47ರ ಹೊಸ ಆವೃತ್ತಿ

7

47ರ ಹೊಸ ಆವೃತ್ತಿ

Published:
Updated:

ಚಿತ್ರ: ಎಕೆ 56

ಎಕೆ 56~ ನಿರ್ದೇಶಕ ಓಂಪ್ರಕಾಶ್ ರಾವ್ ನಿರ್ದೇಶನದ ಇಪ್ಪತ್ತೈದನೇ ಸಿನಿಮಾ ಹಾಗೂ 12 ಕೋಟಿ ರೂಪಾಯಿ ವೆಚ್ಚದ ಅದ್ದೂರಿ ಚಿತ್ರ ಎನ್ನುವ ಕಾರಣಗಳಿಂದ ನಿರೀಕ್ಷೆ ಹುಟ್ಟಿಸಿದ್ದ ಚಿತ್ರ. ಈ ಸಿನಿಮಾದಲ್ಲಿ ಎರಡು ಗಮನಸೆಳೆಯುವ ಸಂಗತಿಗಳಿವೆ.

 

ಮೊದಲನೆಯದು, ನಾಯಕನನ್ನು ಪೊಲೀಸರ ಸರ್ಪಗಾವಲಿನಿಂದ ಪಾರುಮಾಡುವ ಸಂದರ್ಭದಲ್ಲಿನ ರೋಚಕ ಚೇಸಿಂಗ್ ದೃಶ್ಯಾವಳಿ. ಅಪರೂಪವಾಗುತ್ತಿರುವ ತುಂಬು ಕುಟುಂಬದ ಆರ್ದ್ರ ಕ್ಷಣಗಳನ್ನು ನಿರ್ದೇಶಕರು ಕಟ್ಟಿಕೊಂಡಿರುವುದು ಮತ್ತೊಂದು ವಿಶೇಷ. ಓಂಪ್ರಕಾಶ್‌ರ ಹಿಂದಿನ ಚಿತ್ರಗಳಾದ `ಲಾಕಪ್ ಡೆತ್~ ಮತ್ತು `ಎ ಕೆ 47~ರ ನೆರಳು ಈ ಚಿತ್ರದ ಮೇಲೆ ಸ್ಪಷ್ಟವಾಗಿದೆ. ಹಾಗೆ ನೋಡಿದರೆ, `ಎಕೆ 56~ ಚಿತ್ರದ ಚೇಸಿಂಗ್‌ಗೆ `ಲಾಕಪ್ ಡೆತ್~ ಚಿತ್ರದಲ್ಲಿನ ಚೇಸಿಂಗ್ ಯಾವ ರೀತಿಯಲ್ಲೂ ಕಡಿಮೆಯಾದುದಲ್ಲ.ಅಂತೆಯೇ, `ಎಕೆ 47~ ಚಿತ್ರದಲ್ಲಿನ ದೇಶಪ್ರೇಮದ ಸಂಭಾಷಣೆಗಳು ಹೊಸ ಚಿತ್ರದಲ್ಲೂ ಅನುರಣಿಸುತ್ತವೆ. ಹೀಗಾಗಿ, ಕಳೆದ ಹತ್ತು ವರ್ಷಗಳಲ್ಲಿ ಓಂಪ್ರಕಾಶ್ ಬದಲಾಗಿಯೇ ಇಲ್ಲ ಎನ್ನಿಸುತ್ತದೆ.`ಎಕೆ 56~ ಚಿತ್ರದ ನಾಯಕ ಬ್ಯಾಸ್ಕೆಟ್‌ಬಾಲ್ ಆಟಗಾರ, ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿದ್ದ ಕುಟುಂಬದಿಂದ ಬಂದವನು. ಹುಡುಗಿಯೊಬ್ಬಳನ್ನು ಪ್ರೇಮಿಸಿ ಓಡಾಡಿಕೊಂಡಿದ್ದ ಹುಡುಗ ಆಕಸ್ಮಿಕವಾಗಿ ಹಿಂಸಾಕೃತ್ಯವೊಂದಕ್ಕೆ ಸಾಕ್ಷಿಯಾಗುತ್ತಾನೆ.ಇದರಿಂದ ನಾಯಕನಿಗೆ ಭಯೋತ್ಪಾದಕ ಎನ್ನುವ ಹಣೆಪಟ್ಟೆ ಅಂಟಿಕೊಂಡು ಜೈಲು ಸೇರಬೇಕಾಗುತ್ತದೆ. ಜೈಲಿನಿಂದ ಪಾರಾಗಿ ಬರುವ ಆತ, ದುಷ್ಟರ ಹುಟ್ಟಡಗಿಸಿ ತನ್ನ ಅಮಾಯಕತೆಯನ್ನು ಸಾಬೀತುಪಡಿಸುತ್ತಾನೆ. ಈ ಕಥೆಯನ್ನು ತುಂಬು ಕುಟುಂಬದ ಚೌಕಟ್ಟೊಂದರ ಮೂಲಕ ನಿರ್ದೇಶಕರು ಹೇಳಲು ಪ್ರಯ್ನಸುವುದು ಸೊಗಸಾಗಿದೆ.ಚಿತ್ರದ ಶೀರ್ಷಿಕೆ `ಎ ಕೆ 56~ ಎಂದಿರುವುದರಿಂದಾಗಿ ಸಿನಿಮಾವನ್ನು ಸಾಹಸಪ್ರಧಾನ ಮಾಡಲೇಬೇಕು ಎಂದು ನಿರ್ದೇಶಕರು ಹಟ ತೊಟ್ಟಿದ್ದಾರೆ. ಆ ಹಟದಿಂದಾಗಿಯೇ ಚಿತ್ರದ ಕೊನೆಯ ಭಾಗ ತೆಳುವಾಗಿದೆ. ಕೌಟುಂಬಿಕ ಪ್ರೀತಿ - ಸಾಮಾಜಿಕ ಮೌಲ್ಯಗಳ ಕುರಿತು ಸಿನಿಮಾ ಮಾತನಾಡಿದರೂ, ನ್ಯಾಯಮಾರ್ಗದಲ್ಲಿ ನಡೆಯುವವರಿಗಿದು ಕಾಲವಲ್ಲ ಎಂದು ಸಿನಿಮಾ ಧ್ವನಿಸುತ್ತದೆ. ತನ್ನ ಮಗನನ್ನು ಜೈಲಿನಿಂದ ಪಾರುಮಾಡಿಸುವ ತಾಯಿ ಹೇಳುವುದು ಇದೇ ಮಾತನ್ನು; ನ್ಯಾಯಾಲಯದ ಹೊರಭಾಗದಲ್ಲಿಯೇ ಉಗ್ರನನ್ನು ಕೊಲ್ಲುವ ನಾಯಕ ತನ್ನದೇ ಕಾನೂನನ್ನು ಪ್ರತಿಪಾದಿಸುತ್ತಾನೆ.

 

ಒಂದು ವರ್ಗದ ಉಗ್ರ ಭಾವುಕತೆಯನ್ನೇ ಸಿನಿಮಾ ಬಂಡವಾಳ ಆಗಿಸಿಕೊಂಡಿರುವುದು ಸ್ಪಷ್ಟವಾಗಿದೆ.ನಾಯಕನಾಗಿ ಹೊಸ ಹುಡುಗ ಸಿದ್ದಾರ್ಥ ಮಾಗಬೇಕಾಗಿದೆ. ದೈಹಿಕವಾಗಿ ಅಷ್ಟೇನೂ ಆಕರ್ಷಕವಾಗಿರದ ಅವರಿಗೆ ನಟನೆಯನ್ನಷ್ಟೇ ನೆಚ್ಚಬೇಕಾದ ಅನಿವಾರ್ಯತೆಯಿದೆ.

 

ನಾಯಕಿ ಶಿರಿನ್ ಚೆಲ್ಲುಚೆಲ್ಲು ಹುಡುಗಿಯಾಗಿ ಲವಲವಿಕೆಯಿಂದ ಕಾಣಿಸಿಕೊಂಡಿದ್ದಾರೆ. ಅಭಿನಯದಲ್ಲಿ ಮುಖ್ಯವಾಗಿ ಗಮನಸೆಳೆಯುವುದು ಲೋಕನಾಥ್ ಹಾಗೂ ಸುಚೇಂದ್ರಪ್ರಸಾದ್. `ಎಕೆ 56~ ಪರಿಣಾಮಕಾರಿ ಎನ್ನಿಸುವಲ್ಲಿ ನಿರ್ದೇಶಕರಿಗೆ ಹೆಗಲೆಣೆಯಾಗಿ ನಿಂತಿದ್ದಾರೆ ಸಾಹಸ ನಿರ್ದೇಶಕ ಪಳನಿಸ್ವಾಮಿ, ಛಾಯಾಗ್ರಾಹಕ ಮನೋಹರ್ ಹಾಗೂ ಸಂಗೀತ ನಿರ್ದೇಶಕ ಅಭಿಮನ್ ರಾಯ್.

 

ಸದ್ದುಗದ್ದಲದ ನಡುವೆಯೂ ಮೌನಕ್ಕೆ ಸ್ಥಾನ ಕೊಟ್ಟಿರುವ ಅಭಿಮನ್‌ರ ಹಿನ್ನೆಲೆ ಸಂಗೀತ ವಿಶೇಷವಾಗಿ ಗಮನಸೆಳೆಯುತ್ತದೆ. ಎಂ.ಎಸ್.ರಮೇಶ್ ಅವರ ಸಂಭಾಷಣೆ ಹರಿತವಾಗಿದ್ದರೂ, ಕೆಲವೆಡೆ ತೀರಾ ವಾಚ್ಯವಾಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry