350 ಕುಟುಂಬಕ್ಕೆ ತೊಂದರೆ: ಆರೋಪ

7

350 ಕುಟುಂಬಕ್ಕೆ ತೊಂದರೆ: ಆರೋಪ

Published:
Updated:

ಬಜಗೋಳಿ: ಕಾರ್ಕಳ ನಗರದ ಮುಖ್ಯರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಹೇಮಲತಾ ಮಂಗಳವಾರ ಕಾರ್ಕಳದಲ್ಲಿ ನಾಗರಿಕರೊಂದಿಗೆ ಸಮಾಲೋಚನಾ ಸಭೆ ನಡೆಸಿದ ಬೆನ್ನಿಗೆ ಕಾರ್ಕಳ ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ವ್ಯಾಪಾರ ವಹಿವಾಟು ವಸತಿಗಳನ್ನು ಹೊಂದಿ ಬದುಕು ಕಂಡುಕೊಂಡ ನಾಗರಿಕರು ಬೀದಿಗೆ ಬೀಳುವ ಭಯ ವ್ಯಕ್ತಪಡಿಸಿದ್ದಾರೆ. ಮುಖ್ಯರಸ್ತೆ ವಿಸ್ತರಣೆಯಿಂದ ನಗರವಾಸಿಗಳ ರೆಕ್ಕೆ ಪುಕ್ಕ ಕತ್ತರಿಸಿ ಅವರನ್ನು ಸ್ಲಿಂ ಟ್ರಿಂಗೊಳಿಸುವ ಪರಿಣಾಮವಷ್ಟೆ ಹೊರತು ಇದರಿಂದ ಯಾವುದೇ ಮಹತ್ವದ ಸಾಧನೆಯಾಗುವುದಿಲ್ಲ ಎಂದು ಅವರು ಅಭಿಪ್ರಾಯಪಡುತ್ತಿದ್ದಾರೆ.ಪ್ರಸ್ತಾವಿತ ಸ್ವರೂಪದಲ್ಲೇ ರಸ್ತೆ ವಿಸ್ತರಣೆಯಾದಲ್ಲಿ ಸುಮಾರು 350 ಕುಟುಂಬಗಳು ತೊಂದರೆಗೆ ಸಿಲುಕಲಿದ್ದು ಸುಮಾರು 150ರಷ್ಟು ಮಂದಿ ಸೂಕ್ತ ಪರ್ಯಾಯವಿಲ್ಲದೆ ಸಂಕಷ್ಟಕ್ಕೊಳಗಾಗಬೇಕಾಗುತ್ತದೆ. ರಸ್ತೆಗುಂಟ ಹಳೆ ಕಟ್ಟಡಗಳಲ್ಲಿ ಬಾಡಿಗೆ ನೆಲೆಯಲ್ಲಿ ವಾಸ-ವ್ಯವಹಾರ ನಡೆಸುತ್ತಿರುವವರ ಸ್ಥಿತಿಯಂತೂ ಕಾವಲಿಯಿಂದ ಬೆಂಕಿಗೆ ಬೀಳುವುದು ಖಚಿತ ಎನ್ನುವ ಪ್ರತಿಪಾದನೆಗಳು ಕೇಳಿಬರುತ್ತಿವೆ.ರಸ್ತೆ ವಿಸ್ತರಣೆ ಸಾಧಕ ಬಾಧಕಗಳ ಬಗ್ಗೆ ಇಷ್ಟರಲ್ಲೇ ಜಿಲ್ಲಾಧಿಕಾರಿ ಚರ್ಚೆ ನಡೆಸಿದ್ದರೂ ಸಮಸ್ಯೆಯ ಸೂಕ್ಷ್ಮಾತಿ ಸೂಕ್ಷ್ಮ ಎಳೆಗಳನ್ನು ಬಿಡಿಸಿ ರಸ್ತೆ ವಿಸ್ತರಣೆ ಪ್ರಯೋಜನಕ್ಕಿಂತ ತೊಂದರೆಗಳೇ ಹೆಚ್ಚು ಎಂಬುದನ್ನು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡುವ ಪ್ರಯತ್ನಗಳಿಗೆ ಇದೀಗ ವೇಗ ದೊರಕಿದೆ. ರಸ್ತೆ ವಿಸ್ತರಣೆಗೆ ಜಮೀನಿನ ಮಾಲಿಕರೇನೋ ತಟ್ಟನೆ ಒಪ್ಪಿ ಬಿಡಬಹುದು. ಆದರೆ ಇಲ್ಲಿ ಬಾಡಿಗೆ ಹಿಡಿದು ವಾಸಿಸುವವರ ಗತಿ ಏನು ಎಂಬ ಪ್ರಶ್ನೆಗೆ ಈ ಮಂದಿ ಉತ್ತರ ಬಯಸಿದ್ದಾರೆ. ಕೆಲವೊಂದು ಮಂದಿ ಸಣ್ಣ ತುಂಡು ಜಮೀನು ಹೊಂದಿದ್ದು ಇದು ವಿಸ್ತರಣೆ ಪ್ರಕ್ರಿಯೆಯಲ್ಲಿ ಸಬ್‌ಮರ್ಜ್ ಆಗುವುದರಿಂದ ಪೂರ್ತಿಯಾಗಿ ನೆಲೆ ಕಂಡುಕೊಳ್ಳುವ ಭಯ ಕೆಲವರಲ್ಲಿ ಅಭದ್ರತೆ ಭಾವ ಹುಟ್ಟಿಸಿದೆ.ರಸ್ತೆ ಅಗಲವಾದರೆ ವಾಹನಗಳಲ್ಲಿ ಓಡಾಡುವ, ದೂರದ ಹಳ್ಳಿಗಳಿಂದ ಪೇಟೆಗೆ ಬಂದು ಹೋಗುವ ದೊಡ್ಡ ದೊಡ್ಡ ಸಾಹುಕಾರರಿಗೆ ಪರ್ಯಾಯ ಅವಕಾಶಗಳನ್ನು ತೆರೆದಿಡುವುದಕ್ಕೆ ಈ ಪ್ರಕ್ರಿಯೆ ಪ್ರಶಸ್ತವಾಗಬಹುದು. ಆದರೆ ಪರ್ಯಾಯ ವ್ಯವಸ್ಥೆ ಇಲ್ಲದ ರಸ್ತೆ ಇಕ್ಕೆಲದ ವಾಸಿಗಳಿಗೆ ಆಗುವ ಸಂಕಟಕ್ಕೆ ಪರಿಹಾರವೇನು ಎಂಬ ಪ್ರಶ್ನೆಯನ್ನು ಇವರು ಸಹಜವಾಗಿಯೇ ಮುಂದಿಟ್ಟಿದ್ದಾರೆ.ರಸ್ತೆ ವಿಸ್ತರಣೆ ತೂಗುಗತ್ತಿಯಾಗಿ ಮೂರು ವರ್ಷಗಳಿಂದ ಭೀತಿಯಲ್ಲಿ ಬದುಕುತ್ತಿರುವ ನಡುವೆ ಇದೀಗ ದಾರ ಕಡಿದು ಕತ್ತಿ ಬೀಳುವ ಕ್ಷಣ ಎದುರಾಗಿದೆ ಎನ್ನುತ್ತಾರೆ ಕೆಲವರು. ಈ ಆತಂಕದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹೊಸದಾಗಿ ಸಂತ್ರಸ್ತರ ಸಂಘಟನೆ ಮೈದಳೆಯುತ್ತಿದ್ದು ಪ್ರಯೋಜನವಾಗಲಿ ಬಿಡಲಿ ಕೊನೆಯ ಬಾರಿಗೆ ರಸ್ತೆ ವಿಸ್ತರಣೆಯ ಬಾಧಕಗಳನ್ನು ಜಿಲ್ಲಾಡಳಿತಕ್ಕೆ ಮನವರಿಕೆ ಮಾಡಿಕೊಡುವ ತರಾತುರಿ ಕಂಡುಬಂದಿದೆ.ರಸ್ತೆ ವಿಸ್ತರಣೆಯಿಂದ ಶತಮಾನಗಳಿಂದ ಇರುವ ಹಳೆಯ(ಪ್ರಾಚ್ಯ) ಕಟ್ಟಡಕ್ಕೆ ಧಕ್ಕೆ ಉಂಟಾಗಿ, ರಥಬೀದಿಯ ಸೌಂದರ್ಯಕ್ಕೂ ಕುಂದು ಉಂಟಾಗುತ್ತದೆ, ಸರ್ಕಾರವು ನಿರುದ್ಯೋಗಕ್ಕೆ ಪರಿಹಾರವಾಗಿ ಜಮೀನನ್ನು ಖಾಸಗಿ ಕಂಪೆನಿಗಳಿಗೆ ಪರಭಾರೆ ಮಾಡಿ ಕೋಟಿಗಟ್ಟಲೆ ಹಣ ಹೂಡಿಕೆ ಎಂದು ಸಾವಿರದ ಸಂಖ್ಯೆಯಲ್ಲಿ ನಿರುದ್ಯೋಗಿಗಳಿಗೆ ನೀಡಿದ ಭರವಸೆ ಹುಸಿಯಾಗಿವೆ. ಹೀಗಿರುತ್ತಾ ವ್ಯಾಪಾರವನ್ನೇ ಉದ್ಯೋಗವಾಗಿಸಿಕೊಂಡ ನಾವು ಹಾಗೂ ನಮನ್ನು ಆಶ್ರಯಿಸಿದ ನೂರಾರು ಕೆಲಸಗಾರರು ಬೀದಿಗೆ ಬೀಳುವುದು ಖಂಡಿತ.ಜಿಲ್ಲಾಡಳಿತದ ಈ ಕ್ರಮ ಗುತ್ತಿಗೆದಾರರಿಗೆ ಮಾತ್ರ ಪ್ರಯೋಜನಕಾರಿ ಎಂದು ಸಂತ್ರಸ್ತರು ಪ್ರತಿಪಾದಿಸಿದ್ದಾರೆ. ಇದೇ ವೇಳೆ ರಸ್ತೆ ವಿಸ್ತರಣೆ ತಪ್ಪಿಸಬಹುದಾದ ಪರ್ಯಾಯ ದಾರಿಗಳನ್ನೂ ಅವರು ಸೂಚಿಸಿದ್ದಾರೆ. ಬಸ್‌ಸ್ಟ್ಯಾಂಡನ್ನು ಬಂಡೀಮಠಕ್ಕೆ ಸ್ಥಳಾಂತರಿಸುವುದು. ಯಾಕೆಂದರೆ ಪ್ರಸ್ತುತ ಇರುವ ಬಸ್‌ಸ್ಟ್ಯಾಂಡ್ ಸರ್ಕಾರದ ಬಸ್‌ಸ್ಟ್ಯಾಂಡ್ ಅಲ್ಲ. ಇದು ಖಾಸಗಿ ಮಾಲಕತ್ವದ ಬಿಲ್ಡಿಂಗ್‌ಗಳ ಪಾರ್ಕಿಂಗ್ ಸ್ಥಳವಾಗಿರುತ್ತದೆ.ಈ ರಸ್ತೆಗೆ ಪರ್ಯಾಯವಾಗಿ ಬೈಪಾಸ್ ರಸ್ತೆ ಅಭಿವೃದ್ಧಿಗೊಳಿಸಿ ಪ್ರಾಮುಖ್ಯತೆ ನೀಡುವುದು, ಕಾರ್ಕಳದ ರಥಬೀದಿಯ ರಸ್ತೆಗಳಲ್ಲಿ ಏಕಮುಖ ಸಂಚಾರ ಮಾಡುವುದು, ಪಾರ್ಕಿಂಗ್ ಮಾಡಲು ಸ್ಥಳ ಕಾಯ್ದಿರಿಸುವುದು, ಭಾರಿ ವಾಹನಗಳು ಪಟ್ಟಣದ ಒಳಗೆ ಬಾರದಂತೆ ನಿಷೇಧಿಸುವುದು, ಕಲ್ಲೊಟ್ಟೆ-ಪೆರ್ವಾಜೆ-ಮಾರ್ಕೆಟ್ ರಸ್ತೆ ಅಭಿವೃದ್ಧಿಗೊಳಿಸಿ ರಿಂಗ್ ರಸ್ತೆಯಾಗಿ ಪರಿವರ್ತಿಸುವುದು. ಮುಂತಾದ 7 ಅಂಶಗಳ ಪರ್ಯಾಯಗಳನ್ನು ನಾಗರಿಕರು ಜಿಲ್ಲಾಡಳಿತದ ಮುಂದಿಡಲಿದ್ದಾರೆ. ವ್ಯಾಪಾರಿ ಮಂಡಳಿ ಅಧ್ಯಕ್ಷ ಕೆ.ಪಿ. ಶೆಣೈ, ರಾಜಾರಾಮ್ ನಾಯಕ್, ವಿವೇಕ್ ಕಾಮತ್, ಗಣೇಶ್ ಪ್ರಸಾದ್ ನಾಯಕ್, ಗಿರೀಶ್ ಶೆಣೈ, ಟಿ. ರಾಮಚಂದ್ರ ನಾಯಕ್ ಮೊದಲಾದವರು ಜಿಲ್ಲಾಧಿಕಾರಿಗೆ ಈ ವಿಷಯ ಮನವರಿಕೆ ಮಾಡಿಕೊಡಲು ನಿರ್ಧರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry