ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3699 ನೌಕರರ ಕಾಯಂಮಾತಿಗೆ ಆಗ್ರಹ

ಸೇವಾ ಭದ್ರತೆಗೆ ರಾಜ್ಯ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಮೊರೆ
Last Updated 6 ಡಿಸೆಂಬರ್ 2012, 6:59 IST
ಅಕ್ಷರ ಗಾತ್ರ

ಹುಬ್ಬಳ್ಳಿ: `ರಾಜ್ಯದಾದ್ಯಂತ ಕಳೆದ ಒಂಬತ್ತು ವರ್ಷದಿಂದ ಸೇವೆ ಸಲ್ಲಿಸುತ್ತಿರುವ 3,699 ಗ್ರಾಮ ವಿದ್ಯುತ್ ಪ್ರತಿನಿಧಿಗಳ ಸೇವಾ ಭದ್ರತೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು' ಎಂದು ಕರ್ನಾಟಕ ರಾಜ್ಯ ಗ್ರಾಮ ವಿದ್ಯುತ್ ಪ್ರತಿನಿಧಿಗಳ ಒಕ್ಕೂಟದ ಅಧ್ಯಕ್ಷ ಎಸ್.ಆರ್.ಶರಣಪ್ಪ ಮಾಯಕೊಂಡ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, `ರಾಜ್ಯದ ಐದು ವಿದ್ಯುತ್ ಕಂಪೆನಿಗಳಲ್ಲಿ ಈ ನೌಕರರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ನೌಕರರ ಸಮಸ್ಯೆಗಳನ್ನು ಪರಿಹರಿಸುವಂತೆ ಮತ್ತು ಸೇವಾ ಭದ್ರತೆ ನೀಡುವಂತೆ ಕಂಪೆನಿಗಳ ಆಡಳಿತ ವರ್ಗಕ್ಕೆ ಮುಖ್ಯಮಂತ್ರಿಗಳ ಮುಖ್ಯ ಕಾರ್ಯದರ್ಶಿ, ಕಾರ್ಮಿಕ ಇಲಾಖೆ, ಇಂಧನ ಇಲಾಖೆ ಕಾರ್ಯದರ್ಶಿ ಲಿಖಿತವಾಗಿ ತಿಳಿಸಿದರೂ ಯಾವುದೇ ಕ್ರಮ ತೆಗೆದುಕೊಂಡಿಲ್ಲ' ಎಂದು ಆರೋಪಿಸಿದರು.

`ಸರ್ಕಾರದ ಆದೇಶದಂತೆ 2003-04ರಲ್ಲಿ ಏಕಮುಖವಾಗಿ ರಚನೆ ಮಾಡಿಕೊಂಡಿದ್ದ ಒಡಂಬಡಿಕೆಯನ್ವಯ ಈ ಕೆಲಸಕ್ಕೆ ನೌಕರರನ್ನು ನೇಮಿಸಿಕೊಳ್ಳಲಾಗಿದೆ. ಗ್ರಾಮೀಣ ಭಾಗದ ನಿರುದ್ಯೋಗಿ ವಿದ್ಯಾವಂತ ಯುವಕ/ಯುವತಿಯರಿಗೆ ಉದ್ಯೋಗ ಕಲ್ಪಿಸುವ ದೃಷ್ಟಿಯಿಂದ ವಿದ್ಯುತ್ ಕಂಪೆನಿಗಳ ಆಡಳಿತ ವರ್ಗವೇ ನೇರ ನೇಮಕಾತಿ ನಿಯಮಗಳಡಿ ರಾಜ್ಯದಾದ್ಯಂತ ಗ್ರಾಮ ವಿದ್ಯುತ್ ಪ್ರತಿನಿಧಿಗಳನ್ನು ನೇಮಕ ಮಾಡಿಕೊಂಡಿದೆ. ಮೀಟರ್ ರೀಡರ್ ಮತ್ತು ಕಿರಿಯ ಸಹಾಯಕ ಎಂಬ ಎರಡು ಹುದ್ದೆಗಳ ಕೆಲಸಗಳನ್ನು ಗಾಮ ವಿದ್ಯುತ್ ಪ್ರತಿನಿಧಿ ಒಬ್ಬನೇ ಮಾಡುತ್ತಿದ್ದು, ಈ ಕೆಲಸಕ್ಕೆ ತಿಂಗಳಿಗೆ ಕೇವಲ 1500ರಿಂದ 4000 ಸಂಭಾವನೆ ಮಾತ್ರ ಸಿಗುತ್ತಿದೆ. ಉಳಿದಂತೆ ಯಾವುದೇ ಭತ್ಯೆ, ಭವಿಷ್ಯ ನಿಧಿ, ಇಎಸ್‌ಐ, ಬೋನಸ್ ಸೌಲಭ್ಯ ಇಲ್ಲ' ಎಂದರು.

`2003ರಿಂದಲೂ ನಮ್ಮ ಸಮಸ್ಯೆಗಳ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತರಲಾಗಿದೆ. ಎಲ್ಲ ಬೇಡಿಕೆಗಳ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳುವಂತೆ ಮುಖ್ಯಮಂತ್ರಿ ಹಾಗೂ ಇಂಧನ ಇಲಾಖೆ ಕಾರ್ಯದರ್ಶಿಗಳ ಕಚೇರಿಯಿಂದ ಕೆಪಿಟಿಸಿಎಲ್ ವ್ಯವಸ್ಥಾಪಕ ನಿರ್ದೇಶಕರಿಗೆ ನಿರ್ದೇಶಿಸಲಾಗಿದೆ. ಆದರೆ ಈವರೆಗೂ ಯಾವುದೇ ಸ್ಪಂದನೆ ಸಿಕ್ಕಿಲ್ಲ' ಎಂದರು.

`ಒಡಂಬಡಿಕೆ ಷರತ್ತುಗಳನ್ನು ಕಂಪೆನಿಗಳಿಗೆ ಅನುಕೂಲವಾಗುವಂತೆ ಆಗಾಗ ಬದಲಾಯಿಸುತ್ತಾ ಬಂದ ಕಾರಣ ಕೆಲವು ಗ್ರಾಮ ವಿದ್ಯುತ್ ಪ್ರತಿನಿಧಿಗಳಿಗೆ ತಿಂಗಳ ಗುರಿ ತಲುಪಲು ಸಾಧ್ಯವಾಗಿಲ್ಲ' ಎಂದು ಅವರು ಹೇಳಿದರು.

ಅಂಥವರಿಗೆ ಸಂಭಾವನೆಯೇ ಸಿಕ್ಕಿಲ್ಲ. ಅಲ್ಲದೆ, ಕೈಯಿಂದ ಹಣ ವಾಪಸು ಕಟ್ಟಬೇಕಾಗಿ ಬಂದಿದೆ. ಕಂಪೆನಿ ನಿಗದಿಪಡಿಸಿದ ವಸೂಲಾತಿಯ ಗುರಿ ತಲುಪುದ ಕಾರಣಕ್ಕೆ ನೌಕರರನ್ನು ಕೆಲಸದಿಂದ ವಜಾ ಮಾಡಿದ ಘಟನೆಯೂ ನಡೆದಿದೆ' ಎಂದು ಅವರು ತಿಳಿಸಿದರು.

`ನಿಗದಿತ ಗುರಿ ತಲುಪದ 92 ನೌಕರರನ್ನು ಹೆಸ್ಕಾಂನಿಂದ, ಐದು ನೌಕರರನ್ನು ಮೆಸ್ಕಾಂನಿಂದ ವಜಾ ಮಾಡಲಾಗಿದೆ. ವಜಾ ಮಾಡಿದವರನ್ನು ಮರಳಿ ಸೇವೆಗೆ ತೆಗದುಕೊಳ್ಳುವಂತೆ ಮಾಡಿದ ಮನವಿಯನ್ನೂ ಪರಿಗಣಿಸಿಲ್ಲ. ಬೇಡಿಕೆಗಳನ್ನು ಪರಿಗಣಿಸುವಂತೆ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಿಗೆ ಮತ್ತೆ ಮನವಿ ಸಲ್ಲಿಸಲಾಗಿದೆ' ಎಂದು ಅವರು ಹೇಳಿದರು.

ಸಂಘಟನೆಯ ಸಂಘಟನಾ ಕಾರ್ಯದರ್ಶಿ ಎಚ್.ಎ.ಕಮತರ್, ಕಾನೂನು ಸಲಹೆಗಾರ ಎಂ.ಎಸ್. ಬಬ್ಬಜ್ಜಿ, ಉಪಾಧ್ಯಕ್ಷರಾದ ಎಸ್.ಎ.ಗೂಳಿ, ಪ್ರಸನ್ನ ಎಚ್.ಎಂ. ಮತ್ತಿತರರು ಸುದ್ದಿಗೋಷ್ಠಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT