ಶುಕ್ರವಾರ, ಮೇ 14, 2021
32 °C

4ಜಿ ಸೇವೆ ಇಂದು ಆರಂಭ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ/ಐಎಎನ್‌ಎಸ್): ದೇಶದ ದೂರಸಂಪರ್ಕ ಕ್ಷೇತ್ರ ಇನ್ನೂ ಎರಡು (2ಜಿ) ಮತ್ತು ಮೂರನೇ (3ಜಿ) ತಲೆಮಾರಿನ ತರಂಗಾಂತರ ಸೇವೆಯ ಹಂಚಿಕೆಯಿಂದ ಉದ್ಭವಿಸಿದ ವಿವಾದದಲ್ಲಿಯೇ ಮುಳುಗಿರುವಾಗ, ಇನ್ನೊಂದೆಡೆ ನಾಲ್ಕನೇ ತಲೆಮಾರಿನ(4ಜಿ) ತರಂಗಾಂತರ ಸೇವೆಯನ್ನು ಬರಮಾಡಿಕೊಳ್ಳಲು ಪೂರ್ವದ ಕರಾವಳಿ ನಗರ ಸಜ್ಜಾಗಿದೆ. ಆ ಮೂಲಕ 3ಜಿಗಿಂತ ಐದು ಪಟ್ಟು ವೇಗದ ದೂರಸಂಪರ್ಕ  ಸೇವೆ ಒದಗಿಸಿದ ಭಾರತದ ಮೊದಲ ನಗರ ಎನಿಸಿಕೊಳ್ಳಲಿದೆ.ದೇಶದ ಮುಂಚೂಣಿ ದೂರಸಂಪರ್ಕ ಸಂಸ್ಥೆಗಳಲ್ಲೊಂದಾದ ಭಾರ್ತಿ ಏರ್‌ಟೆಲ್ 4ಜಿ ತರಂಗಾಂತರ ದೂರಸಂಪರ್ಕ ನಿಸ್ತಂತು (ಬ್ರಾಡ್‌ಬ್ಯಾಂಡ್ ವೈರ್‌ಲೆಸ್ ಅಕ್ಸೆಸ್-ಬಿಡಬ್ಲ್ಯುಎ) ಸೇವೆಯನ್ನು ಕೋಲ್ಕತ್ತಾದಲ್ಲಿ ಆರಂಭಿಸಲು ಎಲ್ಲ ಸಿದ್ಧತೆ ಮಾಡಿಕೊಂಡಿದೆ. ದೇಶದಲ್ಲಿ ಮೊದಲ 4ಜಿ ಸೇವೆ ಆರಂಭಿಸಿದ ಕಂಪೆನಿ ಎಂಬ ಖ್ಯಾತಿಗೆ ಏರ್‌ಟೆಲ್ ಪಾತ್ರವಾಗಲಿದೆ.`ನೂತನ 4ಜಿ ಸೇವೆಗೆ ಮಂಗಳವಾರ ಚಾಲನೆ ನೀಡಲಾಗುತ್ತಿದ್ದು, ದೂರಸಂಪರ್ಕ ಖಾತೆ ಸಚಿವ ಕಪಿಲ್ ಸಿಬಲ್ ಅವರಿಗೆ ಆಹ್ವಾನ ನೀಡಲಾಗಿದೆ. ಅವರು ಸೇವೆಗೆ ಚಾಲನೆ ನೀಡಲಿದ್ದಾರೆ~ ಎಂದು ಭಾರ್ತಿ ಏರ್‌ಟೆಲ್ ಮೂಲಗಳು ಸುದ್ದಿಸಂಸ್ಥೆಗೆ ಸೋಮವಾರ ತಿಳಿಸಿವೆ. ಮುಂಬರುವ ದಿನಗಳಲ್ಲಿ ಏರ್‌ಟೆಲ್‌ನ 4ಜಿ ಸೇವೆ ಕರ್ನಾಟಕದಲ್ಲಿಯೂ ಚಾಲನೆ ಪಡೆಯಲಿದೆ.4ಜಿ ಸೇವೆಯಿಂದ ದೂರಸಂಪರ್ಕ ಸೇವೆ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ. ಸಂಚಾರದಲ್ಲಿದ್ದಾಗ ಸಹ ಪ್ರತಿ ಸೆಕೆಂಡ್‌ಗೆ 100 ಎಂಬಿ (ಮೆಗಾಬೈಟ್) ದತ್ತಾಂಶವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ. ನಾಲ್ಕನೇ ತಲೆಮಾರಿನ ಈ ತರಂಗಾಂತರ ಸೇವೆಯ ಮೂಲಕ ಡೌನ್‌ಲೋಡ್ ವೇಗ ಸೆಕೆಂಡ್‌ಗೆ 1 ಜಿಬಿ (ಗಿಗಾಬೈಟ್)ವರೆಗೂ ಮುಟ್ಟಲಿದೆ. ಅಲ್ಲದೆ, ಹೈಡೆಫನಿಷನ್ ಮೊಬೈಲ್ ಟಿವಿ ವೀಕ್ಷಣೆ ಮತ್ತು ವಿಡಿಯೋ ಕಾನ್ಫರೆನ್ಸ್ ಸಾಧ್ಯವಾಗಲಿದೆ.ಕರ್ನಾಟಕ ಸೇರಿದಂತೆ 4 ವೃತ್ತಗಳಲ್ಲಿ 4ಜಿ ಸೇವೆ ಆರಂಭಿಸಲು ಪರವಾನಗಿಗಾಗಿ ಕಂಪನಿ 3,314.36 ಕೋಟಿ ರೂಪಾಯಿ ಶುಲ್ಕ ಪಾವತಿಸಿದೆ. 4ಜಿ ಸೇವೆಯ ಯೋಜನೆ, ವಿನ್ಯಾಸ, ಸಂಪರ್ಕ ಜಾಲ ನಿರ್ಮಾಣ, ಪರಿಕರ ಪೂರೈಕೆಗಾಗಿ ಕೋಲ್ಕತ್ತಾ ವೃತ್ತಕ್ಕೆ ಚೀನಾದ ದೂರಸಂಪರ್ಕ ಪರಿಕರ ತಯಾರಿಕಾ ಸಂಸ್ಥೆ ಜಡ್‌ಟಿಇ ಮತ್ತು ಮಹಾರಾಷ್ಟ್ರಕ್ಕೆ ನೋಕಿಯಾ ಜತೆ ಒಪ್ಪಂದ ಮಾಡಿಕೊಂಡಿದೆ ಎಂದು ಏರ್‌ಟೆಲ್ ಮೂಲಗಳು ತಿಳಿಸಿವೆ.4ಜಿ ಸೇವೆ ಪರವಾನಗಿಗಾಗಿ 2010ರಲ್ಲಿ ನಡೆದ ಹರಾಜಿನಲ್ಲಿ ಒಟ್ಟು 38,500 ಕೋಟಿ ರೂಪಾಯಿ ಆದಾಯ ಸಂಗ್ರಹವಾಗಿದ್ದು, ದೇಶದ ಖಜಾನೆ ಸೇರಿದೆ. ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿ. (ಬಿಎಸ್‌ಎನ್  ಎಲ್) ಮತ್ತು ಎಂಟಿಎನ್‌ಎಲ್ ಸಹ ತಮ್ಮ ವ್ಯಾಪ್ತಿಯ ವೃತ್ತಗಳಲ್ಲಿ 4ಜಿ ಸೇವೆ ಒದಗಿಸಲು ಗರಿಷ್ಠ ಶುಲ್ಕ ಪಾವತಿಸಿ ಬಿಡಬ್ಲ್ಯುಎ ತರಂಗಾಂತರ ಪರವಾನಗಿ ಪಡೆದುಕೊಂಡಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.