ಗುರುವಾರ , ನವೆಂಬರ್ 14, 2019
19 °C

4 ವಿಮಾನ ಘಟಕ ಸ್ಥಾಪನೆಗೆ ಚಿಂತನೆ

Published:
Updated:

ಬೆಂಗಳೂರು: ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್ (ಎಚ್‌ಎಎಲ್) ಮಧ್ಯಮ ಬಹೂಪಯೋಗಿ ಯುದ್ಧ ವಿಮಾನ, ಲಘು ಉಪಯೋಗಿ ಹೆಲಿಕಾಪ್ಟರ್, ಐದನೇ ತಲೆಮಾರಿನ ಯುದ್ಧ ವಿಮಾನ ಹಾಗೂ ಬಹೂಪಯೋಗಿ ಸಾರಿಗೆ ವಿಮಾನಗಳ ತಯಾರಿಕೆಗಾಗಿ ನಾಲ್ಕು ಉತ್ಪಾದನಾ ಘಟಕಗಳನ್ನು ತೆರೆಯಲು ಚಿಂತಿಸುತ್ತಿದೆ.ಮೊದಲ ಸ್ವದೇಶಿ ನಿರ್ಮಿತ ಯುದ್ಧ ವಿಮಾನ `ಮಾರುತ್~ (ಎಚ್‌ಎಫ್-24)ನ ಸುವರ್ಣ ಮಹೋತ್ಸವ ಸಮಾರಂಭದ ನಂತರ ಶುಕ್ರವಾರ ಸುದ್ದಿಗಾರರಿಗೆ ಈ ವಿಷಯ ತಿಳಿಸಿದ ಎಚ್‌ಎಎಲ್‌ನ ನಿರ್ದೇಶಕ ಎನ್.ಸಿ. ಅಗರ‌್ವಾಲ್ (ವಿನ್ಯಾಸ ಮತ್ತು ಅಭಿವೃದ್ಧಿ), ಮಧ್ಯಮ ಬಹೂಪಯೋಗಿ ಯುದ್ಧ ವಿಮಾನ ತಯಾರಿಕೆಗೆ ಹೊಸ ಸಂಕೀರ್ಣ ಸ್ಥಾಪಿಸಲು ಉದ್ದೇಶಿಸಲಾಗಿದೆ ಎಂದರು.ಈ ಉದ್ದೇಶಕ್ಕಾಗಿ ಎಚ್‌ಎಎಲ್, ವಿದೇಶಿ ನಿರ್ಮಿತ 18 ಯುದ್ಧ ವಿಮಾನಗಳನ್ನು ಖರೀದಿಸಿದರೆ, ಇನ್ನುಳಿದ 108 ವಿಮಾನಗಳನ್ನು ಸಂಸ್ಥೆಯು ತನ್ನ ಪರವಾನಗಿಯಡಿ ತಯಾರಿಸಲು ಉದ್ದೇಶಿಸಿದೆ ಎಂದು ಅವರು ಹೇಳಿದರು.ಲಘು ಉಪಯೋಗಿ ಹೆಲಿಕಾಪ್ಟರ್ ತಯಾರಿಕೆ ಘಟಕ ಸ್ಥಾಪನೆಗೆ ಎಚ್‌ಎಎಲ್ ಜಾಗ ಹುಡುಕುತ್ತಿದೆ. ಸ್ಥಳ ಗುರುತಿಸಿದ ನಂತರ ಅದರ ಅನುಮತಿಗಾಗಿ ಸರ್ಕಾರವನ್ನು ಕೋರಲಾಗುವುದು ಎಂದು ಅವರು ತಿಳಿಸಿದರು.ಐದನೇ ತಲೆಮಾರಿನ ಯುದ್ಧ ವಿಮಾನ ಹಾಗೂ ಬಹೂಪಯೋಗಿ ಸಾರಿಗೆ ವಿಮಾನ ಘಟಕಗಳನ್ನು ಪ್ರತ್ಯೇಕವಾಗಿ ಸ್ಥಾಪಿಸಲು ಉದ್ದೇಶಿಸಲಾಗಿದೆ. ಐದನೇ ತಲೆಮಾರಿನ ಯುದ್ಧ ವಿಮಾನ ಘಟಕವನ್ನು ನಾಸಿಕ್ ಹಾಗೂ ಬಹೂಪಯೋಗಿ ಸಾರಿಗೆ ವಿಮಾನ ಘಟಕವನ್ನು ಕಾನ್ಪುರದಲ್ಲಿ ಸ್ಥಾಪಿಸಲು ಚಿಂತಿಸಲಾಗುತ್ತಿದೆ ಎಂದು ಅಗರ‌್ವಾಲ್ ತಿಳಿಸಿದರು.ಐದನೇ ತಲೆಮಾರಿನ ಯುದ್ಧ ವಿಮಾನ ತಯಾರಿಕೆಗೆ ಪ್ರಾಥಮಿಕ ವಿನ್ಯಾಸ ರೂಪಿಸುವ ಕಾರ್ಯ ಪ್ರಾರಂಭವಾಗಿದ್ದು, ನಮ್ಮ ಸಿಬ್ಬಂದಿಗೆ ತರಬೇತಿ ನೀಡಲು ರಷ್ಯಾದ ತಂಡ ಬೆಂಗಳೂರಿಗೆ ಆಗಮಿಸಿದೆ. ಸುಮಾರು ಆರು ಬಿಲಿಯನ್ ಅಮೆರಿಕ ಡಾಲರ್ ಮೊತ್ತದ ಈ ಯೋಜನೆಗೆ ಭಾರತ ಹಾಗೂ ರಷ್ಯಾ ಸಮಾನವಾಗಿ ಹಣ ಹೂಡಲಿವೆ ಎಂದರು.

 

ಪ್ರತಿಕ್ರಿಯಿಸಿ (+)