371ನೇ ಕಲಂ ತಿದ್ದುಪಡಿ; ವಿಶೇಷ ಸ್ಥಾನಮಾನ ಚಿದಂಬರಂ ಭರವಸೆ

7

371ನೇ ಕಲಂ ತಿದ್ದುಪಡಿ; ವಿಶೇಷ ಸ್ಥಾನಮಾನ ಚಿದಂಬರಂ ಭರವಸೆ

Published:
Updated:

ನವದೆಹಲಿ: ಹೈದರಾಬಾದ್- ಕರ್ನಾಟಕ ಭಾಗದ ವಿಶೇಷ ಸ್ಥಾನಮಾನಕ್ಕೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಕರಡು ಮಸೂದೆ ಸಿದ್ಧವಾಗಿದ್ದು, ಸಂಸತ್ತಿನ ಮುಂದಿನ ಅಧಿವೇಶನದಲ್ಲಿ ಮಂಡನೆ ಆಗಲಿದೆ ಎಂದು ಕೇಂದ್ರ ಗೃಹ ಸಚಿವ ಪಿ. ಚಿದಂಬರಂ ಗುರುವಾರ ಭರವಸೆ ನೀಡಿದ್ದಾರೆ.ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡರ ನೇತೃತ್ವದ ನಿಯೋಗಕ್ಕೆ ಗೃಹ ಸಚಿವರು ಈ ಆಶ್ವಾಸನೆ ನೀಡಿದ್ದಾರೆ. ಹೈದರಾಬಾದ್- ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಬೇಕು ಹಾಗೂ ಬರಗಾಲಕ್ಕೆ ತುರ್ತಾಗಿ ಹಣ ಬಿಡುಗಡೆ ಮಾಡಬೇಕು ಎಂದು ನಿಯೋಗ ಚಿದಂಬರಂ ಅವರಿಗೆ ಮನವಿ ಸಲ್ಲಿಸಿತು.ಹೈದರಾಬಾದ್- ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಯುಪಿಎ ಸರ್ಕಾರ ಉತ್ಸುಕವಾಗಿದೆ. ಈ ವಿಷಯದಲ್ಲಿ ಅನುಮಾನ ಬೇಡ. ಸಂವಿಧಾನದ 371ನೇ ಕಲಮಿಗೆ ಅಗತ್ಯವಾಗಿ ಮಾಡಬೇಕಾಗಿರುವ ತಿದ್ದುಪಡಿಗೆ ಸಂಬಂಧಿಸಿದ ಕರಡು ಸಿದ್ಧವಾಗಿದೆ. ಈ ಕರಡನ್ನು ಪ್ರಧಾನಿ ಕಾರ್ಯಾಲಯ, ವಿವಿಧ ಸಚಿವಾಲಯಗಳು ಅಧ್ಯಯನ ನಡೆಸುತ್ತಿವೆ. ಇದಾದ ಬಳಿಕ ಸಚಿವ ಸಂಪುಟದ ಮುಂದೆ ಚರ್ಚೆಗೆ ಬರಲಿದೆ ಎಂದರು. ಎಲ್ಲ ವಿಧಿ- ವಿಧಾನಗಳನ್ನು ತ್ವರಿತವಾಗಿ ಪೂರ್ಣಗೊಳಿಸಿ ಸಂಸತ್ತಿನ ಮುಂಗಾರು ಅಧಿವೇಶನದಲ್ಲಿ ಮಂಡಿಸಲಾಗುವುದು ಎಂಬುದಾಗಿ ಗೃಹ ಸಚಿವರು ವಿವರಿಸಿದರು ಎಂದು ಮುಖ್ಯಮಂತ್ರಿ ಅನಂತರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.

 

ಮುಖ್ಯಮಂತ್ರಿ ನೇತೃತ್ವದ ನಿಯೋಗದಲ್ಲಿ ತೆರಳಿದ್ದ ಹೈದರಾಬಾದ್- ಕರ್ನಾಟಕದ ಹಿರಿಯ ರಾಜಕಾರಣಿ ವೈಜನಾಥ್ ಪಾಟೀಲ್, ಚಿದಂಬರಂ ಅಗತ್ಯ ಭರವಸೆ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದರು. ಪ್ರಧಾನಿ ಮನಮೋಹನ್‌ಸಿಂಗ್ ಅವರೂ ನಿಯೋಗಕ್ಕೆ ಬುಧವಾರ ಇದೇ ಮಾತು ಹೇಳಿದ್ದಾರೆ.ಚಿದಂಬರಂ, ರಾಜ್ಯದ ಬರಗಾಲ ಪರಿಸ್ಥಿತಿ ಕುರಿತು ತಾಳ್ಮೆಯಿಂದ ವಿವರ ಪಡೆದರು. ಕೇಂದ್ರ ಪರಿಣತರ ತಂಡ ರಾಜ್ಯಕ್ಕೆ ಭೇಟಿ ನೀಡಿ ವರದಿ ಸಲ್ಲಿಸಿದ ತಕ್ಷಣ ಹಿರಿಯ ಸಚಿವರನ್ನು ಒಳಗೊಂಡ `ಉನ್ನತಾಧಿಕಾರ ಸಮಿತಿ~ ಸಭೆಯಲ್ಲಿ ಸಮಾಲೋಚನೆ ನಡೆಸಿ ಅಗತ್ಯ ನೆರವು ನೀಡುವ ತೀರ್ಮಾನ ಕೈಗೊಳ್ಳುವುದಾಗಿ ಗೃಹ ಸಚಿವರು ಆಶ್ವಾಸನೆ ನೀಡಿದರು ಎಂದು ಮುಖ್ಯಮಂತ್ರಿ ಸ್ಪಷ್ಟಪಡಿಸಿದರು.ಬರ ಪರಿಸ್ಥಿತಿ ಅಧ್ಯಯನಕ್ಕೆ ರಾಜ್ಯಕ್ಕೆ ಭೇಟಿ ಕೊಡಲಿರುವ ಕೇಂದ್ರ ತಂಡ ಒಂದು ವಾರದೊಳಗೆ ವರದಿ ಸಲ್ಲಿಸುವ ನಿರೀಕ್ಷೆ ಇದೆ. ಕೇಂದ್ರದಿಂದ ಸಕಾರಾತ್ಮಕ ಸ್ಪಂದನೆ ದೊರೆಯುವ ವಿಶ್ವಾಸವಿದೆ ಎಂದು ಪುನರುಚ್ಚರಿಸಿದರು.

 

ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮತ್ತಿತರ ನಾಯಕರು ಮುಖ್ಯಮಂತ್ರಿ ನೇತೃತ್ವದ ನಿಯೋಗದಲ್ಲಿದ್ದರು. ಜೆಡಿಎಸ್ ಮುಖಂಡರಾದ ಎಚ್.ಡಿ. ರೇವಣ್ಣ ಹಾಗೂ ಬಸವರಾಜ ಹೊರಟ್ಟಿ ದೆಹಲಿಯಲ್ಲಿದ್ದರೂ ಗೃಹ ಸಚಿವರನ್ನು ಭೇಟಿ ಮಾಡಿದ ನಿಯೋಗದಲ್ಲಿ ಪಾಲ್ಗೊಂಡಿರಲಿಲ್ಲ. `ಗೃಹ ಸಚಿವರ ಭೇಟಿಗೆ ನಮಗೆ ಆಹ್ವಾನ ಇರಲಿಲ್ಲ~ ಎಂದು ಇಬ್ಬರೂ ನಾಯಕರು ಹೇಳಿದರು.

 

`ಹೈ-ಕ ಭಾಗಕ್ಕೆ ವಿಶೇಷ ಸ್ಥಾನಮಾನ ಸಿಗಬೇಕು ಎಂಬ ನಿಲುವು ನಮ್ಮ ಪಕ್ಷದಾಗಿದೆ.  ಗೌಡರು ನೀರಾವರಿ ಸಚಿವರಾಗಿದ್ದಾಗ, ಮುಖ್ಯಮಂತ್ರಿ, ಪ್ರಧಾನ ಮಂತ್ರಿ ಆಗಿದ್ದಾಗ ಕೃಷ್ಣಾ ಮೇಲ್ದಂಡೆ ಯೋಜನೆಗೆ ಹೆಚ್ಚು ಹಣ ಬಿಡುಗಡೆ ಮಾಡಿದ್ದಾರೆ. ಇದು ಸುಳ್ಳು ಎಂದಾದರೆ ರಾಜಕೀಯ ನಿವೃತ್ತಿ ಹೊಂದುತ್ತೇನೆ~ ಎಂದು ರೇವಣ್ಣ ಸವಾಲು ಹಾಕಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry