ್ತು `ಕರ್ನಾಟಕ ದಲಿತ ಮಠಮಾನ್ಯಗಳು' ಕುರಿತು ಸಂಶೋಧನೆ ಮಾಡಿ ಡಾಕ್ಟರೇಟ್ ಪದವಿ ಪಡೆದ ಡಾ. ಲಕ್ಷ್ಮಿಕಾಂತ ಹೊಸಮನಿ ಇವರನ್ನು ಸನ್ಮಾನಿಸಲಾಗುವುದು ಎಂದು ತಿಳಿಸಿದರು.ಹಗರಣ ಸರ್ಕಾರ:  ಅಧಿಕಾರಕ್ಕೆ ಬಂದಾಗಿನಿಂದ ಒಂದಿಲ್ಲೊಂದು ವಿವಾದ, ಹಗರಣಗಳಲ್ಲಿ ಮುಳುಗಿರುವ ಬಿಜೆಪಿ ಸರ್ಕಾರ ಅಕ್ರಮ ಸರ್ಕಾರವಾಗಿದೆ. ಒಂದು ವರ್ಷದಲ್ಲಿ ನೂರು ದಿನಗಳ ಕಾಲ ನಡೆಯಬೇಕಿದ್ದ ವಿಧಾನ ಮಂಡಲದ ಅಧಿವೇಶನವು ಕಳೆದ ನಾಲ್ಕು ವರ್ಷಗಳಲ್ಲಿ ಕೇವಲ 119 ದಿನ ಮಾತ್ರ ನಡೆಸಿದೆ. ವಿರೋಧ ಪಕ್ಷವನ್ನು ಗಣನೆಗೆ ತೆಗೆದು ಕೊಳ್ಳದೆ ಅನೇಕ ಮಸೂದೆಗಳಿಗೆ ಅಂಗೀಕಾರ ಪಡೆದುಕೊಂಡಿದೆ. ಈಚೆಗೆ ಲೋಕಸಭೆಯ ಅಧಿವೇಶನದಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಬಡ್ತಿ ಮಸೂದೆ ಮಂಡನೆ ಸಂದರ್ಭದಲ್ಲಿ ಸಚಿವರ ಕೈಯಲ್ಲಿದ್ದ ಮಸೂದೆ ಪತ್ರ ಸಮಾಜವಾದಿ ಪಕ್ಷದ ಸಂಸದರೊಬ್ಬರು ಹರಿದು ಹಾಕಿರುವುದು ಖಂಡನೀಯ ಎಂದರು.ಈಚೆಗೆ ದೆಹಲಿಯಲ್ಲಿ ವಿದ್ಯಾರ್ಥಿನಿಯ ಮೇಲೆ ನಡೆದಿರುವ ಸಾಮೂಹಿಕ ಅತ್ಯಾಚಾರ ಪ್ರಕರಣ ಮಹಿಳೆಯರು ತಮ್ಮ ಸುರಕ್ಷತೆ ಬಗ್ಗೆ ಚಿಂತಿಸುವಂತೆ ಮಾಡಿದೆ. ಮಹಿಳೆಯರ ಮೇಲೆ ದೌರ್ಜನ್ಯ, ಅತ್ಯಾಚಾರ ಇತ್ತೀಚಿನ ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿದೆ. ಈ ಪ್ರಕರಣಗಳಿಗೆ ಸಂಭಂಧಿಸಿದಂತೆ ಕೇಂದ್ರ ಸರ್ಕಾರ ವಿಶೇಷ ನ್ಯಾಯಾಲಯ  ಸ್ಥಾಪಿಸಿ ತ್ವರಿತ ಗತಿಯಲ್ಲಿ ವಿಚಾರಣೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿದರು.ಸಮಿತಿಯ ಜಿಲ್ಲಾ ಸಂಚಾಲಕ ಅರ್ಜುನ ಭದ್ರೆ, ಮುಖಂಡರಾದ ಸುರೇಶ ಹಾದಿಮನಿ, ಜಿಲ್ಲಾ ಘಟಕದ ಸಂಘಟನಾ ಸಂಚಾಲಕ ಉಮೇಶ ನರೋಣಾ ಹಾಗೂ ರೇವಣಿಸಿದ್ದ ಜಾಲಿ ಮತ್ತಿತರರು ಸುದ್ದಿಗೋಷ್ಠಿಯಲ್ಲಿ ಇದ್ದರು.ಗುಲ್ಬರ್ಗ ಗ್ರಾಮೀಣ ಮತಕ್ಷೆತ್ರದ ಆಕಾಂಕ್ಷಿ: ಗುಲ್ಬರ್ಗ ಗ್ರಾಮೀಣ ಮತಕ್ಷೇತ್ರದಿಂದ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಟಿಕೆಟ್ ನೀಡುವಂತೆ ಪಕ್ಷದ ವರಿಷ್ಠ ಎಚ್.ಡಿ. ದೇವೇಗೌಡ ಅವರಿಗೆ ಈಗಾಗಲೇ ಮನವಿ ಸಲ್ಲಿಸಲಾಗಿದ್ದು, ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ. ಕುಮಾರಸ್ವಾಮಿಯವರು ಬೀದರ್‌ನಲ್ಲಿ ನಡೆದ ಸಮಾರಂಭದಲ್ಲಿ ಟಿಕೆಟ್ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಡಿ.ಜಿ. ಸಾಗರ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry