ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3.29 ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ

Last Updated 19 ಫೆಬ್ರುವರಿ 2012, 8:35 IST
ಅಕ್ಷರ ಗಾತ್ರ

ವಿಜಾಪುರ: ಮೊದಲನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮ ಇದೇ 19ರಿಂದ 22ರ ವರೆಗೆ ಜರುಗಲಿದ್ದು, ಐದು ವರ್ಷ ವಯೋಮಿತಿಯೊಳಗಿನ ಜಿಲ್ಲೆಯ 3,29,778 ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ಗುರಿ ಹೊಂದಲಾಗಿದೆ ಎಂದು ಜಿಲ್ಲಾಧಿಕಾರಿ ಶಿವಯೋಗಿ ಕಳಸದ ತಿಳಿಸಿದರು.

ಪೋಲಿಯೊ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಿ ಮಾತನಾಡಿದ ಅವರು, ಈ ಕಾರ್ಯಕ್ರಮದ ಬಗ್ಗೆ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳು ಹಾಗೂ ನೌಕರರ ಮೇಲೆ ನಿರ್ದಾಕ್ಷಿಣ್ಯವಾಗಿ  ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು.

ವಿಜಾಪುರ ಸೇರಿದಂತೆ ಜಿಲ್ಲೆಯ ನಗರ ಪ್ರದೇಶಗಳಲ್ಲಿ ವಾಸಿಸುವ ಜನರು ಬೂತ್‌ಗಳಿಗೆ ಬಂದು ಪೋಲಿಯೊ ಹನಿ ಹಾಕಿಸಲು ಹಿಂದೇಟು ಹಾಕುತ್ತಿರುವುದು ಕಂಡು ಬಂದಿದೆ. ಮೊದಲ ದಿನವೇ ಯೋಜಿತ ಮಕ್ಕಳ ಪೈಕಿ ಶೇ.90ರಷ್ಟು ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ನಿಟ್ಟಿನಲ್ಲಿ ಎಲ್ಲರೂ ಸೇರಿ ಮನವೊಲಿಸಬೇಕು ಎಂದರು.

ಆರೋಗ್ಯ ನಿರ್ದೇಶನಾಲಯದ ಜಂಟಿ ನಿರ್ದೇಶಕಿ ಡಾ.ಅರುಣಾ ದೇವನಿರಕರ ಮಾತನಾಡಿ, ನಗರದ ಸ್ಲಂ ಪ್ರದೇಶ ಹಾಗೂ ಕೆಲ ಗ್ರಾಮೀಣ ಪ್ರದೇಶದ ಹಳೆ ತಲೆಮಾರಿನ ಪೋಷಕರು, ಮೂಢನಂಬಿಕೆಯಿಂದಾಗಿ ಪೋಲಿಯೊ ಲಸಿಕೆ ಹಾಕಿಸಲು ಹಿಂದೇಟು ಹಾಕುತ್ತಾರೆ.
 
ಅವರ ಮನವೊಲಿಸಿ ಶೇ.100ರಷ್ಟು ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕುವ ನಿಟ್ಟಿನಲ್ಲಿ ವಿವಿಧ ಧರ್ಮದ ಮುಖಂಡರು, ಸ್ವಯಂ ಸೇವಾ ಸಂಘಟನೆಗಳು ಸಹಕರಿಸಬೇಕು ಎಂದು ಮನವಿ ಮಾಡಿಕೊಂಡರು.
ಪೋಲಿಯೊ ಕಾರ್ಯಕ್ರಮದಲ್ಲಿ ಭಾಗವಹಿಸುವ ವಾಹನ ಚಾಲಕರಿಗೆ ದಿನವೊಂದಕ್ಕೆ ರೂ.75 ನಂತೆ ಪ್ರೋತ್ಸಾಹ ಧನ ನೀಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.


ಜಿಲ್ಲೆಯ 771 ಗ್ರಾಮಗಳ ಐದು ವರ್ಷದೊಳಗಿನ  3,29,778 ಮಕ್ಕಳಿಗೆ ಪೋಲಿಯೊ ಹನಿ ಹಾಕುವ ಗುರಿ ಹೊಂದಲಾಗಿದೆ. ಈ ಮೊದಲು ಪೋಲಿಯೊ ಲಸಿಕೆ ಹಾಕಿಸಿದ್ದರೂ ಮತ್ತೆ ಎರಡು ಹನಿ ಪೋಲಿಯೊ ಲಸಿಕೆ ಹಾಕಿಸುವುದು ಕಡ್ಡಾಯ. ಜಿಲ್ಲೆಯಲ್ಲಿ 2562 ಲಸಿಕೆ ನೀಡುವ ಕಾರ್ಯಕರ್ತರನ್ನು 243 ಮೇಲ್ವಿಚಾರಕರನ್ನು ಹಾಗೂ ಪರಿಶೀಲನೆಗಾಗಿ 1125 ತಂಡಗಳನ್ನು ನಿಯೋಜಿಸಲಾಗಿದೆ.

ತೋಟದ ಮನೆ, ಇಟ್ಟಂಗಿ ಭಟ್ಟಿ, ಕಟ್ಟಡ ನಿರ್ಮಾಣ, ಕಬ್ಬು ಕಟಾವು ಪ್ರದೇಶಗಳನ್ನು ಹೈರಿಸ್ಕ್ ಪ್ರದೇಶವೆಂದು ಗುರುತಿಸಲಾಗಿದ್ದು, ಈ ಭಾಗದಲ್ಲಿ 7023 ಮಕ್ಕಳಿಗೆ ಲಸಿಕೆ ಹಾಕಬೇಕಾಗಿದೆ. ಲಸಿಕೆ ಹಾಕಲು ವಿಶೇಷ ವ್ಯವಸ್ಥೆ ಮಾಡಲಾಗಿದೆ.

ಬಸ್ ನಿಲ್ದಾಣ, ರೈಲ್ವೆ ಸ್ಟೇಶನ್‌ಗಳಲ್ಲಿ ಲಸಿಕೆ ನೀಡುವ ವ್ಯವಸ್ಥೆ ಮಾಡಲಾಗಿದ್ದು, 45 ಎನ್.ಜಿ.ಒ.ಗಳು ಸ್ವಯಂ ಪ್ರೇರಿತರಾಗಿ ಪೋಲಿಯೊ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೋಲಿಯೊ ಅಧಿಕಾರಿ ಡಾ. ಬೆಳ್ಳುಬ್ಬಿ ವಿವರ ನೀಡಿದರು.

ಜಿ.ಪಂ. ಸಿಇಒ ಎ.ಎನ್. ಪಾಟೀಲ, ಉಪ ಕಾರ್ಯದರ್ಶಿ ಅಮರೇಶ ನಾಯಕ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ವಿಶ್ವನಾಥ ಗಲಗಲಿ, ಜಿಲ್ಲಾ ಶಸ್ತ್ರ ಚಿಕಿತ್ಸಕ ಡಾ.ಆರ್.ಎಂ. ಸಜ್ಜನ, ಪೌರಾಯುಕ್ತ ರಾಜಶೇಖರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಿ.ಪಿ. ವಸಂತಪ್ರೇಮ, ಮಕ್ಕಳ ತಜ್ಞ ಡಾ. ಎಲ್.ಎಚ್. ಬಿದರಿ ಇತರರು ಭಾಗವಹಿಸಿದ್ದರು. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT