ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

37 ದಾಖಲು: ಒಬ್ಬರೂ ಪತ್ತೆ ಇಲ್ಲ

Last Updated 1 ಜೂನ್ 2013, 10:56 IST
ಅಕ್ಷರ ಗಾತ್ರ

ಕೆಜಿಎಫ್: ಇಲ್ಲಿನ ರಾಬರ್ಟ್‌ಸನ್‌ಪೇಟೆ ನಗರಸಭೆ ವ್ಯಾಪ್ತಿಯಲ್ಲಿ 37 ಮ್ಯಾನುಯಲ್ ಸ್ಕ್ಯಾವೆಂಜರ್‌ಗಳು ಇದ್ದಾರೆ ಎಂದು 2011ರ ಜನಗಣತಿಯ ಅಂಕಿ ಅಂಶ ಹೇಳುತ್ತದೆ. ಆದರೆ ಕಳೆದ 15 ದಿನದಿಂದ ಸಮೀಕ್ಷೆ ನಡೆಸಿ ಶುಕ್ರವಾರವಷ್ಟೆ ಪೂರ್ಣಗೊಳಿಸಿರುವ ನಗರಸಭೆಗೆ ಒಬ್ಬರೂ ಕಂಡು ಬಂದಿಲ್ಲ!

ಸುಮಾರು 1 ಸಾವಿರಕ್ಕೂ ಹೆಚ್ಚು ಸಫಾಯಿ ಕರ್ಮಚಾರಿಗಳನ್ನು ಒಳಗೊಂಡಂತೆ ಸಮೀಕ್ಷೆ ನಡೆಸಿ ಮಾಹಿತಿ ಪಡೆಯಲಾಗಿದೆ. ಒಬ್ಬ ಮ್ಯಾನುಯಲ್ ಸ್ಕ್ಯಾವೆಂಜರ್ ಕೂಡ ಸಮೀಕ್ಷೆ ವೇಳೆ ಕಂಡು ಬಂದಿಲ್ಲ ಎನ್ನುತ್ತಾರೆ ನಗರಸಭೆ ಆಯುಕ್ತ ಬಾಲಚಂದ್ರ.

ನಗರದಲ್ಲಿ ಸ್ಕ್ಯಾವೆಂಜರ್‌ಗಳು ಕಾಣಸಿಗುವುದಿಲ್ಲ. ಅಕಸ್ಮಾತ್ ಅಂತಹ ವೃತ್ತಿಯಲ್ಲಿ ತೊಡಗಿರುವುದನ್ನು ಕಂಡರೆ ಪೊಲೀಸ್ ದೂರು ನೀಡಿ ಅವರ ಮೇಲೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ವ್ಯಾಪಕ ಪ್ರಚಾರ ನಡೆಸಿತ್ತು. ಅದರಂತೆ ಒಂದು ಪ್ರಕರಣ ಕೂಡ ದಾಖಲು ಮಾಡಿತ್ತು. ಮಲಗುಂಡಿಯಲ್ಲಿ ಮೂವರು ಬಿದ್ದು ಮೃತಪಟ್ಟ ನಂತರವಂತೂ ನಗರಸಭೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿತ್ತು.

ಜನಗಣತಿ ಮುಗಿದು ಮೂರು ವರ್ಷಗಳಾಗಿವೆ. ಅಂದಿಗೂ ಇಂದಿನ ಪರಿಸ್ಥಿತಿಗೂ ಅಜಗಜಾಂತರವಿದೆ. ಈಗೆಲ್ಲೂ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳು ಸಿಗುವುದಿಲ್ಲ. ಯಂತ್ರಗಳ ಮೂಲಕ ಮಲಗುಂಡಿಗಳನ್ನು ಸ್ವಚ್ಛಗೊಳಿಸಲಾಗುತ್ತಿದೆ. ಸರ್ಕಾರಕ್ಕೆ ಮತ್ತು ನ್ಯಾಯಾಲಯಕ್ಕೆ ನೀಡಿರುವ ವರದಿಗೆ ಅನುಗುಣವಾಗಿ ನಡೆದುಕೊಳ್ಳಲಾಗುತ್ತಿದೆ ಎಂದು ಹೇಳುತ್ತಾರೆ ಅಧಿಕಾರಿಗಳು.

ಜಿಲ್ಲೆಯಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಸಫಾಯಿ ಕರ್ಮಚಾರಿಗಳು ಇದ್ದ ಚಿನ್ನದ ಗಣಿ ಪ್ರದೇಶದಲ್ಲಿ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳ ಸಂಖ್ಯೆ ಕೂಡ ಅದಕ್ಕೆ ಹತ್ತಿರವಾಗುತ್ತಿತ್ತು. ಸಾಮಾನ್ಯವಾಗಿ ಸಫಾಯಿ ಕರ್ಮಚಾರಿಗಳು ಮ್ಯಾನುಯಲ್ ಸ್ಕ್ಯಾವೆಂಜರ್‌ಗಳಾಗಿಯೇ ಕೆಲಸ ಮಾಡುತ್ತಿದ್ದರು.

ಚಿನ್ನದ ಗಣಿ ಮುಚ್ಚಿದ ನಂತರ ಗಣಿ ಕಾಲೊನಿಗಳಲ್ಲಿ ಕೆಲಸ ಮಾಡುತ್ತಿದ್ದ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳು ತಮ್ಮ ವೃತ್ತಿಯನ್ನು ನಿಲ್ಲಿಸಿದರು. ಬಹುತೇಕ ಮಂದಿ ನಿವೃತ್ತಿ ವಯಸ್ಸನ್ನು ದಾಟಿದ್ದು ಒಂದು ಕಾರಣವಾದರೆ, ಉಳಿದವರು ಬೇರೆ ಕೆಲಸ ಹುಡುಕಿಕೊಂಡು ತಮಿಳುನಾಡು, ಬೆಂಗಳೂರು ಮೊದಲಾದ ಪ್ರದೇಶಗಳಿಗೆ ವಲಸೆ ಹೋದರು.

ಮ್ಯಾನುಯಲ್ ಸ್ಕ್ಯಾವೆಂಜರ್ ವೃತ್ತಿ ಮಾಡುವುದನ್ನು ಕಡ್ಡಾಯವಾಗಿ ನಿಷೇಧ ಮಾಡಿ, ಕಠಿಣ ಕ್ರಮದ ಸೂಚನೆ ಸಿಕ್ಕಿದಾಗ ಅದನ್ನೇ ಜೀವನವನ್ನಾಗಿ ಮಾಡಿಕೊಂಡಿದ್ದ ವೃತ್ತಿನಿರತರು ಬೇರೆ ಉದ್ಯೋಗವನ್ನು ಆಶ್ರಯಿಸಿದ್ದಾರೆ. ಆದರೂ ಕೆಲವರು ಕದ್ದುಮುಚ್ಚಿ ಈ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗುತ್ತಿದೆ (ಇದೇ ರೀತಿ ಮಾಡಿ ಮೂವರು ಮಲದ ಗುಂಡಿಗೆ ಬಿದ್ದು ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು).

ಮ್ಯಾನುಯಲ್ ಸ್ಕ್ಯಾವೆಂಜರ್ ವೃತ್ತಿ ಪ್ರಸ್ತುತ ಇಲ್ಲದಿದ್ದರೂ ಅದನ್ನು ತಾವು ನಡೆಸುತ್ತಿದ್ದುದಾಗಿ ದಾಖಲೆ ಸಷ್ಟಿಸಿ ಸರ್ಕಾರಿ ಪ್ರಯೋಜನ ಪಡೆಯಲು ಕೆಲವು ಸಂಘಟನೆಗಳು ಪ್ರಯತ್ನ ನಡೆಸುತ್ತಿವೆ ಎಂದು ಈ ಹಿಂದೆ ನಗರಸಭೆ ಅಧಿವೇಶನದಲ್ಲಿ ಕೂಡ ಚರ್ಚೆ ನಡೆದಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT