4 ಇಎಸ್‌ಐ ಆಸ್ಪತ್ರೆ ಆಧುನೀಕರಣ: ಖರ್ಗೆ

7

4 ಇಎಸ್‌ಐ ಆಸ್ಪತ್ರೆ ಆಧುನೀಕರಣ: ಖರ್ಗೆ

Published:
Updated:

25 ಕೋಟಿ ವೆಚ್ಚದಲ್ಲಿ ಹುಬ್ಬಳ್ಳಿ ಆಸ್ಪತ್ರೆ ನವೀಕರಣಕ್ಕೆ ಚಾಲನೆಹುಬ್ಬಳ್ಳಿ: ರಾಜ್ಯದ ನಾಲ್ಕು ಇಎಸ್‌ಐ ಆಸ್ಪತ್ರೆಗಳನ್ನು ತಲಾ 25 ಕೋಟಿ ರೂಪಾಯಿ ವೆಚ್ಚದಲ್ಲಿ ಆಧುನೀಕರಣ ಮಾಡಲಾಗುವುದು ಎಂದು ಕೇಂದ್ರದ ಕಾರ್ಮಿಕ ಹಾಗೂ ಉದ್ಯೋಗ ಖಾತೆ ಸಚಿವ ಮಲ್ಲಿಕಾರ್ಜುನ ಖರ್ಗೆ ತಿಳಿಸಿದರು.ಭಾನುವಾರ ಇಲ್ಲಿನ ಅರವಿಂದ ನಗರದಲ್ಲಿರುವ 50 ಹಾಸಿಗೆಗಳ ಇಎಸ್‌ಐ  ಅಸ್ಪತ್ರೆಯನ್ನು 100 ಹಾಸಿಗೆಗಳ ಆಧುನಿಕ ಆಸ್ಪತೆಯನ್ನಾಗಿ   ಮೇಲ್ದರ್ಜೆಗೇರಿಸುವ 25 ಕೋಟಿ ರೂಪಾಯಿ ವೆಚ್ಚದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.ಹುಬ್ಬಳ್ಳಿ, ದಾಂಡೇಲಿ, ದಾವಣಗೆರೆ ಹಾಗೂ ಮೈಸೂರುಗಳಲ್ಲಿರುವ ಇಎಸ್‌ಐ ಆಸ್ಪತ್ರೆಗಳನ್ನು ಆಧುನೀಕರಣಗೊಳಿಸಲಾಗುತ್ತಿದೆ. ಈ ಆಸ್ಪತ್ರೆಗಳಲ್ಲಿ ಹಾಸಿಗೆಗಳ ಸಂಖ್ಯೆಯನ್ನು 50ರಿಂದ 100ಕ್ಕೆ ಏರಿಸಲಾಗುತ್ತಿದೆ ಎಂದರು.ಕೇಂದ್ರ ಕಾರ್ಮಿಕ ಇಲಾಖೆಯಿಂದ ರಾಜ್ಯದಲ್ಲಿ ಸುಮಾರು ರೂ. 2 ಸಾವಿರ ಕೋಟಿ ಮೊತ್ತದ ವಿವಿಧ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ. ಈ ಹಿಂದೆಂದೂ ಇಷ್ಟೊಂದು ಮೊತ್ತದ ಯೋಜನೆಗಳನ್ನು ರಾಜ್ಯದಲ್ಲಿ ಈ ಇಲಾಖೆಯಿಂದ ಕೈಗೊಳ್ಳಲಾಗಿರಲಿಲ್ಲ ಎಂದರು.ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯಲ್ಲಿ 613 ಕೋಟಿ ರೂಪಾಯಿಯಷ್ಟು ಹಣ ರಾಜ್ಯ ಸರ್ಕಾರದ ಬಳಿ ಉಳಿದುಕೊಂಡಿದೆ. ಈ ಹಣವನ್ನು ಬಳಸಿಕೊಂಡು ಹಿಂದುಳಿದ ಪ್ರದೇಶಗಳಲ್ಲಿ ಐಟಿಐ ತೆರೆಯಬೇಕೆಂದು ಸಲಹೆ ನೀಡಿದ್ದೇನೆ. ರಾಜ್ಯ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಂಡರೆ ಅಗತ್ಯ ಅನುಮತಿ ಕೊಡಿಸುತ್ತೇನೆ ಎಂದು ಖರ್ಗೆ ಹೇಳಿದರು.ಇಎಸ್‌ಐ ಆಸ್ಪತ್ರೆಗಳ ನಿರ್ವಹಣೆ, ಕಟ್ಟಡ ಹಾಗೂ ಸಿಬ್ಬಂದಿ ಸಂಬಳಕ್ಕಾಗಿ ಶೇ. 87.5 ರಷ್ಟು ಹಣವನ್ನು ಕೇಂದ್ರ ಸರ್ಕಾರ ಭರಿಸುತ್ತದೆ. ರಾಜ್ಯ ಸರ್ಕಾರವು ತನ್ನ ಪಾಲಿನ ಶೇ. 12.5 ರಷ್ಟು ಹಣ ನೀಡುತ್ತದೆ. ಕೇಂದ್ರ ಸರ್ಕಾರ ಹೆಚ್ಚಿನ ಹಣ ಒದಗಿಸಿದರೂ ಆಸ್ಪತ್ರೆಯ ನಿರ್ವಹಣೆ ಹಾಗೂ ಸಿಬ್ಬಂದಿ ನೇಮಕದ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿರುತ್ತದೆ. ಇಎಸ್‌ಐ ಆಸ್ಪತ್ರೆಗಳಲ್ಲಿ ವೈದ್ಯರ, ವಿಶೇಷವಾಗಿ ತಜ್ಞ ವೈದ್ಯರ ಕೊರತೆ ಇದೆ. ತಕ್ಷಣವೇ ವೈದ್ಯರ ನೇಮಕಕ್ಕೆ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು. ಸಾಮಾನ್ಯ ನೇಮಕಾತಿ ಮೂಲಕ ವೈದ್ಯರನ್ನು ಒದಗಿಸದೇ, ಇಎಸ್‌ಐ ಆಸ್ಪತ್ರೆಗಳಿಗೆ ಪ್ರತ್ಯೇಕವಾಗಿ ನೇಮಕ ಮಾಡಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.ಮುಖ್ಯ ಅತಿಥಿಗಳಾಗಿದ್ದ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಜಗದೀಶ ಶೆಟ್ಟರ, ಮಲ್ಲಿಕಾರ್ಜುನ ಖರ್ಗೆ ತಮ್ಮ ಖಾತೆಯ ಮೂಲಕ ಕರ್ನಾಟಕಕ್ಕೆ ಹೆಚ್ಚಿನ ನೆರವನ್ನು ಒಗಿಸುತ್ತಿದ್ದಾರೆ ಎಂದು ಶ್ಲಾಘಿಸಿದರು.ಇಎಸ್‌ಐ ಆಸ್ಪತ್ರೆಗಳಲ್ಲಿ ಉತ್ತಮ ಕಟ್ಟಡ, ಯಂತ್ರೋಪಕರಣ ಮುಂತಾದ ಆಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದೆ. ಆದರೆ, ವೈದ್ಯರು ಹಾಗೂ ಔಷಧ ಕೊರತೆ ಕಂಡುಬರುತ್ತಿದೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಹೇಳಿದರು.ಅಧ್ಯಕ್ಷತೆ ವಹಿಸಿದ್ದ ರಾಜ್ಯದ ಕಾರ್ಮಿಕ ಹಾಗೂ ರೇಷ್ಮೆ ಖಾತೆ ಸಚಿವ  ಬಿ.ಎನ್. ಬಚ್ಚೇಗೌಡ, ‘ರಾಜ್ಯದಲ್ಲಿ 13 ಸಾವಿರ ಕೈಗಾರಿಕೆಗಳಿದ್ದು, 15.55 ಲಕ್ಷ ರಾಜ್ಯ ವಿಮಾ ಕಾರ್ಮಿಕರ ಕುಟುಂಬಗಳ 78 ಲಕ್ಷ ಸದಸ್ಯರಿಗೆ ರಾಜ್ಯದಲ್ಲಿರುವ 8 ಇಎಸ್‌ಐ ಆಸ್ಪತ್ರೆ ಮತ್ತು 100 ಆರೋಗ್ಯ ಕೇಂದ್ರಗಳ ಮೂಲಕ ಸೇವೆ ಒದಗಿಸಲಾಗುತ್ತಿದೆ’ ಎಂದರು.ಹುಬ್ಬಳ್ಳಿ ಇಎಸ್‌ಐ ಅಸ್ಪತ್ರೆಯಲ್ಲಿ 27 ವೈದ್ಯರ ಅಗತ್ಯವಿದ್ದು, ಈಗ 12 ಮಂದಿ ಮಾತ್ರ ಕಾರ್ಯನಿರ್ವಹಿಸುತ್ತಿದ್ದಾರೆ. ಹೊಸದಾಗಿ 8 ತಜ್ಞ ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇನ್ನೂ 7 ವೈದ್ಯರನ್ನು ನೇಮಕ ಮಾಡಿಕೊಳ್ಳಬೇಕಾಗಿದೆ ಎಂದರು.ಶಾಸಕ ಹಾಗೂ ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಮೇಯರ್ ವೆಂಕಟೇಶ ಮೇಸ್ತ್ರಿ, ಉಪಮೇಯರ್ ಭಾರತಿ ಪಾಟೀಲ, ಶಾಸಕರಾದ ವೀರಭದರಪ್ಪ ಹಾಲಹರವಿ, ಮೋಹನ ಲಿಂಬಿಕಾಯಿ, ಇಎಸ್‌ಐ ನಿಗಮದ ಸದಸ್ಯ ಯು.ಬಿ.ವೆಂಕಟೇಶ, ಪಾಲಿಕೆ ಸದಸ್ಯರಾದ ರಾಘವೇಂದ್ರ ರಾಮದುರ್ಗ, ಲಕ್ಷ್ಮಣ ಕಲಾಲ ಮೊದಲಾದವರು ಉಪಸ್ಥಿತರಿದ್ದರು. ಇಎಸ್‌ಐ ನಿಗಮದ ಮಹಾನಿರ್ದೇಶಕ ಡಾ. ಸಿ.ಎಸ್. ಕೇದಾರ ಸ್ವಾಗತಿಸಿದರು.ರಾಜ್ಯ ಸರ್ಕಾರದ ವಿರುದ್ಧ ಆರೋಪ


ಹುಬ್ಬಳ್ಳಿ: ಕೇಂದ್ರ ಸರ್ಕಾರ ಅನೇಕ ಯೋಜನೆಗಳನ್ನು ರಾಜ್ಯದಲ್ಲಿ ಜಾರಿಗೊಳಿಸಲು ಸಿದ್ಧವಾಗಿದ್ದರೂ ಅದಕ್ಕೆ ಅಗತ್ಯವಿರುವ ಜಮೀನನ್ನು ಒದಗಿಸಲು ರಾಜ್ಯ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಎಂದು ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ ಖರ್ಗೆ ಆಪಾದಿಸಿದರು.ಭಾನುವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಗುಲ್ಬರ್ಗ ಹಾಗೂ ಬೆಂಗಳೂರಿನಲ್ಲಿ ಕೌಶಲ್ಯಾಭಿವೃದ್ಧಿ ಸಂಸ್ಥೆಗಳ ಸ್ಥಾಪನೆಗೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಿದೆ.ಈ ಸಂಸ್ಥೆಗಳ ಸ್ಥಾಪನೆಗಾಗಿ ತಲಾ 100 ಕೋಟಿ ರೂಪಾಯಿ ಹಣವನ್ನೂ ಮೀಸಲಿಡಲಾಗಿದೆ. ಆದರೆ, ಇವುಗಳ ಸ್ಥಾಪನೆಗೆ ಅಗತ್ಯವಿರುವ ತಲಾ 20 ಎಕರೆ ಜಮೀನನ್ನು ಇದುವರೆಗೂ ರಾಜ್ಯ ಸರ್ಕಾರ ಒದಗಿಸಿಲ್ಲ’ ಎಂದರು. ನಕ್ಸಲ್‌ಪೀಡಿತ ಪ್ರದೇಶಗಳು ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಐಟಿಐಗಳನ್ನು ಸ್ಥಾಪಿಸಲು ಉದ್ದೇಶಿಸಲಾಗಿದೆ. ಅಸಂಘಟಿತ ವಲಯದ ಕಾರ್ಮಿಕರಿಗೂ ಉಪಯೋಗವಾಗುವ ಯೋಜನೆಗಳನ್ನು ಜಾರಿಗೊಳಿಸಲು ಚಿಂತನೆ ನಡೆದಿದೆ. ಮುಂಬರುವ ಕೇಂದ್ರ ಬಜೆಟ್‌ನಲ್ಲಿ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry