3209 ಎಕರೆ ಭೂ ಸ್ವಾಧೀನಕ್ಕೆ ಅಧಿಸೂಚನೆ

7

3209 ಎಕರೆ ಭೂ ಸ್ವಾಧೀನಕ್ಕೆ ಅಧಿಸೂಚನೆ

Published:
Updated:

ಬಾಗಲಕೋಟೆ: ಜಿಲ್ಲೆಯ ಬಾದಾಮಿ ತಾಲ್ಲೂಕಿನ ಕೆರೂರ ಮತ್ತು ನರೇನೂರ ಗ್ರಾಮ ವ್ಯಾಪ್ತಿಯ 3209 ಎಕರೆ ಫಲವತ್ತಾದ ಭೂಮಿಯನ್ನು ಕೈಗಾರಿಕಾ ಉದ್ದೇಶಕ್ಕೆ ಬಳಸಿಕೊಳ್ಳಲು ರಾಜ್ಯ ಸರ್ಕಾರ ಮುಂದಾಗಿದೆ.ಕೆರೂರ ಗ್ರಾಮದ 1648 ಎಕರೆ ಮತ್ತು ನರೇನೂರ ಗ್ರಾಮದ 1560 ಎಕರೆ ಭೂಮಿಯನ್ನು ವಶಪಡಿಸಿಕೊಳ್ಳುವ ಸಂಬಂಧ 2011 ಮಾರ್ಚ್ 26ರಂದೇ ಕರ್ನಾಟಕ ರಾಜ್ಯಪತ್ರದಲ್ಲಿ ಅಧಿಸೂಚನೆ ಹೊರಡಿಸಲಾಗಿದೆ.ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಅಧೀನ ಕಾರ್ಯದರ್ಶಿ ಕೆ.ಎಚ್. ಶೇಷಗಿರಿ ಅವರು ಭೂಸ್ವಾಧೀನ ಸಂಬಂಧ ಹೊರಡಿಸಿರುವ ಅಧಿಸೂಚನೆ ಬಗ್ಗೆ ಸ್ವತಃ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಎಂ. ಕಾರಜೋಳ, ಸಂಸದ ಪಿ.ಸಿ.ಗದ್ದಿಗೌಡರ ಮತ್ತು ಶಾಸಕ ಎಂ.ಕೆ. ಪಟ್ಟಣಶೆಟ್ಟಿ ಅವರಿಗೇ ಮಾಹಿತಿ ಇಲ್ಲ ಎಂಬುದು ವಿಶೇಷ.ಇದೀಗ ಸರ್ಕಾರದ ಅಧಿಸೂಚನೆಯಿಂದಾಗಿ ಫಲವತ್ತಾದ ಕೃಷಿ ಭೂಮಿಯನ್ನು ಕಳೆದುಕೊಳ್ಳವ ಭೀತಿ ಎದುರಿಸುತ್ತಿರುವ ಕೆರೂರ ಮತ್ತು ನರೇನೂರ ರೈತ ಸಮುದಾಯ ಸಂಘಟಿತವಾಗಿ ಪ್ರತಿಭಟಿಸಲು ಮುಂದಾಗಿದೆ.

ಈ ಸಂಬಂಧ `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ರೈತರಾದ ವಕೀಲ ಎಚ್.ಎಸ್. ಕಟಗಿ, ಯಾವುದೇ ಕಾರಣಕ್ಕೂ ಫಲವತ್ತಾದ ಭೂಮಿಯನ್ನು ಕೈಗಾರಿಕೆ ಸ್ಥಾಪನೆಗೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.ಕೆರೂರ ಮತ್ತು ನರೇನೂರ ಭಾಗದಲ್ಲಿ ರೈತರು ಮಳೆ ಆಶ್ರಯಿಸಿ ಎರಡು ಬೆಳೆಗಳನ್ನು ಬೆಳೆಯುತ್ತಾರೆ. ಕೆರೂರ ಭಾಗದ ಫಲವತ್ತಾದ ಭೂಮಿಯಲ್ಲಿ ದ್ರಾಕ್ಷಿ, ದಾಳಿಂಬೆ, ಕಾಯಿಪಲ್ಲೆ ಸೇರಿದಂತೆ ಮತ್ತಿತರ ತೋಟಗಾರಿಕಾ ಬೆಳೆಗಳನ್ನು ಬೆಳೆಯುತ್ತಾರೆ. ಅಲ್ಲದೇ, ಮುಂಗಾರು ಹಂಗಾಮಿನಲ್ಲಿ ಈ ಭಾಗದಲ್ಲಿ ಹೆಸರು, ಈರುಳ್ಳಿ, ಮೆಣಸು, ಹತ್ತಿ, ಶೇಂಗಾ ಹಾಗೂ ಹಿಂಗಾರು ಸಮಯದಲ್ಲಿ  ಕಡಲೆ, ಬಿಳಿಜೋಳ, ಹುರುಳಿಯನ್ನು ಬೆಳೆಯುತ್ತಾರೆ ಎಂದರು.ನವಿಲು, ಮೊಲಗಳು ಈ ಪ್ರದೇಶದಲ್ಲಿ ಹೆಚ್ಚಾಗಿವೆ, ಅಲ್ಲದೇ ಕೈಗಾರಿಕೆ ಸ್ಥಾಪನೆಯಿಂದ ರಾಷ್ಟ್ರೀಯ ಸ್ಮಾರಕ ಬಾದಾಮಿ ಗುಹೆಗಳಿಗೆ ಅಪಾಯವಾಗುವ ಸಾಧ್ಯತೆ ಅಧಿಕವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.ಕೆರೂರ ಸಮೀಪವೇ ಮಲಪ್ರಭಾ ಎಡದಂಡೆ ಕಾಲುವೆ ಹಾದುಹೋಗುವುದರಿಂದ  ಈ ಪ್ರದೇಶ ಮುಂದಿನ ದಿನದಲ್ಲಿ ನೀರಾವರಿಗೆ ಒಳಪಡುತ್ತದೆ. ಆದ ಕಾರಣ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಕೈಬಿಡಬೇಕು ಎಂದು ಮನವಿ ಮಾಡಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry