ಶನಿವಾರ, ನವೆಂಬರ್ 23, 2019
17 °C
ಬಿಸಿಲಿನ ತೀವ್ರತೆ ಹೆಚ್ಚಳ; ಮುಂಜಾಗ್ರತೆಗೆ ನಗರಸಭೆ ಸೂಚನೆ

40.5 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ

Published:
Updated:

ಶಿವಮೊಗ್ಗ: ನಗರದ ಉಷ್ಣಾಂಶ ಗುರುವಾರ ಈ ವರ್ಷದ ದಾಖಲೆಯಾಗಿದೆ. ಗರಿಷ್ಠ 40.5 ಡಿಗ್ರಿ ಸೆಲ್ಸಿಯಸ್ ಮುಟ್ಟಿದ್ದು, ಈ ಬೇಸಿಗೆಯ ದಾಖಲೆಯಾಗಿದೆ. ಒಂದು ವಾರದ ಹಿಂದೆ 40 ಡಿಗ್ರಿ ಸೆಲ್ಸಿಯಸ್ ತಲುಪಿದ್ದ ಉಷ್ಣಾಂಶ ಗುರುವಾರ ಈ ಗಡಿಯನ್ನೂ ದಾಟಿದೆ.ಬೇಸಿಗೆ ಬಿಸಿಲಿನ ತೀವ್ರತೆ ನಗರದಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಗರಸಭೆ ನಾಗರಿಕರಿಗೆ ಮುಂಜಾಗ್ರತೆ ಕ್ರಮಗಳನ್ನು ಸೂಚಿಸಿದೆ.

ಬಿಸಿಲಿನ ತೀವ್ರತೆಯಿಂದ ಸಾಂಕ್ರಾಮಿಕ ರೋಗಗಳಾದ ಕಾಲರಾ, ಕರಳುಬೇನೆ, ವಿಷಮಶೀತ ಜ್ವರ,  ಕಾಮಾಲೆಯಂಥ ನೀರಿನಿಂದ ಬರುವ ರೋಗಗಳು ಹೆಚ್ಚು ವರದಿಯಾಗುವ ಸಾಧ್ಯತೆ  ಇರುವುದರಿಂದ ಈ ರೋಗದ ಬಗ್ಗೆ ಮುಂಜಾಗ್ರತೆ ವಹಿಸಬೇಕು ಎಂದು ಸಲಹೆ ನೀಡಿದೆ.ಕುಡಿಯುವ ನೀರು ಮತ್ತು ಆಹಾರ ಪದಾರ್ಥಗಳು ಕಲುಷಿತವಾಗದಂತೆ ನೋಡಿಕೊಳ್ಳುವುದು.   ರಸ್ತೆ ಬದಿಯಲ್ಲಿ ತೆರೆದಿಟ್ಟು ಮಾರಾಟ ಮಾಡುವ ಕೊಯ್ದ ಹಣ್ಣು ಹಾಗು ಕರಿದ ತಿಂಡಿ ತಿನಿಸುಗಳನ್ನು ಸಾರ್ವಜನಿಕರು ತಿನ್ನಬಾರದು. ಕೊಳಚೆ ನೀರು, ಕಸ ಕಡ್ಡಿ, ಕೊಳೆತ ತರಕಾರಿ ಸೊಪ್ಪು, ಹಣ್ಣು ಹಾಗು ಇತರ ತ್ಯಾಜ್ಯ ವಸ್ತುಗಳನ್ನು ಸೂಕ್ತವಾಗಿ ವಿಲೇವಾರಿ ಮಾಡಿ ಮನೆಯ ಸುತ್ತ-ಮುತ್ತಲಿನ ಪ್ರದೇಶ ಚೊಕ್ಕವಾಗಿ ಇಟ್ಟುಕೊಳ್ಳಬೇಕು ಎಂದು ತಿಳಿಸಿದೆ.ಹೋಟೆಲ್ ಮಾಲಿಕರು ಟೇಬಲ್, ತಟ್ಟೆ, ಲೋಟ ಹಾಗೂ ಆಹಾರ ತಯಾರಿಕೆಗೆ ಬಳಸುವ ಪಾತ್ರೆಗಳನ್ನು ಪ್ರತಿ ದಿನ ಶುಚಿಗೊಳಿಸಿ, ಬಳಸಬೇಕು. ಹಾಗೆಯೇ ಸಾರ್ವಜನಿಕರಿಗೆ ಕುಡಿಯಲು ಬಿಸಿ ನೀರು ಒದಗಿಸಬೇಕು ಎಂದು ಸೂಚಿಸಿದೆ.ಹೋಟೆಲ್‌ಗಳಲ್ಲಿ ಸಾರ್ವಜನಿಕರಿಗೆ ಕುಡಿಯಲು ಬಿಸಿ ನೀರನ್ನು ಉಪಯೋಗಿಸಬೇಕು. ಬಿಸಿನೀರನ್ನು ನೀಡದೇ ಇರುವ ಹೋಟೆಲ್‌ಗಳು ಕಂಡುಬಂದಲ್ಲಿ ಗ್ರಾಹಕರು ನಗರಸಭೆಗೆ ದೂರು ನೀಡಬಹುದು. (ಸಹಾಯವಾಣಿ: 08182- 226592).ವಾಂತಿ, ಭೇದಿ, ಜ್ವರ ಇತರ ಸಾಂಕ್ರಾಮಿಕ ರೋಗಗಳು ಕಂಡುಬಂದ ತಕ್ಷಣ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು ನಗರಸಭೆ ಪ್ರಕಟಣೆಯಲ್ಲಿ ತಿಳಿಸಿದೆ.

ಪ್ರತಿಕ್ರಿಯಿಸಿ (+)