ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ದಶಕದಿಂದಲೂ ಗುಡಿಸಲು ವಾಸ!

ವನವಾಸ, ಅಜ್ಞಾತವಾಸವನ್ನೂ ಮೀರಿಸಿದ ಅಮಾಯಕರು
Last Updated 5 ಏಪ್ರಿಲ್ 2013, 8:03 IST
ಅಕ್ಷರ ಗಾತ್ರ

ಕುಶಾಲನಗರ: ಇಲ್ಲಿನ ಮಾರುಕಟ್ಟೆ ಬಳಿಯ ರಸ್ತೆಯಲ್ಲಿ ಹಾಗೆ ಸುಮ್ಮನೆ ಒಮ್ಮೆ ಹಾದುಹೋಗಿ. ದೊಡ್ಡ ಕಾಂಪೌಂಡುಗಳಿಗೆ ಆಸರೆಯಾಗಿ ಹಾಕಿಕೊಂಡ ಚಿಕ್ಕ-ಚಿಕ್ಕ ಗುಡಿಸಲುಗಳು ನಿಮ್ಮ ಕಣ್ಣಿಗೆ ರಾಚುತ್ತವೆ. ಬೆಳಕಿಗಾಗಿ ಹಂಬಲಿಸುತ್ತಿರುವ ಜೀವಗಳು, ತುತ್ತು ಅನ್ನಕ್ಕಾಗಿ ಕಸರತ್ತು ಮಾಡುವ ಮಹಿಳೆಯರು, ಪೌಷ್ಟಿಕಾಂಶ ಕೊರತೆಯಿಂದ ಬಳಲುತ್ತಿರುವ ಮಕ್ಕಳು, ಕುರುಡರು, ಅಂಗವಿಕಲರು, ಶಾಲೆ ಮುಖವನ್ನೇ ನೋಡದವರು... ಹೀಗೆ ದುರಂತದಲ್ಲೇ ಬದುಕುತ್ತಿರುವ ಜನ ಸಿಕ್ಕೇ ಸಿಗುತ್ತಾರೆ.

ಹೌದು. ಪಟ್ಟಣದ ಮಾರುಕಟ್ಟೆ ಬಳಿ ರಸ್ತೆ ಬದಿಯ ಗುಡಿಸಲಲ್ಲಿ ಬದುಕುತ್ತಿರುವ ಸುಮಾರು 12 ಕುಟುಂಬಗಳ ದಾರುಣ ಚಿತ್ರಣ ಇದು.
ತುತ್ತು ಅನ್ನ, ಅಂಗೈ ಅಗಲ ಜಾಗ, ಮೈ ಮೇಲೆ ತುಂಡು ಬಟ್ಟೆ ಇದ್ದರೆ ಸಾಕು; ನೆಮ್ಮದಿಯಿಂದ ಬದುಕಿ ಬಿಡುತ್ತೇವೆ ಎಂಬ ಸ್ಥಿತಿಯಲ್ಲಿವೆ ಈ ಕುಟುಂಬಗಳು. ಆದರೆ, ಈ ನಿರಾಶ್ರಿತರಿಗೆ ನಿತ್ಯದ ಜೀವನಕ್ಕೆ ಬೇಕಾಗುವ ಕನಿಷ್ಠ ಸೌಲಭ್ಯಗಳೂ ಇಲ್ಲ. ಈ ಪರಿಸ್ಥಿತಿ ಇಂದು-ನಿನ್ನೆಯದಲ್ಲ; ಬರೋಬ್ಬರಿ 40 ವರ್ಷಗಳಿಂದ ಈ ಜನ ಇಲ್ಲೇ, ಇದೇ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ! ಪುರಾಣದಲ್ಲಿ ವನವಾಸ, ಅಜ್ಞಾತವಾಸವನ್ನೂ ಮೀರಿದ ಗುಡಿಸಲು ವಾಸ ಇವರದು.

ಬದುಕಿನ ಬೆನ್ನೆಲುಬು ಮುರಿದ ಹೈವೇ
ನಾಲ್ಕು ದಶಕಗಳಿಂದ ಈ ಬಡವರು ಚಿಕ್ಕ ಗುಡಿಸಲುಗಳನ್ನು ಹಾಕಿಕೊಂಡು ಇಲ್ಲೇ ಬದುಕುತ್ತಿದ್ದಾರೆ. ಆದರೆ, ಈಗ ಇದಕ್ಕೂ ಕಂಟಕ ಎದುರಾಗಿದೆ. ಈ ಮಾರ್ಗದಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಮಾಡುತ್ತಿರುವುದರಿಂದ ಗುಡಿಸಲು ತೆರವುಗೊಳ್ಳುವ ಸಾಧ್ಯತೆ ಇದೆ.

ಇದರಿಂದಾಗಿ ಇದ್ದ ನೆಲೆಯನ್ನೂ ಕಳೆದುಕೊಳ್ಳುವ ಭೀತಿ ಈ ಕುಟುಂಬಗಳ ನಿದ್ದೆ ಕೆಡಿಸಿದೆ. ಕೊಣನೂರಿನಿಂದ ಕುಟ್ಟದವರೆಗೆ ಆಗುತ್ತಿರುವ ರಾಜ್ಯ ಹೆದ್ದಾರಿಯು ಇಲ್ಲಿಯೇ ಹಾದು ಹೋಗುತ್ತಿದೆ. ಇದರಿಂದ ರಸ್ತೆ ಬದಿಯಲ್ಲಿ ಗುಡಿಸಲು ಕಟ್ಟಿಕೊಂಡು ಇದುವರೆಗೆ ಹೇಗೋ ಒಂದು ಸ್ಥಳದಲ್ಲಿ ನೆಲೆಯೂರಿದ್ದ ಈ ಕುಟುಂಬಗಳು ಇಂದು ಬೀದಿಗೆ ಬೀಳುವ ಸ್ಥಿತಿ ಎದುರಾಗಿದೆ.

ಈಗಿರುವ ಸ್ಥಳದಲ್ಲಿ ಮನುಷ್ಯರು ಬದುಕಲು ಸಾಧ್ಯವಿಲ್ಲದ ಪರಿಸರ ಇದೆ. ಕುಡಿಯಲು ನೀರಿಲ್ಲ, ಸರಿಯಾದ ಗಾಳಿ- ಬೆಳಕಿನ ವ್ಯವಸ್ಥೆ ಇಲ್ಲ. ಸ್ವಲ್ಪ ಮಳೆ ಸುರಿದರೂ ಚರಂಡಿ ನೀರು ಮನೆಯೊಳಗೇ ನುಗ್ಗುತ್ತದೆ. ನಿತ್ಯವೂ ಚರಂಡಿಯ ಕೆಟ್ಟ ವಾಸನೆ ಸಹಿಸಿಕೊಂಡೇ ಬದುಕಬೇಕು. ಇಲ್ಲಿ ಪರಿಸರ ಕೆಟ್ಟಿದ್ದರಿಂದ ಈ ಜನ ಒಂದಿಲ್ಲೊಂದು ಕಾಯಿಲೆಯಿಂದ ಬಳಲುತ್ತಲೇ ಇರುತ್ತಾರೆ.

ಪಟ್ಟಣದಲ್ಲಿರುವ ಛತ್ರಗಳಲ್ಲಿ ಕೆಲವರು ಸ್ವಚ್ಛತೆ ಕಾಯಕ ಮಾಡಿದರೆ, ಇನ್ನು ಕೆಲವರು ಕಟ್ಟಡ ಕಾಮಗಾರಿಗಳ ಗಾರೆ ಕೆಲಸ ನಂಬಿದ್ದಾರೆ. ಉಳಿದ ಕುಟುಂಬಗಳು ಚಿಂದಿ ಆಯುತ್ತಿವೆ. ಭಿಕ್ಷೆ ಬೇಡಲು ಇವರ ಮನಸ್ಸು ಒಪ್ಪಿಲ್ಲ. ಕಷ್ಟವಾದರೂ ದುಡಿದು ಬದುಕಬೇಕೆಂಬ ತುಡಿತ ಇವರಲ್ಲಿ ಇನ್ನೂ ಜೀವಂತ ಇದೆ. ಆದರೆ, ಈ ಕೈಗಳಿಗೆ ಕೆಲಸ ಕೊಡುವ ಮನಸುಗಳಿಲ್ಲ.

ಇವರೂ ಮತದಾರರೇ
ಇಲ್ಲಿನ ಎಲ್ಲ ಕುಟುಂಬಗಳ ಹೆಸರು ಪಡಿತರ ಚೀಟಿ ಹಾಗೂ ಮತದಾರರ ಪಟ್ಟಿಯಲ್ಲಿದೆ. 40 ವರ್ಷದಿಂದಲೂ ಪ್ರತಿಯೊಂದು ಚುನಾವಣೆಯಲ್ಲೂ ಮತ ಚಲಾಯಿಸಿದ್ದಾರೆ. ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲೂ ಮತ ಹಾಕುವ ಹುಮ್ಮಸ್ಸಿನಲ್ಲಿದ್ದಾರೆ. ಕೆಲ ಕುಟುಂಬಗಳು ಪಡಿತರ ಚೀಟಿಯನ್ನೂ ಹೊಂದಿವೆ. ಆದರೆ, ಈವರೆಗೂ ಇವರಿಗೆ ಒಂದು ಸೂರು ಕಲ್ಪಿಸಲು ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಮನಸು ಮಾಡಿಲ್ಲ ಎಂಬುದೇ ದುರಂತ.

ಈ ವರ್ಷ ಮನೆ ಸಿಗಬಹುದು, ಮುಂದಿನ ವರ್ಷ ಮನೆ ಸಿಗಬಹುದು ಎಂದು ಕಾಯುತ್ತಲೇ 40 ವರ್ಷ ಕಳೆದಿದ್ದಾರೆ ಈ ಅಮಾಯಕರು. ಕೆಲವರು ಗುಡಿಸಲಲ್ಲೇ ಹುಟ್ಟಿ, ಗುಡಿಸಲಲ್ಲೇ ಬೆಳೆದು, ಬದುಕಿ, ಪ್ರಾಣ ಬಿಟ್ಟಿದ್ದಾರೆ. ಈಗ ಅವರ ಮಕ್ಕಳು ಸಹ ಮನೆ ಅಥವಾ ನಿವೇಶನ ಸಿಗಬಹುದೆಂಬ ಆಸೆ ಕಣ್ಣುಗಳಿಂದಲೇ ಕಾದು ಕುಳಿತ್ತಿದ್ದಾರೆ. ಆದರೆ, ಈಗ ಹೆದ್ದಾರಿ ನಿರ್ಮಾಣದ ಸುದ್ದಿ ಇವರ ಭರವಸೆಯ ಬೆನ್ನೆಲುಬನ್ನೇ ಮುರಿದುಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT