ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

46 ವರ್ಷಗಳ ಹಿಂದಿನ ಸಹಪಾಠಿಗಳ ಮಿಲನ

Last Updated 11 ಫೆಬ್ರುವರಿ 2012, 5:05 IST
ಅಕ್ಷರ ಗಾತ್ರ

ನರಗುಂದ: ಇಳಿವಯಸ್ಸಿನಲ್ಲೂ ಎಳೆಯರಂತೆ ಕೂಡಿ ನಲಿದಾಡಿ, ತಮ್ಮ 46 ವರ್ಷಗಳಷ್ಟು ಹಳೆಯ ನೆನಪುಗಳನ್ನು ಮೆಲುಕು ಹಾಕಿದ ಘಟನೆ ಪಟ್ಟಣದ ವೆಂಕಟೇಶ್ವರ ದೇವಾಲಯದ ಆವರಣದಲ್ಲಿ ನಡೆಯಿತು.

ಪಟ್ಟಣದ ಆಗಿನ ಮುನ್ಸಿಪಲ್ ಹೈಸ್ಕೂಲ್ ಆಗಿದ್ದ ಇಂದಿನ ವೆಂಕಟೇಶ್ವರ ಗುಡಿಯ ಆವರಣದಲ್ಲಿರುವ ಖಾಸಗಿ ಕಾಲೇಜಿನ ಕಟ್ಟಡ ಬಳಿ ತೆರಳಿ, ಅದರ ಮುಂದೆ ಕುಳಿತು ಸಭೆ ಸೇರಿ ಚೇಷ್ಟೆ ಮಾಡಿದ್ದು ನಿಜಕ್ಕೂ ಅವರ  ಪ್ರೀತಿ ವಿಶ್ವಾಸಗಳಿಗೆ ಸಾಕ್ಷಿಯಾಗಿತ್ತು.

1966ರಲ್ಲಿ ಎಸ್‌ಎಸ್‌ಎಲ್‌ಸಿ ಮುಗಿಸಿದ ಹಾಗೂ ಇಂದು 65ರ ಅಂಚಿನಲ್ಲಿರುವ ಸಹಪಾಠಿಗಳಾದ  ಡಾ.ಬಿ.ಎಂ.ಜಾಬಣ್ಣವರ, ವಿ.ಜಿ.ಕಂಠಿ, ಜಿ.ಬಿ.ಕುಲಕರ್ಣಿ, ಎಫ್.ಆರ್.ಪಾಟೀಲ, ಬಿ.ಜಿ.ಗುಡಾರದ, ಎ.ಎಂ.ನಂದಿ, ಎಸ್.ಜಿ.ದಂಡಿನ, ಬಿ.ಎಲ್.ಪಾಟೀಲ, ಎಸ್.ಬಿ.ಕೆಂಚನಗೌಡ್ರ, ಬಿ.ಎನ್.ಹದ್ದಣ್ಣವರ, ಎಸ್.ವಿ.ಹಳಕಟ್ಟಿ, ಶಂಭು ಬ್ಯಾಹಟ್ಟಿ, ಪ್ರೊ.ಚಿಕ್ಕಮಠ, ವಿ.ಜಿ.ಜಂತಲಿ, ಗೋಪಾಲ ಇಂಗಳಳ್ಳಿ, ಸಿ.ವಿ.ಕಟಗೇರಿ ಸೇರಿದಂತೆ  ಮೊದಲಾದವರು ಕೂಡಿಕೊಂಡು ವೆಂಕಟೇಶ್ವರ ದೇವಸ್ಥಾನಕ್ಕೆ ತೆರಳಿದರು. ದೇವರ ದರ್ಶನ ಪಡೆದರು. 

ನಂತರ ಅಲ್ಲಿಯೇ ಆಸೀನರಾಗಿ ತಮ್ಮ ಹಿಂದಿನ ನೆನಪುಗಳನ್ನು ಒಂದೊಂದಾಗಿ ಮೆಲುಕು ಹಾಕಿದರು. ಅಂದು  ಚೇಷ್ಟೆ  ಮಾಡಿದ್ದು, ಸಿಟ್ಟಾಗಿ ಒಬ್ವರನ್ನೊಬ್ಬರು ಬೈದಿದ್ದು, ಬೈಸಿಕೊಂಡಿದ್ದು ಮಾಸ್ತರರಿಂದ ಶಿಕ್ಷೆಗೆ ಒಳಗಾಗಿದ್ದು ಈಗ ಅದರ ಪರಿಣಾಮ ಸಾಧನೆ ಮಾಡಿದ್ದನ್ನು ಹಂಚಿಕೊಂಡಿದ್ದು ಕಂಡುಬಂತು.

ಕೂಡಲೇ ಸಭೆ ಸೇರಿ ಬಾಲ್ಯದಲ್ಲಿ ತಮಗೆ ಕಲಿಸಿದ ಗುರುಗಳಾದ ದಿ.ಟಿ.ಜಿ.ಕುಲಕರ್ಣಿ, ದಿ.ಡಿ.ಬಿ.ಕುಲಕರ್ಣಿ, ದಿ.ವಿ.ಎ.ಜೋಷಿ ಹಾಗೂ ಇತರ ಗುರುಗಳಿಗೆ ಹಾಗೂ ಅಗಲಿದ ಗೆಳೆಯರಿಗೆ ಶ್ರದ್ಧಾಂಜಲಿ ಸಲ್ಲಿಸಿ ಅವರ  ಕೊಡುಗೆ ಸ್ಮರಿಸಿದರು.

ಮುನ್ಸಿಪಲ್ ಹೈಸ್ಕೂಲ್‌ನ ಬೆಳವಣಿಗೆಗೆ ಕಾರಣರಾಗಿದ್ದ  ದಿ.ಎಫ್.ಎಂ.ಹಸಬಿ, ದಿ.ಎಲ್.ಎಸ್.ಪಾಟೀಲ, ದಿ.ಎಸ್.ಎಫ್.ಪಾಟೀಲ ಹಾಗೂ ಮೆಚ್ಚುಗೆಯ ಹೆಡ್ ಮಾಸ್ತರ್ ಆಗಿದ್ದ ಜಿ.ಬಿ.ಚೌಕಿಮಠ  ಹಾಗೂ ಶಿಕ್ಷಕರನ್ನು ನೆನೆದರು.    

ಈ ಹಿರಿಯರು  ಶಿಕ್ಷಣ, ವ್ಯಾಪಾರ, ಆರೋಗ್ಯ, ಬ್ಯಾಂಕಿಂಗ್ ಸೇವೆಗಳಲ್ಲಿ ತೊಡಗಿಕೊಂಡು ತಮ್ಮ ಅಪೂರ್ವ ಸೇವೆಯೊಂದಿಗೆ ಸಮಾಜ ಸೇವೆಗೆ ಮುಂದಾಗಿದ್ದಾರೆ. ತುಂಬು ಕುಟುಂಬ ಹೊಂದಿದ ಇವರು ಎಳೆಯರಂತೆ  ತಮ್ಮ ಚೇಷ್ಟೆಯನ್ನೂ ಈ ಸಮಯದಲ್ಲೂ ವ್ಯಕ್ತಪಡಿಸಿದ್ದು ಇವರ ಗೆಳೆತನಕ್ಕೆ ಕೈಗನ್ನಡಿಯಾಗಿತ್ತು.

ನಂತರ ಅಲ್ಲಿಯೇ ಇಂದಿನ ಸಮಾಜದ ಸ್ಥಿತಿಗತಿಗಳ ಬಗ್ಗೆ ಚಿಂತನೆ ನಡೆಸಿ, ತಮ್ಮ ಸಾಧನೆ ಪ್ರಕಟಪಡಿಸಿದರು.  ಕೆಲವು ಹಾಸ್ಯ ಘಟನೆಗಳನ್ನು ಮೆಲಕು ಹಾಕಿದರು.

ಬಿ.ಜಿ. ಗುಡಾರದ ಸ್ವಾಗತಿಸಿದರು.  ಎಫ್.ಆರ್.ಪಾಟೀಲರು ಗುಲಾಬಿ  ನೀಡಿ ಮುಂದಿನ ಜೀವನ ಗುಲಾಬಿಯಂತಾಗಲಿ ಎಂದು ಹಾರೈಸಿದರು. ಡಾ.ಬಿ.ಎಂ.ಜಾಬಣ್ಣವರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT