ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

343 ಗ್ರಾಮದ ಜನರಿಗೆ ಕಲುಷಿತ ನೀರೇ ಗತಿ!

Last Updated 11 ಡಿಸೆಂಬರ್ 2013, 6:41 IST
ಅಕ್ಷರ ಗಾತ್ರ

ಬಾಗಲಕೋಟೆ: ಕೃಷ್ಣಾ, ಘಟಪ್ರಭಾ ಮತ್ತು ಮಲಪ್ರಭಾ ನದಿಗಳು ಹರಿದರೂ, ಆಲಮಟ್ಟಿ ಜಲಾಶಯ ಸಮುದ್ರದಂತೆ ವಿಸ್ತರಿಸಿದ್ದರೂ ಜಿಲ್ಲೆಯ ಜನತೆಗೆ ಶುದ್ಧ ಕುಡಿಯುವ ನೀರು ಮರೀಚಿಕೆಯಾಗಿದೆ. ಜಿಲ್ಲೆಯಲ್ಲಿರುವ 617 ಗ್ರಾಮಗಳಲ್ಲಿ (163 ಗ್ರಾಮ ಪಂಚಾಯ್ತಿ) ಅರ್ಧಕ್ಕಿಂತ ಅಧಿಕ ಅಂದರೆ, 343 ಗ್ರಾಮಗಳ ಜನತೆ ಲವಣಾಂಶಗಳಿಂದ ಕೂಡಿದ ಕಲುಷಿತ ನೀರನ್ನೇ ಕುಡಿಯು ತ್ತಿದ್ದು, ಇದರಿಂದ ಆರೋಗ್ಯ ಸಂಬಂಧಿ ಅನೇಕ ತೊಂದರೆ ಅನುಭವಿಸುತ್ತಿದ್ದಾರೆ.

ಕಲುಷಿತ ನೀರು ಸೇವನೆಯಿಂದ ಚರ್ಮರೋಗ, ಕಿಡ್ನಿ ವೈಫಲ್ಯ, ಶಾಸ್ವಕೋಶ ತೊಂದರೆ, ಕರಳುಬೇನೆ, ವಾಂತಿ–ಭೇದಿ, ವಿಷಮ ಜ್ವರ, ಎಲುಬು ಮತ್ತು ಹಲ್ಲುಗಳ ಮೇಲೆ ಕೆಟ್ಟ ಪರಿಣಾಮ ಉಂಟಾಗುತ್ತಿರುವುದು ವೈದ್ಯಕೀಯ ಪರೀಕ್ಷೆಯಿಂದ ದೃಢಪಟ್ಟಿದೆ. ಜಿಲ್ಲೆಯ 617 ಗ್ರಾಮಗಳ ನೀರನ್ನು ವೈಜ್ಞಾನಿಕ ಪರೀಕ್ಷೆಗೆ ಒಳಪಡಿಸಿದಾಗ ಅದರಲ್ಲಿ 43 ಗ್ರಾಮಗಳಲ್ಲಿ ಫ್ಲೋರೈಡ್‌, 217 ಗ್ರಾಮಗಳಲ್ಲಿ ಟಿಎಚ್‌, 14 ಗ್ರಾಮಗಳಲ್ಲಿ ಪಿಎಚ್‌, 3 ಗ್ರಾಮಗಳಲ್ಲಿ ಕಬ್ಬಿಣಾಂಶ, 19 ಗ್ರಾಮಗಳಲ್ಲಿ ನೈಟ್ರೇಟ್‌, 47 ಗ್ರಾಮಗಳಲ್ಲಿ ಕ್ಲೋರೈಡ್‌ ಅತ್ಯಧಿಕ ಇರುವುದು ದೃಢಪಟ್ಟಿದೆ ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಜಿ.ಪಾಟೀಲ ‘ಪ್ರಜಾವಾಣಿ’ಗೆ ತಿಳಿಸಿದರು.

ಬಾಗಲಕೋಟೆ ತಾಲ್ಲೂಕಿನ 72 ಗ್ರಾಮ, ಬಾದಾಮಿ 99, ಹುನಗುಂದ 35, ಬೀಳಗಿ 37, ಮುಧೋಳ 66, ಜಮಖಂಡಿಯ 34 ಗ್ರಾಮ ಸೇರಿದಂತೆ ಒಟ್ಟು 343 ಗ್ರಾಮಗಳಲ್ಲಿ ಕುಡಿಯಲು ಬಳಸುತ್ತಿರುವ ನೀರಿನಲ್ಲಿ ರಾಸಾಯನಿಕ ಅಂಶ ಇರುವುದು ಖಚಿತವಾಗಿದೆ ಎಂದರು.
ಕಲುಷಿತ ನೀರು ಸೇವಿಸುತ್ತಿರುವ ಜಿಲ್ಲೆಯ 343 ಗ್ರಾಮಗಳ ಜನರಿಗೆ ಶುದ್ಧ ಕುಡಿಯುವ ನೀರು ಪೂರೈಸುವ ನಿಟ್ಟಿನಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಅಳಡಿಸಲು ಅನುದಾನ ಒದಗಿಸುವಂತೆ ಪ್ರಸ್ತಾವವೊಂದನ್ನು ರಾಜ್ಯ ಸರ್ಕಾರಕ್ಕೆ ಈಗಾಗಲೇ ಸಲ್ಲಿಸಲಾಗಿದೆ ಎಂದು ತಿಳಿಸಿದರು.

35 ಗ್ರಾಮಗಳು ಆಯ್ಕೆ: ಶುದ್ಧ ಕುಡಿ ಯುವ ನೀರಿನ ಕೊರತೆ ಎದುರಿಸುತ್ತಿ ರುವ ಜಿಲ್ಲೆಯ 343 ಗ್ರಾಮಗಳಲ್ಲಿ ಪ್ರಸಕ್ತ ವರ್ಷ 35 ಗ್ರಾಮಗಳಿಗೆ ಶುದ್ಧೀ ಕರಿಸಿದ ಕುಡಿಯುವ ನೀರು ಪೂರೈಕೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು ಜಿಲ್ಲೆಯ 35 ಗ್ರಾಮಗಳಲ್ಲಿ ನೀರು ಶುದ್ಧೀಕರಣ ಘಟಕಗಳನ್ನು ಸ್ಥಾಪಿಸಲು ಯೋಜನೆ ರೂಪಿಸಿದ್ದು, ಜನವರಿ 14ರಂದು ನೀರು ಶುದ್ಧೀಕರಣ ಘಟಕಗಳು ಕಾರ್ಯಾರಂಭಗೊಳ್ಳಲಿವೆ.

ಆಯಾ ಗ್ರಾಮಗಳ ಜನಸಂಖ್ಯೆ ಆಧರಿಸಿ 500 ರಿಂದ 2000 ಲೀಟರ್‌ ಸಾಮಾರ್ಥ್ಯದ ಶುದ್ಧ ನೀರು ಪೂರೈಕೆ ಘಟಕವನ್ನು ಗರಿಷ್ಠ ₨ 10 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡುವ ಜವಾಬ್ದಾರಿಯನ್ನು ಕೆಆರ್‌ಡಿಎಲ್‌ಗೆ ವಹಿಸಲಾಗಿದೆ ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್‌.ಜಿ. ಪಾಟೀಲ ತಿಳಿಸಿದರು. ನೀರು ಶುದ್ಧೀಕರಣ ಘಟಕದಿಂದ ಸಾರ್ವಜನಿಕರು ₨ 2 ಸಂದಾಯ ಮಾಡುವ ಮೂಲಕ 20 ಲೀಟರ್‌ ನೀರು ಪಡೆಯಬಹುದಾಗಿದೆ.

35 ಗ್ರಾಮಗಳು
ಬಾದಾಮಿ ತಾಲ್ಲೂಕಿನ ಗೋವನಕೊಪ್ಪ, ಕಿತ್ತಲಿ, ಬಾಚಿನಗುಡ್ಡ, ಬಿ.ಎನ್‌.ಜಾಲಿಹಾಳ, ಬಾಗಲಕೋಟೆ ತಾಲ್ಲೂಕಿನ ಚೌಡಾಪುರ, ಚಿಕ್ಕಶೆಲ್ಲಿಕೇರಿ, ಹಿರೇಶೆಲ್ಲಿಕೇರಿ, ಚಿಕ್ಕಹೊದ್ಲೂರ, ಕಡ್ಲಿಮಟ್ಟಿ, ಖಜ್ಜಿಡೋಣಿ, ಉದಗಟ್ಟಿ, ಮಂಕಣಿ, ಮುಚಖಂಡಿ, ಮುಚಖಂಡಿ ಎಲ್‌.ಟಿ.1., ನೀರಲಕೇರಿ, ಸೀಗಿಕೇರಿ, ಬೊಮ್ಮನಗಿ, ಡೊಮನಾಳ, ಚಿಕ್ಕಸಂಶಿ, ಹಿರೇಸಂಶಿ, ತುಳಸಿಗೇರಿ, ಹಿರೇ ಗುಳಬಾಳ ಆರ್‌.ಸಿ, ಬೀಳಗಿ ತಾಲ್ಲೂಕಿನ ಮುಡಗಾನೂರು, ಡವಳೇಶ್ವರ ಆರ್‌.ಸಿ., ಕೊರ್ತಿ ಆರ್‌.ಸಿ., ಹುನಗಂದ ತಾಲ್ಲೂಕಿನ ಗಟ್ಟಿಗನೂರು, ತರಿಹಾಳ, ಇದ್ದಲಗಿ, ಗುಡೂರು ಎಸ್‌.ಸಿ., ಅನಪಕಟ್ಟಿ, ಚಿಕ್ಕವಡವಡಗಿ, ರಕ್ಕಸಗಿ, ದಮ್ಮೂರು, ಜಮಖಂಡಿ ತಾಲ್ಲೂಕಿನ ಮುತ್ತೂರು ಹಾಗೂ ಮುಧೋಳ ತಾಲ್ಲೂಕಿನ ಇಂಗಳಗಿ ಗ್ರಾಮವನ್ನು ಆಯ್ಕೆ ಮಾಡಲಾಗಿದೆ ಎಂದು ಪಾಟೀಲ ಅವರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT