ಭಾನುವಾರ, ಏಪ್ರಿಲ್ 11, 2021
29 °C

371ನೇ ಕಲಂ ತಿದ್ದುಪಡಿ: ವಿಜಯೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿಂಧನೂರು: ಹೈದ್ರಾಬಾದ್-ಕರ್ನಾಟಕ ಭಾಗದ ಜನರ ಅಹವಾಲನ್ನು ಗಣನೆಗೆ ತೆಗೆದುಕೊಂಡ ಕೇಂದ್ರ ಸರ್ಕಾರ 371ನೇ ಕಲಂ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ನೀಡುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಗರದಲ್ಲಿ ಪಟಾಕಿ ಹಚ್ಚಿ ವಿಜಯೋತ್ಸವವನ್ನು ಆಚರಿಸಿದರು. ನೂರಾರು ಕಾರ್ಯಕರ್ತರು ಪ್ರಮುಖ ರಸ್ತೆಗಳಲ್ಲಿ ಬೈಕ್ ರ‌್ಯಾಲಿ ನಡೆಸಿ ಸಂಭ್ರಮಿಸಿದರು.ಮಾಜಿ ಶಾಸಕ ಬಾದರ್ಲಿ ಹಂಪನಗೌಡ ಮಾತನಾಡಿ, ರಾಜ್ಯದಲ್ಲಿ ಅತೀ ಹಿಂದುಳಿದ ಪ್ರದೇಶವೆನಿಸಿರುವ ಹೈದ್ರಾಬಾದ್-ಕರ್ನಾಟಕ ಭಾಗದ ಅಭಿವೃದ್ಧಿಗಾಗಿ ವಿಶೇಷ ಸೌಲಭ್ಯಗಳ ಅವಶ್ಯಕತೆ ಇತ್ತು. ಈ ನಿಟ್ಟಿನಲ್ಲಿ ಕಳೆದ ನಾಲ್ಕು ದಶಕಗಳಿಂದ ಈ ಭಾಗದ ವಿವಿಧ ಪ್ರಗತಿಪರ ಸಂಘಟನೆಗಳು ಹೋರಾಡಿ ಸಂವಿಧಾನದ 371ನೇ ಪರಿಚ್ಛೇದ ತಿದ್ದುಪಡಿಗೆ ಒತ್ತಾಯಿಸಿವೆ.ಕೇಂದ್ರ ಯುಪಿಎ ಸರ್ಕಾರವು ಇದರ ಗಂಭೀರತೆಯನ್ನು ಮನಗಂಡು ಕೇಂದ್ರ ಸಂಪುಟ ಉಪಸಮಿತಿಯು ಈ ಭಾಗಕ್ಕೆ ಪ್ರತ್ಯೇಕ ಮೀಸಲು ನೀಡಬೇಕೆಂದು ಸರ್ಕಾರಕ್ಕೆ ಶಿಫಾರಸ್ಸು ಮಾಡಿರುವುದು ಅಭಿನಂದನಾರ್ಹ ಎಂದು ಹೇಳಿದರು. ಕೊಪ್ಪಳ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಬಸನಗೌಡ ಬಾದರ್ಲಿ ಮಾತನಾಡಿ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಲಭಿಸುವಲ್ಲಿ ಸಂಘ-ಸಂಸ್ಥೆಗಳು ಬಹುಮುಖ್ಯ ಪಾತ್ರ ವಹಿಸಿವೆ.ಹಿಂದೊಮ್ಮೆ ಇಲ್ಲಿಂದ ಯುವ ಕಾಂಗ್ರೆಸ್ ನಿಯೋಗ ದೆಹಲಿಗೆ ತೆರಳಿ ಕಲಂ ತಿದ್ದುಪಡಿಗೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಾಹುಲ್ ಗಾಂಧಿ ಅವರನ್ನು ಒತ್ತಾಯಿಸಲಾಗಿತ್ತು. ಅವರು ನೀಡಿದ ಭರವಸೆಯನ್ವಯ ಇಂದು ಜಾರಿಗೊಳಿಸಿರುವುದು ಸಂತಸ ತಂದಿದ್ದು ಈ ಭಾಗದಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಗೆ ಇದು ಸಹಕಾರಿಯಾಗಿದೆ ಎಂದರು.ಜಿಲ್ಲಾ ಪಂಚಾಯಿತಿ ಸದಸ್ಯರಾದ ಚಂದೂಸಾಬ ಮುಳ್ಳೂರು, ಶಿವನಗೌಡ ಎಲೆಕೂಡ್ಲಗಿ, ನಗರಸಭಾ ಸದಸ್ಯರಾದ ಜಾಫರ್‌ಸಾಬ ಜಾಗೀರದಾರ, ಎಸ್.ಶರಣೇಗೌಡ, ಯುವ ಘಟಕದ ತಾಲ್ಲೂಕು ಅಧ್ಯಕ್ಷ ಮುರ್ತುಜಾ, ಎಸ್‌ಟಿ ಯುವ ಘಟಕದ ಅಧ್ಯಕ್ಷ ವೆಂಕಟೇಶ ಗಿರಿಜಾಲಿ, ಮುಖಂಡರಾದ ಬಸವರಾಜ, ನಾಗರಾಜ, ರಶೀದ್ ಯತ್ಮಾರಿ ಮತ್ತಿತರರು ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.