ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

33 ಎಕರೆ ಅರಣ್ಯ ಭೂಮಿ ಒತ್ತುವರಿ ಖುಲ್ಲಾ

Last Updated 28 ಸೆಪ್ಟೆಂಬರ್ 2013, 7:47 IST
ಅಕ್ಷರ ಗಾತ್ರ

ಚಿಕ್ಕಮಗಳೂರು: ಮಾಜಿ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಸಿ.ಆರ್.­ಸಗೀರ್ ಅಹಮದ್ ಅವರ ಪುತ್ರ ಝಕಿಉರ್ ರೆಹಮಾನ್ ತಾಲ್ಲೂಕಿನ ಇಂದಾವರ ಮೀಸಲು ಅರಣ್ಯ ಪ್ರದೇಶ ವ್ಯಾಪ್ತಿಯ ಚಿಕ್ಕೊಳಲೆ ಗ್ರಾಮದಲ್ಲಿ ಒತ್ತುವರಿ ಮಾಡಿ ಬೆಳೆಸಿದ್ದ 33.36 ಎಕರೆ ಕಾಫಿ ತೋಟವನ್ನು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಶುಕ್ರವಾರ ಪೊಲೀಸ್ ಬಿಗಿ ಬಂದೋ­ಬಸ್ತ್‌ನಲ್ಲಿ ಖುಲ್ಲಾ ಮಾಡಿದರು.

ಬೆಳಿಗ್ಗೆ 9 ಗಂಟೆ ವೇಳೆಗೆ ನೂರಾರು ಕಾರ್ಮಿಕರೊಂದಿಗೆ ಗರಗಸ, ಮಚ್ಚು, ಕುಡುಗೋಲು ಸಮೇತ ಸ್ಥಳಕ್ಕೆ ತೆರಳಿದ ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬೆಳೆದು ನಿಂತಿದ್ದ ಕಾಫಿ ಗಿಡಗಳನ್ನು ಕಡಿದು, ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಿದರು.

ಸಂಜೆವರೆಗೆ ನಡೆದ ಕಾರ್ಯಾ­ಚರಣೆ­ಯಲ್ಲಿ ಸುಮಾರು 20 ಸಾವಿರಕ್ಕೂ ಹೆಚ್ಚು ಕಾಫಿ ಗಿಡಗಳನ್ನು ಕಡಿದು ನೆಲಕ್ಕುರುಳಿಸಿದರು. ಕಾಳು ಮೆಣಸು ಬಳ್ಳಿಗಳು, ತೋಟದಲ್ಲಿ ಬೆಳೆದಿದ್ದ ಕೃಷಿ ಬೆಳೆ ಮತ್ತು ತರಕಾರಿ ಈಗಾಗಲೇ ಒತ್ತುವರಿ ಜಾಗದಲ್ಲಿ ಬೆಳೆದಿದ್ದ ಸಿಲ್ವರ್ ಮರಗಳನ್ನು ಶೇ 75ರಷ್ಟು ಕಡಿದುಕೊಂಡಿದ್ದು, ಉಳಿದ ಮರಗಳನ್ನು ಕಡಿದುಕೊಳ್ಳಲು ಡಿಸೆಂ­ಬರ್‌­ವರೆಗೆ ಕಾಲಾವಕಾಶ ಕೇಳಿ ಇಲಾ­ಖೆಗೆ ಅರ್ಜಿ ಸಲ್ಲಿಸಿದ್ದರು. ಒಂದು ವಾರ ಗಡುವು ನೀಡಿದ್ದ ಅರಣ್ಯ ಇಲಾಖೆ, ಮತ್ತೆ ಕಾಲಾವಕಾಶ ನೀಡಲು ನಿರಾ­ಕರಿಸಿ, ತೆರವು ಕಾರ್ಯಾಚರಣೆ ನಡೆಸಿತು.

‘ಒತ್ತುವರಿ ತೆರವಿಗೆ ಆಕ್ಷೇಪವಿಲ್ಲ. ತಾವೇ ಖುದ್ದಾಗಿ ತೆರವು ಮಾಡಿ­ಕೊಡುತ್ತಿದ್ದೆವು. ಈಗಷ್ಟೇ ಕಾಫಿ ಗಿಡ­ಗಳಲ್ಲಿ ಫಸಲು ಕಟ್ಟುತ್ತಿತ್ತು. ಮೆಣಸು ಸಹ ಕಟಾವಿಗೆ ಬಂದಿತ್ತು. ಕೊಯ್ಲಿಗೆ ಕನಿಷ್ಠ ಎರಡು ತಿಂಗಳು ಬೇಕಾಗುತ್ತದೆ. ಅಲ್ಲಿವರೆಗೆ ಅವಕಾಶ ನೀಡುವಂತೆ ಮನವಿ ಮಾಡಿದ್ದರೂ ಪರಿಗಣಿಸಲಿಲ್ಲ. ಇದರ ಹಿಂದೆ ಕಾಂಗ್ರೆಸ್ ಪಕ್ಷದಲ್ಲೇ ಇರುವ ವಿರೋಧಿ ಗುಂಪಿನ ಕೈವಾಡ ಇದೆ’ ಎಂದು ಮಾಜಿ ಸಚಿವರ ಆಪ್ತರು ದೂರಿದರು.

ಒತ್ತುವರಿ ತೆರವು ಕಾರ್ಯಾಚರಣೆ ನಡೆಯುತ್ತಿದ್ದಾಗ ಸಗೀರ್ ಅಹಮದ್ ಆಗಲಿ ಅಥವಾ ಅವರ ಪುತ್ರ ಸೇರಿದಂತೆ ಕುಟುಂಬದ ಯಾರೊಬ್ಬರೂ ಅತ್ತ ಸುಳಿಯಲಿಲ್ಲ. ಕಾರ್ಮಿಕರು ಮಾತ್ರ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳೆ ಹಾಗೂ ಕಾಫಿ ಗಿಡಗಳು ಕಣ್ಣೆದುರಿಗೆ ನೆಲಸಮವಾಗುತ್ತಿರುವುದನ್ನು ಕಂಡು ಮರುಕಪಡುತ್ತಿದ್ದರು.

ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿರಾಜ್ ನಾರಾಯಣ್, ಎಸಿಎಫ್ ಶಶಿಧರ್, ಆರ್‌ಎಫ್‌ಒ ಅಬ್ದುಲ್ ಅಜೀಜ್, ಪ್ರಸಾದ್, ತಹಸೀಲ್ದಾರ್ ಶಿವೇಗೌಡ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT