ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4 ಸಮಗ್ರ ಸಂಪುಟ ಬಿಡುಗಡೆ 7 ರಂದು

Last Updated 4 ಅಕ್ಟೋಬರ್ 2011, 8:40 IST
ಅಕ್ಷರ ಗಾತ್ರ

ಧಾರವಾಡ: ಮನೋಹರ ಗ್ರಂಥಮಾಲಾ ಅ. 7 ರಂದು ನಾಲ್ವರು ವಿಶೇಷ ಲೇಖಕರ ಸಮಗ್ರ ಸಂಪುಟಗಳ ಬಿಡುಗಡೆ ಸಮಾರಂಭ ಹಮ್ಮಿಕೊಂಡಿದೆ ಎಂದು ಪ್ರಕಾಶಕ ಡಾ. ರಮಾಕಾಂತ ಜೋಶಿ ಹೇಳಿದರು.

ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೆಯ ತಲೆಮಾರಿನ, ಉತ್ತರ ಕರ್ನಾಟಕದ ಪ್ರಮುಖ ಲೇಖಕರ ಸಮಗ್ರ ಸಾಹಿತ್ಯವನ್ನು ಸಂಗ್ರಹಿಸಿ ಸಮಗ್ರ ಸಂಪುಟಗಳನ್ನು ಹೊರತರುವ ಯೋಜನೆ ಹಾಕಿಕೊಳ್ಳಲಾಗಿದೆ.

ಈ ಯೋಜನೆಯಡಿಯಲ್ಲಿ ರಾಘವೇಂದ್ರ ಖಾಸನೀಸ್, ದ.ಬಾ.ಕುಲಕರ್ಣಿ, ಗರುಡ ಸದಾಶಿವರಾಯರು ಹಾಗೂ ಸವಣೂರ ವಾಮನರಾವ್ ಅವರ ಪ್ರಕಟಿತ ಹಾಗೂ ಅಪ್ರಕಟಿತ ಹಸ್ತಪ್ರತಿಗಳನ್ನು ಸೇರಿಸಿಕೊಂಡು ಸಮಗ್ರ ಸಂಪುಟಗಳನ್ನು ಹೊರತರಲಾಗುತ್ತಿದೆ ಎಂದರು.

ಅಂದು ಸಂಜೆ 6ಕ್ಕೆ ಆಲೂರ ವೆಂಕಟರಾವ್ ಸಾಂಸ್ಕೃತಿಕ ಸಭಾಭವನದಲ್ಲಿ ನಡೆಯುವ ಸಮಾರಂಭದಲ್ಲಿ ಇನ್‌ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ ಸಂಪುಟಗಳನ್ನು ಬಿಡುಗಡೆ ಮಾಡುವರು. ಡಾ. ಗಿರಡ್ಡಿ ಗೋವಿಂದರಾಜ್ ಅಧ್ಯಕ್ಷತೆ ವಹಿಸುವರು. ಡಾ. ಜಿ.ಎಸ್.ಆಮೂರ, ಪ್ರೊ. ಮಾಧವ ಕುಲಕರ್ಣಿ, ಡಾ. ಬಸವರಾಜ ಜಗಜಂಪಿ, ಡಾ. ಪ್ರಕಾಶ ಗರುಡ ಉಪಸ್ಥಿತರಿರುವರು ಎಂದು ಹೇಳಿದರು.

ಹೊಸ ಯೋಜನೆಗಳು: ಮನೋಹರ ಗ್ರಂಥಮಾಲಾ 80ನೇ ವರ್ಷಕ್ಕೆ ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ಪುಸ್ತಕ ಪ್ರೇಮಿಗಳಿಗೆ ಹೊಸ ಯೋಜನೆ ಜಾರಿಗೆ ತರಲಾಗಿದೆ. ಹೊಸ ಯೋಜನೆಯಡಿಯಲ್ಲಿ ಚಂದಾದಾರರಾಗಲು ಬಯಸುವವರು ಒಂದೇ ಕಂತಿನಲ್ಲಿ 5000 ರೂ. ಸಲ್ಲಿಸಬೇಕು.
 
ಇವರಿಗೆ ತಕ್ಷಣವೇ 3000 ರೂ. ಮುಖಬೆಲೆಯ ಪುಸ್ತಕಗಳನ್ನು ನೀಡಲಾಗುವುದು. ಅಲ್ಲದೇ ಮುಂದಿನ 10 ವರ್ಷಗಳವರೆಗೆ ಗ್ರಂಥಮಾಲೆಯೆ ಚಂದಾ ಪುಸ್ತಕಗಳನ್ನು ಉಚಿತವಾಗಿ ಅವರ ಮನೆಬಾಗಿಲಿಗೆ ತಲುಪಿಸಲಾಗುವುದು ಎಂದರು.

ಡಾ. ಗಿರೀಶ ಕಾರ್ನಾಡರ ಆಡಾಡತ ಆಯುಷ್ಯ (ಆತ್ಮಕತೆ) ಪುಸ್ತಕ ಒಂದೇ ತಿಂಗಳ ಅವಧಿಯಲ್ಲಿ ಮೂರನೆಯ ಮುದ್ರಣ ಕಾಣುತ್ತಿದೆ. 4000 ಪುಸ್ತಕಗಳು ಮಾರಾಟವಾಗಿವೆ ಎಂದ ಅವರು, ಪುಣೆಯ ರಾಜಹಂಸ ಪ್ರಕಾಶನದವರು ಈ ಕೃತಿಯನ್ನು ಮರಾಠಿ ಭಾಷೆಗೆ ಅನುವಾದಿಸಿ ಪ್ರಕಟಿಸಲಿದ್ದಾರೆ. ಇಂಗ್ಲಿಷ್ ಭಾಷೆಗೆ ಕಾರ್ನಾಡರು ಅನುವಾದಿಸುವರು ಎಂದು ಡಾ. ಜೋಶಿ ಹೇಳಿದರು.

ಕಾರ್ನಾಡರ ಸಮಗ್ರ ನಾಟಕದ ಪರಿಷ್ಕೃತ ಆವೃತ್ತಿಯು ಮುದ್ರಣಗೊಂಡಿದ್ದು, ಸಧ್ಯದಲ್ಲಿಯೇ ಬಿಡುಗಡೆಯಾಗಲಿದೆ. ಪುಸ್ತಕ ಸಂಸ್ಕೃತಿಯ ಪ್ರಚಾರಕ್ಕಾಗಿ ನವೆಂಬರ್‌ನಲ್ಲಿ ಶಿರಸಿ, ಉಡುಪಿ, ಮಂಗಳೂರು, ಮೈಸೂರು, ಗದಗ, ಬೆಳಗಾವಿ, ವಿಜಾಪುರ, ಬಾಗಲಕೋಟ, ಅಥಣಿ, ಗುಲಬರ್ಗಾ ಮತ್ತಿತರ ಸ್ಥಳಗಳಲ್ಲಿ ಕಾರ್ಯಕ್ರಮ ನಡೆಸುವ ಯೋಜನೆ ಇದೆ. ಈ ಸ್ಥಳಗಳಿಗೆ ಡಾ. ಗಿರೀಶ ಕಾರ್ನಾಡರು ಆಗಮಿಸಿ ತಮ್ಮ ಆಡಾಡತ ಆಯುಷ್ಯ ಕೃತಿ ಬಗ್ಗೆ ವಾಚನ- ಸಂವಾದ ನಡೆಸಲಿದ್ದಾರೆ ಎಂದರು.

`ಕನ್ನಡ ಸಾಹಿತ್ಯ ಪರಿಷತ್ತು ಮನೋಹರ ಗ್ರಂಥಮಾಲೆಗೆ ಅತ್ಯುತ್ತಮ ಪ್ರಕಾಶನ ಸಂಸ್ಥೆ ಪ್ರಶಸ್ತಿ ನೀಡಿದೆ~ ಎಂದು ಡಾ. ಹ.ವೆಂ.ಕಾಖಂಡಕಿ ಇದೇ ಸಂದರ್ಭದಲ್ಲಿ ತಿಳಿಸಿದರು. ಡಾ. ಪ್ರಕಾಶ ಗರುಡ, ಸಮೀರ ಜೋಶಿ ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT