41 ಅಡಿ ಎತ್ತರದ ಆಂಜನೇಯ ಅನಾವರಣ

7

41 ಅಡಿ ಎತ್ತರದ ಆಂಜನೇಯ ಅನಾವರಣ

Published:
Updated:

ಮೈಸೂರು: ದೇಶದಲ್ಲೇ ಅತಿ ಎತ್ತರದ ಹನುಮಾನ್ ಮೂರ್ತಿಯನ್ನು ನಗರದ ಸಚ್ಚಿದಾನಂದ ಆಶ್ರಮದ ಆವರಣದಲ್ಲಿ ಬುಧವಾರ ಅನಾವರಣಗೊಳಿಸಲಾಯಿತು. ದೇಶ ವಿದೇಶಗಳಿಂದ ಬಂದಿದ್ದ ಸಹಸ್ರಾರು ಭಕ್ತರು ಇದಕ್ಕೆ ಸಾಕ್ಷಿಯಾದರು.ನೆಲಮಟ್ಟದಿಂದ 70 ಅಡಿ ಎತ್ತರದಲ್ಲಿರುವ ಹನುಮಾನ್ ಮೂರ್ತಿಗೆ ಕ್ರೇನ್ ಸಹಾಯದಿಂದ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಶಾಸ್ತ್ರೋಕ್ತವಾಗಿ ಪೂಜೆ-ಪುನಸ್ಕಾರಗಳನ್ನು ನೆರವೇರಿಸಿದರು. ಬಳಿಕ 70 ನದಿಗಳ ನೀರಿನಿಂದ ಬೃಹತ್ ಮೂರ್ತಿಗೆ ಜಲಾಭಿಷೇಕ ಮಾಡಲಾಯಿತು. ಅಭಿಷೇಕದ ನೀರನ್ನು ಗೋಪುರದ ಮೇಲಿಂದ ಭಕ್ತ ಸಮೂಹಕ್ಕೆ ಪ್ರೋಕ್ಷಣೆ ಮಾಡಲಾಯಿತು.ಹನುಮಾನ್ ವಿಗ್ರಹ ಅನಾವರಣ ಮಾಡಲು ಆಶ್ರಮದಲ್ಲಿ ನಾಲ್ಕು ದಿನಗಳಿಂದ ಹೋಮ-ಹವನ ನಿರಂತರವಾಗಿ ನಡೆದಿತ್ತು. ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳ ರಾಜ್ಯಗಳ ಭಕ್ತರಲ್ಲದೆ ವಿದೇಶಿ ಭಕ್ತರು ಇದ್ದರು. ಎತ್ತರದ ಹನುಮ ಮೂರ್ತಿಗೆ ಸ್ವಾಮೀಜಿ ಪೂಜೆ ಸಲ್ಲಿಸಿ, ಪುಷ್ಪನಮನ ಸಲ್ಲಿಸುತ್ತಿದ್ದಂತೆ ಭಕ್ತ ವೃಂದ ಪುನೀತಗೊಂಡಿತು. ಹನುಮ ಸ್ಮರಣೆ ಮಾಡಿದ ಭಕ್ತವೃಂದ ಭಕ್ತಿಯ ಪರಾಕಾಷ್ಠೆಯಲ್ಲಿ ಮಿಂದಿತು.`ಕಾರ್ಯಸಿದ್ಧಿ ಹನುಮಾನ್ ಭಕ್ತರ ದುಃಖ ನಿವಾರಣೆ ಮಾಡಿ, ಕೋರಿಕೆ ನೆರವೇರಿಸಬಲ್ಲ. ಆಶ್ರಮದಲ್ಲಿ ಹನುಮಾನ್ ಮೂರ್ತಿ ನಿಲ್ಲಿಸಬೇಕೆಂಬ ಸಂಕಲ್ಪ ತೊಟ್ಟಿದ್ದರಿಂದ ಪ್ರತಿಷ್ಠಾಪನೆ ಮಾಡಲಾಗಿದೆ. ಅತ್ಯಂತ ಅಪರೂಪದ ಏಕಶಿಲೆಯಲ್ಲಿ ಹನುಮಾನ್ ಮೂರ್ತಿ ಕೆತ್ತಲಾಗಿದೆ. ಮೂರು ವರ್ಷಗಳಿಂದ ಭಕ್ತರು ಬರೆದ 28 ಕೋಟಿ ಹನುಮ ನಾಮವನ್ನು ಸಂಗ್ರಹಿಸಲಾಗಿದೆ' ಎಂದು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸುದ್ದಿಗಾರರಿಗೆ ತಿಳಿಸಿದರು. ಕಿರಿಯ ಸ್ವಾಮೀಜಿ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿ ಇದ್ದರು.ಆಂಧ್ರಪ್ರದೇಶದ ಕಡಪ ಜಿಲ್ಲೆ, ಪುಲಿವೆಂದಲ ತಾಲ್ಲೂಕಿನ ಮಲ್ಲೆಲ ಗ್ರಾಮದಿಂದ ಏಕಶಿಲೆಯನ್ನು 99 ಚಕ್ರಗಳ ಟ್ರಕ್‌ನಲ್ಲಿ ಆಶ್ರಮಕ್ಕೆ ಆರು ತಿಂಗಳ ಹಿಂದೆಯೇ ತರಲಾಗಿತ್ತು. ಮುಖ್ಯಶಿಲ್ಪಿ ಸುಬ್ರಹ್ಮಣ್ಯಾಚಾರ್ ಸೇರಿದಂತೆ 18 ಶಿಲ್ಪಿಗಳು ಹನುಮಾನ್ ಮೂರ್ತಿಯನ್ನು ಸುಂದರವಾಗಿ ಕಡೆದಿದ್ದಾರೆ.

ದೇವಸ್ಥಾನದ ಗೋಪುರದ ಮೇಲಿಂದ ಹನುಮ ಮೂರ್ತಿ 41 ಅಡಿ ಎತ್ತರ ಇದೆ. ದೇವಸ್ಥಾನದ ಮೇಲ್ಚಾವಣಿಯಲ್ಲಿ 8 ಆಂಜನೇಯಸ್ವಾಮಿ ವಿಗ್ರಹಗಳನ್ನು ದಿಕ್ಕಿಗೆ ಒಂದರಂತೆ ಪ್ರತಿಷ್ಠಾಪಿಸಲಾಗಿದೆ. 200 ಟನ್ ತೂಕದ ಹನುಮ ಮೂರ್ತಿ ಪ್ರತಿಷ್ಠಾಪನೆಗೆ ರೂ 2 ಕೋಟಿ ವೆಚ್ಚವಾಗಿದೆ.2003ನೇ ಸಾಲಿನಲ್ಲಿ ಟ್ರಿನಿಡಾಡ್ ದೇಶದಲ್ಲಿ ಪ್ರತಿಷ್ಠಾಪಿಸಲಾದ 85 ಅಡಿ ಎತ್ತರದ ಆಂಜನೇಯಸ್ವಾಮಿ ವಿಗ್ರಹ ಪಾಶ್ಚಿಮಾತ್ಯ ದೇಶಗಳಲ್ಲೇ ಅತಿ ಎತ್ತರದ ಹಿಂದೂ ದೇವತಾಮೂರ್ತಿಯಾಗಿತ್ತು. ಇದೀಗ ಆಶ್ರಮದ ಆವರಣದಲ್ಲಿ ತಲೆ ಎತ್ತಿರುವ ಹನುಮಾನ್ ಮೂರ್ತಿ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಈಗಾಗಲೇ ಪ್ರವಾಸಿಗರ ದಂಡು ಆಶ್ರಮಕ್ಕೆ ಹರಿದುಬರುತ್ತಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry