ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

371ಜೆ: ಸಿಎಂ ಬಳಿಗೆ ನಿಯೋಗ

Last Updated 3 ಜೂನ್ 2013, 10:05 IST
ಅಕ್ಷರ ಗಾತ್ರ

ಬೀದರ್: ಹೈದರಾಬಾದ್ ಕರ್ನಾಟಕ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 371ನೇ ಕಲಂನ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯು ವಾರದೊಳಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಬಳಿಗೆ ನಿಯೋಗ ಕರೆದೊಯ್ಯಲು ನಿರ್ಧರಿಸಿದೆ.

ನಗರದ ಕರ್ನಾಟಕ ಸಾಹಿತ್ಯ ಸಂಘದಲ್ಲಿ ಭಾನುವಾರ ನಡೆದ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಜಿಲ್ಲೆಯ ಸಂಸದರು, ಆರೂ ಜನ ಶಾಸಕರ ನೇತೃತ್ವದಲ್ಲಿ ಸಮಿತಿ ಹಾಗೂ ಇತರೆ ಸಂಘಟನೆಗಳ ಪ್ರಮುಖರ ನಿಯೋಗ ಬೆಂಗಳೂರಿಗೆ ತೆರಳಲಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಹೈದರಾಬಾದ್ ಕರ್ನಾಟಕ ಹೋರಾಟ ಸಮಿತಿಯ ಜಿಲ್ಲಾ ಅಧ್ಯಕ್ಷ ಪಂಡಿತರಾವ್ ಚಿದ್ರಿ ಪ್ರಕಟಿಸಿದರು.

ಈ ಹಿಂದಿನ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಯ್ದೆಯನ್ನು ಶೀಘ್ರ ಜಾರಿಗೆ ತರುವ ಭರವಸೆ ನೀಡಿದ್ದರು. ಆದರೆ, ಚುನಾವಣೆ ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಅದು ನೆನೆಗುದಿಗೆ ಬಿದ್ದಿತು. ಪ್ರಸ್ತುತ ಮೆಡಿಕಲ್, ಎಂಜಿನಿಯರಿಂಗ್ ಸೇರಿದಂತೆ ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ಆರಂಭವಾಗಿದ್ದು, ಪ್ರಸಕ್ತ ಸಾಲಿನಿಂದಲೇ ಮೀಸಲಾತಿ ಜಾರಿಗೆ ತರುವಂತೆ ಮುಖ್ಯಮಂತ್ರಿಗಳ ಮೇಲೆ ಒತ್ತಡ ತರಲಾಗುವುದು ಎಂದು ಹೇಳಿದರು.

ನೆರೆಯ ಆಂಧ್ರಪ್ರದೇಶದ ತೆಲಂಗಾಣದಲ್ಲಿ 371 ಕಲಂ ಜಾರಿಯಲ್ಲಿದ್ದರೂ ಅಲ್ಲಿನವರಿಗೆ ತೃಪ್ತಿ ಇಲ್ಲ. ಆದ್ದರಿಂದ ಇಲ್ಲಿ ಹಾಗಾಗಬಾರದು. ಮುಖ್ಯಮಂತ್ರಿಗಳು ಸಮಿತಿಯ ಸಭೆ ಕರೆದು ಸಲಹೆ, ಸೂಚನೆ ಪಡೆಯಬೇಕು. ಬಳಿಕ ಅನುಷ್ಠಾನಕ್ಕೆ ತರಬೇಕು ಎಂದು ಒತ್ತಾಯಿಸಲಾಗುವುದು ಎಂದರು. 

ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹಿಂದೆ ಈ ಭಾಗಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಲು ನಡೆದ ಹೋರಾಟದಲ್ಲಿ ಸ್ವತಃ ಭಾಗಿಯಾಗಿದ್ದರು. ಹೀಗಾಗಿ ಕಾಯ್ದೆ ಅನುಷ್ಠಾನದ ಬಗ್ಗೆ ಆಸಕ್ತಿ ತೋರುತ್ತಾರೆ ಎಂದು ಈ ಸಂದರ್ಭದಲ್ಲಿ ಮಾತನಾಡಿದ ಪ್ರಮುಖರು ವಿಶ್ವಾಸ ವ್ಯಕ್ತಪಡಿಸಿದರು.

ಈ ಭಾಗದ ಜನರಿಗೆ ಮೀಸಲಾತಿ ಹೈದರಾಬಾದ್ ಕರ್ನಾಟಕ ಭಾಗಕ್ಕಷ್ಟೇ ಸೀಮಿತಗೊಳಿಸಬಾರದು. ರಾಜ್ಯ ಮಟ್ಟದ ನಿಗಮ, ಮಂಡಳಿ, ಪ್ರಾಧಿಕಾರ, ಕರ್ನಾಟಕ ಲೋಕಸೇವಾ ಆಯೋಗ, ರಾಜ್ಯೋತ್ಸವ ಪ್ರಶಸ್ತಿಗಳಲ್ಲಿಯೂ ಮೀಸಲು ಒದಗಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಸಮಿತಿಯ ಜಿಲ್ಲಾ ಗೌರವಾಧ್ಯಕ್ಷ ಪ್ರೊ. ದೇವೇಂದ್ರ ಕಮಲ್, ಉಪಾಧ್ಯಕ್ಷ ಶಂಕರರಾವ್ ಹೊನ್ನಾ, ಪ್ರಧಾನ ಕಾರ್ಯದರ್ಶಿ ಸಂಗಪ್ಪ ಭಾಲ್ಕೆ ಉಪಸ್ಥಿತರಿದ್ದರು. ಸಮಿತಿ ಪದಾಧಿಕಾರಿಗಳು, ಸದಸ್ಯರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT