ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ತಿಂಗಳಿಂದ ವೇತನವಿಲ್ಲ; ಬೇಕು 4.67 ಕೋಟಿ

Last Updated 24 ಆಗಸ್ಟ್ 2012, 5:10 IST
ಅಕ್ಷರ ಗಾತ್ರ

ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ಗೋಳು

ಧಾರವಾಡ: ಕಾಲೇಜು ಶಿಕ್ಷಣ ಇಲಾಖೆಯ ಧಾರವಾಡ ವಿಭಾಗ ವ್ಯಾಪ್ತಿಯ ಏಳು ಜಿಲ್ಲೆಗಳ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸಾವಿರಾರು ಉಪನ್ಯಾಸಕರಿಗೆ ಕಳೆದ ನಾಲ್ಕು ತಿಂಗಳಿಂದಲೂ ವೇತನ ಸಂದಾಯವಾಗದೇ ಇರುವುದರಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಈ ಸಂಬಂಧ ಇಲ್ಲಿಯ ಜಂಟಿ ನಿರ್ದೇಶಕರ ಕಚೇರಿಯಿಂದ ಹಲವು ಬಾರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಆದರೂ ಹಣ ಬಿಡುಗಡೆಯಾಗಿಲ್ಲ. ಧಾರವಾಡ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಗದಗ, ವಿಜಾಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ವ್ಯಾಪ್ತಿಯ 81 ಸರ್ಕಾರಿ ಕಾಲೇಜುಗಳಲ್ಲಿ 2163 ಅತಿಥಿ ಉಪನ್ಯಾಸಕರು ಕಲಾ, ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದ ಪಠ್ಯಗಳನ್ನು ಬೋಧನೆ ಮಾಡುತ್ತಿದ್ದಾರೆ.
 
ಅವರಿಗೆಲ್ಲ ಫೆಬ್ರುವರಿ, ಮಾರ್ಚ್ ಹಾಗೂ ಏಪ್ರಿಲ್ ತಿಂಗಳ ವೇತನವನ್ನು ನೀಡಬೇಕಾಗಿತ್ತು. ಈ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆಯನ್ನು ಸಲ್ಲಿಸಿದ್ದರೂ ಇಲ್ಲಿಯವರೆಗೂ ಹಣ ಬಿಡುಗಡೆ ಮಾಡಿಲ್ಲ. ಕಳೆದ ಜೂನ್ 1ರಂದು 5.15 ಕೋಟಿ ವೇತನ ಬಾಕಿಯಲ್ಲಿ ಕೇವಲ 61 ಲಕ್ಷ ರೂಪಾಯಿಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. `ರಾವಣನ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ~ಯಂತೆ ಈ ಹಣ ಧಾರವಾಡ, ಗದಗ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕೇವಲ 30 ಕಾಲೇಜುಗಳಿಗೆ ಹಂಚಿಕೆ ಮಾಡಲಾಗಿದೆ.

`ಜೂನ್‌ನಲ್ಲಿ ಬಿಡುಗಡೆಯಾದ ಹಣದಲ್ಲಿ ಮೂರು ಜಿಲ್ಲೆಗಳ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಒಂದು ತಿಂಗಳ ವೇತನ ಮಾತ್ರ ಸರಿದೂಗಿಸಲಾಗಿದೆ. ಉಳಿದ ಎರಡು ತಿಂಗಳ ವೇತನ ಸರ್ಕಾರದಿಂದ ಬಂದ ಬಳಿಕವಷ್ಟೇ ಹಂಚಿಕೆ ಮಾಡಲು ಸಾಧ್ಯ. ನಾಲ್ಕು ಜಿಲ್ಲೆಗಳ ಕಾಲೇಜುಗಳಿಗೆ ಮೂರರಿಂದ ನಾಲ್ಕು ತಿಂಗಳ ವೇತನವನ್ನು ನೀಡಬೇಕಾಗಿದೆ~ ಎಂದು ಕಾಲೇಜು ಶಿಕ್ಷಣ ಇಲಾಖೆಯ ಧಾರವಾಡ ಹಾಗೂ ಶಿವಮೊಗ್ಗ ವಲಯದ ಜಂಟಿ ನಿರ್ದೇಶಕ ಎಚ್.ಆರ್.ನಟರಾಜ ಅರಸ್ `ಪ್ರಜಾವಾಣಿ~ಗೆ ತಿಳಿಸಿದರು.

`ಕಟ್ಟುನಿಟ್ಟಿನ ಸಂದರ್ಶನ ಮತ್ತು ಸಂಪೂರ್ಣ ಮೆರಿಟ್ ಆಧಾರದ ಮೇಲೆಯೇ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಕಾಯಂ ಉಪನ್ಯಾಸಕರಿಗೇ ಒಂದು ಸಂಬಳ, ಅತಿಥಿ ಉಪನ್ಯಾಸಕರಿಗೇ ಇನ್ನೊಂದು ಸಂಬಳ. ಅರ್ಹತೆ, ಬೋಧಿಸುವ ಪಠ್ಯಕ್ರಮ, ಅವಧಿ ಒಂದೇ ಆಗಿದ್ದರೂ ವೇತನವನ್ನೇಕೆ ವಿಳಂಬ ಮಾಡಬೇಕು~ ಎಂದು ಪ್ರಶ್ನಿಸುತ್ತಾರೆ ವೇತನಕ್ಕಾಗಿ ಕಾಯುತ್ತಿರುವ ಅತಿಥಿ ಉಪನ್ಯಾಸಕರು.

ರಾಣೆಬೆನ್ನೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕಿ ಕವಿತಾ ಜಿ.ಎನ್. ಮಾತನಾಡಿ, `ಮೊದಲೆಲ್ಲ ನಾಲ್ಕೈದು ತಿಂಗಳಿಗೊಮ್ಮೆ ವೇತನ ಪಾವತಿ ಮಾಡ್ತಿದ್ದರು. ಕಳೆದ ವರ್ಷದಿಂದ ಮೂರು ತಿಂಗಳಿಗೊಮ್ಮೆ ವೇತನ ಕೊಡುತ್ತಿದ್ದಾರೆ. ಆದರೆ ಫೆಬ್ರುವರಿಯ ವೇತನ ಆಗಸ್ಟ್ ಮುಗಿಯುತ್ತಾ ಬಂದರೂ ಸಿಕ್ಕಿಲ್ಲ. ನಮ್ಮ ಕಾಲೇಜಿನ 20 ಅತಿಥಿ ಉಪನ್ಯಾಸಕರಿಗೂ ಇದೇ ಸಮಸ್ಯೆಯಾಗಿದೆ. ಬರೀ ವೇತನವನ್ನೇ ನಂಬಿಕೊಂಡವರ ಗತಿಯೇನು?~ ಎಂದರು.

ಬರಗಾಲದ ಹಿನ್ನೆಲೆಯಲ್ಲಿ ಸರ್ಕಾರ ಉಪನ್ಯಾಸಕರಿಗೆ ನೀಡಬೇಕಾದ ವೇತನವನ್ನು ಬರ ಪರಿಹಾರಕ್ಕೆ ವ್ಯಯಿಸುತ್ತಿದೆಯೇ ಎಂದೂ ಹಲವು ಉಪನ್ಯಾಸಕರು ಆತಂಕ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT