ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

43 ಲಕ್ಷ ಬಾಕಿ: ಹರಿಯದ ಹೇಮೆ

Last Updated 13 ಅಕ್ಟೋಬರ್ 2011, 9:35 IST
ಅಕ್ಷರ ಗಾತ್ರ

ಮಧುಗಿರಿ: ಮೂರು ವರ್ಷದ ಹಿಂದೆ ಪಟ್ಟಣಕ್ಕೆ ಹೇಮಾವತಿ ನೀರು ಹರಿಸಿದಾಗ ಸಂತಸ ಪಟ್ಟಿದ್ದ ಜನತೆ ಇದೀಗ ನಿರಾಸೆ ಎದುರಿಸುತ್ತಿದ್ದಾರೆ.

ಮತ್ತೆ ಯಥಾ ಪ್ರಕಾರ ನೀರಿಗಾಗಿ ತಲೆ ಮೇಲೆ ಬಿಂದಿಗೆ ಹೊತ್ತು, ಸೈಕಲ್, ಬೈಕ್‌ನಲ್ಲಿ ಬಿಂದಿಗೆ ಹಾಕಿಕೊಂಡು ಮುಂಜಾನೆ-ಮುಸ್ಸಂಜೆ ಎಳೆನೀರು ಬಾವಿ, ತುಮಕೂರು ಗೇಟ್‌ಗೆ ಅಲೆಯುವುದು ತಪ್ಪಲಿಲ್ಲ ಎಂದು ಪಟ್ಟಣದ ಜನ ಪರಿತಪಿಸುತ್ತಿದ್ದಾರೆ.

ಕೆಲ ಅನುಕೂಲಸ್ಥರು ಮಿನರಲ್ ವಾಟರ್ ಕ್ಯಾನ್ ಖರೀದಿಸುತ್ತಿದ್ದಾರೆ. ಮದುವೆ, ನಾಮಕರಣ ಇತರೆ ಸಮಾರಂಭಗಳಿಗೆ ಟ್ಯಾಂಕರ್‌ಗಳಲ್ಲಿ ನೀರನ್ನು ತರಿಸುವುದು ಸಾಮಾನ್ಯವಾಗಿದೆ.

ಬಳ್ಳಾಪುರದಿಂದ ಸಿದ್ದಾಪುರ ಕೆರೆಗೆ ಪೈಪ್‌ಲೈನ್ ಮೂಲಕ ನೀರು ಹರಿಸಲಾಗುತ್ತದೆ. ವಿದ್ಯುತ್ ಬಳಸಿ ನೀರನ್ನು ಹರಿಸಬೇಕಿದೆ. ಈವರೆಗೆ 48 ಲಕ್ಷ ರೂಪಾಯಿ ವಿದ್ಯುತ್ ಬಾಕಿ ಉಳಿಸಿಕೊಳ್ಳಲಾಗಿದೆ. ಇದರಲ್ಲಿ ರೂ. 5 ಲಕ್ಷವನ್ನು ಪುರಸಭೆ ಪಾವತಿಸಿದ್ದು, ಇನ್ನೂ ರೂ. 43 ಲಕ್ಷ ಬಾಕಿ ಪಾವತಿಸಬೇಕಾಗಿದೆ. ವಿದ್ಯುತ್ ಬಾಕಿ ಹಣ ಪಾವತಿಸದ ಹಿನ್ನೆಲೆಯಲ್ಲಿ ಬೆಸ್ಕಾಂ ಸಂಪರ್ಕ ಕಡಿತಗೊಳಿಸಿದೆ.

ಮಧುಗಿರಿಗೆ ಕಳೆದ ವರ್ಷದ ಹಿಂದೆ ಹೇಮಾವತಿ ಕುಡಿಯುವ ನೀರು ಸೌಲಭ್ಯ ಕಲ್ಪಿಸಿದ ಸಮಯದಲ್ಲಿ ಜನರೂ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೆ ನಂತರದ ದಿನಗಳಲ್ಲಿ ವಿದ್ಯುತ್ ಬಾಕಿ ಉಳಿಸಿಕೊಂಡಿದ್ದರಿಂದ ಸಂಪರ್ಕ ಕಡಿತಗೊಳಿಸಲಾಗಿತ್ತು.

ಮಾಧ್ಯಮದಲ್ಲಿ ವರದಿ ಬಂದ ಹಿನ್ನೆಲೆಯಲ್ಲಿ ಬಾಕಿ ಪವತಿಸಿ ನೀರು ಹರಿಸುವ ಕೆಲಸ ನಡೆದಿತ್ತು. ಇದೀಗ ಮತ್ತೆ ವಿದ್ಯುತ್ ಶುಲ್ಕ ಬಾಕಿ ಉಳಿಸಿಕೊಂಡಿರುವುದರಿಂದ ಸಂಪರ್ಕ ಕಡಿತಗೊಳಿಸಲಾಗಿದೆ. ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಅಗತ್ಯ ನಿರ್ಧಾರ ಕೈಗೊಂಡು ವಿದ್ಯುತ್ ಬಾಕಿ ಹಣ ಪಾವತಿಸದೆ ಜನರು ನೀರಿಗಾಗಿ ಪರಿತಪಿಸುವಂತಾಗಿದೆ.

`ವಿದ್ಯುತ್ ಬಾಕಿ ಪಾವತಿಸಲು ಹಣ ಬಿಡುಗಡೆ ಮಾಡುವಂತೆ ಕೋರಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಹಣ ಬಂದ ನಂತರ ಪಾವತಿಸಲಾಗುವುದು. ಕೆಲ ಕಡೆ ಪೈಪ್ ಒಡೆದಿದ್ದು, ದುರಸ್ತಿ ಮಾಡಿಸಬೇಕಿದೆ~ ಎಂದು ಪುರಸಭೆ ಮುಖ್ಯಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

ತಾಲ್ಲೂಕಿನ ಪರಿಸ್ಥಿತಿ ಬಿಗಡಾಯಿಸಿದೆ. 500-600 ಅಡಿ ಆಳ ಕೊರೆದರೂ ಕೊಳವೆ ಬಾವಿಗಳಲ್ಲಿ ನೀರು ಸಿಗುತ್ತಿಲ್ಲ. ಸಿಕ್ಕರೂ ಅದು ಕುಡಿಯಲು ಯೋಗ್ಯವಾಗಿಲ್ಲ. ಗಡಸು ನೀರು, ಫ್ಲೋರೈಡ್‌ನಿಂದಾಗಿ ಕುಡಿಯಲು ಯೋಗ್ಯವಾಗಿಲ್ಲ.

ಮಕ್ಕಳಲ್ಲಿ ಹಲ್ಲು ಹಳದಿ ಬಣ್ಣಕ್ಕೆ ತಿರುಗುವುದು, ಮಧ್ಯಮ ವಯಸ್ಕರಲ್ಲಿ, ಬೆನ್ನು ನೋವು, ಸೊಂಟನೋವು, ಮಂಡಿನೋವು, ಕೈ-ಕಾಲು ನೋವು ಕಾಣಿಸಿಕೊಳ್ಳವುದು ಈಚಿನ ದಿನಗಳಲ್ಲಿ ಹೆಚ್ಚಿದ್ದು, ಇದಕ್ಕೆ ಫ್ಲೋರೈಡ್ ನೀರೇ ಕಾರಣ ಎಂದು ತಜ್ಞ ವೈದ್ಯರ ಅಭಿಪ್ರಾಯ.

ದೋಷ: ಬಳ್ಳಾಪುರದಿಂದ ಸಿದ್ದಾಪುರ ಕೆರೆಗೆ ಪೈಪ್‌ಲೈನ್ ಮೂಲಕ ವಿದ್ಯುತ್ ಬಳಸಿ ನೀರು ಹರಿಸಲಾಗಿದೆ. ಆದ್ದರಿಂದ ವಿದ್ಯುತ್‌ಬಿಲ್ ದುಬಾರಿಯಾಗಿ ಸಮಸ್ಯೆ ಜಟಿಲವಾಗಿದೆ. ನೈಸರ್ಗಿಕ ಹಳ್ಳಗಳ ಮೂಲಕ ನೀರು ಹರಿಸಿದ್ದರೆ ಬಾವಿ, ಕೊಳವೆ ಬಾವಿಗಳಲ್ಲಿ ಅಂತರ್‌ಜಲದ ಮಟ್ಟ ಸುಧಾರಿಸುತಿತ್ತು. ಆದ್ದರಿಂದ ಮೂಲ ಯೋಜನೆಯಲ್ಲೇ ದೋಷವಿದೆ ಎನ್ನುತ್ತಾರೆ ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಎಂಜಿನಿಯರ್.

ದಿನೇ ದಿನೇ ನೀರಿನ ಸಮಸ್ಯೆ ಬಿಗಡಾಯಿಸುತ್ತಿದ್ದು, ಪಟ್ಟಣದ ಜನತೆ ಕಂಗಾಲಾಗಿದ್ದಾರೆ. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ ಪ್ರತಿಭಟನೆ ಅನಿವಾರ್ಯ ಎನ್ನುತ್ತಾರೆ ವಿವಿಧ ಸಂಘಟನೆಗಳ ಮುಖಂಡರು.
ಎ.ರಾಮಚಂದ್ರಪ್ಪ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT