ಶನಿವಾರ, ನವೆಂಬರ್ 23, 2019
17 °C
ಕರ್ನಾಟಕ ಚುನಾವಣಾ ಕಾವಲು ಸಮಿತಿ ಆರೋಪ

40 ಮಂದಿ ವಿರುದ್ಧ ಕ್ರಿಮಿನಲ್ ಮೊಕದ್ದಮೆ

Published:
Updated:

ಬೆಂಗಳೂರು: `ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಮತ್ತು ಬಿಜೆಪಿ ಘೋಷಿಸಿದ 317 ಅಭ್ಯರ್ಥಿಗಳಲ್ಲಿ 40 ಮಂದಿ ಕ್ರಿಮಿನಲ್ ಮೊಕದ್ದಮೆಯನ್ನು ಹೊಂದಿದ್ದಾರೆ' ಎಂದು ಕರ್ನಾಟಕ ಚುನಾವಣಾ ಕಾವಲು ಸಮಿತಿ ಆರೋಪಿಸಿದೆ.ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಅಧ್ಯಕ್ಷ ತ್ರಿಲೋಚನ್ ಶಾಸ್ತ್ರಿ, `ಬಿಜೆಪಿಯ 140 ಮಂದಿಯಲ್ಲಿ 20 ಮಂದಿ, ಕಾಂಗ್ರೆಸ್‌ನ 177 ಅಭ್ಯರ್ಥಿಗಳಲ್ಲಿ 16 ಮಂದಿ ಕ್ರಿಮಿನಲ್ ಮೊಕದ್ದಮೆ ಹೊಂದಿದ್ದಾರೆ. ಈ ಪೈಕಿ ಬಿಜೆಪಿಯ 10 ಮತ್ತು ಕಾಂಗ್ರೆಸ್‌ನ 6 ಮಂದಿ ತೀವ್ರ ಸ್ವರೂಪದ ಆಪಾದನೆಗಳನ್ನು ಘೋಷಿಸಿಕೊಂಡಿದ್ದಾರೆ. ಈ ಅಭ್ಯರ್ಥಿಗಳು ಚುನಾವಣೆಗೆ ಸ್ಪರ್ಧಿಸುವುದನ್ನು ಕಾವಲು ಸಮಿತಿ ವಿರೋಧಿಸುತ್ತದೆ' ಎಂದು ಹೇಳಿದರು.`ಬಿಜೆಪಿಯ 140 ಅಭ್ಯರ್ಥಿಗಳಲ್ಲಿ 72 ಮಂದಿ ಹಾಲಿ ಶಾಸಕರಾಗಿದ್ದು, ಈ ಪೈಕಿ 44 ಅಭ್ಯರ್ಥಿಗಳು ಕೋಟ್ಯಧಿಪತಿಗಳಾಗಿದ್ದಾರೆ. ಕಾಂಗ್ರೆಸ್‌ನ 177 ಅಭ್ಯರ್ಥಿಗಳಲ್ಲಿ 58 ಮಂದಿ ಹಾಲಿ ಶಾಸಕರಾಗಿದ್ದು, ಈ ಪೈಕಿ 69 ಮಂದಿ ಕೋಟ್ಯಧಿಪತಿಗಳಾಗಿದ್ದಾರೆ.2008ರ ಮಾಹಿತಿಯಂತೆ ಕರ್ನಾಟಕದ ಶಾಸಕರ ಸರಾಸರಿ ಆಸ್ತಿ ರೂ. 5.9 ಕೋಟಿಯಾಗಿದೆ. ಗೋವಿಂದರಾಜ ನಗರದ ಕಾಂಗ್ರೆಸ್ ಶಾಸಕ ಪ್ರಿಯಾಕೃಷ್ಣ ಅತ್ಯಂತ ಶ್ರೀಮಂತ ಶಾಸಕರಾಗಿದ್ದು, ಅವರ ಆಸ್ತಿ ರೂ. 797 ಕೋಟಿ, ಪ್ರಿಯಾಕೃಷ್ಣ ಅವರ ತಂದೆ, ವಿಜಯನಗರದ ಕಾಂಗ್ರೆಸ್ ಶಾಸಕ ಎಂ.ಕೃಷ್ಣಪ್ಪ ಅವರ ಆಸ್ತಿ ರೂ. 129 ಕೋಟಿಯಾಗಿದ್ದು, ಅವರು ಎರಡನೇ ಸ್ಥಾನದಲ್ಲಿದ್ದಾರೆ. ಬಂಟ್ವಾಳದ ಕಾಂಗ್ರೆಸ್ ಶಾಸಕ ಬಿ.ರಮಾನಾಥ ರೈ ಕೇವಲ ರೂ. 1.71 ಲಕ್ಷ ಆಸ್ತಿ ಘೋಷಿಸಿದ್ದಾರೆ. ವಿಧಾನಸಭೆಯ ಒಟ್ಟು ಶಾಸಕರ ಪೈಕಿ 86 ಶಾಸಕರು ಆದಾಯ ತೆರಿಗೆಗೆ ಅವಶ್ಯಕವಾಗಿ ಬೇಕಾದ ಪ್ಯಾನ್ ಸಂಖ್ಯೆ ಇನ್ನೂ ತಿಳಿಸಿಲ್ಲ' ಎಂದು ಅವರು ತಿಳಿಸಿದರು.`2008ರಿಂದ 2012ರ ವರೆಗೆ ವಿಧಾನಸಭೆಯಲ್ಲಿ ಒಟ್ಟು 8,571 ಪ್ರಶ್ನೆಗಳನ್ನು ಶಾಸಕರು ಕೇಳಿದ್ದಾರೆ. ಬಿಜೆಪಿಯ 116 ಶಾಸಕರು 2,230, ಕಾಂಗ್ರೆಸ್‌ನ 75 ಶಾಸಕರು 4,538, ಜೆಡಿಎಸ್‌ನ 26 ಶಾಸಕರು 1.731 ಮತ್ತು 8 ಮಂದಿ ಪಕ್ಷೇತರರು 72 ಪ್ರಶ್ನೆಗಳನ್ನು ಕೇಳಿದ್ದಾರೆ' ಎಂದು ಅವರು ಮಾಹಿತಿ ನೀಡಿದರು.`ಕರ್ನಾಟಕದಲ್ಲಿ ಕಳೆದ ಐದು ವರ್ಷಗಳಲ್ಲಿ 16 ಅಧಿವೇಶನಗಳು ವರ್ಷಕ್ಕೆ ಸರಾಸರಿ 33ದಿನದಂತೆ ಒಟ್ಟು 164 ದಿನ ನಡೆದಿದೆ. ಲೋಕಸಭೆ ಕಳೆದ ನಾಲ್ಕು ವರ್ಷಗಳಲ್ಲಿ 12 ಅಧಿವೇಶನಗಳು ಒಟ್ಟು 282 ದಿನ ನಡೆದಿದೆ. ಲೋಕಸಭೆಗೆ ಹೋಲಿಸಿದರೆ ಕರ್ನಾಟಕದ ವಿಧಾನಸಭೆ ಅಧಿವೇಶನಗಳ ದಿನಗಳು ಕಡಿಮೆಯಾಗಿದೆ.ಆದರೆ ಬೇರೆ ರಾಜ್ಯಗಳ ವಿಧಾನಸಭೆಗೆ ಹೋಲಿಸಿದರೆ ಕರ್ನಾಟಕದ ಸಾಧನೆ ಉತ್ತಮವಾಗಿದೆ' ಎಂದರು.ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಯಾವ ಮಾನದಂಡದಲ್ಲಿ ಆಯ್ಕೆ ಮಾಡುತ್ತವೆ ಎಂಬುದನ್ನು ಬಹಿರಂಗ ಪಡಿಸಬೇಕು.  ಎಲ್ಲಾ ಪಕ್ಷಗಳು ತಾವು ಅಧಿಕಾರಕ್ಕೆ ಬಂದಾಗ ಶಾಸಕರ ಕಾರ್ಯ ನಿರ್ವಹಣೆ ಕುರಿತು ಜನರಿಗೆ ಸುಲಭವಾಗಿ ಮಾಹಿತಿ ದೊರಕುವಂತೆ ತಮ್ಮ ಅಧಿಕೃತ ಅಂತರ್ಜಾಲದಲ್ಲಿ ಪ್ರಕಟಿಸಬೇಕು ಎಂದು ಕಾವಲು ಸಮಿತಿ ಒತ್ತಾಯಿಸಿದೆ.ಅಕ್ರಮಕ್ಕೆ ಕಡಿವಾಣ: ವಿಧಾನಸಭೆ ಚುನಾವಣೆಯ ಸಂದರ್ಭ ಅಕ್ರಮಗಳು, ಆಮಿಷ ನೀಡುವುದು ಕಂಡು ಬಂದರೆ ಅಂತಹ ಭಾವಚಿತ್ರ ಅಥವಾ ಮಾಹಿತಿಯನ್ನು ಕರ್ನಾಟಕ ಚುನಾವಣಾ ಕಾವಲು ಸಮಿತಿ ಅಂತರ್ಜಾಲಕ್ಕೆ ಅಪ್‌ಲೋಡ್ ಮಾಡಲು ವ್ಯವಸ್ಥೆ ಮಾಡಲಾಗಿದೆ.ಸಾಮಾಜಿಕ ಜಾಗೃತಿಗಾಗಿ ಇದನ್ನು ಪ್ರಾರಂಭಿಸಲಾಗಿದ್ದು, ವೆಬ್‌ಸೈಟ್ ವಿಳಾಸವನ್ನು ಎರಡು ದಿನದಲ್ಲಿ ತಿಳಿಸಲಾಗುವುದು ಎಂದು ತ್ರಿಲೋಚನ್ ಶಾಸ್ತ್ರಿ ಹೇಳಿದರು.ಮೊದಲ ಸ್ಥಾನದಲ್ಲಿ ಖಾದರ್

`2008-12ರ ವಿಧಾನಸಭಾ ಅಧಿವೇಶನದಲ್ಲಿ 65 ಹಾಲಿ ಮತ್ತು ಮಾಜಿ  ಸಚಿವರು ಒಂದೂ ಪ್ರಶ್ನೆ ಕೇಳಲಿಲ್ಲ. ಆದರೆ ಮಂಗಳೂರು ಕ್ಷೇತ್ರದ ಕಾಂಗ್ರೆಸ್ ಶಾಸಕ ರಾದ ಯು.ಟಿ.ಖಾದರ್ ಅವರು 401 ಪ್ರಶ್ನೆಗಳನ್ನು ಕೇಳುವ ಮೂಲಕ ಮೊದಲ ಸ್ಥಾನದಲ್ಲಿದ್ದಾರೆ'

ಪ್ರತಿಕ್ರಿಯಿಸಿ (+)