36,601 ಮಕ್ಕಳಿಗೆ ಪೋಲಿಯೊ ಲಸಿಕೆ

7

36,601 ಮಕ್ಕಳಿಗೆ ಪೋಲಿಯೊ ಲಸಿಕೆ

Published:
Updated:

ಯಲಬುರ್ಗಾ: ತಾಲ್ಲೂಕಿನ ವಿವಿಧ ಕೇಂದ್ರಗಳಲ್ಲಿ ಭಾನುವಾರ ಚಾಲನೆ ದೊರೆತ ಪಲ್ಸ್ ಪೋಲಿಯೋ ಲಿಸಿಕೆ ಕಾರ್ಯಕ್ರಮ ಸಂಪೂರ್ಣ ಯಶಸ್ವಿಯಾಗಿ ಸಾಗಿದ್ದು, ನಾಲ್ಕು ದಿನಗಳ ಈ ಕಾರ್ಯಕ್ರಮದ ಮೊದಲದಿನವೇ ಪ್ರತಿಶತ 85ಕ್ಕು ಅಧಿಕ ಪ್ರಮಾಣದ ಗುರಿ ಸಾಧನೆ ನಿರೀಕ್ಷಿಸಲಾಗಿದೆ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಶರಣಯ್ಯ ಹಿರೇಮಠ ಹೇಳಿದರು.ಭಾನುವಾರದಿಂದ ಆರಂಭಗೊಂಡ ಪೋಲಿಯೋ ಕಾರ್ಯಕ್ರಮದ ಉಸ್ತುವಾರಿ ವಹಿಸಿ, ತಾಲ್ಲೂಕಿನ ವಿವಿಧ ಆರೋಗ್ಯ ಕೇಂದ್ರ ಹಾಗೂ ಇನ್ನಿತರ ಸಾರ್ವಜನಿಕ ಸ್ಥಳಗಳಲ್ಲಿ ಸ್ಥಾಪಿಸಲ್ಪಟ್ಟ ಲಸಿಕಾ ಕೇಂದ್ರಗಳಿಗೆ ಭೇಟಿ ನೀಡಿ  ಮಾತನಾಡಿ, ಪ್ರಸಕ್ತ ಕಾರ್ಯಕ್ರಮದಲ್ಲಿ 36,601ಮಕ್ಕಳಿಗೆ ಲಸಿಕೆ ಹಾಕುವ ಗುರಿ ಹೊಂದಿದ್ದು, ಇದಕ್ಕಾಗಿ 53,466 ಮನೆಗಳಿಗೆ ಭೇಟಿ ನೀಡಲಾಗುತ್ತದೆ.

 

34 ಮೇಲ್ವಿಚಾರಕರನ್ನೊಳಗೊಂಡ 340 ಸಿಬ್ಬಂದಿಯುಳ್ಳ 170 ತಂಡಗಳು ಈ ಲಸಿಕೆ ಕಾರ್ಯವನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ, ಮೊದಲದಿನ ಕೇಂದ್ರದಲ್ಲಿ ನಂತರ ಮೂರು ದಿನಗಳಲ್ಲಿ ಮನೆ ಮನೆಗೆ ತೆರಳಿ ಮಕ್ಕಳಿಗೆ ಲಸಿಕೆ ಹಾಕಲಿದ್ದಾರೆ ಎಂದು ವಿವರಿಸಿದ್ದಾರೆ.ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಜಾತ್ರೆ ಹಾಗೂ ಇನ್ನಿತರ ಧಾರ್ಮಿಕ ಸಭೆ ಸಮಾರಂಭಗಳಲ್ಲಿಯೂ ಕೂಡಾ ಕೂಡಾ ಲಸಿಕಾ ಕೇಂದ್ರಗಳನ್ನು ತೆರೆಯಲಾಗಿದೆ. ಚಿಕ್ಕವಂಕಲಕುಂಟಾ, ವಜ್ರಬಂಡಿ, ಗುನ್ನಾಳ, ಬೇವೂರು ಹಾಗೂ ಮಂಡಲಗೇರಿಯಲ್ಲಿ ನಡೆಯುವ ಜಾತ್ರೆಯಲ್ಲಿ ಸಂಚಾರಿ ಲಸಿಕಾ ಕೇಂದ್ರ ಕಾರ್ಯನಿರ್ವಹಿಸಲಿದೆ. ತಾಲ್ಲೂಕಿನಲ್ಲಿ ಲಭ್ಯವಿರುವ 15ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಯಲಬುರ್ಗಾ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ.ಪಟ್ಟಣದ ಬಸ್ ನಿಲ್ದಾಣ, ವಿವಿಧ ಅಂಗನವಾಡಿ ಕೇಂದ್ರಗಳು, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಒಟ್ಟು 10ಕೇಂದ್ರಗಳಲ್ಲಿ ಲಸಿಕೆ ಕಾರ್ಯಕ್ರಮ ನಡೆದಿದ್ದು ಕಂಡು ಬಂದಿದೆ. ತಾಲ್ಲೂಕಿನ ಇಟಗಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಬಿಜೆಪಿ ಯುವ ಮುಖಂಡ ನವೀನ ಗುಳಗಣ್ಣವರ್ ಚಾಲನೆ ನೀಡಿದರು. ಡಾ. ಗೀತಾ, ಸೋಮಣ್ಣ ಛಲವಾದಿ, ಚಂದ್ರು ಫಣಿ, ಸಂಕಪ್ಪ ಹಾಗೂ ಇತರರು ಉಪಸ್ಥಿತರಿದ್ದರು.ಸಾರ್ವಜನಿಕ ಆಸ್ಪತ್ರೆಯಲ್ಲಿ ತೆರೆದ ಕೇಂದ್ರದಲ್ಲಿ ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸುರೇಶಗೌಡ ಶಿವನಗೌಡ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಆರೋಗ್ಯಪೂರ್ಣ ಮಕ್ಕಳ ಬೆಳವಣಿಗೆಗೆ ಅತ್ಯಂತ ಅಗತ್ಯವಾದ ಈ ಲಸಿಕೆಯನ್ನು ಕಡ್ಡಾಯವಾಗಿ ಹಾಕಿಸುವಲ್ಲಿ ತಾಯಂದಿಯರು ಹಾಗೂ ಪಾಲಕರು ಆಸಕ್ತಿ ತೋರಬೇಕಾಗಿದೆ. ಈ ರಾಷ್ಟ್ರೀಯ ಕಾರ್ಯಕ್ರಮವನ್ನು ಪ್ರತಿಯೊಬ್ಬರು ಸಹಕರಿಸುವ ಮೂಲಕ ಯಶಸ್ವಿಗೊಳಿಸಬೇಕಾಗಿದೆ ಎಂದು ನುಡಿದರು. ಸ್ಥಳೀಯ ವೈದ್ಯಾಧಿಕಾರಿ ಡಾ. ಆಯಿಷಾ ನಗೀನಾ, ಡಾ. ಶರಣಪ್ಪ ಬೇರಗಿ, ಶ್ರೀಶೈಲಪ್ಪ ಹಾಗೂ ಇತರರು ಹಾಜರಿದ್ದರು.ಶಾಸಕರ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿನ ಕೇಂದ್ರದಲ್ಲಿ ಸಿಆರ್‌ಸಿ ಸಮನ್ವಯಾಧಿಕಾರಿ ದೇವಪ್ಪ ವಾಲ್ಮೀಕಿ ಚಾಲನೆ ನೀಡಿದರು. ಆರೋಗ್ಯ ಇಲಾಖೆಯ ಅಧಿಕಾರಿ ಮೇಲ್ವಿಚಾರಕ ಬಿ.ಎಂ. ಹಿರೇಮಠ, ಅಂಗನವಾಡಿ ಕಾರ್ಯಕರ್ತೆ ಗಂಗಮ್ಮ ಗಾಂಜಿ, ಅನುಸೂಯ ಇದ್ದರು. ಹಾಗೆಯೇ ಕಂಡೇರ್ ಓಣಿಯಲ್ಲಿ ತೆರೆದ ಲಸಿಕಾ ಕೇಂದ್ರದಲ್ಲಿ ಅಂಗನವಾಡಿ ಕಾರ್ಯಕರ್ತೆ ಶಾಂತಾ ಎಚ್ ಚಾಲನೆ ನೀಡಿದರು. ಅನೇಕರು ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry