ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

34 ಮಂದಿ ವಿರುದ್ಧ ದೂರು ದಾಖಲು

ಕೆಜಿಎಫ್: ನಕಲಿ ದಾಖಲೆ ಸೃಷ್ಟಿ; ಸರ್ಕಾರಿ ಜಮೀನು ಪರಭಾರೆ
Last Updated 12 ಡಿಸೆಂಬರ್ 2013, 9:00 IST
ಅಕ್ಷರ ಗಾತ್ರ

ಕೆಜಿಎಫ್‌: ಸರ್ಕಾರಿ ಜಮೀನಿಗೆ ಅಕ್ರಮ­ವಾಗಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಿದ ಆರೋಪದ ಮೇಲೆ 34 ಮಂದಿ ವಿರುದ್ಧ ರಾಬರ್ಟಸನ್‌ಪೇಟೆ ನಗರಸಭೆ ಆಯುಕ್ತರು ದೂರು ಸಲ್ಲಿಸಿ­ದ್ದಾರೆ.

ನಗರಸಭೆ ವ್ಯಾಪ್ತಿಯ 44 ನಿವೇಶನ­ವನ್ನು ಹಿಂದಿನ ಆಯುಕ್ತ ಯರ್ರಪ್ಪನವರ ನಕಲಿ ಸಹಿ ಹಾಕಿ, ದಾಖಲೆ ಸೃಷ್ಟಿಸಿ ಮಾರಾಟ ಮಾಡಲಾಗಿದೆ ಎಂದು 2010ರ ಜುಲೈ 17 ರಂದು ನಡೆದ ನಗರಸಭೆ ಅಧಿವೇಶನದಲ್ಲಿ ಚರ್ಚೆ ನಡೆದಿತ್ತು.

ಅಕ್ರಮ ಮಾಡಿದವರ ವಿರುದ್ಧ ಪೊಲೀಸರಿಗೆ ದೂರು ನೀಡಲು ಸಹ ಸಮ್ಮತಿ ನೀಡಲಾಗಿತ್ತು. ನಂತರ ದಾಖಲೆ ಪರಿಶೀಲಿಸಿದಾಗ 44 ನಿವೇ­ಶನಗಳ ಪೈಕಿ 34ಕ್ಕೆ ನಕಲಿ ದಾಖಲೆ­ಗಳನ್ನು ಬಳಸಿರುವುದು ಪತ್ತೆಯಾಗಿದೆ.

ಡಿಸೆಂಬರ್ 2009 ಹಾಗೂ ಮೇ 2010ರ ಅವಧಿಯಲ್ಲಿ ನಕಲಿ ದಾಖಲೆ ಸೃಷ್ಟಿಸಲಾಗಿತ್ತು. ಇದರಿಂದಾಗಿ ಸರ್ಕಾರಿ ಜಮೀನು ಪರಭಾರೆಯಾಗಿ ಕೋಟ್ಯಂ­ತರ ರೂಪಾಯಿ ನಷ್ಟವುಂಟಾಗಿದೆ.

ದಾಖಲೆ ಸೃಷ್ಟಿಸಿದ ಆರೋಪಿಗಳು ಹಿಂದಿನ ಆಯುಕ್ತ ಆರ್‌.ಎಸ್‌.ಯರ್ರಪ್ಪ ಅವರ ಸಹಿ, ನಮೂನೆ 3 ಮತ್ತು ಹಿಂಬರಹವನ್ನು ನಕಲು ಮಾಡಿದ್ದರು.

ನಗರಸಭೆ ವ್ಯಾಪ್ತಿಯಲ್ಲಿ ಇಂಥ ಹಗರಣ ನಡೆದಿರುವುದು ಮೇಲ್ನೋ­ಟಕ್ಕೆ ಸಾಬೀತಾಗಿದ್ದರೂ ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಈ ಸಂಬಂಧ ರಾಜಕೀಯ ಪಕ್ಷವೊಂದರ ಪದಾಧಿಕಾರಿ ಎಸ್‌.ವೆಂಕಟೇಶಗೌಡ ಲೋಕಾಯುಕ್ತರಿಗೆ ದೂರು ಸಲ್ಲಿಸಿ­ದ್ದರು. ರಾಬರ್ಟಸನ್‌ಪೇಟೆ ನಗರಸಭೆ ವ್ಯಾಪ್ತಿಯಲ್ಲಿ ಪೌರಾಯುಕ್ತರ ನಕಲು ಸಹಿ ಮಾಡಿ, ಸರ್ಕಾರಿ ಜಮೀನನ್ನು ಪರಭಾರೆ ಮಾಡಿದವರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿಲ್ಲ ಎಂದು ದೂರಿನಲ್ಲಿ ವಿವರಿಸಿದ್ದರು.

ದೂರಿನ ತನಿಖೆ ಶುರು ಮಾಡಿದ ಲೋಕಾಯುಕ್ತರು ಅವ್ಯವಹಾರ ನಡೆದ ಅವಧಿಯಲ್ಲಿ  ಅಂದರೆ ಡಿಸೆಂಬರ್ 2009ರಿಂದ ಇಲ್ಲಿಯವರೆಗೂ ಕಾರ್ಯ­ನಿರ್ವಹಿಸಿದ ಪೌರಾಡಳಿತ ನಿರ್ದೇಶನಾಲಯದ ಆಯುಕ್ತರು, ಜಿಲ್ಲಾಧಿಕಾರಿ, ಬಂಗಾರಪೇಟೆಯ ಹಿರಿಯ ಉಪನೋಂದಣಾಧಿಕಾರಿ ಸೇರಿ­ದಂತೆ ಈ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸಿಬ್ಬಂದಿಯ ಕಾರ್ಯಾವಧಿ ವಿವರ ಕೇಳಿದ್ದಾರೆ. 

ಒಂದು ವೇಳೆ ಪ್ರಕರಣಕ್ಕೆ ಸಂಬಂಧಿ­ಸಿದ ಅಧಿಕಾರಿಗಳು ವರ್ಗಾವಣೆ­ಗೊಂಡಿ­ದ್ದರೆ ಅವರು ಪ್ರಸ್ತುತ ಕಾರ್ಯ­ನಿರ್ವಹಿಸುತ್ತಿರುವ ಕಚೇರಿ ವಿಳಾಸ, ದೂರವಾಣಿ ಅಥವಾ ಮೊಬೈಲ್‌ ಸಂಖ್ಯೆ, ಒಂದು ವೇಳೆ ನಿವೃತ್ತಿ ಹೊಂದಿ­ದ್ದಲ್ಲಿ ಹಾಲಿ ವಾಸಿಸುತ್ತಿರುವ ಮನೆ ವಿಳಾಸ ಇತ್ಯಾದಿ ಮಾಹಿತಿಗಳನ್ನು ನೀಡು­ವಂತೆ ಸೂಚಿಸಿದ್ದರು. ಈ ಬಗ್ಗೆ ನಗರಸಭೆ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಮಾಹಿತಿ­ಯನ್ನು ಸಹ ಕೇಳಲಾಗಿದೆ.

ಲೋಕಾಯುಕ್ತರ ತನಿಖೆ ಚುರುಕು­ಗೊಂಡ ಹಿನ್ನೆಲೆಯಲ್ಲಿ ಪೌರಾಡಳಿತ ನಿರ್ದೇಶನಾಲಯದಿಂದ ನಗರಸಭೆ ಅಧಿಕಾರಿಗಳವರೆಗೂ ಎಲ್ಲರೂ ಚುರುಕು­ಗೊಂಡು ನಿಸ್ತೇಜವಾಗಿದ್ದ ಪ್ರಕರಣಕ್ಕೆ ಮತ್ತೆ ಜೀವ ತುಂಬಲು ಪ್ರಯತ್ನಿಸುತ್ತಿದ್ದಾರೆ.

ಲೋಕಾಯುಕ್ತದ  ತಾಂತ್ರಿಕ ವಿಭಾಗದ ಉಪನಿಯಂತ್ರಕರು (ಲೆಕ್ಕ­ಪತ್ರ) ಎಲ್ಲ ಅಗತ್ಯ ದಾಖಲೆಗಳನ್ನು ಇದೇ ತಿಂಗಳ 10ನೇ ತಾರೀಕಿನೊಳಗೆ ಸಲ್ಲಿಸಬೇಕೆಂದು ಕೋರಿದ್ದರಿಂದ, ಅಕ್ರಮ ದಾಖಲೆ ಸೃಷ್ಟಿಸಿ ಬಂಗಾರಪೇಟೆ ಉಪನೋಂದಣಾಧಿಕಾರಿ ಕಚೇರಿಯಲ್ಲಿ ನೋಂದಣಿ ಮಾಡಿಸಿದ 34 ಮಾರಾಟ­ಗಾರರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ಹೂಡುವಂತೆ ನಗರಸಭೆ ಆಯುಕ್ತರು ಪೊಲೀಸರಲ್ಲಿ ಕೋರಿದ್ದಾರೆ.

ಊರಿಗಾಂಪೇಟೆಯ ಡಬ್ಲ್ಯು.ಟಿ.­ಬ್ಲಾಕ್‌ನ ಎಂ.ವೇಣುಗೋಪಾಲ್‌, ಬೆಂಗ­ಳೂರು ಕೆ.ಆರ್‌.ಪುರಂನ ಬಿಆರ್‌­ಡಿಒ ಕಚೇರಿಯ ಎಂ.ಕುಪ್ಪ­ಸ್ವಾಮಿ, ಊರಿಗಾಂ ನ್ಯೂ ಮಾಡೆಲ್‌ ಹೌಸ್‌ನ ವಿಕ್ಟೋರಿಯಾ ಸುಂದರೇ­ಶನ್‌, ಊರಿಗಾಂ ಪೆದ್ದಪಲ್ಲಿ ರಸ್ತೆಯ ಯಳ್ಳತ್ತೂರು ಮುನಿಯಮ್ಮ, ಮುಳ­ಬಾಗಲಿನ ಎಸ್.ಗೀತಾ ಅವರ ಪರವಾಗಿ ಎಸ್‌.ವಿ.ಮಣಿ (ಎರಡು ನಿವೇಶನ), ಸಂಜಯಗಾಂಧಿ ನಗರದ ಗಂಗ­ಮ್ಮಾಳ್‌, ಬೆಂಗಳೂರು ಯಲಹಂಕದ ಮೊಹಮದ್‌ ರಫಿ, ಊರಿಗಾಂನ ಎಸ್.ಟಿ.ಬ್ಲಾಕ್‌ನ ಸರಸು, ಮಂಜು­ನಾಥ ನಗರದ ಎಸ್‌.ವಿ.ಮಣಿ, ಆಂಡರಸನ್‌­ಪೇಟೆಯ ಆರ್‌.ಇಸ್ಮಾ­ಯಿಲ್‌, ಮಸ್ಕಂ ಹೌಸಿಂಗ್‌ ಬೋರ್ಡ್‌ ಕಾಲೊನಿಯ ಜಾರ್ಜ್‌ ಮತ್ತು ಅವರ ಪತ್ನಿ ಅಮುದಾ, ಬೆಂಗಳೂರು ಕೃಷ್ಣಪ್ಪ ಗಾರ್ಡನ್‌ನ ಬಶೀರ್‌ ಅಹಮದ್‌, ಡಿ.ಕೆ.­ಹಳ್ಳಿಯ ಎನ್‌.ಸರೋಜಿನಿ,   ಅಂಬೇ­ಡ್ಕರ್ ನಗರದ ಪ್ರಕಾಶ್‌ ಮತ್ತು  ಸುಸೈ, ಊರಿಗಾಂನ ಜಿ.ಮಾಣಿಕ್ಯಂ ಪರವಾಗಿ ನಹೀಂಪಾಷ, ಸ್ವರ್ಣನಗರದ ಎಸ್.ವೆಂಕಟ­ರೆಡ್ಡಿ, ಮಸ್ಕಂನ ವರದ­ರಾಜ್‌, ಮೊಯುದ್ದೀನ್‌ ಕಾಂಪೌಂಡ್‌­ಶಕುಂತಲಾ, ವಿ.ಕೋಟೆಯ ಶೆಹನಾಜ್‌ ಬೇಗಂ, ಶ್ರೀರಾಮನಗರದ ವಿ.ಮಣಿ, ಊರಿಗಾಂಪೇಟೆಯ ಕೂಲಿ ಲೈನ್‌ನ ಲೋಕೇಶ್ವರಿ, ಗೌತಂನಗರದ ಐ ಮೇರಿ ಹೆಲನ್‌, ಆಂಡರಸನ್‌ಪೇಟೆಯ ಆರ್‌.­ನಾರಾಯಣ್‌, ಬೆಮಲ್‌ ಎ ಟೈಪ್‌ ಕ್ವಾರ್ಟಸ್‌ನ ಕೆ.ಲಕ್ಷ್ಮಿ, ಚಾಮ­ರಾಜಪೇಟೆಯ ಕೆ.ಸುಂದರಮೂರ್ತಿ (ಎರಡು ನಿವೇಶನ), ಮಾರಿಕುಪ್ಪಂ ವೆಸ್ಟ್‌ ಗಿಲ್ಬರ್ಟ್ಸ್‌ನ ನೇಸಮಣಿ,  ಅಂಬೇಡ್ಕರ್‌ ನಗರದ ಎಂ.ಆಂತೋನಿದಾಸ್‌, ಸೌತ್‌­ಟ್ಯಾಂಕ್‌ ಬ್ಲಾಕ್‌ನ ರಾಜನ್‌, ಫೋರ್ತ್‌ ಬ್ಲಾಕ್‌ನ ಎಂ.ಆರ್‌.ರಾಮಚಂದ್ರ ಅವ­ರನ್ನು ಆರೋಪಿಗಳೆಂದು ದೂರಿನಲ್ಲಿ ಹೆಸರಿಸಲಾಗಿದೆ.
ರಾಬರ್ಟಸನ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT