ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

40 ಕಂಪೆನಿಗಳಿಗೆ ಗಣಿ ಕುಣಿಕೆ ಶಾಸಕರೂ ಸಿಬಿಐ ಖೆಡ್ಡಾಕ್ಕೆ?

Last Updated 24 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಬೆಂಗಳೂರು: ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಒಡೆತನದ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿಯ (ಎಎಂಸಿ) ಅಕ್ರಮ ವ್ಯವಹಾರಗಳಿಗೆ ಸಂಬಂಧಿಸಿದಂತೆ ಆರಂಭವಾಗುವ ಸಿಬಿಐ ತನಿಖೆ, ಬಳ್ಳಾರಿಯ 40ಕ್ಕೂ ಹೆಚ್ಚು ಕಂಪೆನಿಗಳನ್ನು ಆವರಿಸಿಕೊಳ್ಳುವ ಸಾಧ್ಯತೆ ಇದೆ. `ಮೈನಿಂಗ್ ಗ್ರೂಪ್~ ಹೆಸರಿನಲ್ಲಿ ಗಣಿ ಹಫ್ತಾ ವಸೂಲಿ ಮಾಡಿದ ಆರೋಪ ಎದುರಿಸುತ್ತಿರುವ ಕೆಲ ಶಾಸಕರು ಈ ಬಾರಿ ಸಿಬಿಐ ಖೆಡ್ಡಾಕ್ಕೆ ಬೀಳುವ ಸಂಭವ  ಇದೆ.

ಎಎಂಸಿ ಮತ್ತು ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ಕಂಪೆನಿಗಳು ನಡೆಸಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸುವಂತೆ ಶುಕ್ರವಾರ ಸುಪ್ರೀಂಕೋರ್ಟ್ ಸಿಬಿಐಗೆ ಆದೇಶಿಸಿದೆ. ಡೆಕ್ಕನ್ ಮೈನಿಂಗ್ ಪ್ರಕರಣಕ್ಕೂ ಈಗಾಗಲೇ ಜನಾರ್ದನ ರೆಡ್ಡಿ ಅವರ ಹೆಸರು ತಳಕು ಹಾಕಿಕೊಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಅಕ್ರಮ ಗಣಿಗಾರಿಕೆಯಲ್ಲಿ ಬಳ್ಳಾರಿ-ಆಂಧ್ರಪ್ರದೇಶದ ನಂಟಿನ ಬಗ್ಗೆಯೇ ತನಿಖೆ ನಡೆಯಬೇಕು ಎಂಬ ಇಂಗಿತ ನ್ಯಾಯಾಲಯದಿಂದ ವ್ಯಕ್ತವಾಗಿದೆ. `ಮೈನಿಂಗ್ ಗ್ರೂಪ್~ ಮೂಲಕ ಓಬಳಾಪುರಂ ಗಣಿ ಕಂಪೆನಿ ಜೊತೆ ನಂಟು ಹೊಂದಿದ್ದ ಎಲ್ಲ ಗಣಿ ಉದ್ಯಮಿಗಳ ಮೇಲೂ ಈಗ ಸಿಬಿಐ ತನಿಖೆಯ ಕತ್ತಿ ತೂಗತೊಡಗಿದೆ.

ರಾಜ್ಯದಲ್ಲಿನ ಅಕ್ರಮ ಗಣಿಗಾರಿಕೆ ಕುರಿತು ತನಿಖೆ ನಡೆಸಿದ್ದ ಹಿಂದಿನ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಅವರು ಎಎಂಸಿಯ ಅವ್ಯವಹಾರದ ಬಗ್ಗೆಯೇ ಪ್ರತ್ಯೇಕವಾದ ಅಧ್ಯಾಯವೊಂದನ್ನು ವರದಿಯಲ್ಲಿ ನೀಡಿದ್ದರು.  `ಅಸೋಸಿಯೇಟೆಡ್ ಮೈನಿಂಗ್ ಕಂಪೆನಿ: ಅಕ್ರಮಗಳ ಸರಮಾಲೆ~ ಎಂಬ ಅಧ್ಯಾಯ ಎಎಂಸಿ ಮೂಲಕ ಬಳ್ಳಾರಿಯ ಅದಿರು ಕರ್ನಾಟಕದ ಗಡಿ ದಾಟಿ ಅನಂತಪುರ ಜಿಲ್ಲೆಯ ಓಎಂಸಿಗೆ ತಲುಪಿದ ವಿಧಾನವನ್ನು ಬಿಚ್ಚಿಟ್ಟಿತ್ತು. ಹಲವು ಗಣಿ ಕಂಪೆನಿಗಳು ಎಎಂಸಿ ಜೊತೆ ಕೈಜೋಡಿಸಿದ ಬಗ್ಗೆ ದಾಖಲೆಗಳು ಈ ವರದಿಯಲ್ಲಿವೆ.


ಗಣಿಗಾರಿಕೆ ಮತ್ತು ಅದಿರು ಮಾರಾಟದಲ್ಲಿ ನಿರತವಾಗಿರುವ ಪ್ರಮುಖ ಕಂಪೆನಿಗಳಾದ ಡ್ರೀಮ್ ಲಾಜಿಸ್ಟಿಕ್ಸ್, ಎಸ್.ಬಿ. ಮಿನರಲ್ಸ್, ಬಿ.ಆರ್.ಯೋಗೇಂದ್ರನಾಥ್ ಸಿಂಗ್, ಮಿನರಲ್ಸ್ ಎಂಬೆಸಿ, ಐಎಲ್‌ಸಿ ಟ್ರೇಡಿಂಗ್ ಕಂಪೆನಿ, ಜನಾದೇವಿ ಮಿನರಲ್ಸ್, ಲಕ್ಷ್ಮಿ ಅರುಣಾ ಮಿನರಲ್ಸ್, ಜೆ.ಜೆ. ಇಂಪೆಕ್ಸ್, ಶಾಂತಾ ಲಕ್ಷ್ಮಿ ಜಯರಾಮ್, ವಿಜಯ್ ಮೈನಿಂಗ್ ಕಂಪೆನಿಗಳು ನೇರವಾಗಿ ಎಎಂಸಿ ಜೊತೆ ವ್ಯವಹರಿಸಿರುವುದಕ್ಕೆ ಲೋಕಾಯುಕ್ತ ವರದಿಯಲ್ಲೇ ದಾಖಲೆಗಳಿವೆ.

ಕಿರಾಣಿ ಅಂಗಡಿಯ ನೌಕರ ಕಾಶಿ ವಿಶ್ವನಾಥ ಎಂಬ ವ್ಯಕ್ತಿಯ ಹೆಸರಿನಲ್ಲಿ ಆರಂಭವಾಗಿ ನೂರಾರು ಕೋಟಿ ರೂಪಾಯಿ ವಹಿವಾಟು ನಡೆಸಿರುವ `ಭಕ್ತ ಮಾರ್ಕಂಡೇಶ್ವರ ಮಿನರಲ್ಸ್~ಗೂ ಎಎಂಸಿಗೂ ನೇರವಾದ ನಂಟಿದೆ. ಜನಾರ್ದನ ರೆಡ್ಡಿ ಒಡೆತನದ ಬ್ರಹ್ಮಣಿ ಇಂಡಸ್ಟ್ರೀಸ್ ಮತ್ತು ಅವರ ಪತ್ನಿ ಲಕ್ಷ್ಮಿ ಅರುಣಾ ಹೆಸರಿನಲ್ಲಿರುವ ಲಕ್ಷ್ಮಿ ಅರುಣಾ ಮಿನರಲ್ಸ್ ಕೂಡ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿಯ ಜೊತೆ ಅದಿರು ಪೂರೈಕೆ, ಹಣಕಾಸು ವ್ಯವಹಾರ ನಡೆಸಿರುವುದು ಪತ್ತೆಯಾಗಿದೆ.

ಬಲೆಯೊಳಗೆ ಶಾಸಕರು?: ದೊಡ್ಡ ಪ್ರಮಾಣದ ಅಕ್ರಮ ಗಣಿಗಾರಿಕೆ ನಡೆಸಿರುವ ಆರೋಪ ಎದುರಿಸುತ್ತಿರುವ ಕೂಡ್ಲಿಗಿ ಶಾಸಕ ಬಿ.ನಾಗೇಂದ್ರ ಮತ್ತು ಕಂಪ್ಲಿ ಶಾಸಕ ಸುರೇಶ್ ಬಾಬು ಕೂಡ ಎಎಂಸಿ, `ಮೈನಿಂಗ್ ಗ್ರೂಪ್~ ಜೊತೆ ನಂಟು ಹೊಂದಿರುವುದಕ್ಕೆ ಲೋಕಾಯುಕ್ತ ವರದಿ ಆಧಾರ ಒದಗಿಸಿದೆ. ಸಚಿವರಾಗಿದ್ದ ಅವಧಿಯಲ್ಲಿ ಕಾನೂನುಬಾಹಿರವಾಗಿ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿಯ ಗಣಿ ಗುತ್ತಿಗೆಯನ್ನು ನವೀಕರಿಸಿರುವ ಆರೋಪ ಶಾಸಕ ವಿ.ಮುನಿಯಪ್ಪ ಮೇಲಿದೆ.

 ಸಂಪೂರ್ಣ ಸಹಕಾರ: ಸದಾನಂದಗೌಡ
ಮಾಜಿ ಸಚಿವ ಜಿ.ಜನಾರ್ದನ ರೆಡ್ಡಿ ಒಡೆತನದ ಅಸೋಸಿಯೇಟೆಡ್ ಮೈನಿಂಗ್ ಕಂಪೆನಿಯ ವ್ಯವಹಾರಗಳಿಗೆ ಸಂಬಂಧಿಸಿದಂತೆ ಸಿಬಿಐ ನಡೆಸುವ ತನಿಖೆಗೆ ರಾಜ್ಯ ಸರ್ಕಾರ ಸಂಪೂರ್ಣ ಸಹಕಾರ ನೀಡಲಿದೆ ಎಂದು ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಅವರು ತಿಳಿಸಿದರು.

`ಜನಾರ್ದನ ರೆಡ್ಡಿ ಒಡೆತನದ ಕಂಪೆನಿ ವಿರುದ್ಧ ಸಿಬಿಐ ತನಿಖೆಗೆ ಸುಪ್ರೀಂಕೋರ್ಟ್ ಆದೇಶಿಸಿದೆ. ನ್ಯಾಯಾಲಯದ ಆದೇಶದಂತೆ ಸಿಬಿಐ ತನಿಖೆ ನಡೆಸುತ್ತದೆ. ಈ ವಿಷಯದಲ್ಲಿ ನಾನು ಏನನ್ನೂ ಹೇಳುವುದಿಲ್ಲ. ತನಿಖಾ ತಂಡ ಬಯಸುವ ಎಲ್ಲ ಬಗೆಯ ಸಹಕಾರವನ್ನೂ ರಾಜ್ಯ ಸರ್ಕಾರ ನೀಡುತ್ತದೆ~ ಎಂದರು.

ಇದೇ ವೇಳೆ ಅರಣ್ಯ ಸಚಿವ ಸಿ.ಪಿ.ಯೋಗೀಶ್ವರ್ ಒಡೆತನದ ಮೆಗಾಸಿಟಿ ಡೆವಲಪರ್ಸ್ ವಂಚನೆ ಪ್ರಕರಣ ಕುರಿತು ಪ್ರಶ್ನಿಸಿದಾಗ, `ಈ ಪ್ರಕರಣ ನ್ಯಾಯಾಲಯದಲ್ಲಿದೆ. ನಾನು ಯಾವುದೇ ಪ್ರತಿಕ್ರಿಯೆಯನ್ನೂ ನೀಡುವುದಿಲ್ಲ~ ಎಂದು ಹೇಳಿದರು.


ಬಳ್ಳಾರಿ ಡಿಸಿಎಫ್ ಹುದ್ದೆಯಲ್ಲಿದ್ದ ಐಎಫ್‌ಎಸ್ ಅಧಿಕಾರಿ ಎಸ್.ಮುತ್ತಯ್ಯ ಎಎಂಸಿಯ ಎಲ್ಲ ಅಕ್ರಮಗಳಿಗೆ ಸಾಥ್ ನೀಡಿದ್ದರು ಎಂಬುದು ಈಗಾಗಲೇ ಬಹಿರಂಗವಾಗಿದೆ. ಅವರೊಂದಿಗೆ ಬಳ್ಳಾರಿಯ ಜಿಲ್ಲಾಧಿಕಾರಿ, ಎಸ್.ಪಿ ಹುದ್ದೆಯಲ್ಲಿದ್ದ ಹಿರಿಯ ಅಧಿಕಾರಿಗಳು, ಗಣಿ, ಅರಣ್ಯ, ಪೊಲೀಸ್, ಸಾರಿಗೆ ಇಲಾಖೆಯಲ್ಲಿ ಕೆಲಸ ಮಾಡಿದ್ದ ಅಧಿಕಾರಿಗಳನ್ನೂ ಸಿಬಿಐ ತನಿಖೆಗೆ ಒಳಪಡಿಸಲಿದೆ.

ಜಿಂದಾಲ್‌ಗೂ ನಂಟು: ಅಸೋಸಿಯೇಟೆಡ್ ಗಣಿ ಕಂಪೆನಿ ತನ್ನದೇ ಸಹವರ್ತಿ ಕಂಪೆನಿಯಾದ ಓಎಂಸಿಗೆ ಅದಿರು ಪೂರೈಕೆ ಮಾಡಿಲ್ಲ. ಬಳ್ಳಾರಿಯ ತೋರಣಗಲ್ಲಿನಲ್ಲಿರುವ ಜಿಂದಾಲ್ ಉಕ್ಕು ಕಾರ್ಖಾನೆಗೆ 4.88 ಲಕ್ಷ ಟನ್ ಅದಿರು ಪೂರೈಸಿದೆ. ಈ ಪೈಕಿ 3.03 ಲಕ್ಷ ಟನ್ ಅದಿರು ಸರ್ಕಾರದ ಪರವಾನಗಿ ಇಲ್ಲದೇ ಪೂರೈಕೆಯಾಗಿದೆ. ಪರಿಣಾಮವಾಗಿ ಎಎಂಸಿಯಿಂದ ಅಕ್ರಮ ಅದಿರನ್ನು ಖರೀದಿಸಿದ ಆರೋಪದ ಮೇಲೆ ಜಿಂದಾಲ್ ಕಂಪೆನಿಯ ಆಡಳಿತವನ್ನೂ ಸಿಬಿಐ ತನಿಖೆಗೆ ಒಳಪಡಿಸುವ ಸಾಧ್ಯತೆ ಇದೆ.

ಇನ್ನು ಬೇಲೆಕೇರಿ ಬಂದರಿನಲ್ಲಿ ಅರಣ್ಯ ಇಲಾಖೆ ಮುಟ್ಟುಗೋಲು ಹಾಕಿಕೊಂಡಿದ್ದ ಅದಿರಿನ ಕಳ್ಳಸಾಗಣೆಯಲ್ಲಿ ಭಾಗಿಯಾದ ಆರೋಪ ಎದುರಿಸುತ್ತಿರುವ ರಾಜಮಹಲ್ ಸಿಲ್ಕ್ಸ್, ಎಸ್‌ಎಸ್‌ಟಿಎ, ವಿಎಸ್‌ಎಲ್, ಟ್ವೆಂಟಿ ಫಸ್ಟ್ ಸೆಂಚುರಿ ಕಂಪೆನಿಗಳು ಕೂಡ ಎಎಂಸಿ ಜೊತೆ ವ್ಯಾವಹಾರಿಕ ಸಂಬಂಧ ಹೊಂದಿವೆ. ಈ ಎಲ್ಲ ಕಂಪೆನಿಗಳೂ ಎಎಂಸಿಯ ಅಕ್ರಮದಲ್ಲಿ ಷಾಮೀಲಾದ ಆರೋಪವೂ ಇದೆ. ಇದರೊಂದಿಗೆ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣವೂ ಸಿಬಿಐ ತೆಕ್ಕೆಗೆ ಸೇರಲಿದೆ.

`ಮೈನಿಂಗ್ ಗ್ರೂಪ್~ನತ್ತ ಚಿತ್ತ: ಸರ್ಕಾರದ ಆಡಳಿತ ವ್ಯವಸ್ಥೆಯನ್ನು ದುರ್ಬಳಕೆ ಮಾಡಿಕೊಂಡು ಗಣಿ ಮಾಲೀಕರಿಂದ ಹಫ್ತಾ ವಸೂಲಿ ಮಾಡಿದ ಆರೋಪವೂ ರೆಡ್ಡಿ ಅವರ ಮೇಲಿದೆ. 30ಕ್ಕೂ ಹೆಚ್ಚು ಗಣಿ ಕಂಪೆನಿಗಳಿಂದ ಹಫ್ತಾ ಪಾವತಿಯಾಗುತ್ತಿತ್ತು ಎಂಬುದನ್ನು ಲೋಕಾಯುಕ್ತ ವರದಿ ಬಹಿರಂಗಪಡಿಸಿದೆ.

ಜನಾರ್ದನ ರೆಡ್ಡಿಯವರ ಪ್ರಮುಖ ಸಹಚರರಾದ ಸ್ವಸ್ತಿಕ್ ನಾಗರಾಜ್, ಖಾರದಪುಡಿ ಮಹೇಶ್, ಕೆ.ಎಂ.ಅಲಿಖಾನ್, ವಿ.ಮಧುಕುಮಾರ್ ವರ್ಮಾ ಹಫ್ತಾ ವಸೂಲಿಯ ಏಜೆಂಟರಾಗಿದ್ದರು ಎಂಬ ಅಂಶವೂ ವರದಿಯಲ್ಲಿದೆ.

ಗಣಿ ಉದ್ಯಮದಲ್ಲಿ ಕೆಲವೇ ವರ್ಷಗಳ ಅವಧಿಯಲ್ಲಿ ಭಾರಿ ಎತ್ತರಕ್ಕೆ ಬೆಳೆದ ಹಲವು ಕಂಪೆನಿಗಳು ಜನಾರ್ದನ ರೆಡ್ಡಿ ಹಿಡಿತದಲ್ಲಿದ್ದ `ಮೈನಿಂಗ್ ಗ್ರೂಪ್~ನ ಭಾಗವಾಗಿದ್ದವು. ಅಲಿಖಾನ್ ಮತ್ತು ವಿ.ಚಂದ್ರಶೇಖರ್ ನಿರ್ದೇಶಕರಾಗಿದ್ದ ದೇವಿ ಎಂಟರ್‌ಪ್ರೈಸಸ್, ಮಧುಕುಮಾರ್ ವರ್ಮಾ ಹೆಸರಿನಲ್ಲಿದ್ದ ಮಧುಶ್ರೀ ಎಂಟರ್‌ಪ್ರೈಸಸ್, ಓಬಳಾಪುರಂ ಮೈನಿಂಗ್ ಕಂಪೆನಿಯ ವ್ಯವಸ್ಥಾಪಕ ಬಿ.ವಿ.ಶ್ರೀನಿವಾಸ ರೆಡ್ಡಿ ಹೆಸರಿನಲ್ಲಿದ್ದ ಬಸವೇಶ್ವರ ಮಿನರಲ್ಸ್ ಮತ್ತು ಶ್ರೀ ಮಿನರಲ್ಸ್ ಮೂಲಕ `ಮೈನಿಂಗ್ ಗ್ರೂಪ್~ ಹಫ್ತಾ ವಸೂಲಿ ಮಾಡಿತ್ತು ಎಂಬುದು ಆದಾಯ ತೆರಿಗೆ ಇಲಾಖೆಯ ದಾಖಲೆಗಳಿಂದಲೂ ದೃಢಪಟ್ಟಿದೆ. ಈ ಪೈಕಿ ಹಲವರನ್ನು ಈಗಾಗಲೇ ವಿಚಾರಣೆಗೆ ಒಳಪಡಿಸಿರುವ ಸಿಬಿಐ, ಕರ್ನಾಟಕದೊಳಗಿನ ತನಿಖೆಯಲ್ಲಿ ಬಿಸಿ ಮುಟ್ಟಿಸುವ ಸಂಭವ ಇದೆ ಎಂದು ಉನ್ನತ ಮೂಲಗಳು `ಪ್ರಜಾವಾಣಿ~ಗೆ ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT