ಭಾನುವಾರ, ಡಿಸೆಂಬರ್ 15, 2019
26 °C
259 ಮನೆಗಳಿಗೆ ಹಾನಿ; ಒಂದು ಸಾವು

4 ಜಿಲ್ಲೆಗಳಲ್ಲಿ ಭಾರಿ ಮಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

4 ಜಿಲ್ಲೆಗಳಲ್ಲಿ ಭಾರಿ ಮಳೆ

ಬೆಂಗಳೂರು: ಬೆಳಗಾವಿ, ಯಾದಗಿರಿ, ರಾಯಚೂರು, ಗುಲ್ಬರ್ಗ ಜಿಲ್ಲೆಗಳಲ್ಲಿ ಶನಿವಾರ ರಾತ್ರಿ ಭಾರಿ  ಮಳೆಯಾಗಿದೆ. ಮನೆಯ ಛಾವಣಿ ಕುಸಿದು ಒಬ್ಬರು ಮೃತಪಟ್ಟಿದ್ದಾರೆ. ಮನೆ ಗೋಡೆ ಕುಸಿತದ ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಗಾಯಗೊಂಡಿದ್ದಾರೆ. 259ಕ್ಕೂ ಹೆಚ್ಚು ಮನೆಗಳು ಹಾನಿಗೀಡಾಗಿವೆ.ಚಿಕ್ಕೋಡಿ (ಬೆಳಗಾವಿ ಜಿಲ್ಲೆ) ವರದಿ: ತಾಲ್ಲೂಕಿನ ಬೋರಗಾಂವ ಗ್ರಾಮದಲ್ಲಿ ಶನಿವಾರ ರಾತ್ರಿ ಮಳೆ ಮತ್ತು ಬಿರುಗಾಳಿ­ಯಿಂದ ಮನೆಯ ಮೇಲ್ಛಾವಣಿ ಕುಸಿದು­ಬಿದ್ದು ಒಬ್ಬ ಮೃತಪಟ್ಟ ಘಟನೆ ನಡೆದಿದೆ.ಮೃತನನ್ನು ಸುರೇಶ ಶಂಕರ ಬೇಡಕಿಹಾಳ (48) ಎಂದು ಗುರುತಿಸ­ಲಾಗಿದೆ. ಬಿರುಗಾಳಿಯಿಂದ 80ಕ್ಕೂ ಹೆಚ್ಚು ಮನೆಗಳಿಗೆ ಧಕ್ಕೆಯಾಗಿದ್ದು, ಸುಮಾರು ರೂ.5 ಲಕ್ಷ ಹಾನಿ­ಯಾಗಿರ­ಬಹುದು ಎಂದು ಅಂದಾಜಿಸಲಾಗಿದೆ.ಯಾದಗಿರಿ ವರದಿ: ಜಿಲ್ಲೆಯ ಶಹಾಪುರ ಹಾಗೂ ಯಾದಗಿರಿ ತಾಲ್ಲೂಕು­ಗಳಲ್ಲಿ­ಯೂ  ಭಾರಿ ಮಳೆ ಸುರಿದಿದೆ. ಜಿಲ್ಲೆ­ಯಲ್ಲಿ ಸುಮಾರು 250 ಮನೆಗಳಿಗೆ ಭಾಗಶಃ ಹಾನಿಯಾಗಿವೆ ಎಂದು ಜಿಲ್ಲಾಡಳಿತ ತಿಳಿಸಿದೆ.ಯಾದಗಿರಿ ತಾಲ್ಲೂಕಿನಲ್ಲಿ 458.5 ಮಿ.ಮೀ, ಶಹಾಪುರ ತಾಲ್ಲೂಕಿನಲ್ಲಿ 501 ಮಿ.ಮೀ. ಹಾಗೂ ಸುರಪುರ ತಾಲ್ಲೂಕಿ-­ನಲ್ಲಿ 186 ಮಿ.ಮೀ. ಮಳೆ ದಾಖ­ಲಾಗಿದೆ. ಯಾದಗಿರಿ ತಾಲ್ಲೂಕಿನ ಸೈದಾ­ಪುರದಲ್ಲಿ 138 ಮಿ.ಮೀ. ಹಾಗೂ ಶಹಾಪುರ ತಾಲ್ಲೂಕಿನ ಭೀಮರಾಯನ­ಗುಡಿಯಲ್ಲಿ 121 ಮಿ.ಮೀ. ಮಳೆ ಸುರಿದಿದೆ.ಸೈದಾಪುರ ಗ್ರಾಮದಲ್ಲಿ 3 ಕುರಿ ಸತ್ತಿದ್ದು, ಮೂರು ಕುರಿಗಳು ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ. ಯಾದಗಿರಿ ತಾಲ್ಲೂಕಿನಲ್ಲಿ 150 ಮನೆಗಳು ಭಾಗಶಃ ಹಾನಿಯಾಗಿವೆ. ಶಹಾಪುರ ಪಟ್ಟಣದಲ್ಲಿ ನಾಟಕ ಕಂಪೆನಿಯೊಂದಕ್ಕೆ ನೀರು ಹೊಕ್ಕಿದ್ದು, ಸುಮಾರು ₨ 10 ಲಕ್ಷ ಮೌಲ್ಯದ ವಸ್ತುಗಳು ಹಾನಿಯಾಗಿವೆ.ಶಹಾಪುರ ತಾಲ್ಲೂಕಿನ ವಡಗೇರಾ ಬಳಿ ಹಳ್ಳ ಉಕ್ಕಿ ಹರಿದಿದ್ದು, ವಡಗೇರಾ–ಯಾದಗಿರಿ ರಸ್ತೆ ಸಂಚಾರ ಸ್ಥಗಿತ­ಗೊಂಡಿತ್ತು. ಇದೇ ತಾಲ್ಲೂಕಿನ ಐಕೂರು ಬಳಿ ಸೇತುವೆ ಶಿಥಿಲಗೊಂಡಿದ್ದರಿಂದ ಕೆಲಕಾಲ ರಸ್ತೆ ಸಂಚಾರ ಸ್ಥಗಿತವಾಗಿತ್ತು. ಶಹಾಪುರ ನಗರದ ಹತ್ತಿರದ ಹಳ್ಳ­ವೂ ತುಂಬಿ ಹರಿದಿದ್ದು, ಇಲ್ಲಿಯ ಡಾನ್‌ ಬಾಸ್ಕೋ ಶಾಲೆಯಲ್ಲಿ ನೀರು ನುಗ್ಗಿದೆ. ನಾಯ್ಕಲ್‌ ಹಾಗೂ ಗುಂಡಳ್ಳಿ ಬಳಿ ಕೆರೆಗಳು ತುಂಬಿದ್ದು, ಹೊಲಗಳಿಗೆ ನೀರು ನುಗ್ಗಿದೆ.ರಾಯಚೂರು ವರದಿ:  ಜಿಲ್ಲೆಯಲ್ಲಿ ರಾಯಚೂರು, ಮಾನ್ವಿ, ಸಿಂಧನೂರು, ದೇವದುರ್ಗ ತಾಲ್ಲೂಕುಗಳಲ್ಲಿ ಶನಿವಾರ ರಾತ್ರಿಯಿಂದ ಭಾನುವಾರ ಬೆಳಗಿನವರೆಗೆ ಭಾರಿ ಮಳೆ ಆಗಿದೆ.ರಾಯಚೂರಿನಲ್ಲಿ 2, ಮಾನ್ವಿ ತಾಲ್ಲೂಕಿನ ಕವಿತಾಳದಲ್ಲಿ 7 ಮನೆಗಳು ಕುಸಿದಿವೆ. ರಾಯಚೂರಿನ ಜಲಾಲನಗರ ಬಡಾವಣೆಯ ಭೀಮಯ್ಯ ಎಂಬು­ವವರು ಮನೆ ಗೋಡೆ ಕುಸಿತದಲ್ಲಿ ಗಾಯಗೊಂಡಿದ್ದು, ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ  ಪಡೆಯುತ್ತಿದ್ದಾರೆ. ಇದೇ ಬಡಾ­ವಣೆಯ ನಿವಾಸಿ ಪದ್ಮಾ ಎಂಬುವವರ ಮನೆ ಗೋಡೆಯೂ ಕುಸಿದಿದ್ದು ಅವರೂ ಗಾಯಗೊಂಡಿದ್ದಾರೆ.ರಾಯಚೂರಿನ ನೀರಬಾವಿಕುಂಟ, ಸಿಯಾತಲಾಬ್‌, ಜಲಾಲನಗರ ಬಡಾ­ವಣೆ  ಜಲಾವೃತಗೊಂಡಿದ್ದವು. ಹೆಗ್ಗಸನ­ಹಳ್ಳಿ ಗ್ರಾಮಕ್ಕೆ ಹಳ್ಳದ ನೀರು ನುಗ್ಗಿತ್ತು. ಜನ ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ತಡೆ ಗೋಡೆ ನಿರ್ಮಿಸಲು ಆಗ್ರಹಿಸಿದರು. ಉಪ ವಿಭಾಗಾಧಿಕಾರಿ ಮಂಜುಶ್ರೀ, ತಹಶೀಲ್ದಾರ ಮಹಮ್ಮದ್‌ ಶಾನೂರು ಭೇಟಿ ನೀಡಿ ಗ್ರಾಮಸ್ಥರ ಮನವೊಲಿಸಿದರು.ಗುಲ್ಬರ್ಗ ವರದಿ: ಜಿಲ್ಲೆಯಲ್ಲಿ ಮುಖ್ಯ­ವಾಗಿ ಗುಲ್ಬರ್ಗ ನಗರ ಮತ್ತು ಸುತ್ತ­ಮುತ್ತ ಶನಿವಾರ ರಾತ್ರಿ ಮಳೆಯಾಗಿದೆ. ಯಾವುದೇ ಹಾನಿ ವರದಿಯಾಗಿಲ್ಲ.ಆಸ್ಪತ್ರೆಗೆ ಹಾನಿ

ರಾಯಚೂರು ಜಿಲ್ಲಾ ಆಸ್ಪತ್ರೆ ಹಳೆ ಕಟ್ಟಡದ ಗೋಡೆ ಕಳೆದ ವರ್ಷ ಮಳೆ ಬರುವ ಸಂದರ್ಭದಲ್ಲಿ ಕುಸಿದಿತ್ತು. ಭಾನುವಾರ ಬೆಳಿಗ್ಗೆ ಈ ಕಟ್ಟಡ ಮತ್ತೊಂದು ಭಾಗದ ಕೊಠಡಿಗಳ ಕಿಟಕಿ ಭಾಗದ ಮೇಲ್ಛಾವಣಿ ಕುಸಿದು ಬಿದ್ದಿದೆ.  ಹಳೆ ಕಟ್ಟಡದಲ್ಲಿನ ಕೆಲ ಕೊಠಡಿಗಳು ಶಿಥಿಲಗೊಂಡಿದ್ದು, ಮಳೆ ನೀರು ಸೋರುತ್ತಿದೆ. ಕೊಠಡಿಯಲ್ಲಿನ ರೋಗಿಗಳನ್ನು ಬೇರೆ ವಾರ್ಡ್‌ಗೆ ಸ್ಥಳಾಂತರಿಸುವ ಕಾರ್ಯದಲ್ಲಿ ಆಸ್ಪತ್ರೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ನಿರತರಾಗಿದ್ದರು.ದಾವಣಗೆರೆ ‘ರಸ್ತೆಯಲ್ಲೇ ಮುಳುಗಿದ ಬಸ್!

ದಾವಣಗೆರೆ:
ನಗರದಲ್ಲಿ ಭಾನುವಾರ ಸಂಜೆ ಒಂದೂವರೆ ಗಂಟೆ ಸುರಿದ ದಾಖಲೆ ಪ್ರಮಾಣದ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.ನಗರದ ಪಿ.ಬಿ.ರಸ್ತೆ, ಬಂಬೂ ಬಜಾರ್ ರಸ್ತೆ, ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣ ಮುಂಭಾಗ, ಜಾಲಿ ನಗರ, ಎಸ್ಪಿಎಸ್ ನಗರ, ಚೌಡೇಶ್ವರಿ ನಗರ ಸೇರಿದಂತೆ ಹಳೆಯ ದಾವಣಗೆರೆಯ ಬಹುತೇಕ ಕಡೆ ನೂರಾರು ಮನೆಗಳಿಗೆ ನೀರು ನುಗ್ಗಿ ನಿವಾಸಿಗಳು ಪರದಾಡಿದರು.ದೊಡ್ಡ ಚರಂಡಿ ಉಕ್ಕಿ ಹರಿದು ಬಂಬೂ ಬಜಾರ್ ಪ್ರದೇಶದ ರಸ್ತೆಗಳಲ್ಲಿ ಸುಮಾರು ನಾಲ್ಕು ಅಡಿ ನೀರು ತುಂಬಿತ್ತು. ಇಲ್ಲಿನ ಶಾಂತಿನಗರದ ಮುಖ್ಯರಸ್ತೆಯ ರೈಲ್ವೆ ಸೇತುವೆ ಕೆಳಗೆ ಮಳೆ ನೀರಿನಲ್ಲಿ ಕೆಎಸ್ಆರ್‌ಟಿಸಿ ಬಸ್ ಸಿಲುಕಿ ಪ್ರಯಾಣಿಕರು ಹೊರಬರಲಾರದೆ ಪರದಾಡಿದರು. ಕೆಎಸ್ಆರ್‌ಟಿಸಿ ಬಸ್‌ ನಿಲ್ದಾಣದ ಮುಂಭಾಗದ ಪಿ.ಬಿ.ರಸ್ತೆ ಕೆರೆಯಂತಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು.

ಸಂಜೆ 5ರಿಂದ 5.30ರ ವರೆಗೆ ವರುಣ ಅಬ್ಬರಿಸಿದ್ದು, ಸುಮಾರು 52.5 ಮಿ.ಮೀ. ಮಳೆಯಾಗಿದೆ. ಇದು ನಾಲ್ಕು ವರ್ಷಗಳಲ್ಲಿ ಅರ್ಧ ಗಂಟೆ ಅವಧಿಯಲ್ಲಿ ಸುರಿದ ಅತಿ ಹೆಚ್ಚಿನ ಪ್ರಮಾಣದ ಮಳೆ ಎಂದು ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಆರ್.ಜಿ.ಗೊಲ್ಲರ್ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.ಒಡೆದ ಕೆರೆ ಕೋಡಿ: ಹೆದ್ದಾರಿ–ಮನೆಗಳಿಗೆ ನುಗ್ಗಿದ ನೀರು

ನೆಲಮಂಗಲ:
ಪಟ್ಟಣದ ಅಡೇಪೇಟೆ ಹಿಂಭಾಗದ ಅಮಾನಿ ಕೆರೆ ಕೋಡಿ ಒಡೆದು ಭಾರಿ ಪ್ರಮಾಣದ ನೀರು ಸುತ್ತಲಿನ ವಿವಿಧ ಬಡಾವಣೆಗೆ ನುಗ್ಗಿದ್ದರಿಂದ ಸುಮಾರು 400 ಮನೆಗಳ ನಿವಾಸಿಗಳು ಶನಿವಾರ ರಾತ್ರಿ ಜಾಗರಣೆ ಮಾಡುವಂತಾಯಿತು.ಕಳೆದ 20 ವರ್ಷಗಳಿಂದ ತುಂಬದಿದ್ದ ಕೆರೆ ಎರಡು ದಿನಗಳಿಂದ ಸುರಿದ ಧಾರಾಕಾರ ಮಳೆಗೆ ತುಂಬಿ ಶನಿವಾರ ರಾತ್ರಿ ಕೋಡಿ ಒಡೆದಿದೆ. ತುಂಬಿದ ಕೆರೆ ನೀರು ಹರಿಯಲು ಇದ್ದ ರಾಜ ಕಾಲುವೆ ಒತ್ತುವರಿಯಾಗಿದ್ದೇ ಹೆದ್ದಾರಿ ಮತ್ತು ಮನೆಗಳಿಗೆ ನುಗ್ಗಲು ಕಾರಣವಾಗಿದೆ.

ಪ್ರತಿಕ್ರಿಯಿಸಿ (+)