ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

32 ವರ್ಷಗಳ ನಂತರ ಸಿಕ್ಕ ನಿವೇಶನ!

Last Updated 29 ಜನವರಿ 2011, 7:05 IST
ಅಕ್ಷರ ಗಾತ್ರ

ಯಳಂದೂರು: ತಾಲ್ಲೂಕಿನ ಮಲ್ಲಿಗೆಹಳ್ಳಿ ಗ್ರಾಮದಲ್ಲಿ 32 ವರ್ಷದಿಂದ ನೆನೆಗುದಿಗೆ ಬಿದ್ದಿದ್ದ ನಿವೇಶನಗಳು ಫಲಾನುಭವಿಗಳಿಗೆ ಈಗ ಸಿಕ್ಕ ಘಟನೆ ನಡೆದಿದೆ. ಹಿನ್ನೆಲೆ: ಸರ್ವೆ ನಂ. 495 ರಲ್ಲಿನ 3.33 ಎಕರೆ ಜಮೀನನ್ನು ಗ್ರಾಮದ ಮಹಂತದೇವರು (ಜಮೀನ್ದಾರರು) ನಾಗೇಂದ್ರಮೂರ್ತಿ ಎಂಬವರಿಗೆ ಸೇರಿದ್ದ ಈ ಜಮೀನನ್ನು ಸರ್ಕಾರ 1979ರಲ್ಲಿ ಸ್ವಾಧೀನ ಪಡಿಸಿಕೊಂಡಿತ್ತು.

ನಂತರ 1984-85ರಲ್ಲಿ ಗ್ರಾಮದ ಪರಿಶಿಷ್ಟಜಾತಿ, ಲಿಂಗಾಯಿತ, ಉಪ್ಪಾರ ಹಾಗೂ ಮುಸ್ಲಿಂ ಜನಾಂಗದ 142 ಫಲಾನುಭವಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲಾಗಿತ್ತು. ಆದರೆ ಅಂದಿನಿಂದ ಇಂದಿನವರೆಗೂ ಅಂಬೇಡ್ಕರ್ ಯೋಜನೆಯಲ್ಲಾಗಲಿ, ಆಶ್ರಯ ಯೋಜನೆಯಲ್ಲಾಗಲಿ ಅವರಿಗೆ ಮನೆಗಳನ್ನು ಕಟ್ಟಿಕೊಳ್ಳಲು ಸರ್ಕಾರದಿಂದ ಯಾವುದೇ ನೆರವು ಸಿಕ್ಕಿರಲಿಲ್ಲ. ಈ ಜಾಗದಲ್ಲಿ ಜಾಲಿ ಮುಳ್ಳಿನ ಗಿಡಕಂಟಿಗಳು ಬೆಳೆದುಹೋಗಿತ್ತು. 2006 ರಲ್ಲಿ ಬರಪರಿಹಾರ ಯೋಜನೆಯಡಿಯಲ್ಲಿ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಗ್ರಾಮಸ್ಥರೇ ಕೂಡ್ಲೂರು ಶ್ರೀಧರ ಮೂರ್ತಿ, ಪುಟ್ಟಸಿದ್ದಯ್ಯ ಹಾಗೂ ಗ್ರಾಮದ ಮುಖಂಡರ ನೇತೃತ್ವದಲ್ಲಿ ಮುಳ್ಳಿನ ಪೊದೆಗಳನ್ನು ತೆಗೆದಿದ್ದರು.

ನಂತರ ಜಾಗದ ಮಾಲೀಕರು ಚಾಮರಾಜನಗರದ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. 2010ರ ನವೆಂಬರ್ 26 ರಂದು ನ್ಯಾಯಾಲಯವು ಆದೇಶ ಸಂಖ್ಯೆ ಓ.ಎಸ್.94/2006 ರ ಅನ್ವಯ ಫಲಾನುಭವಿಗಳ ಪರ ತೀರ್ಪು ನೀಡಿತ್ತು. ನಂತರ ಗ್ರಾಮಸ್ಥರು ಈ ಜಾಗವನ್ನು ಸ್ವಚ್ಛಗೊಳಿಸಲು ಹೋದಾಗ ಜಾಗದ ಮಾಲೀಕರಿಂದ ವಿರೋಧ ವ್ಯಕ್ತವಾಗಿತ್ತು. ಇದರಿಂದ ಬೇಸತ್ತ ಗ್ರಾಮಸ್ಥರು ಜಿಲ್ಲಾಧಿಕಾರಿ, ಉಪವಿಭಾಗಾಧಿಕಾರಿ, ತಹಶೀಲ್ದಾರ್, ಹಾಗೂ ಸರ್ಕಲ್‌ಇನ್ಸ್‌ಪೆಕ್ಟರ್ ಅವರ ಮೊರೆ ಹೊಕ್ಕಿದ್ದರು.

ಈ ಹಿನ್ನೆಲೆಯಲ್ಲಿ ತಾಲ್ಲೂಕು ಸರ್ವೇ ಇಲಾಖೆಯ ಅಧಿಕಾರಿಗಳ ತಂಡ ಜಾಗವನ್ನು ಶುಕ್ರವಾರ ಸರ್ವೇ ನಡೆಸಿತು. ಈ ಸಂದರ್ಭದಲ್ಲಿ ಸರ್ಕಲ್‌ಇನ್ಸ್‌ಪೆಕ್ಟರ್ ಸುರೇಶ್‌ಬಾಬು ಹಾಗೂ ಇನ್ಸ್‌ಪೆಕ್ಟರ್ ಶ್ರೀನಿವಾಸ್ ಸೂಕ್ತ ಬಂದೋಬಸ್ತ್ ಒದಗಿಸಿದ್ದರು. ಮುಖಂಡರಾದ ಕೂಡ್ಲೂರು ಶ್ರೀಧರಮೂರ್ತಿ ಗ್ರಾಮದ ಎಲ್.ಗುರುಸಿದ್ದಯ್ಯ, ಎಂ.ಎಸ್.ಚೆನ್ನಮಲ್ಲಪ್ಪ, ರಾಮಶೆಟ್ಟಿ, ವೆಂಕಟರಾಜು, ಬಸವಶೆಟ್ಟಿ, ಯರಿಯೂರು ಶ್ರೀನಿವಾಸ್ ನೇತೃತ್ವದಲ್ಲಿ ನಿವೇಶನದ ಫಲಾನುಭವಿಗಳು ಈ ಜಾಗದಲ್ಲಿದ್ದ ಮುಳ್ಳಿನ ಪೊದೆಗಳನ್ನು ಶುಚಿ ಮಾಡಿದರು. ಹಲವಾರು ವರ್ಷಗಳಿಂದಲೂ ನೆನೆಗುದಿಗೆ ಬಿದ್ದಿದ್ದ ನಿವೇಶನಗಳು ಈಗ ತಮ್ಮ ಕೈ ಸೇರಿರುವುದು ಸಂತೋಷವಾಗಿದೆ. ಸರ್ಕಾರ ಯಾವುದಾದರೂ ಯೋಜನೆಯಡಿಯಲ್ಲಿ ತಾವು ಮನೆಗಳನ್ನು ನಿರ್ಮಿಸಿಕೊಳ್ಳಲು ಆರ್ಥಿಕ ಸಹಾಯ ನೀಡಬೇಕೆಂದು ಗ್ರಾಮದ ರಾಮಶೆಟ್ಟಿ, ಚೆನ್ನಮಲ್ಲಪ್ಪ ಸೇರಿದಂತೆ ಹಲವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT