ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

3ನೇ ಯುಕೆಸಿಎ ಕಪ್ ಚೆಸ್ ಟೂರ್ನಿ: ರತ್ನಾಕರನ್‌ಗೆ ಚಾಂಪಿಯನ್ ಪಟ್ಟ

Last Updated 6 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಮಂಗಳೂರು: ದಕ್ಷಿಣ ರೈಲ್ವೆ ಉದ್ಯೋಗಿ ಇಂಟರ್‌ನ್ಯಾಷನಲ್ ಮಾಸ್ಟರ್ ಕೆ.ರತ್ನಾಕರನ್ ಮೂರನೇ ಯುಕೆಸಿಎ ಕಪ್ ಅಖಿಲ ಭಾರತ ಓಪನ್ ಫಿಡೆ ರೇಟೆಡ್ ಚೆಸ್ ಟೂರ್ನಿಯಲ್ಲಿ ಅರ್ಹವಾಗಿ ಚಾಂಪಿಯನ್ ಮುಕುಟ ಧರಿಸಿದರು.

ಶುಕ್ರವಾರ ಎಂಟನೇ ಸುತ್ತಿನ ಕೊನೆಗೆ ಒಟ್ಟು ಏಳು ಮಂದಿ ಪ್ರಶಸ್ತಿ ಪೈಪೋಟಿಯಲ್ಲಿದ್ದರೂ, ಶನಿವಾರ ಬೆಳಿಗ್ಗೆ ಇವರಲ್ಲಿ ರತ್ನಾಕರನ್ ಮಾತ್ರ ಗೆಲುವು ಸಾಧಿಸಿದ್ದರಿಂದ ಒಂಟಿಯಾಗಿ ಏಳೂವರೆ ಪಾಯಿಂಟ್ಸ್ ಸಂಗ್ರಹಿಸಿ ವಿಜೇತರಾದರು.

ಕೋಯಿಕ್ಕೋಡ್‌ನಲ್ಲಿ ಮುಖ್ಯ ಟಿಕೆಟ್ ಎಕ್ಸಾಮಿನರ್ ಆಗಿರುವ ರತ್ನಾಕರನ್, ಕೊಡಿಯಾಲ್‌ಬೈಲ್‌ನ ಸುಬ್ರಹ್ಮಣ್ಯ ಸಭಾದಲ್ಲಿ ನಡೆದ ಈ ಟೂರ್ನಿಯ ಅಂತಿಮ (9ನೇ) ಸುತ್ತಿನ 3ನೇ ಬೋರ್ಡ್‌ನಲ್ಲಿ ಆಂಧ್ರಪ್ರದೇಶದ ಪಿ.ಪ್ರವೀಣ್ ಪ್ರಸಾದ್ (6.5) ವಿರುದ್ಧ 69 ನಡೆಗಳಲ್ಲಿ ಗೆಲುವು ಸಾಧಿಸಿದರು. ಅರ್ಧ ಗಂಟೆ ನಂತರ ಎರಡನೇ ಬೋರ್ಡ್‌ನಲ್ಲಿ ನೈರುತ್ಯ ರೈಲ್ವೆಯ ಐಎಂ ಎಂ.ಎಸ್.ತೇಜ್ ಕುಮಾರ್ (7) ಮತ್ತು ತಮಿಳುನಾಡಿನ ಎಂ.ಕುನಾಲ್ (7) 52 ನಡೆಗಳ ನಂತರ `ಡ್ರಾ~ಕ್ಕೆ ಸಹಿಹಾಕಿದಾಗ 31 ವರ್ಷದ ರತ್ನಾಕರನ್ ಪ್ರಶಸ್ತಿ ಹಾದಿ ಸುಗಮವಾಯಿತು.

ಮೊದಲ ಬೋರ್ಡ್‌ನಲ್ಲಿ ತಮಿಳುನಾಡಿನ ಆಟಗಾರರಾದ ಐಎಂ ಶ್ಯಾಮ್ ನಿಖಿಲ್ (7) ಮತ್ತು ಐಎಂ ಎಸ್.ನಿತಿನ್ (7) ಕೇವಲ 28 ನಡೆಗಳ ನಂತರ `ಕದನ ವಿರಾಮ~ಕ್ಕೆ ಸಹಿ ಮಾಡಿದ್ದರು. ಶುಕ್ರವಾರ ಮುನ್ನಡೆ ಹಂಚಿಕೊಂಡಿದ್ದ ಕೊಡಗಿನ ಎ.ಆಗಸ್ಟಿನ್ (6.5), ನೈರುತ್ಯ ರೈಲ್ವೆಯ ಐಎಂ ಹಿಮಾಂಶು ಶರ್ಮ (7) ಅವರಿಗೆ 37 ನಡೆಗಳ ನಂತರ ಶರಣಾಗಬೇಕಾಯಿತು.

ಎಸ್.ನಿತಿನ್, ಕುನಾಲ್ ಎಂ., ತೇಜ್ ಕುಮಾರ್, ಹಿಮಾಂಶು ಶರ್ಮ, ದಿನೇಶ್ ಕುಮಾರ್ ಶರ್ಮ, ಅಗ್ರ ಶ್ರೇಯಾಂಕದ ಶ್ಯಾಮ್ ನಿಖಿಲ್ ಮತ್ತು ಗೋವಾದ ರಿತ್ವಿಜ್ ಪರಾಬ್ ಕ್ರಮವಾಗಿ ಎರಡರಿಂದ ಎಂಟರವರೆಗಿನ ಸ್ಥಾನ ಪಡೆದರು. ಇವರು ತಲಾ ಏಳು ಅಂಕ ಸಂಗ್ರಹಿಸಿದ್ದು, ಬುಕೋಲ್ಸ್ (ಟೈಬ್ರೇಕರ್) ಆಧಾರದಲ್ಲಿ ಈ ಸ್ಥಾನಗಳ ನಿರ್ಧಾರವಾಯಿತು.

9ನೇ ಸುತ್ತಿನ ಇತರ ಪಂದ್ಯಗಳಲ್ಲಿ ದಿನೇಶ್ ಕುಮಾರ್ ಶರ್ಮ, ಕರ್ನಾಟಕದ ಕೆ.ಎಸ್.ರಘುನಂದನ್ (6) ವಿರುದ್ಧ; ರಿತ್ವಿಜ್ ಪರಾಬ್, ಮಹಾರಾಷ್ಟ್ರದ ಅನಿರುದ್ಧ ದೇಶಪಾಂಡೆ (6) ವಿರುದ್ಧ; ತಮಿಳುನಾಡಿನ ಸುರೇಂದ್ರನ್ ಎನ್. (6.5), ಕರ್ನಾಟಕದ ಗವಿಸಿದ್ಧಯ್ಯ (5.5) ವಿರುದ್ಧ ಜಯ ಗಳಿಸಿದರು.

ಯುನೈಟೆಡ್ ಕರ್ನಾಟಕ ಚೆಸ್ ಸಂಸ್ಥೆ ಆಶ್ರಯದ ನಡೆದ ಐದು ದಿನಗಳ ಟೂರ್ನಿಯಲ್ಲಿ ಜಯ ಗಳಿಸಿದ್ದಕ್ಕಾಗಿ 30 ಸಾವಿರ ರೂಪಾಯಿ ಬಹುಮಾನ ಪಡೆದ ರತ್ನಾಕರನ್, `ಟೂರ್ನಿ ಪ್ರಬಲ ಆಟಗಾರರನ್ನು ಹೊಂದಿಲ್ಲದಿದ್ದರೂ, ಕಠಿಣ ಪೈಪೋಟಿ ಹೊಂದಿತ್ತು~ ಎಂದು ಪ್ರತಿಕ್ರಿಯಿಸಿದರು. ಕಳೆದ ವರ್ಷ ಕೋಯಿಕ್ಕೋಡ್‌ನಲ್ಲಿ ಸಿಸಿಸಿ (ಕಲ್ಲಿಕೋಟೆ ಚೆಸ್ ಕ್ಲಬ್) ಫಿಡೆ ರೇಟೆಡ್ ಟೂರ್ನಿಯಲ್ಲಿ ವಿಜೇತರಾಗಿದ್ದ ಅವರು, ಈ ವರ್ಷ ಕೆನ್‌ಬೆರಾ (ಆಸ್ಟ್ರೇಲಿಯ) ಓಪನ್ ಟೂರ್ನಿಯಲ್ಲಿ ನಾಲ್ಕನೇ ಸ್ಥಾನ ಗಳಿಸಿದ್ದರು. ನಿತಿನ್, ಕುನಾಲ್ ಮತ್ತು ತೇಜ್ ಕುಮಾರ್ ಕ್ರಮವಾಗಿ 20 ಸಾವಿರ, 17 ಸಾವಿರ ಮತ್ತು 15 ಸಾವಿರ ರೂಪಾಯಿ ನಗದು ಬಹುಮಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT