ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

371ಕಲಂ ಜಾರಿ; ಇಮ್ಮಡಿಸಿತು ಪ್ರತಿಭಟನೆ ಕೂಗು

Last Updated 25 ಜನವರಿ 2012, 5:20 IST
ಅಕ್ಷರ ಗಾತ್ರ

ಬೀದರ್: ಜಿಲ್ಲೆಯ ವಿವಿಧ ತಾಲ್ಲೂಕುಗಳಲ್ಲಿ ಸಂವಿಧಾನದ 371ನೇ ಕಲಂ ಜಾರಿಗೆ ಆಗ್ರಹಿಸಿ ಮಂಗಳವಾರ ಪ್ರತಿಭಟನೆ ನಡೆಯಿತು.

 ಬೀದರ್ ವರದಿ
 ಸಂವಿಧಾನದ 371ನೇ ಕಲಂ ತಿದ್ದುಪಡಿಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಲು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಕ್ಕೂ ಸಿದ್ಧರಿರುವುದಾಗಿ ಶಾಸಕ ರಹೀಮ್‌ಖಾನ್ ನುಡಿದರು.
ಹೈದರಾಬಾದ್ ಕರ್ನಾಟಕ ಬಂದ್ ಪ್ರಯುಕ್ತ ನಗರದ ಅಂಬೇಡ್ಕರ್ ವೃತ್ತದಲ್ಲಿ ನಡೆದ ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದವರೇ ಜನ. ಹೀಗಾಗಿ ಅವರು ಆದೇಶ ನೀಡಿದರೆ ಈಗಲೇ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ. ಜಿಲ್ಲೆಯ ಇತರೆ ಶಾಸಕರೂ ರಾಜೀನಾಮೆಗೆ ಸಿದ್ಧರಾಗಬೇಕು ಎಂದು ಹೇಳಿದರು.

ಹಿಂದುಳಿದ ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವುದಕ್ಕಾಗಿ ಸಂವಿಧಾನದ 371ನೇ ಕಲಂಗೆ ತಿದ್ದುಪಡಿ ತರುವುದು ಜರೂರಿಯಾಗಿದೆ ಎಂದು ತಿಳಿಸಿದರು.
371ನೇ ಕಲಂ ತಿದ್ದುಪಡಿಗಾಗಿ ಯಾವುದೇ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವ ಅಗತ್ಯ ಇಲ್ಲ ಎಂದು ಔರಾದ್ ಶಾಸಕ ಪ್ರಭು ಚವ್ಹಾಣ್ ಹೇಳಿದರು.

ಈ ಕುರಿತು ಈಗಾಗಲೇ ವಿಧಾನಸಭೆಯಲ್ಲಿ ನಿರ್ಣಯ ಅಂಗೀಕರಿಸಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿಕೊಡಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರಿ ಇದನ್ನು ಜಾರಿಗೆ ತರಬೇಕಿದೆ ಎಂದರು.

ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವುದಕ್ಕಾಗಿ ನವದೆಹಲಿಗೆ ನಿಯೋಗ ಕರೆದೊಯ್ಯುವುದಾದರೆ ತೆರಳಲು ಸಿದ್ಧರಿರುವುದಾಗಿ ತಿಳಿಸಿದರು.
371ನೇ ಕಲಂ ತಿದ್ದುಪಡಿಗಾಗಿ ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗುವಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿಫಲರಾಗಿದ್ದಾರೆ ಎಂದು ಶಾಸಕ ಬಂಡೆಪ್ಪ ಕಾಶೆಂಪೂರ್ ಟೀಕಿಸಿದರು.
ರಾಜ್ಯದಲ್ಲಿ 18 ಜನ ಬಿಜೆಪಿ ಸಂಸದರಿದ್ದಾರೆ. ಈ ಕುರಿತು ಸಂಸತ್ತಿನಲ್ಲಿ ಹೋರಾಟ ನಡೆಸಲು ಸಿದ್ಧರಾದಲ್ಲಿ ಜಾತ್ಯತೀತ ಜನತಾದಳ ಬೆಂಬಲ ನೀಡಲು ಸಿದ್ಧವಿದೆ ಎಂದು ಹೇಳಿದರು.

371ನೇ ಕಲಂ ತಿದ್ದುಪಡಿಗಾಗಿ ತೆಲಂಗಾಣ ಮಾದರಿಯ ಹೋರಾಟ ಜರೂರಿಯಾಗಿದೆ. ಹಾಗೆ ಮಾಡಿದ್ದಲ್ಲಿ ಮಾತ್ರ ಕೇಂದ್ರ ಸರ್ಕಾರವನ್ನು ಮಣಿಸಬಹುದಾಗಿದೆ ಎಂದರು.
ತೆಲಂಗಾಣಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆ ಭಾಗದ ಜನಪ್ರತಿನಿಧಿಗಳು ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದರು. ಹಾಗೆಯೇ ಹೈದರಾಬಾದ್ ಕರ್ನಾಟಕ ಭಾಗದ ಜನಪ್ರತಿನಿಧಿಗಳು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ಒಕ್ಕೂಟದ ಜಿಲ್ಲಾ ಸಂಚಾಲಕ ವಿಜಯಕುಮಾರ ಸೋನಾರೆ ಹೇಳಿದ್ದು ಸಭೆಯಲ್ಲಿ ರಾಜೀನಾಮೆ ಕುರಿತ ಚರ್ಚೆಗೆ ವೇದಿಕೆ ಒದಗಿಸಿತ್ತು. ಒಂದು ವೇಳೆ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರೆ ಜಿಲ್ಲೆಯಲ್ಲಿರುವ 3 ಸಾವಿರ ಗ್ರಾಮ ಪಂಚಾಯಿತಿ ಸದಸ್ಯರು ಕೂಡ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲು ತಯಾರಿರುವುದಾಗಿ ಪ್ರಕಟಿಸಿದ್ದರು.

ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಅಧ್ಯಕ್ಷ ಪಂಡಿತರಾವ ಚಿದ್ರಿ, ಪ್ರಧಾನ ಕಾರ್ಯದರ್ಶಿ ಅನೀಲಕುಮಾರ ಬೆಲ್ದಾರ್, ಜೆಡಿಎಸ್ ಜಿಲ್ಲಾ ಅಧ್ಯಕ್ಷ ನಸೀಮುದ್ದೀನ್ ಪಟೇಲ್, ಬಿಜೆಪಿ ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ವಿಜಯಕುಮಾರ ಪಾಟೀಲ್ ಗಾದಗಿ, ಪ್ರಮುಖರಾದ ಅಬ್ದುಲ್ ಖದೀರ್ ಮತ್ತಿತರರು ಮಾತನಾಡಿದರು. ಅಕ್ಕ ಅನ್ನಪೂರ್ಣ, ಪ್ರಮುಖರಾದ ಚನ್ನಬಸಪ್ಪ ಹಾಲಹಳ್ಳಿ, ಡಾ. ರಾಜಶೇಖರ ಸ್ವಾಮಿ ಗೋರ್ಟಾ, ಡಾ. ಅಮರ ಏರೋಳಕರ್, ಶಕುಂತಲಾ ಬೆಲ್ದಾಳೆ, ಸೋಮನಾಥ ಕಂದಗೂಳೆ, ವೈಜಿನಾಥ ಸೂರ್ಯವಂಶಿ, ಪಾಂಡುರಂಗ ಸೂರ್ಯವಂಶಿ, ಕಾಶಪ್ಪ ಧನ್ನೂರು, ವಿರೂಪಾಕ್ಷ ಗಾದಗಿ, ರಾಜು ಕಡ್ಯಾಳ್, ಸೋಮಶೇಖರ ಗೌಡಪ್ಪನೋರ್, ಶಶಿಧರ ಕೋಸಂಬೆ, ಸೋಮನಾಥ ಮುಧೋಳಕರ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ಔರಾದ್ ವರದಿ
 ಹೈದರಾಬಾದ ಕರ್ನಾಟಕ ಪ್ರದೇಶಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸುವ ಸಂವಿಧಾನದ 371ನೇ ಕಲಂ ತಿದ್ದುಪಡಿಗಾಗಿ ನಡೆದ ಬಂದ್‌ಗೆ ಜನ ಸ್ವಯಂ ಪ್ರೇರಿತರಾಗಿ ಸ್ಪಂದಿಸಿದರು.
ಬೆಳಿಗ್ಗೆಯಿಂದಲೇ ಬಹುತೇಕ ಅಂಗಡಿಗಳ ಬಾಗಿಲು ತೆರೆಯಲಿಲ್ಲ. ಮಧ್ಯಾಹ್ನದ ವೇಳೆಯಂತೂ ಕುಡಿಯಲು ನೀರು ಸಹ ಸಿಗದಷ್ಟು ಬಂದ್‌ಗೆ ವ್ಯಾಪಕ ಜನಬೆಂಬಲ ಸಿಕ್ಕಿತು. ಸಾರಿಗೆ ಸಂಸ್ಥೆ ಬಸ್ ಓಡಾಟ ಸ್ಥಗಿತಗೊಂಡಿರುವುದರಿಂದ ಬಸ್ ನಿಲ್ದಾಣ ಬಿಕೋ ಎನ್ನುತ್ತಿತ್ತು. ಮುನ್ನೆಚ್ಚರಿಕೆ ಕ್ರಮವಾಗಿ ಬಹುತೇಕ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಸಂಖ್ಯೆ ವಿರಳವಾಗಿ ಎಲ್ಲರಿಗೂ ಬಂದ್ ಬಿಸಿ ತಟ್ಟಿತು.

ಬಂದ್ ನಿಮಿತ್ತ ಬಿಜೆಪಿ ಮತ್ತು ಇತರ ಕೆಲ ಸಂಘಟನೆಗಳು ಪ್ರತ್ಯೇಕವಾಗಿ ರ‌್ಯಾಲಿ ನಡೆಸಿದರು. ಶಾಸಕ ಪ್ರಭು ಚವ್ಹಾಣ ನೇತೃತ್ವದಲ್ಲಿ ಬಿಜೆಪಿ ಮುಖಂಡರು, ಕಾರ್ಯಕರ್ತರು ಪಕ್ಷದ ಧ್ವಜ ಹಿಡಿದು ಕನ್ನಡಾಂಬೆ ವೃತ್ತದಿಂದ ಬಸ್ ನಿಲ್ದಾಣದ ವರೆಗೆ ರ‌್ಯಾಲಿ ನಡೆಸಿದರು.  ರಾಜ್ಯ ಬಿಜೆಪಿ ಸರ್ಕಾರ 371ನೇ ಕಲಂ ತಿದ್ದುಪಡಿಗಾಗಿ ಪ್ರಯತ್ನ ಮಾಡುತ್ತಿದೆ. ವಿಧಾನಸಭೆಯಲ್ಲಿ ಠರಾವು ಪಾಸು ಮಾಡಿ ಕೇಂದ್ರ ಸರ್ಕಾರಕ್ಕೆ ಕಳುಹಿಸಿದೆ. ಎರಡು ಬಾರಿ ಸರ್ವಪಕ್ಷ ನಿಯೋಗ ಹೋಗಿ ಈ ಬಗ್ಗೆ ಪ್ರಧಾನಮಂತ್ರಿ ಮತ್ತು ಗೃಹ ಸಚಿವರನ್ನು ಭೇಟಿ ಮಾಡಿ ಮನವರಿಕೆ ಮಾಡಿಕೊಡಲಾಗಿದೆ. ಆದಾಗ್ಯೂ ಕೇಂದ್ರ ಸರ್ಕಾರ ಈ ಬಗ್ಗೆ ಕಾಳಜಿ ವಹಿಸುತ್ತಿಲ್ಲ ಎಂದು ಬಿಜೆಪಿ ಮುಖಂಡರು ದೂರಿದರು. ತಾಲ್ಲೂಕು ಪಂಚಾಯ್ತಿ ಅಧ್ಯಕ್ಷ ಶ್ರೀರಂಗ ಪರಿಹಾರ, ಪಟ್ಟಣ ಪಂಚಾಯ್ತಿ ಅಧ್ಯಕ್ಷ ಧೊಂಡಿಬಾ ನರೋಟೆ, ಧುರೀಣ ಕಿರಣ ಪಾಟೀಲ, ಬಂಡೆಪ್ಪ ಕಂಟೆ, ಶರಣಪ್ಪ ಪಂಚಾಕ್ಷಿರೆ, ವಿಠಲ್ ಕೋಳಿ, ರಾಜಪ್ಪ ಚಿದ್ರೆ ಮತ್ತಿತರರು ಇದ್ದರು.

ನಂತರ ನಡೆದ ಪ್ರತ್ಯೇಕ ರ‌್ಯಾಲಿಯಲ್ಲಿ ಜೆಡಿಎಸ್ ಧುರೀಣ ರಾಮಣ್ಣ ವಡೆಯರ್, ಶರಣಪ್ಪ ಪಾಟೀಲ, ಸುಧಾಕರ ಕೊಳ್ಳೂರ್, ಬಸವರಾಜ ಶೆಟಕಾರ, ಶಿವಕುಮಾರ ಕಾಂಬಳೆ, ಡಾ. ಮನ್ಮಥ ಡೋಳೆ, ಡಾ. ವೈಜಿನಾಥ ಬುಟ್ಟೆ ಮತ್ತಿತರರು ಪಾಲ್ಗೊಂಡರು. ಸರ್ಕಾರಿ ಉದ್ಯೋಗ ಮತ್ತು ವೃತ್ತಿಪರ ಕೋರ್ಸ್‌ನಲ್ಲಿ ನಮಗೆ ಈಗಾಗಲೇ ಸಾಕಷ್ಟು ಅನ್ಯಾಯವಾಗಿದೆ. ಇನ್ನು ಮುಂದೆ ನಾವು ಸುಮ್ಮನೆ ಕುಳಿತರೆ ನಮ್ಮ ಮುಂದಿನ ಯುವ ಜನಾಂಗ ನಮ್ಮ ಮೇಲೆ ಹಿಡಿಶಾಪ ಹಾಕುತ್ತದೆ. ಹೀಗಾಗಿ ನಾವು ಕಲಂ ತಿದ್ದುಪಡಿಗಾಗಿ ಜಾತಿ ಪಕ್ಷಬೇಧ ಮರೆತು ಹೋರಾಡಬೇಕಿದೆ ಎಂದು ಡಾ. ಡೋಳೆ ಸಲಹೆ ನೀಡಿದರು.

ಬೇಡಿಕೆ ಕುರಿತು ಪ್ರಧಾನಿ ಮತ್ತು ರಾಷ್ಟ್ರಪತಿ ಹೆಸರಿಗೆ ಬರೆದ ಮನವಿಪತ್ರ ತಹಸೀಲ್ದಾರ್ ಶಿವಕುಮಾರ ಶೀಲವಂತ ಅವರಿಗೆ ನೀಡಿದರು. ಎಬಿವಿಪಿ ಮತ್ತು ಇತರ ಸಂಘಟನೆಗಳ ಕಾರ್ಯಕರ್ತರು ಬೈಕ್ ರ‌್ಯಾಲಿ ನಡೆಸಿದರು.

ಪದವೀಧರ ಸಂಘ: ಹೈದರಾಬಾದ ಕರ್ನಾಟಕ ಪದವೀಧರರ ಸಂಘದ ಸದಸ್ಯರು ತಹಸೀಲ್ದಾರ್ ಶಿವಕುಮಾರ ಶೀಲವಂತ ಅವರನ್ನು ಭೇಟಿ ಮಾಡಿ ಪ್ರತ್ಯೇಕ ಮನವಿ ಸಲ್ಲಿಸಿದರು. ಒಂದು ತಿಂಗಳಲ್ಲಿ 371ನೇ ಕಲಂ ತಿದ್ದುಪಡಿಯಾಗದಿದ್ದಲ್ಲಿ ನಾವು ಯಾವುದೇ ರೀತಿಯ ಹೋರಾಟಕ್ಕೆ ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದರು. ಗಣಮಪತರಾವ ಚಲವಾ, ಅನಿಲಕುಮಾರ ಮಚಕುರಿ, ಬಾಲರಾಜ ಯಂಡೆ, ವಿಜಯಕುಮಾರ ಘೋಡಕೆ, ದೇವೇಂದ್ರ ತಡಕಲೆ, ಪ್ರಕಾಶ ಭೋಸ್ಲೆ ಉಪಸ್ಥಿತರಿದ್ದರು.

ಭಾಲ್ಕಿ ವರದಿ

 ಹೈದ್ರಾಬಾದ್ ಕರ್ನಾಟಕ ಭಾಗದ ಶಿಕ್ಷಣ, ಉದ್ಯೋಗ ಮತ್ತು ಸಮಗ್ರ ಅಭಿವೃದ್ಧಿಗಾಗಿ ವಿಶೇಷ ಆದ್ಯತೆ ನೀಡುವ 371ಕಲಂ ಜಾರಿಗೊಳಿಸುವಂತೆ ಆಗ್ರಹಿಸಿ ಪಟ್ಟಣದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಯಿತು.
ಭಾಲ್ಕಿಯ ಸತ್ಯನಿಕೇತನ ಕಾಲೇಜಿನಿಂದ ಡಾ.ಅಂಬೇಡ್ಕರ್ ವೃತ್ತದ ಮೂಲಕ ಗಾಂಧಿ ಪ್ರತಿಮೆಯ ಬಳಿ ಬಂದು ಸಭೆ ನಡೆಸಲಾಯಿತು. ನಂತರ ತಹಸೀಲ್ದಾರ ಮೂಲಕ ಮನವಿ ಪತ್ರ ಸಲ್ಲಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಶಾಸಕ ಈಶ್ವರ ಖಂಡ್ರೆ ಮಾತನಾಡಿ, ಈ ಭಾಗದ ವಿಶೇಷ ವಿಕಾಸಕ್ಕಾಗಿ 371ಕಲಂ ಜಾರಿಗೊಳಿಸುವದು ಅನಿವಾರ್ಯವಾಗಿದೆ ಎಂದರು. ಈಗಾಗಲೇ ತಾವು ಮತ್ತು ಸಂಸದ ಧರ್ಮಸಿಂಗ್ ಅವರು ಕೇಂದ್ರ ಸಚಿವ ಮಲ್ಲಿಕಾರ್ಜುನ ಖರ್ಗೆ ಅವರ ನೇತೃತ್ವದಲ್ಲಿ ಗೃಹ ಸಚಿವ ಚಿದಂಬರಂ ಅವರ ಭೇಟಿ ಮಾಡಲಾಗಿದೆ. ಬರುವ ಚಳಿಗಾಲದ ಅಧಿವೇಶನದಲ್ಲಿ ಈ ಕುರಿತು ಚರ್ಚೆ ನಡೆಸುವದಾಗಿ ಭರವಸೆ ನೀಡಿದ್ದಾರೆಂದು ತಿಳಿಸಿದರು.

ಹೋರಾಟ ಸಮಿತಿ ಅಧ್ಯಕ್ಷ ಕಿರಣ ಖಂಡ್ರೆ ಮಾತನಾಡಿ, ಈ ಭಾಗವು ನಿಜಾಮನ ಆಳ್ವಿಕೆ, ಭಾಷಾವಾರು ವಿವಾದ ಮುಂತಾದ ಸಮಸ್ಯೆಗಳಲ್ಲಿ ನಲುಗಿ ವಿಕಾಸ ಹೊಂದದೇ ಹಿಂದೆ ಬಿದ್ದಿದೆ. ಈಗಲಾದರೂ ಸರ್ಕಾರ ಎಚ್ಚೆತ್ತುಕೊಳ್ಳಬೇಕು ಎಂದರು. ಸರ್ಕಾರಿ ಬಸ್‌ಗಳು, ಮಾರುಕಟ್ಟೆಯ ವ್ಯಾಪಾರ ವಹಿವಾಟುಗಳು ಕೆಲ ಕಾಲ ಬಂದ್ ಮಾಡಿದ್ದವು. ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. 
ಸಮಿತಿ ಗೌರವ ಅಧ್ಯಕ್ಷ ಡಾ. ಜಿ.ಬಿ. ವಿಸಾಜಿ, ಪ್ರಧಾನ ಕಾರ್ಯದರ್ಶಿ ಓಂಪ್ರಕಾಶ ರೊಟ್ಟೆ, ಸಂಚಾಲಕ ಶ್ರೀಕಾಂತ ಭೂರಾಳೆ, ಉಪಾಧ್ಯಕ್ಷ ಸುಧಾಕರ ದೇಶಪಾಂಡೆ, ಕಾರ್ಯದರ್ಶಿ ಶಿವಪುತ್ರ ಧಾಬಶಟ್ಟೆ, ಖಜಾಂಚಿ ಮಾದಯ್ಯ ಸ್ವಾಮಿ, ಪುರಸಭೆ ಅಧ್ಯಕ್ಷ ಚಂದ್ರಕಾಂತ ಪಾಟೀಲ, ಕಾಂಗ್ರೆಸ್ ಅಧ್ಯಕ್ಷ ಹಣಮಂತರಾವ ಚವ್ಹಾಣ, ರಾಚಪ್ಪ ಗೋರ್ಟೆ, ಜಯಶ್ರೀ ಮಾನಕರಿ, ಅಪ್ಪಾಸಾಬ ದೇಶಮುಖ್, ಎಪಿಎಂಸಿ ಸದಸ್ಯ ಮಹಾದೇವಪ್ಪ ದೇವಪ್ಪ ಮುಂತಾದವರು ಇದ್ದರು.

ಬಸವಕಲ್ಯಾಣ ವರದಿ
 ಹೈದರಾಬಾದ್ ಕರ್ನಾಟಕ ಪ್ರದೇಶದ ಅಭಿವೃದ್ಧಿಗಾಗಿ 371 ನೇ ಕಾಯ್ದೆ ಕಲಂ ತಿದ್ದುಪಡಿಗೆ ಒತ್ತಾಯಿಸಿ ನಗರದಲ್ಲಿನ ಅಂಗಡಿಗಳನ್ನು ಮುಚ್ಚಿಟ್ಟು ಬಂದ್ ಆಚರಿಸಲಾಯಿತು. ಶಾಲಾ ಕಾಲೇಜುಗಳಲ್ಲಿ ತರಗತಿಗಳು ನಡೆಯಲಿಲ್ಲ, ಅಲ್ಲದೆ ಬಸ್ ಹಾಗೂ ಇತರೆ ವಾಹನಗಳ ಸಂಚಾರ ಸ್ಥಗಿತಗೊಂಡಿತ್ತು. ಹೀಗಾಗಿ ಪ್ರಯಾಣಿಕರು ಪರದಾಡಬೇಕಾಯಿತು.
ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯಿಂದ ಈ ಭಾಗದಲ್ಲಿ ಬಂದ್ ನಡೆಸುವ ಬಗ್ಗೆ ಕರೆ ಕೊಟ್ಟಿದ್ದರಿಂದ ಇಂದು ವಿವಿಧ ಸಂಘಟನೆಗಳ ಕಾರ್ಯಕರ್ತರು ಬೆಳಿಗ್ಗೆಯಿಂದಲೇ ನಗರದ ಮುಖ್ಯ ರಸ್ತೆಯಲ್ಲಿ ಓಡಾಡಿ ಅಂಗಡಿಗಳು ತೆರೆಯದಂತೆ ಮನವಿ ಮಾಡಿದರು. ಹೀಗಾಗಿ ವ್ಯಾಪಾರ ವಹಿವಾಟು ನಡೆಯಲಿಲ್ಲ. ಬಂದ್ ಶಾಂತಿಪೂರ್ಣವಾಗಿತ್ತು.

ಮಧ್ಯಾಹ್ನ ಕೋಟೆಯಿಂದ ಮುಖ್ಯರಸ್ತೆಯ ಮೂಲಕ ಡಾ.ಅಂಬೇಡ್ಕರ ವೃತ್ತದವರೆಗೆ ರ‌್ಯಾಲಿ ನಡೆಸಿ ತಹಸೀಲ್ದಾರ ಜಗನ್ನಾಥರೆಡ್ಡಿ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಹೋರಾಟ ಸಮಿತಿ ಪ್ರಮುಖರಾದ ಮಹಾಂತಯ್ಯ ಸ್ವಾಮಿ, ಸಂಗಮೇಶ ಬೆಲ್ಲೆ, ಮಾಜಿ ಶಾಸಕ ಮಲ್ಲಿಕಾರ್ಜುನ ಖೂಬಾ, ಜಿಲ್ಲಾ ಪಂಚಾಯಿತಿ ಸದಸ್ಯ ಸಂಜೀವ ಕಾಳೇಕರ್, ನ್ಯಾಯವಾದಿ ಅಲೀಮ್ ಅಂಜುಮ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಮಲ್ಲಪ್ಪ ಧಬಾಲೆ, ಡಾ.ಎಸ್.ಬಿ.ದುರ್ಗೆ, ವಿಜಯಕುಮಾರ ಭೆಂಡೆ, ರವಿ ಚಂದನಕೆರೆ, ದೀಪಕ ಗಾಯಕವಾಡ, ನಾಗೇಶ ಕಲ್ಯಾಣಕರ್, ಧನರಾಜ ರಾಜೋಳೆ, ಅರವಿಂದ ಮುತ್ತೆ, ಸೂರ್ಯಕಾಂತ ಚಿಲ್ಲಾಬಟ್ಟೆ, ದತ್ತು ಭೆಂಡೆ ಮುಂತಾದವರು ಪಾಲ್ಗೊಂಡಿದ್ದರು.

ಈ ಭಾಗದವರು ಎಲ್ಲ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ. ಅದ್ದರಿಂದ ಇಲ್ಲಿನ ಸರ್ವಾಂಗೀಣ ವಿಕಾಸಕ್ಕಾಗಿ 371 ನೇ ಕಾಯ್ದೆ ಕಲಂ ತಿದ್ದುಪಡಿ ಮಾಡುವುದು ಅವಶ್ಯಕವಾಗಿದೆ. ಈ ಸಂಬಂಧ ಅನೇಕ ವರ್ಷಗಳಿಂದ ಹೋರಾಟ ನಡೆಸುತ್ತ ಬರಲಾಗಿದ್ದರೂ ಯಾರೂ ಲಕ್ಷ ಕೊಡುತ್ತಿಲ್ಲ. ಇಲ್ಲಿನ ಕೆಲ ಜನಪ್ರತಿನಿಧಿಗಳ ನಿರ್ಲಕ್ಷತೆಯಿಂದಲೇ ಈ ಭಾಗಕ್ಕೆ ವಿಶೇಷ ಸೌಲಭ್ಯ ದೊರಕುತ್ತಿಲ್ಲ. ಒಂದುವೇಳೆ ಮುಂದೆಯೂ ಇದೇ ರೀತಿ ವಿಳಂಬ ಧೋರಣೆ ಅನುಸರಿಸಿದರೆ ಮತ್ತೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಮನವಿ ಪತ್ರದಲ್ಲಿ ಹೇಳಲಾಗಿದೆ.

ಹುಮನಾಬಾದ್ ವರದಿ

ಸಂವಿಧಾನ ಕಲಂ 371ತಿದ್ದುಪಡಿಗೆ ಆಗ್ರಹಿಸಿ ತಾಲ್ಲೂಕು ಭ್ರಷ್ಟಾಚಾರ ಆಂದೋಲನ ಸಮಿತಿ ವತಿಯಿಂದ ನಗರದಲ್ಲಿ ರ‌್ಯಾಲಿನಡೆಸಿ, ಸರ್ಕಾರಕ್ಕೆ ಮನವಿಪತ್ರ ಸಲ್ಲಿಸಲಾಯಿತು.

ಹೈದರಾಬಾದ್ ಕರ್ನಾಟಕ ಭಾಗವು ಅಭಿವೃದ್ಧಿ ಹಿನ್ನೆಲೆಯಲ್ಲಿ ಕಲಂ 371ತಿದ್ದುಪಡಿ ವಿಷಯದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಾಳುತ್ತಿರುವ ಧೋರಣೆಯನ್ನು ಪ್ರತಿಭಟನಾ ನಿರತರು ಖಂಡಿಸಿದರು. ಹುಮನಾಬಾದ್ ತಾಲ್ಲೂಕಿಗೆ ಸಮರ್ಪಕ ವಿದ್ಯುತ್ ಪೂರೈಸುವಲ್ಲಿ ತೋರುತ್ತಿರುವ ಧೊರಣೆಯಿಂದ ರೈತರು ಸಂಪೂರ್ಣ ಕಂಗಾಲಾಗಿದ್ದಾರೆ. ಇದೇ ಧೊರಣೆ ಮುಂದುವರೆದಲ್ಲಿ ಜೆಸ್ಕಾಂ ಪ್ರತಿಭಟನೆ ನಡೆಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದರು. ಸಾಲ ನೀಡಿಕೆ ವಿಷಯದಲ್ಲಿ ಬ್ಯಾಂಕ್‌ಗಳು ದಲ್ಲಾಳಿಗಳ ಕೈಗೊಂಬೆಯಾಗಿ ವರ್ತಿಸುತ್ತಿದ್ದು, ಅದನ್ನು ತೀವ್ರವಾಗಿ ಖಂಡಿಸುವುದಾಗಿ ಪ್ರತಿಭಟನಾ ನಿರತರು ಆಕ್ರೋಶ ವ್ಯಕ್ತಪಡಿಸಿದರು.

ಹೈದರಾಬಾದ್ ಕರ್ನಾಟಕ ಸಮಗ್ರ ಅಭಿವೃದ್ಧಿಗೆ ಕಲಂ 371ತಿದ್ದುಪಡಿ ಒಂದೇ ಮಾರ್ಗ ಎಂದು ಪ್ರತಿಭಟನೆ ನೇತೃತ್ವ ವಹಿಸಿದ್ದ ಹಿರಿಯ ವಕೀಲ ದಯಾನಂದರಾವ ಬಿರಾದಾರ, ಜಂಗಮ ಅಭಿವೃದ್ಧಿ ಸಮಾಜ ರಾಜ್ಯಾಧ್ಯಕ್ಷ ರಾಚಯ್ಯಸ್ವಾಮಿ ಧನಾಶ್ರೀ, ಅಶೋಕ ವರ್ಮಾ, ಭಾವುರಾವ ಪಾಟೀಲ, ವೆಂಕಟರಾವ ಪಾಟೀಲ ನುಡಿದರು.

ಬಸವರಾಜ ಕೊಂಡಂಬಲ, ರವಿಕಾಂತ ಹೂಗಾರ, ಭರತ ಗಣೇಶ, ಮಲ್ಲಿಕಾರ್ಜುನ ಬಿರಾದಾರ, ಪರಮೇಶ್ವರ ಭಮಶೆಟ್ಟಿ, ಕಂಟೆಪ್ಪ ಹಲಮಡಗಿ, ಸಂಜೀವಕುಮಾರ ಜಂಜೀರ್ ಇನ್ನೂ ಮೊದಲಾದವರು ರ‌್ಯಾಲಿಯಲ್ಲಿ ಭಾಗವಹಿಸಿದ್ದರು. ಇದ್ದಕ್ಕೂ ಮುಂಚೆ ಪಟ್ಟಣದ ಹಳೆ ತಹಸೀಲ್ದಾರ ಕಚೇರಿಯಿಂದ ಮುಖ್ಯಬೀದಿ ಮೂಲಕ ಮಿನಿವಿಧಾನಸೌಧ ವರೆಗೆ ನೂರಾರು ಕಾರ್ಯಕರ್ತರು ರ‌್ಯಾಲಿ ನಡೆಸಿದರು.
ಸಹಜ ಸ್ಥಿತಿ: ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿ ಬಂದ್ ಕರೆ ನೀಡಿದ್ದರೂ ಹುಮನಾಬಾದ್ ನಗರದ ಅಂಗಡಿ ಮುಂಗಟ್ಟು, ಶಾಲಾ ಕಾಲೇಜು ಎಂದಿನಿಂತೆ ಕರ್ತವ್ಯ ನಿರ್ವಹಿಸಿದ್ದವು.
 
ಮುನ್ನೆಚ್ಚರಿಕೆ ಕ್ರಮವಾಗಿ ಇಲ್ಲಿನ ಕೇಂದ್ರ ಬಸ್ ನಿಲ್ದಾಣದಲ್ಲಿ ಬಸ್ ಸಂಚಾರ ಸ್ಥಗಿತಗೊಳಿಸಿದ್ದರಿಂದ ನಿಲ್ದಾಣ ಜನರಿಲ್ಲದೇ ಬಿಕೋ ಎನ್ನುತ್ತಿತ್ತು. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಸಿಬ್ಬಂದಿ ಹೊರತುಪಡಿಸಿದರೇ ಬೆರಳೆಣಿಕೆ ಪ್ರಯಾಣಿಕರು ಮಾತ್ರ ಬಸ್‌ಗಾಗಿ ಕಾದು ಕುಳಿತ ದೃಶ್ಯ ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT