409 ದೂರುಗಳ ವಿಲೇವಾರಿ

6

409 ದೂರುಗಳ ವಿಲೇವಾರಿ

Published:
Updated:

ರಾಮನಗರ: ರಾಜ್ಯ ಮಾನವ ಹಕ್ಕುಗಳ ಆಯೋಗಕ್ಕೆ ರಾಮನಗರ ಜಿಲ್ಲೆಯ ವಿವಿಧ ಇಲಾಖೆಗಳಿಗೆ ಸಂಬಂಧಿಸಿದ 582 ದೂರುಗಳು ದಾಖಲಾಗಿದ್ದು, ಅದರಲ್ಲಿ 409 ದೂರುಗಳು ವಿಲೇವಾರಿಯಾಗಿವೆ ಎಂದು ಆಯೋಗದ ಸದಸ್ಯ ಪಾರ್ಥಸಾರಥಿ ತಿಳಿಸಿದರು.ರಾಮನಗರದ ಮಿನಿ ವಿಧಾನಸೌಧದಲ್ಲಿ ಜಿಲ್ಲಾಧಿಕಾರಿ, ಪೊಲೀಸ್ ವರಿಷ್ಠಾಧಿಕಾರಿ ಒಳಗೊಂಡಂತೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳ ಮಟ್ಟದ ಸಭೆಯ ನಂತರ ಅವರು ಸುದ್ದಿಗಾರರ ಜತೆ ಮಾತನಾಡಿದರು.ಜಿಲ್ಲೆಗೆ ಸಂಬಂಧಿಸಿದಂತೆ ಒಟ್ಟಾರೆ 173 ಪ್ರಕರಣಗಳು ಇತ್ಯರ್ಥವಾಗಬೇಕಿದೆ ಎಂದು ಅವರು ಮಾಹಿತಿ ನೀಡಿದರು. ರಾಜ್ಯಮಟ್ಟದಲ್ಲಿ ವಿವಿಧ ಜಿಲ್ಲೆಗಳಿಂದ ಒಟ್ಟಾರೆ 27 ಸಾವಿರ ದೂರುಗಳು ಆಯೋಗದಲ್ಲಿ ದಾಖಲಾಗಿದ್ದು, ಅದರಲ್ಲಿ 5500 ಪ್ರಕರಣಗಳನ್ನು ಆಯೋಗ ಸ್ವಯಂ ಪ್ರೇರಣೆಯಿಂದ ದಾಖಲಿಸಿದೆ ಎಂದರು. ದಾಖಲಾಗಿರುವ ಪ್ರಕರಣಗಳ ಪೈಕಿ 17 ಸಾವಿರ ವಿಲೇವಾರಿ ಆಗಿವೆ. ಇದರಲ್ಲಿ ಹಲವು ದೂರುಗಳು ಆಡಳಿತಾತ್ಮಕ ಹಂತದಲ್ಲಿಯೇ ವಿಲೇವಾರಿ ಆಗಿವೆ ಎಂದು ಅವರು ವಿವರಿಸಿದರು.ಜಿಲ್ಲೆಯ ಒಂದು ಪ್ರಕರಣ ಸಿಓಡಿಗೆ: ಚನ್ನಪಟ್ಟಣದಲ್ಲಿ ಕಲ್ಲುಗಣಿ ಸ್ಫೋಟದ ಕಲ್ಲು ಅಪ್ಪಳಿಸಿ ವಿದ್ಯಾರ್ಥಿನಿಯೊಬ್ಬರು ಅಸುನೀಗಿದ್ದರು. ಈ ಕುರಿತು ಪತ್ರಿಕೆಗಳಲ್ಲಿ ಪ್ರಕಟವಾದ ವರದಿ ಆಧರಿಸಿ ಮಾನವ ಹಕ್ಕುಗಳ ಆಯೋಗ ಸ್ವ ಪ್ರೇರಣೆಯಿಂದ ಪ್ರಕರಣ ದಾಖಲಿಸಿಕೊಂಡಿತು. ಇದರ ವಿಚಾರಣೆ ನಡೆಸುವ ಸಂದರ್ಭದಲ್ಲಿ ಅಲ್ಲಿ ನಡೆಯುತ್ತಿದ್ದ ಕಲ್ಲುಗಣಿಗಾರಿಕೆ ಅನಧಿಕೃತವಾದುದು ಎಂದು ತಿಳಿದು ಬಂದಿತು. ಕೂಡಲೇ ರಾಜ್ಯ ಸರ್ಕಾರಕ್ಕೆ ಈ ಪ್ರಕರಣವನ್ನು ಸಿಓಡಿಗೆ ವಹಿಸುವಂತೆ ಹಾಗೂ ಅಸುನೀಗಿದ ವಿದ್ಯಾರ್ಥಿನಿಯ ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ಪರಿಹಾರ ಒದಗಿಸುವಂತೆ ಶಿಫಾರಸು ಮಾಡಲಾಯಿತು. ಇದರಂತೆ ಈ ಪ್ರಕರಣವನ್ನು ಸಿಓಡಿ ತನಿಖೆ ನಡೆಸುತ್ತಿದೆ ಎಂದು ಅವರು ಪ್ರತಿಕ್ರಿಯಿಸಿದರು.ಇದೇ ರೀತಿ ಜಿಲ್ಲೆಯ ಅಕ್ರಮ ಮರಳುಗಾರಿಕೆ ಬಗ್ಗೆಯೂ ಆಯೋಗಕ್ಕೆ ದೂರು ಬಂದಿದ್ದು, ಅದನ್ನು ಪರಿಶೀಲಿಸಲಾಗುತ್ತಿದೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.ಮಲ ಹೋರುವ ಪದ್ಧತಿ ನಿರ್ಮೂಲನೆ ಆಗಿಲ್ಲ: ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಲ ಹೋರುವ ಪದ್ಧತಿಯನ್ನು ನಿಷೇಧಿಸಿ ಸಾಕಷ್ಟು ವರ್ಷಗಳಾಗಿದ್ದರೂ ಈ ಪದ್ಧತಿ ಸಂಪೂರ್ಣವಾಗಿ ನಿರ್ಮೂಲನೆ ಆಗಿಲ್ಲ. ಆದರೂ ರಾಜ್ಯದಲ್ಲಿ ಈ ಪದ್ಧತಿ ನಿರ್ಮೂಲನೆ ಮಾಡಲಾಗಿದೆ ಎಂದು ಇತ್ತೀಚೆಗೆ ಸುಪ್ರೀಂಕೋರ್ಟ್‌ಗೆ ಅಫಿಡವಿಟ್ ಸಲ್ಲಿಸಿದೆ ಎಂದು ಅವರು ಬೇಸರ ವ್ಯಕ್ತಪಡಿಸಿದರು.ರಾಜ್ಯದಲ್ಲಿ ಎಲ್ಲೆಲ್ಲಿ ಒಳ ಚರಂಡಿ ವ್ಯವಸ್ಥೆ ಇಲ್ಲವೋ ಅಲ್ಲೆಲ್ಲ ಈಗಲೂ ಮಲ ಹೋರುವ ಪದ್ಧತಿ ಇದೆ. ಒಳ ಚರಂಡಿ ಇರುವ ಪ್ರದೇಶಗಳಲ್ಲಿಯೂ ಇದು ನಡೆಯುತ್ತಿದೆ. ನಗರ ಮತ್ತು ಪಟ್ಟಣಗಳಲ್ಲಿನ ಸ್ಥಳೀಯ ಆಡಳಿತಗಳೇ ಮಲ ಹೋರುವ ಯಂತ್ರಗಳನ್ನು ಸರಿಯಾಗಿ ಖರೀದಿಸಿಲ್ಲ. ಆದರೆ ರಾಜ್ಯ ಸರ್ಕಾರ ಮಾತ್ರ ಸಂಪೂರ್ಣ ನಿರ್ಮೂಲನೆ ಆಗಿದೆ ಎಂದು ಹೇಳುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಹೊರಗುತ್ತಿಗೆ ನಿಲ್ಲಬೇಕು: ರಾಜ್ಯದಲ್ಲಿ ಪ್ರತಿಯೊಂದು ಇಲಾಖೆಯಲ್ಲಿಯೂ ಹೊರಗುತ್ತಿಗೆಯ ಕೆಲಸಗಳು ನಡೆಯುತ್ತಿವೆ. ಹೊರಗುತ್ತಿಗೆಯಲ್ಲಿ ನೌಕರರನ್ನು ತೆಗೆದುಕೊಳ್ಳಲಾಗುತ್ತಿದೆ. ಇದು ಅತ್ಯಂತ ಅಪಾಯಕಾರಿಯಾದುದು. ಮುಂದೊಂದು ದಿನ ಇದರಿಂದ ದೊಡ್ಡ ಆಘಾತಗಳನ್ನು ಸರ್ಕಾರ ಎದುರಿಸಬೇಕಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.ಸಮಾಜ ಕಲ್ಯಾಣ ಇಲಾಖೆಗಳು ನಡೆಸುವ ವಿದ್ಯಾರ್ಥಿ ನಿಲಯಗಳು, ಮೊರಾರ್ಜಿ ದೇಸಾಯಿ ಶಾಲೆಗಳಲ್ಲಿನ ಶಿಕ್ಷಣ ಹಾಗೂ ಶಿಕ್ಷಕೇತರ ಸಿಬ್ಬಂದಿಗಳು ಸೇರಿದಂತೆ ಹಲವಾರು ಇಲಾಖೆಗಳಲ್ಲಿ ವಿವಿಧ ಮಟ್ಟದಲ್ಲಿ ಹೊರಗುತ್ತಿಗೆ ಆವರಿಸಿದೆ. ಹೊರಗುತ್ತಿಗೆ ಸಂಸ್ಥೆಗಳು ಸರ್ಕಾರದಿಂದ ಹಣ ಸ್ವೀಕರಿಸಿ, ಸಿಬ್ಬಂದಿಗೆ ಸರಿಯಾಗಿ ವೇತನ ನೀಡದೆ ಶೋಷಿಸುತ್ತಿವೆ. ಇದರಿಂದ ಸಿಬ್ಬಂದಿಗಳಲ್ಲಿ ಆತಂಕ, ಅಸಮಾಧಾನ ಮಡುಗಟ್ಟಿದೆ ಎಂದು ಅವರು ವಿವರಿಸಿದರು.ರಾಜ್ಯ ಮಾನವ ಹಕ್ಕುಗಳ ಆಯೋಗವು ಈ ಹೊರಗುತ್ತಿಗೆ ಪದ್ಧತಿಯನ್ನು ಕೈಬಿಟ್ಟು ಸರ್ಕಾರದ ವತಿಯಿಂದ ನೇಮಕಾತಿ ಮಾಡಿಕೊಳ್ಳುವಂತೆ ಅಥವಾ ಎಲ್ಲರನ್ನೂ ಕಾಯಂಗೊಳಿಸುವಂತೆ ಶಿಫಾರಸು ಮಾಡಿದೆ. ಆದರೆ ಅದಕ್ಕೆ ಸರ್ಕಾರ ಸೂಕ್ತ ರೀತಿಯಲ್ಲಿ ಸ್ಪಂದಿಸಿಲ್ಲ. ಬದಲಿಗೆ ವಿಶ್ವ ಬ್ಯಾಂಕ್ ಮತ್ತು ಆಡಳಿತ ಸುಧಾರಣಾ ಆಯೋಗಗಳು ಹೊರಗುತ್ತಿಗೆ ಪದ್ಧತಿ ಅಳವಡಿಸಿಕೊಳ್ಳುವಂತೆ ಸೂಚಿಸಿವೆ. ಹಾಗಾಗಿ ಇವು ಅನಿವಾರ್ಯವಾಗಿವೆ ಎಂದು ಹೇಳಿದೆ ಎಂದು ಅವರು ಬೇಸರಪಟ್ಟರು.ಸಮಾನ ಕೆಲಸಕ್ಕೆ ಸಮಾನ ವೇತನ ಇರಬೇಕು. ಕಾಯಂ ಹಾಗೂ ಹೊರಗುತ್ತಿಗೆ ಸಿಬ್ಬಂದಿ ನಿರ್ವಹಿಸುವ ಒಂದೇ ಬಗೆಯ ಕೆಲಸಕ್ಕೆ ವೇತನ ತಾರತಮ್ಯ ಮಾಡಬಾರದು ಎಂಬುದು ಆಯೋಗ ಆಶಯ. ಆದರೆ ಸರ್ಕಾರಗಳು ಇದನ್ನು ಅರ್ಥ ಮಾಡಿಕೊಂಡು ಅನುಷ್ಠಾನಗೊಳಿಸಬೇಕು ಎಂದು ಅವರು ಹೇಳಿದರು.ಕಳ್ಳಬಟ್ಟಿಯನ್ನು ನಿಷೇಧಿಸಿರುವ ಸರ್ಕಾರ ಅದನ್ನು ತಡೆಗಟ್ಟುವಲ್ಲಿ ವಿಫಲವಾಗಿದೆ. ಇದರಿಂದ ಹಲವಾರು ಮುಗ್ಧ ಜನತೆ ಸಾವನ್ನಪ್ಪುತ್ತಿದ್ದಾರೆ. ನಿಷೇಧ ಮಾಡಿದ ಮೇಲೆ ಅದನ್ನು ಸಂಪೂರ್ಣವಾಗಿ ಜಾರಿಗೊಳಿಸಬೇಕಾದ ಕರ್ತವ್ಯ ಸರ್ಕಾರದ್ದು. ಇಲ್ಲದಿದ್ದರೆ ಅದು ಸರ್ಕಾರದ ವೈಫಲ್ಯವೇ ಹೊರತು, ಅದನ್ನು ಕುಡಿದ ಜನತೆಯದ್ದಲ್ಲ ಎಂದ ಅವರು, ಹಾಗಾಗಿ ಕಳ್ಳಬಟ್ಟಿ ಕುಡಿದು ಸತ್ತವರಿಗೆ ಪರಿಹಾರ ನೀಡುವುದಿಲ್ಲ ಎಂದು ಸರ್ಕಾರ ಹೇಳುವ ವಾದ ಸರಿಯಲ್ಲ ಎಂದರು.ರಾಮನಗರ ಸೇರಿದಂತೆ ರಾಜ್ಯದಲ್ಲಿ ನೀರು, ವಸತಿ, ಆರೋಗ್ಯ, ಪರಿಸರ ಸೇರಿದಂತೆ ಹಲವಾರು ಬಗೆಯ ಮೂಲ ಸೌಕರ್ಯ ಸಮಸ್ಯೆಗಳನ್ನು ಜನತೆ ಎದುರಿಸುತ್ತಿದ್ದಾರೆ. ಇವುಗಳನ್ನು ಒದಗಿಸಬೇಕಾದದ್ದು ಸರ್ಕಾರ, ಜಿಲ್ಲಾಡಳಿತ ಮತ್ತು ಸ್ಥಳೀಯ ಸಂಸ್ಥೆಗಳ ಕರ್ತವ್ಯ. ಇವುಗಳನ್ನು ನೀಡುವಲ್ಲಿ ವಿಫಲವಾಗಿರುವುದರಿಂದ ಸಾಮಾನ್ಯ ಜನತೆಗೆ ವಿವಿಧ ಬಗೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗುತ್ತಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry