ಭಾನುವಾರ, ನವೆಂಬರ್ 17, 2019
21 °C

33 ಕ್ಷೇತ್ರಗಳಲ್ಲಿ ಎರೆಡೆರಡು ಮತಯಂತ್ರ

Published:
Updated:

ಬೆಂಗಳೂರು: ರಾಜ್ಯದ 33 ವಿಧಾನಸಭಾ ಕ್ಷೇತ್ರಗಳಲ್ಲಿ 16ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಉಳಿದಿರುವುದರಿಂದ ಮತಗಟ್ಟೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ `ಎರಡು ಯೂನಿಟ್'ಗಳನ್ನು ಅಳವಡಿಸುವುದು ಅನಿವಾರ್ಯವಾಗಿದೆ.ಶನಿವಾರ ನಾಮಪತ್ರ ವಾಪಸ್ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡ ನಂತರ 16ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಇರುವ 33 ಕ್ಷೇತ್ರಗಳ ಮಾಹಿತಿ ದೊರೆತಿದೆ ಎಂದು ರಾಜ್ಯದ ಜಂಟಿ ಚುನಾವಣಾಧಿಕಾರಿ ಟಿ.ಶಾಮಯ್ಯ `ಪ್ರಜಾವಾಣಿ'ಗೆ ತಿಳಿಸಿದರು.ರಾಜ್ಯದಲ್ಲಿ ಒಟ್ಟು 52,034 ಮತಗಟ್ಟೆಗಳಿವೆ. ಇಷ್ಟು ಪ್ರಮಾಣದ ಮತಯಂತ್ರಗಳ ಜೊತೆಗೆ ಹೆಚ್ಚುವರಿಯಾಗಿ 18 ಸಾವಿರ ಮತಯಂತ್ರಗಳನ್ನು ಸಂಗ್ರಹಿಸಿ ಇಡಲಾಗಿದೆ. 33 ಕ್ಷೇತ್ರಗಳಲ್ಲಿ ಎರಡು ಯೂನಿಟ್‌ಗಳನ್ನು ಅಳವಡಿಸಬೇಕಾಗಿರುವುದರಿಂದ ಹೆಚ್ಚುವರಿಯಾಗಿ 7,726 ಮತಯಂತ್ರಗಳನ್ನು ಬಳಸಬೇಕಾಗುತ್ತದೆ ಎಂದು ಅವರು ವಿವರಿಸಿದರು.ಮತಯಂತ್ರಗಳ ಕೊರತೆ ಇಲ್ಲ. ಹೆಚ್ಚುವರಿಯಾಗಿ 7,726 ಮತಯಂತ್ರಗಳನ್ನು ಬಳಸಿದ ನಂತರವೂ ಹತ್ತು ಸಾವಿರ ಮತಯಂತ್ರಗಳು ಉಳಿಯುತ್ತವೆ. ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಈಗಾಗಲೇ ಪರಿಶೀಲಿಸಿ, ಜಿಲ್ಲಾಧಿಕಾರಿಗಳ ವಶಕ್ಕೆ ನೀಡಲಾಗಿದೆ ಎಂದರು.ನಾಮಪತ್ರಗಳ ಪರಿಶೀಲನೆ ನಂತರ 95 ಕ್ಷೇತ್ರಗಳಲ್ಲಿ 16ಕ್ಕೂ ಹೆಚ್ಚು ಅಭ್ಯರ್ಥಿಗಳು ಕಣದಲ್ಲಿ ಇದ್ದರು. ಆದರೆ, ನಾಮಪತ್ರಗಳ ವಾಪಸ್ ಪಡೆಯುವ ಪ್ರಕ್ರಿಯೆ ಪೂರ್ಣಗೊಂಡ ನಂತರ 33 ಕ್ಷೇತ್ರಗಳಲ್ಲಿ ಮಾತ್ರ 16ಕ್ಕಿಂತ ಹೆಚ್ಚು ಅಭ್ಯರ್ಥಿಗಳು ಇರುವ ಮಾಹಿತಿ ಲಭ್ಯವಾಗಿದೆ.ಮತದಾರರ ಸಂಖ್ಯೆ: ಮತದಾರರ ಪಟ್ಟಿ ಪರಿಷ್ಕರಣೆ ನಂತರ ರಾಜ್ಯದಲ್ಲಿನ ಒಟ್ಟು ಮತದಾರರ ಸಂಖ್ಯೆ 6.36 ಕೋಟಿಗೆ ಏರಿದೆ. ಜನವರಿ 28ರ ನಂತರ ಹೊಸದಾಗಿ 36 ಲಕ್ಷ ಜನರು ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಅವರಿಗೆ ಕೇಂದ್ರ ಚುನಾವಣಾ ಆಯೋಗದ ಗುರುತಿನ ಚೀಟಿ ನೀಡುವ ಕಾರ್ಯ ಪ್ರಗತಿಯಲ್ಲಿದೆ.

ಪ್ರತಿಕ್ರಿಯಿಸಿ (+)