4 ತಿಂಗಳ ಮಗು ಅಪಹರಣ?

7

4 ತಿಂಗಳ ಮಗು ಅಪಹರಣ?

Published:
Updated:

ಬೆಂಗಳೂರು: ಉತ್ತರಹಳ್ಳಿ ವೃತ್ತದ ಶನೇಶ್ವರ ದೇವಸ್ಥಾನದ ಬಳಿ ಬುಧವಾರ  4 ತಿಂಗಳ ಗಂಡು ಮಗುವೊಂದು ಕಣ್ಮರೆ­ಯಾಗಿದ್ದು, ದುಷ್ಕರ್ಮಿಗಳು ಮಗು­ವನ್ನು ಅಪಹರಿಸಿ­ರುವ ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಮಗುವಿನ ಪೋಷಕ­ರಾದ  ಜಿ.ಆರ್‌.­ಸುಧೀಂದ್ರ ಮತ್ತು ಜ್ಯೋತಿ ಅವರು ಸುಬ್ರಹ್ಮಣ್ಯಪುರ ಠಾಣೆಗೆ ದೂರು ಕೊಟ್ಟಿದ್ದಾರೆ.ಜ್ಯೋತಿ ಹಾಗೂ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದ ಮಗುವನ್ನು ಬೆಳಿಗ್ಗೆ 11 ಗಂಟೆ ಸುಮಾರಿಗೆ ಉತ್ತರಹಳ್ಳಿ ವೃತ್ತದಲ್ಲಿನ ಕ್ಲಿನಿಕ್‌ಗೆ ಕರೆದುಕೊಂಡು ಬಂದಿದ್ದರು. ಚಿಕಿತ್ಸೆ ನಂತರ ಮನೆಗೆ ಹಿಂದಿರುಗುವಾಗ ಮಾರ್ಗಮಧ್ಯೆ ಔಷಧ ಮಳಿಗೆಯೊಂದರ ಬಳಿ ಆಟೊ ನಿಲ್ಲಿಸಿದ ಜ್ಯೋತಿ, ಮಗು ಮತ್ತು ತಾಯಿಯನ್ನು ಆಟೊದಲ್ಲೇ ಬಿಟ್ಟು ಔಷಧ ತರಲು ಮಳಿಗೆ ಬಳಿ ಹೋಗಿದ್ದರು.ರೂ.117 ಮೊತ್ತದ ಔಷಧ ಖರೀದಿಸಿದ ಅವರು, ಅಂಗಡಿಯವನಿಗೆ ರೂ.500 ಮುಖಬೆಲೆಯ ನೋಟನ್ನು ಕೊಟ್ಟರು. ಆಗ ಆತ ಚಿಲ್ಲರೆ ಕೇಳಿದ್ದಾನೆ. ಆದರೆ, ಅವರ ಬಳಿ ಚಿಲ್ಲರೆ ಇರದಿದ್ದರಿಂದ ತಾಯಿ­ಯನ್ನು ಕೂಗಿ ಚಿಲ್ಲರೆ ಕೊಡುವಂತೆ ಕೇಳಿದ್ದಾರೆ. ಆಗ ಮೊಮ್ಮಗನನ್ನು ಸೀಟಿನ ಮೇಲೆ ಮಲಗಿಸಿ ಅವರೂ ಮಳಿಗೆ ಬಳಿ ಹೋಗಿದ್ದಾರೆ. ಆದರೆ, ಔಷಧ ತೆಗೆದುಕೊಂಡು ವಾಪಸ್‌ ಬರುವ ವೇಳೆಗೆ ಆಟೊದಲ್ಲಿ ಮಗು ಇರಲಿಲ್ಲ ಎಂದು ಆರೋಪಿಸ­ಲಾಗಿದೆ ಎಂದು ಪೊಲೀಸರು   ಮಾಹಿತಿ ನೀಡಿದರು.‘ಮಗುವಿನ ಬಗ್ಗೆ ಆಟೊ ಚಾಲಕನನ್ನು ವಿಚಾರಿಸಿದರೆ, ತಾನು ಮೊಬೈಲ್‌ನಲ್ಲಿ ಮಾತನಾಡುತ್ತಿದ್ದೆ. ಮಗು ಕಾಣೆಯಾಗಿರುವುದಕ್ಕೂ ತನಗೂ ಸಂಬಂಧವಿಲ್ಲ ಎಂದು ಹೊರಟು ಹೋದ. ಸುತ್ತಮುತ್ತಲ ಸ್ಥಳಗಳಲ್ಲಿ ಮಗುವಿಗಾಗಿ ಹುಡುಕಾಟ ನಡೆಸಿ ಸಂಜೆ ವೇಳೆಗೆ ಪತಿಗೆ ವಿಷಯ ತಿಳಿಸಿದೆ. ಮಗುವಿಗೆ ಇನ್ನೂ ನಾಮಕರಣ ಕೂಡ ಆಗಿರಲಿಲ್ಲ’ ಎಂದು ಜ್ಯೋತಿ ಹೇಳಿದರು.‘ಘಟನೆ ಸಂಬಂಧ ಸುಬ್ರಹ್ಮಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಅಲ್ಲದೇ, ವೃತ್ತದಲ್ಲಿರುವು ಸಿ.ಸಿ.ಟಿವಿ ಕ್ಯಾಮೆರಾಗಳ ಪರಿಶೀಲನಾ ಕಾರ್ಯ ನಡೆಯುತ್ತಿದೆ. ಜತೆಗೆ ಆಟೊ ಚಾಲಕನನ್ನು ಪತ್ತೆ ಮಾಡಿ ವಿಚಾರಣೆ ನಡೆಸಲಾಗುವುದು’ ಎಂದು ದಕ್ಷಿಣ ವಿಭಾಗದ ಡಿಸಿಪಿ ಎಚ್‌.ಎಸ್‌.­ರೇವಣ್ಣ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry