350ಕ್ಕೂ ಹೆಚ್ಚು ಭಕ್ತರ ಮಡೆ ಮಡೆಸ್ನಾನ

7

350ಕ್ಕೂ ಹೆಚ್ಚು ಭಕ್ತರ ಮಡೆ ಮಡೆಸ್ನಾನ

Published:
Updated:

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾ ಷಷ್ಠಿ ಜಾತ್ರೆಯ ಅಂಗವಾಗಿ ಭಾನುವಾರ ಮಧ್ಯಾಹ್ನ ದೇವಸ್ಥಾನದ ಹೊರಾಂಗಣದಲ್ಲಿ ಮಡೆ ಮಡೆಸ್ನಾನ ಸೇವೆ ನಿರಾತಂಕವಾಗಿ ನೆರವೇರಿತು.ಮಹಾಪೂಜೆಯ ನಂತರ ದೇವಸ್ಥಾನದ ಹೊರಾಂಗಣದಲ್ಲಿ ಮಧ್ಯಾಹ್ನ 1.30ಕ್ಕೆ ಬ್ರಾಹ್ಮಣರಿಗೆ ನೈವೇದ್ಯ ಪ್ರಸಾದ ನೀಡಲಾಯಿತು. ಅವರ ಭೋಜನದ ಬಳಿಕ ಅವರು ಉಂಡ ಎಲೆಯ ಮೇಲೆ  ಸುಮಾರು 350ಕ್ಕೂ ಹೆಚ್ಚು ಭಕ್ತರು ಉರುಳುವ ಮೂಲಕ `ಮಡೆ ಮಡೆಸ್ನಾನ' ಸೇವೆ ಸಲ್ಲಿಸಿದರು.ಸೋಮವಾರ ಮತ್ತು ಮಂಗಳವಾರ ಮಧ್ಯಾಹ್ನವೂ (ಒಟ್ಟು ಚೌತಿ, ಪಂಚಮಿ ಮತ್ತು ಷಷ್ಠಿಯ ಮೂರು ದಿನ) ಈ ಸೇವೆ ನಡೆಯಲಿದೆ.ಬಿಗಿ ಭದ್ರತೆ: ಮಡೆ ಮಡೆ ಸ್ನಾನ ನಿಷೇಧಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದರ ಹಿನ್ನೆಲೆಯಲ್ಲಿ ಈ ಸೇವೆ ನಿರಾತಂಕವಾಗಿ ಮುಂದುವರಿಯಿತು. ಅಹಿತಕರ ಘಟನೆ ನಡೆಯದಂತೆ ಐವರು ಡಿವೈಎಸ್ಪಿ ಸಹಿತ 200ಕ್ಕೂ ಅಧಿಕ ಪೊಲೀಸರು, 100ಕ್ಕೂ ಹೆಚ್ಚು ಗೃಹರಕ್ಷಕ ದಳ ಸಿಬ್ಬಂದಿ ಭದ್ರತೆ ನೀಡಿದರು. ದೇವಸ್ಥಾನದ ಎಲ್ಲಾ ಭಾಗಗಳಲ್ಲಿ ಸಿ.ಸಿ. ಕ್ಯಾಮೆರಾ ಅಳವಡಿಸಲಾಗಿತ್ತು. ಪುತ್ತೂರು ಸಹಾಯಕ ಆಯುಕ್ತ ಪ್ರಸನ್ನ, ಸುಳ್ಯ ತಹಶೀಲ್ದಾರ್ ವೈದ್ಯನಾಥ್ ಉಪಸ್ಥಿತರಿದ್ದರು.ಪ್ರಥಮ ಬಾರಿ ಯತಿಗಳಿಗೆ ಭಿಕ್ಷೆ: ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಷಷ್ಠಿ ಜಾತ್ರೆಯಲ್ಲಿ ಇದೇ ಮೊದಲ ಬಾರಿ ಸಂಪುಟ ನರಸಿಂಹ ಸ್ವಾಮಿ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರಿಗೆ ಯತಿ ಭಿಕ್ಷೆ ಹಾಗೂ ಪಾದಪೂಜೆ ನಡೆಯಿತು. ಪ್ರಧಾನ ಅರ್ಚಕರಾದ ಕೇಶವ ಜೋಗಿತ್ತಾಯ, ಅರ್ಚಕರಾದ ಸೀತಾರಾಮ ಯಡಪಡಿತ್ತಾಯ, ರಾಮಕೃಷ್ಣ ಭಟ್, ಸತ್ಯನಾರಾಯಣ, ರಾಜೇಶ್ ಅವರ ಉಪಸ್ಥಿತಿಯಲ್ಲಿ ವಿಧಿವಿಧಾನ ನಡೆಯಿತು.`ನಮ್ಮ ದೇಶ ಮಠಾಧೀಶರನ್ನು ಗೌರವದಿಂದ ಕಾಣುವ ಸಂಸ್ಕೃತಿ ಹೊಂದಿದೆ. ಕುಕ್ಕೆ ಸುಬ್ರಹ್ಮಣ್ಯಕ್ಕೆ ನಿತ್ಯ ಸಾವಿರಾರು ಭಕ್ತರು ಬರುತ್ತಿದ್ದು, ಬಂದ ಎಲ್ಲರಿಗೂ ಅನ್ನದಾನ ಮಾಡಲಾಗುತ್ತಿದೆ. ಚಂಪಾಷಷ್ಠಿ ಜಾತ್ರೋತ್ಸವದ  ಪ್ರಯುಕ್ತ ಸಂಪುಟ ನರಸಿಂಹ ಮಠದ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳನ್ನು ಗೌರವಿಸಬೇಕೆಂದು ಸ್ವ ಇಚ್ಛೆಯಿಂದ ದೇವಳದ ಆಡಳಿತ ಮಂಡಳಿ ಅವರಿಗೆ ಯತಿ ಭಿಕ್ಷೆ ನೀಡಲು ತೀರ್ಮಾನಿಸಿತು. ಅದರಂತೆ ಚೌತಿಯ ದಿನವಾದ ಭಾನುವಾರ ಭಿಕ್ಷೆ ನೀಡಿ ಗೌರವಿಸಿದ್ದೇವೆ. ಇದಕ್ಕೆ ವಿಶೇಷ ಅರ್ಥ ಕಲ್ಪಿಸುವುದು ಬೇಡ' ಎಂದು ದೇವಳದ ವ್ಯವಸ್ಥಾಪನಾ ಸಮಿತಿ  ಅಧ್ಯಕ್ಷ ಕೃಷ್ಣ ಪ್ರಸಾದ್ ಮಡ್ತಿಲ ತಿಳಿಸಿದ್ದಾರೆ. ಸೋಮವಾರ ರಾತ್ರಿ ಪಂಚಮಿ ರಥೋತ್ಸವ ನಡೆಯಲಿದೆ.ಮಡೆ ಸ್ನಾನ ಎಂದರೆ....

ಸಾಮಾನ್ಯವಾಗಿ ಉರುಳು ಸೇವೆಗೆ `ಮಡೆ ಸ್ನಾನ' ಎನ್ನುತ್ತಾರೆ. ಆದರೆ ಎಂಜಲೆಲೆಯ ಮೇಲೆ ಉರುಳುವ ಈ ಸೇವೆಗೆ `ಮಡೆ ಮಡೆ ಸ್ನಾನ' ಎನ್ನುವುದು ವಾಡಿಕೆ. ತುಳು ಭಾಷೆಯಲ್ಲಿ `ಮಡೆ' ಪದಕ್ಕೆ ಎಂಜಲು ಎನ್ನುವ ಅರ್ಥವಿದೆ. ಹೀಗಾಗಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಸಾಂಪ್ರದಾಯಿಕವಾಗಿ ನಡೆಯುತ್ತ ಬಂದಿರುವ ಈ ಸೇವೆಗೆ `ಮಡೆ ಮಡೆ ಸ್ನಾನ' ಎಂದೇ ಹೇಳುತ್ತಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry