326 ಗ್ರಾಂ ತೂಕದ ಪ್ರೊಸ್ಟೇಟ್ ಗಡ್ಡೆ ಹೊರಕ್ಕೆ

7

326 ಗ್ರಾಂ ತೂಕದ ಪ್ರೊಸ್ಟೇಟ್ ಗಡ್ಡೆ ಹೊರಕ್ಕೆ

Published:
Updated:

ಬೆಂಗಳೂರು: ವೃದ್ಧರೊಬ್ಬರ ಮೂತ್ರ ನಾಳದ ಬಳಿ ಬೆಳೆದಿದ್ದ 326 ಗ್ರಾಂ ತೂಕದ ಪ್ರೊಸ್ಟೇಟ್ ಗಡ್ಡೆಯನ್ನು ನಗರದ ಫೋರ್ಟಿಸ್ ಆಸ್ಪತ್ರೆಯ ವೈದ್ಯರು ಲೇಸರ್ ಶಸ್ತ್ರಚಿಕಿತ್ಸೆ ಮೂಲಕ ಯಶಸ್ವಿಯಾಗಿ ಹೊರತೆಗೆದಿದ್ದಾರೆ.

ಶಸ್ತ್ರಚಿಕಿತ್ಸೆ ನೆರವೇರಿಸಿದ ತಂಡದ ನೇತೃತ್ವ ವಹಿಸಿದ್ದ ಕನ್ಸಲ್ಟಂಟ್ ಯೂರಾಲಜಿಸ್ಟ್ ಡಾ.ಎಲ್.ಎನ್.ರಾಜು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.`74 ವರ್ಷದ ಯು.ಕೆ.ಕಾಮತ್ ಅವರಿಗೆ ಮೂತ್ರ ವಿಸರ್ಜನೆ ವೇಳೆ ನೋವುಂಟಾಗುತ್ತಿತ್ತು. ಅಲ್ಟ್ರಾಸೌಂಡ್ ಸೊನೊಗ್ರಫಿ ಮಾಡಿದ ನಂತರ ಅವರ ಮೂತ್ರ ನಾಳದ ಬಳಿ ದೊಡ್ಡ ಗಾತ್ರದ ಪ್ರೊಸ್ಟೇಟ್ ಗಡ್ಡೆ ಬೆಳೆದಿರುವುದು ಪತ್ತೆಯಾಯಿತು. ಹಿಗ್ಗಿದ ಗಡ್ಡೆಯು ಮೂತ್ರಕೋಶಕ್ಕೆ ಒತ್ತಿದಂತಾಗಿ ಮೂತ್ರ ಮಾಡುವಾಗ ಅಥವಾ ಮೂತ್ರ ಮಾಡಬೇಕು ಎನಿಸಿದಾಗ ಸಮಸ್ಯೆಯಾಗುತ್ತಿತ್ತು~ ಎಂದು ಅವರು ತಿಳಿಸಿದರು.`ತೆರೆದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಕಾಮತ್ ಅವರಿಗೆ ಇಷ್ಟವಿರಲಿಲ್ಲ. ವಿವಿಧ ಪರೀಕ್ಷೆಗಳ ಬಳಿಕ ರೋಗಿಯ ವಯಸ್ಸು, ಮೂತ್ರಕೋಶದ ಕಾರ್ಯನಿರ್ವಹಣೆ, ರಕ್ತ ಸಂಚಾರ- ಈ ಎಲ್ಲ ಅಂಶಗಳನ್ನು ಪರಿಗಣನೆಗೆ ತೆಗೆದುಕೊಂಡು ಲೇಸರ್ ಶಸ್ತ್ರಚಿಕಿತ್ಸೆ ನೆರವೇರಿಸಲಾಯಿತು. 10 ಗಂಟೆಗಳ ಕಾಲ ಚಿಕಿತ್ಸೆ ನಡೆಸಲಾಯಿತು. ರೋಗಿಯ ರಕ್ತದಲ್ಲಿ ಹಿಮೋಗ್ಲೋಬಿನ್ ಕಡಿಮೆ ಇತ್ತು. ಆದರೂ ಶಸ್ತ್ರಚಿಕಿತ್ಸೆ ವೇಳೆ ರೋಗಿಗೆ ರಕ್ತ ಕೊಡುವ ಅಗತ್ಯವೇ ಬೀಳಲಿಲ್ಲ~ ಎಂದು ಅವರು ಹೇಳಿದರು.`ಸಾಮಾನ್ಯವಾಗಿ 90 ಗ್ರಾಮ್ ತೂಕದ ಗಡ್ಡೆ ತೆಗೆಯಲು ಲೇಸರ್ ಶಸ್ತ್ರಚಿಕಿತ್ಸೆ ಮಾಡಲಾಗುತ್ತಿತ್ತು. ಇಷ್ಟು ದೊಡ್ಡ ಪ್ರಮಾಣದ ಗಡ್ಡೆಯನ್ನು ಲೇಸರ್ ಮೂಲಕ ತೆಗೆದಿರುವುದು ಇದೇ ಮೊದಲು. ಇದರಲ್ಲಿ ಸ್ವಲ್ಪವೂ ರಕ್ತ ನಷ್ಟವಾಗಲಿಲ್ಲ. ಮೂರನೇ ದಿನಕ್ಕೆ ರೋಗಿಯನ್ನು ಮನೆಗೆ ಕಳುಹಿಸಲಾಯಿತು.

 

ಹೆಚ್ಚು ವಯಸ್ಸಾದವರು, ಹೃದ್ರೋಗ ಮತ್ತಿತರ ಸಮಸ್ಯೆಗಳಿರುವವರಿಗೂ ಈ ಶಸ್ತ್ರಚಿಕಿತ್ಸೆ ನೆರವೇರಿಸಬಹುದಾಗಿದೆ. ಈ ಶಸ್ತ್ರಚಿಕಿತ್ಸೆಗೆ 65ರಿಂದ 70 ಸಾವಿರ ರೂಪಾಯಿವರೆಗೆ ವೆಚ್ಚವಾಗುತ್ತದೆ~ ಎಂದು ಅವರು ವಿವರಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry