49 ಎಕರೆ ಜಮೀನು ವಶ

7
ಯುರೇನಿಯಂ ಘಟಕ ನಿರ್ಮಾಣ: ರೂ. 52.26ಲಕ್ಷ ಪರಿಹಾರ

49 ಎಕರೆ ಜಮೀನು ವಶ

Published:
Updated:

ಶಹಾಪುರ:. ತಾಲ್ಲೂಕಿನ ಗೋಗಿ ಹಾಗೂ ಉಮರದೊಡ್ಡಿ ಗ್ರಾಮದ ವ್ಯಾಪ್ತಿಯಲ್ಲಿ ಯುರೇನಿಯಂ ಘಟಕ ನಿರ್ಮಾಣಕ್ಕೆ 49 ಎಕರೆ 19 ಗುಂಟೆ ಜಮೀನು ವಶಪಡಿಸಿಕೊಂಡಿದ್ದು, 52.16 ಲಕ್ಷ ಪರಿಹಾರ ಧನವನ್ನು ವಿತರಿಸಲಾಗಿದೆ.ಯುರೇನಿಯಂ (ಅಣುಶಕ್ತಿ) ಘಟಕ ನಿರ್ಮಾಣಕ್ಕಾಗಿ ಭೂ ಸ್ವಾಧೀನಕ್ಕೊಳಪಟ್ಟ ಜಮೀನಿಗೆ ಐತೀರ್ಪು ಮಂಜೂರು ಮಾಡಿದೆ. ಅಗತ್ಯವಾದ ದಾಖಲೆಗಳನ್ನು ಸಾದರಪಡಿಸಬೇಕು. ಐತೀರ್ಪುದಾರರಿಗೆ ಮಂಜೂರು ಮಾಡಿದ ಹಣವನ್ನು ಯಾದಗಿರಿ ಭೂ ಸ್ವಾಧೀನಾಧಿಕಾರಿಯವರಿಂದ ಚೆಕ್ ರೂಪದಲ್ಲಿ ನೀಡಲಾಗುವುದು. ತಪ್ಪಿದಲ್ಲಿ ಪರಿಹಾರ ಧನವನ್ನು ಬ್ಯಾಂಕ್‌ನಲ್ಲಿ ಠೇವಣಿ ಇಡಲಾಗುವುದು ಎಂದು ಭೂ ಸ್ವಾಧೀನ ಅಧಿಕಾರಿಯೂ ಆದ ಸಹಾಯಕ ಆಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.ಗೋಗಿ(ಕೆ) ಗ್ರಾಮದ 14 ಎಕರೆ 19ಗುಂಟೆ ಜಮೀನು ವಶಪಡಿಸಿಕೊಂಡು ಪ್ರತಿ ಎಕರೆಗೆ ನಿಗದಿಪಡಿಸಿದ ಮೊತ್ತ ರೂ.95,500ಯಂತೆ ಮೂವರು ರೈತರಿಗೆ ಒಟ್ಟು 20.99 ಲಕ್ಷ ಪರಿಹಾರ ಧನವನ್ನು ನೀಡಲಾಗಿದೆ.ಉಮರದೊಡ್ಡಿ ಗ್ರಾಮದಲ್ಲಿ ಒಟ್ಟು 35 ಎಕರೆ ಜಮೀನು 12 ರೈತರಿಂದ ವಶಪಡಿಸಿಕೊಂಡಿದ್ದು, 31.26ಲಕ್ಷ ಮೊತ್ತ ಪರಿಹಾರ ಧನವನ್ನು ರೈತರು ಪಡೆದುಕೊಂಡಿದ್ದಾರೆ ಎಂದು ಕಂದಾಯ ಅಧಿಕಾರಿ ತಿಳಿಸಿದ್ದಾರೆ.ಸ್ಥಗಿತ: ಕೇಂದ್ರ ಪರಿಸರ ಹಾಗೂ ಅರಣ್ಯ ಇಲಾಖೆಯು 2012 ಡಿಸೆಂಬರ್ 28ರಂದು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಗೋಗಿ ಗ್ರಾಮದಲ್ಲಿ ಯುರೇನಿಯಂ ಘಟಕದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಗೋಗಿ ಗ್ರಾಮದಲ್ಲಿ 2010 ನವೆಂಬರ್ 16ರಂದು ಸಾರ್ವಜನಿಕ ಅಹವಾಲು ಹಾಗೂ ಕುಂದು ಕೊರತೆ ಸಭೆ ನಿಯಮ ಬಾಹಿರವಾಗಿದೆ ಎಂದು ಆದೇಶ ನೀಡಿ ತಾತ್ಕಾಲಿಕವಾಗಿ ಯೋಜನೆ ಸ್ಥಗಿತಗೊಳಿಸಲಾಗಿತ್ತು.ಆತಂಕ: ಕಳೆದ ಮೂರು ತಿಂಗಳಿಂದ ಯೋಜನೆ ಸ್ಥಗಿತಗೊಳಿಸಿದ್ದರಿಂದ ಗೋಗಿ ಗ್ರಾಮದ ಸುತ್ತಮುತ್ತಲಿನ ಜನತೆ ನೆಮ್ಮದಿಯಿಂದ ಇದ್ದರು. ಮತ್ತೆ ಸದ್ದುಗದ್ದಲವಿಲ್ಲದೆ ಭೂ ಸ್ವಾಧೀನಪಡಿಸಿಕೊಂಡಿರುವುದು ಜನತೆಯಲ್ಲಿ ಆತಂಕ ಶುರುವಾಗಿದೆ. ಭೂ ಸ್ವಾಧೀನಪಡಿಸಿಕೊಂಡ ಜಮೀನಿನ ಗಡಿ ಗುರುತು ಹಾಗೂ ತಂತಿ ಬೇಲಿ ಹಾಕುವ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry