ಗುರುವಾರ , ಏಪ್ರಿಲ್ 15, 2021
31 °C

371: ಸಿಎಂ ಗೃಹ ಕಚೇರಿಯಲ್ಲಿ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

371: ಸಿಎಂ ಗೃಹ ಕಚೇರಿಯಲ್ಲಿ ಸಭೆ

ಗುಲ್ಬರ್ಗ: ಸಂವಿಧಾನದ 371ನೇ ಕಲಂ ತಿದ್ದುಪಡಿ ಬೇಡಿಕೆಯ ವಿಷಯವಾಗಿ ಕೇಂದ್ರದ ಮೇಲೆ ಮತ್ತೆ ಒತ್ತಡ ಹಾಕಲು ಹಾಗೂ ಹೈದರಾಬಾದ್ ಕರ್ನಾಟಕ ಪ್ರದೇಶದ ರಚನಾತ್ಮಕ ಸರ್ವಾಂಗೀಣ ಪ್ರಗತಿಗೆ ರಾಜ್ಯ ಸರ್ಕಾರ  ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಧ್ಯಕ್ಷತೆಯಲ್ಲಿ ಹೈದರಾಬಾದ್ ಕರ್ನಾಟಕ ಪ್ರದೇಶದ ಪ್ರಮುಖ ಶಾಸಕರ, ಹೈ.ಕ. ಪ್ರದೇಶದ ಹೋರಾಟಗಳ ಸಮನ್ವಯ ಸಮಿತಿ ಮುಖಂಡರ ಸಭೆ ಮಂಗಳವಾರ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಜರುಗಿತು.ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್, ಇದೇ 8ರ ನಂತರ ಪ್ರಧಾನಿ ಮತ್ತು ಗೃಹ ಸಚಿವರಿಂದ ದಿನಾಂಕ ಪಡೆದು ದೆಹಲಿಯಲ್ಲಿ ಸರ್ವ ಪಕ್ಷಗಳ ನಾಯಕರ, ಹೈ.ಕ. ಪ್ರದೇಶದ ಕೇಂದ್ರ ಮತ್ತು ರಾಜ್ಯದ ಸಚಿವರ, ಶಾಸಕರ, ಕರ್ನಾಟಕದ ಎಲ್ಲಾ ಸಂಸದರ ಸಭೆ ನಡೆಸಿ ಪ್ರಧಾನಿ ಮತ್ತು ಗೃಹ ಸಚಿವರನ್ನು ನಿಯೋಗದ ಮೂಲಕ ಭೇಟಿಯಾಗಿ ಬರುವ ಮಳೆಗಾಲದ ಅಧಿವೇಶನದಲ್ಲಿ  ಹೈ.ಕ. ಪ್ರದೇಶಕ್ಕೆ ವಿಶೇಷ ಸ್ಥಾನಮಾನ ನೀಡಲು 371ನೇ ಕಲಂ ತಿದ್ದುಪಡಿ ಕರಡು ಮಂಡಿಸಲು ಒತ್ತಾಯಿಸಲಾಗುವುದು ಎಂದರು.ಅಲ್ಲದೆ ಆದಷ್ಟು ಶೀಘ್ರ ದಿನಾಂಕ ನಿಗದಿ ಮಾಡಿ ಗುಲ್ಬರ್ಗದಲ್ಲಿ ಸಂಪುಟ ಸಭೆ ನಡೆಸಿ ಹೈ.ಕ. ಪ್ರದೇಶದ ಅಭಿವೃದ್ಧಿಯ ಬಗ್ಗೆ ಮಹತ್ವದ ನಿರ್ಣಯ ಕೈಗೊಳ್ಳಲಾಗುವುದು. ಸೆ. 17ರಂದು ಗುಲ್ಬರ್ಗಕ್ಕೆ  ಆಗಮಿಸಿ ಹೈದರಾಬಾದ್ ಕರ್ನಾಟಕ ವಿಮೋಚನೆ ದಿನಾಚರಣೆಯಲ್ಲಿ ಭಾಗವಹಿಸುವುದಾಗಿ ಅವರು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ. ನಮೋಶಿ , ಸಮನ್ವಯ ಸಮಿತಿ ಸಂಸ್ಥಾಪಕ  ಅಧ್ಯಕ್ಷ ಲಕ್ಷ್ಮಣ ದಸ್ತಿ ಮಾತನಾಡಿದರು.ಸಭೆಯ ಬಳಿಕ ಸಮನ್ವಯ ಸಮಿತಿ ಅಧ್ಯಕ್ಷರು ಮತ್ತು ಮುಖಂಡರು ಹೈ.ಕ. ಪ್ರದೇಶದ ರಚನಾತ್ಮಕ ಸರ್ವಾಂಗೀಣ ಪ್ರಗತಿಯ ಬಗ್ಗೆ ವಿವರವಾದ ಮನವಿ ಪತ್ರವನ್ನು ಮುಖ್ಯಮಂತ್ರಿಗೆ ಸಲ್ಲಿಸಿದರು.ಸಭೆಯಲ್ಲಿ ಶಾಸಕರು, ಸಮನ್ವಯ ಸಮಿತಿ ಮುಖಂಡ ಶರಣು ಗದ್ದುಗೆ, ಶಿವಶರಣಪ್ಪ ಖಣದಾಳ, ಭವಾನಿಕುಮಾರ ವಳಕೇರಿ, ಮಂಜುನಾಥ ನಾಲವಾರಕರ, ನಾಗಲಿಂಗಯ್ಯ ಮಠಪತಿ, ಕಲ್ಯಾಣರಾವ ಪಾಟೀಲ್, ಆನಂದ ಮಠಪತಿ, ಧರ್ಮಸಿಂಗ್ ತಿವಾರಿ, ವಿಶಾಲದೇವ್, ವಿ.ಎಚ್. ವಾಲೀಕಾರ ಇದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.