ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4,484 ಜಾನುವಾರುಗಳ ರಕ್ಷಣೆ: ಆಸ್ನೋಟಿಕರ್ ಹೇಳಿಕೆ....

Last Updated 11 ಅಕ್ಟೋಬರ್ 2011, 9:55 IST
ಅಕ್ಷರ ಗಾತ್ರ

ಚಿತ್ರದುರ್ಗ: ಜಿಲ್ಲೆಯಲ್ಲಿ ಉಂಟಾಗಿರುವ ಬರದ ಹಿನ್ನೆಲೆಯಲ್ಲಿ ಸರ್ಕಾರ ತಕ್ಷಣದ ಕ್ರಮವಾಗಿ ಜಾನುವಾರುಗಳ ರಕ್ಷಣೆಗಾಗಿ ಜಿಲ್ಲೆಯ ಎಲ್ಲಾ ತಾಲ್ಲೂಕುಗಳಲ್ಲಿ 12 ಗೋಶಾಲೆಗಳನ್ನು ಆರಂಭಿಸಲಾಗಿದೆ ಎಂದು ರಾಜ್ಯದ ಮೀನುಗಾರಿಕೆ, ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಆನಂದ ಅಸ್ನೋಟಿಕರ್ ತಿಳಿಸಿದರು.

ಸೋಮವಾರ ತಾಲ್ಲೂಕಿನ ತುರುವನೂರು ಗ್ರಾಮದ ಸಮೀಪ ಸ್ಥಾಪಿಸಲಾದ ಗೋಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು. ಸರ್ಕಾರ ಜಿಲ್ಲೆಯ ಎಲ್ಲಾ ತಾಲ್ಲೂಕುಗಳು ಬರಗಾಲಕ್ಕೆ ತುತ್ತಾಗಿವೆ ಎಂದು ಘೋಷಣೆ ಮಾಡಿ ಅಗತ್ಯ ತಾತ್ಕಾಲಿಕ ಕ್ರಮಗಳಿಗಾಗಿ ರೂ 5 ಕೋಟಿ  ಮಂಜೂರು ಮಾಡಿದೆ.

ಎಲ್ಲಾ ತಾಲ್ಲೂಕುಗಳಲ್ಲಿ 15 ಸ್ಥಳಗಳಲ್ಲಿ ಗೋಶಾಲೆಗಳನ್ನು ಆರಂಭಿಸಲು ಉದ್ದೇಶಿಸ್ದ್ದಿದು, ಈಗಾಗಲೇ 12 ಸ್ಥಳಗಳಲ್ಲಿ ಆರಂಭಿಸಲಾಗಿದೆ. ಉಳಿದ 3 ಸ್ಥಳಗಳಲ್ಲಿ ಶೀಘ್ರ ಪ್ರಾರಂಭಿಸಲಾಗುತ್ತದೆ ಎಂದು ವಿವರಿಸಿದರು.

ಚಿತ್ರದುರ್ಗ ತಾಲ್ಲೂಕಿನ ಸೀಬಾರ, ದೊಡ್ಡಗಟ್ಟಿಕೆರೆ, ಚಳ್ಳಕೆರೆ ತಾಲ್ಲೂಕಿನ ಸಾಣಿಕೆರೆ, ಚೌಳೂರು ಗೇಟ್, ದೊಡ್ಡ ಉಳ್ಳಾರ್ತಿ, ಕುದಾಪುರ, ಹೊಸದುರ್ಗ ತಾಲ್ಲೂಕಿನ ಎಪಿಎಂಸಿ ಆವರಣ, ಕಡವಗೆರೆ, ಹಿರಿಯೂರು ತಾಲ್ಲೂಕಿನ ವದ್ದಿಕೆರೆ, ಕರಿಯಾಲ, ಟಿ. ಗೊಲ್ಲರಹಳ್ಳಿ, ಎಪಿಎಂಸಿ ಯಾರ್ಡ್, ಮೊಳಕಾಲ್ಮುರು ತಾಲ್ಲೂಕಿನ ರಾಂಪುರ, ಮ್ಯಾಸರಹಟ್ಟಿ, ಹೊಳಲ್ಕೆರೆ ತಾಲ್ಲೂಕಿನ ಉಪ್ಪರಿಗೇನಹಳ್ಳಿಯಲ್ಲಿ ಗೋಶಾಲೆಗಳನ್ನು ಆರಂಭಿಸಲಾಗುತ್ತದೆ.

ಇದರಲ್ಲಿ ಕಡವಗೆರೆ, ರಾಂಪುರ ಹಾಗೂ ಮ್ಯಾಸರಹಟ್ಟಿಯಲ್ಲಿ ಗೋಶಾಲೆಗಳು ಆರಂಭವಾಗಬೇಕಿದೆ ಎಂದರು.
ಇದುವರೆಗೆ ಪ್ರಾರಂಭಿಸಲಾದ ಗೋಶಾಲೆಗಳಲ್ಲಿ 4,484 ಜಾನುವಾರುಗಳ ಪಾಲನೆ, ಪೋಷಣೆ ಮಾಡಲಾಗುತ್ತಿದೆ. ಇಲ್ಲಿ 94.75 ಮೆಟ್ರಿಕ್ ಟನ್ ಮೇವು ದಾಸ್ತಾನು ಮಾಡಿದ್ದು, 81 ಮೆಟ್ರಿಕ್ ಟನ್ ಮೇವು ವಿತರಿಸಲಾಗಿದೆ.

ಆರಂಭಿಸಲಾದ ಗೋ ಶಾಲೆಗಳಲ್ಲಿ ಸರಾಸರಿ 500ರಿಂದ 600 ಜಾನುವಾರುಗಳಿವೆ. ಇವುಗಳಿಗೆ ಪ್ರತಿನಿತ್ಯ ಕನಿಷ್ಠ 5 ಟನ್ ಮೇವು ಬೇಕಾಗುತ್ತದೆ. ಪ್ರತಿಟನ್‌ಗೆ ರೂ 4 ಸಾವಿರ ನೀಡಿ ಖರೀದಿಸಲಾಗುತ್ತಿದೆ. ಪ್ರಸ್ತುತ ಲಭ್ಯವಿರುವ ಬತ್ತದ ಹುಲ್ಲನ್ನು ಖರೀದಿಸುತ್ತಿದ್ದು, ಇಲ್ಲಿನ ಜಾನುವಾರು ಇದನ್ನು ತಿನ್ನುತ್ತಿಲ್ಲ ಎಂದು ರೈತರು ತಿಳಿಸಿದ್ದಾರೆ.

ವಾಸ್ತವತೆ ಅರಿತು ಬತ್ತದ ಮೇವಿನೊಂದಿಗೆ ಇತರೆ ಮೇವು ಪೂರೈಸಲು ಕ್ರಮ ಕೈಗೊಳ್ಳಲಾಗುತ್ತದೆ. ಕೆಲ ಸ್ಥಳಗಳಲ್ಲಿ ಮೆಕ್ಕೆ ಜೋಳದ ಬೆಳೆ ಕಟಾವಿಗೆ ಬಂದಿದ್ದು, ಮೇವು ನೀಡಲು ಮುಂದೆ ಬರುವ ರೈತರಿಂದ ಇದನ್ನು ಖರೀದಿಸಿ ಒದಗಿಸಲಾಗುತ್ತದೆ. ರೈತರು ಸಹ ಸಹಕಾರ ನೀಡಬೇಕಾಗುತ್ತದೆ ಎಂದು ಹೇಳಿದರು.

ಗೋಶಾಲೆಗಳಿಗೆ ಹುಲ್ಲನ್ನು ಪೂರೈಸಲು ತಾತ್ಕಾಲಿಕವಾಗಿ ಜಾನುವಾರುಗಳಿಗೆ ಶೆಡ್ ನಿರ್ಮಾಣ ಮಾಡಲಾಗುತ್ತಿದೆ. ಜನರು ಸಹ ಸರ್ಕಾರದೊಂದಿಗೆ ಸ್ಪಂದಿಸುತ್ತಿದ್ದಾರೆ ಎಂದರು.ಜಿಲ್ಲಾ ಪಂಚಾಯ್ತಿ ಅಧ್ಯಕ್ಷ ಸಿ. ಮಹಾಲಿಂಗಪ್ಪ, ಸದಸ್ಯ ಬಾಬುರೆಡ್ಡಿ, ಸಿಇಒಎನ್. ಜಯರಾಮ್, ಪಶು ಸಂಗೋಪನಾ ಇಲಾಖೆ ಉಪ ನಿರ್ದೇಶಕ ಜಯಣ್ಣ ಮತ್ತಿತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT