330 ಕೋಟಿ ಅನುದಾನಕ್ಕೆ ಕೋರಿಕೆ

7

330 ಕೋಟಿ ಅನುದಾನಕ್ಕೆ ಕೋರಿಕೆ

Published:
Updated:

ರಾಯಚೂರು: ಕಳೆದ ವರ್ಷ ರಾಜ್ಯ ಅಲ್ಪಸಂಖ್ಯಾತ ಇಲಾಖೆಗೆ ಸರ್ಕಾರವು 260 ಕೋಟಿ ದೊರಕಿಸಿತ್ತು. ಈ ಬಾರಿಯ ಬಜೆಟ್‌ನಲ್ಲಿ 330 ಕೋಟಿ ದೊರಕಿಸಲು ಹಣಕಾಸು ಸಚಿವರಾಗಿರುವ ಮುಖ್ಯಮಂತ್ರಿಯವರಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ರಾಜ್ಯ ಹಜ್, ವಕ್ಫ್ ಮತ್ತು ಅಲ್ಪಸಂಖ್ಯಾತ ಇಲಾಖೆ ಖಾತೆ ಸಚಿವ ಮುಮ್ತಾಜ್ ಅಲಿಖಾನ್ ಹೇಳಿದರು.

ಭಾನುವಾರ ಇಲ್ಲಿನ ಅಲ್ಪಸಂಖ್ಯಾತ ಇಲಾಖೆ ಅನುದಾನದಲ್ಲಿ ನಡೆಸಲ್ಪಡುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳ ವಸತಿ ನಿಲಯಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.260 ಕೋಟಿ ಅನುದಾನದಲ್ಲಿ ಶೇ 99ರಷ್ಟು ಬಳಕೆ ಮಾಡಲಾಗಿದೆ. ಈ ಹಿಂದಿನ ಸರ್ಕಾರಗಳಲ್ಲಿ ಈ ಇಲಾಖೆಗೆ ಕೇವಲ 30 ಕೋಟಿ ಅನುದಾನವೂ ಬರುತ್ತಿರಲಿಲ್ಲ. ಈಗ ನೂರಾರು ಕೋಟಿ ದೊರಕುತ್ತಿದೆ ಎಂದು ಹೇಳಿದರು.1700 ಹುದ್ದೆ ನೇಮಕ: ಅಲ್ಪ ಸಂಖ್ಯಾತ ಇಲಾಖೆಯ ಅನುದಾನದಲ್ಲಿ ನಡೆಸಲ್ಪಡುವ ಶಾಲೆ ಮತ್ತು ವಸತಿ ನಿಲಯಗಳಿಗೆ ಶಿಕ್ಷಕರು ಮತ್ತು ಸಿಬ್ಬಂದಿ ಸೇರಿದಂತೆ ಒಟ್ಟು 1,700 ಹುದ್ದೆಗಳಿಗೆ ನೇಮಕಾತಿ ಮಾಡುವ ಚಿಂತನೆ ನಡೆದಿದೆ. ವೃಂದ ಮತ್ತು ನೇಮಕಾತಿ ನಿಯಮಕ್ಕೆ ತಿದ್ದುಪಡಿ ತರುವ ಮೂಲಕ ಈ ಹುದ್ದೆ ನೇಮಕಾತಿ ಮಾಡಲಾಗುವುದು ಎಂದರು.

ಪ್ರಸ್ತುತ ಈ ಶಾಲೆ ಮತ್ತು ವಸತಿ ನಿಲಯಗಳು ಜಿಲ್ಲಾ ಪಂಚಾಯಿತಿ ಮೂಲಕ ನಿರ್ವಹಣೆ ಆಗುತ್ತಿವೆ. ಹೊರ ಗುತ್ತಿಗೆ ಸಂಸ್ಥೆ ಸಿಬ್ಬಂದಿಯಿಂದ ಇವುಗಳು ನಡೆಯುತ್ತಿವೆ. ಇದರಿಂದ ಅವ್ಯವಸ್ಥೆ ವಾತಾವರಣ ರೂಪುಗೊಂಡಿದೆ ಎಂದು ತಿಳಿಸಿದರು.ಇದನ್ನು ಹೋಗಲಾಡಿಸಲು ಇಲಾಖೆಯೇ ನೇರವಾಗಿ ಹುದ್ದೆ ನೇಮಕಾತಿಗೆ ಮುಂದಾಗಿದೆ. ಅಲ್ಲದೇ ಈ ವಸತಿ ನಿಲಯ ಮತ್ತು ಶಾಲೆ ನಿರ್ವಹಣೆಗೆ ಅಲ್ಪಸಂಖ್ಯಾತ ಇಲಾಖೆಯಿಂದಲೇ ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ನೇಮಕ ಮಾಡಲು ಮುಖ್ಯಮಂತ್ರಿಗಳಿಗೆ ಕೋರಲಾಗಿದೆ ಎಂದು ಹೇಳಿದರು.ಹಜ್ ಮಹಲ್‌ಗೆ 40 ಕೋಟಿ:

ಬೆಂಗಳೂರಿನಲ್ಲಿ ಹಜ್‌ಮಹಲ್ ನಿರ್ವಹಣೆಗೆ 40 ಕೋಟಿ ಯೋಜನೆ ರೂಪಿಸಲಾಗಿದೆ. ಇದಕ್ಕೆ ರಾಜ್ಯ ಸರ್ಕಾರ 20 ಕೋಟಿ ದೊರಕಿಸುತ್ತಿದೆ. ಇದೇ ವರ್ಷ 15 ಕೋಟಿ ದೊರಕಿಸುವ ಭರವಸೆ ಇದೆ ಎಂದರು.ಸಿಇಓ ವಿರುದ್ಧ ಸಿಎಂಗೆ ದೂರು:

ಜಿಲ್ಲೆಯ ಮೊರಾರ್ಜಿ ದೇಸಾಯಿ ಅಲ್ಪಸಂಖ್ಯಾತರ ವಸತಿ ಶಾಲೆಗೆ ಅನುದಾನ ದೊರಕಿಸುವಲ್ಲಿ ಅಲ್ಪಸಂಖ್ಯಾತ ಇಲಾಖೆಯ ಲೋಪವಿಲ್ಲ. ಇಲಾಖೆ ಅನುದಾನ ಬಿಡುಗಡೆ ಮಾಡಿದೆ. ಆದರೆ ಅದನ್ನು ದೊರಕಿಸುವಲ್ಲಿ ಇಲ್ಲಿನ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಓ)  ಗಮನ ಹರಿಸಿಲ್ಲ. ಹೀಗಾಗಿ 80 ಲಕ್ಷ ಬಾಕಿ ಉಳಿದಿರಬಹುದು. ಈ ಬಗ್ಗೆ ಮುಖ್ಯಮಂತ್ರಿಗಳಿಗೆ ಸಿಇಓ ವಿರುದ್ಧ ದೂರು ಸಲ್ಲಿಸುತ್ತೇನೆ ಎಂದು ಹೇಳಿದರು.ಕಳೆದ ಬಾರಿಯೂ ಈ ವಸತಿ ಶಾಲೆಗೆ ಭೇಟಿ ನೀಡಿದ್ದೆ. ಕೆಲ ಸಲಹೆ ಸೂಚನೆ ನೀಡಿದ್ದೆ. ಅವು ಪಾಲನೆ ಆಗಿಲ್ಲ. ಬಾಲಕಿಯರ ವಸತಿ ನಿಲಯಕ್ಕೆ ಪುರುಷ ವಾರ್ಡನ್ ಬೇಡ ಎಂದು ಹೇಳಿದ್ದೆ. ಪ್ರಾಚಾರ್ಯ ಹುದ್ದೆಗೆ ಎಂಎ ಬಿಎಡ್ ಪದವೀಧರರನ್ನೇ ನೇಮಿಸಿ ಎಂದು ಸೂಚಿಸಿದ್ದೆ. ಅದ್ಯಾವುದನ್ನೂ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry