49 ಕಂಪೆನಿ ಗುತ್ತಿಗೆ ರದ್ದು: ಗಣಿ ಧಣಿಗಳತ್ತ ಸಿಇಸಿ ಕೆಂಗಣ್ಣು

7

49 ಕಂಪೆನಿ ಗುತ್ತಿಗೆ ರದ್ದು: ಗಣಿ ಧಣಿಗಳತ್ತ ಸಿಇಸಿ ಕೆಂಗಣ್ಣು

Published:
Updated:

ನವದೆಹಲಿ: ಅಕ್ರಮ ಗಣಿಗಾರಿಕೆ ಆರೋಪದ ಹಿನ್ನೆಲೆಯಲ್ಲಿ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಒಡೆತನದ `ಅಸೋಸಿಯೇಟ್ ಮೈನಿಂಗ್ ಕಂಪೆನಿ~ (ಎಎಂಸಿ) ಒಳಗೊಂಡಂತೆ ಬಳ್ಳಾರಿ, ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿನ 49 ಕಂಪೆನಿಗಳ ಗಣಿ ಗುತ್ತಿಗೆ ರದ್ದುಪಡಿಸುವಂತೆ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಉನ್ನತಾಧಿಕಾರ ಸಮಿತಿ (ಸಿಇಸಿ) ಮಹತ್ವದ ಶಿಫಾರಸು ಮಾಡಿದೆ.ಸುಪ್ರೀಂಕೋರ್ಟ್‌ಗೆ ಸೋಮವಾರ ಸಿಇಸಿ ಸಲ್ಲಿಸಿದ ಅಂತಿಮ ವರದಿಯಲ್ಲಿ ಗುತ್ತಿಗೆ ರದ್ದಿಗೆ ಪಟ್ಟಿ ಮಾಡಿರುವ ಕಂಪೆನಿಗಳಲ್ಲಿ ಕೆನರಾ ಮಿನರಲ್ಸ್, ಕಾಂಗ್ರೆಸ್ ಮುಖಂಡ ಅಲ್ಲಂ ವೀರಭದ್ರಪ್ಪ ಅವರ ಕಂಪೆನಿ, ಮಾತಾ ಮಿನರೆಲ್ಸ್, ಡೆಕ್ಕನ್ ಮೈನಿಂಗ್ ಸಿಂಡಿಕೇಟ್, ವಿ.ಎಸ್. ಲಾಡ್ ಅಂಡ್ ಸನ್ಸ್ ಸೇರಿವೆ. ಮತ್ತೊಂದು ಅಚ್ಚರಿ ಸಂಗತಿ ಎಂದರೆ ಸರ್ಕಾರಿ ಸ್ವಾಮ್ಯದ ಮೈಸೂರು ಮಿನರಲ್ಸ್‌ಗೂ `ಬರೆ~ ಹಾಕಲು ವರದಿ ಹೇಳಿದೆ.ಈ ಕಂಪೆನಿಗಳು ಹೊರ ತೆಗೆದಿರುವ ಅದಿರನ್ನು ಸುಪ್ರೀಂ ಕೋರ್ಟ್ ರಚಿಸಿರುವ `ಉಸ್ತುವಾರಿ ಸಮಿತಿ~ಯೇ ಹರಾಜು ಹಾಕಿ ಬರುವ ಆದಾಯದಲ್ಲಿ ಅರಣ್ಯವನ್ನು ಪುನರ್ ನಿರ್ಮಾಣ ಮಾಡಬೇಕು. ಮತ್ತೆ ಈ ಗಣಿಗಳನ್ನು ಹರಾಜು ಪ್ರಕ್ರಿಯೆ ಮೂಲಕ ಮಂಜೂರು ಮಾಡಬೇಕು. ಮಾರುಕಟ್ಟೆ ಬೆಲೆ ಆಧರಿಸಿ ನೆಲದ ದರ ನಿಗದಿಪಡಿಸಬೇಕು. ಈ ಗಣಿಗಳ ಅದಿರನ್ನು ರಫ್ತು ಮಾಡಲು ಅವಕಾಶ ಕೊಡಬಾರದು. ಈ ಪ್ರಕ್ರಿಯೆಗಳು ಪಾರದರ್ಶಕವಾಗಿರಬೇಕು ಎಂದು ಸಿಇಸಿ ಶಿಫಾರಸು ಮಾಡಿದೆ.ಪರಿಸರ ಮತ್ತು ಅರಣ್ಯ ಸಂರಕ್ಷಣೆ ಉದ್ದೇಶದಿಂದ ರೂಪಿಲಾಗಿರುವ ಎಲ್ಲ ಕಾಯ್ದೆಗಳಿಗೂ ಗಣಿ ಗುತ್ತಿಗೆದಾರರು ತಿಲಾಂಜಲಿ ಕೊಟ್ಟಿದ್ದಾರೆ. ಅರಣ್ಯ ಲೂಟಿ, ನಿಯಮ ಬಾಹಿರ ಗಣಿಗಾರಿಕೆ  ಮೂಲಕ ನಿಸರ್ಗ ನಾಶ ಮಾಡಿದ್ದಾರೆ. ಇದೊಂದು ದೊಡ್ಡ ಅಕ್ರಮ. ರಾಜ್ಯದ ಅಧಿಕಾರಿಗಳು ಶಾಮೀಲಾಗದೆ ಇದು ಸಾಧ್ಯವಿಲ್ಲ. ಗೊತ್ತಿದ್ದೂ ಅಧಿಕಾರಿಗಳು ಗುತ್ತಿಗೆದಾರರ ಜತೆ ಸೇರಿದ್ದಾರೆ. ಈ ನ್ಯಾಯಾಲಯದ ಹಸ್ತಕ್ಷೇಪದ ಬಳಿಕ ಅಕ್ರಮ ಚಟುವಟಿಕೆ ತಹಬದಿಗೆ ಬಂದಿದೆ ಎಂದು ವರದಿ ಸ್ಪಷ್ಟಪಡಿಸಿದೆ.ಮೂರು ಜಿಲ್ಲೆಗಳ ಗಣಿ ಗುತ್ತಿಗೆಗಳನ್ನು ಸಿಇಸಿ,  `ಎ~, `ಬಿ~ ಮತ್ತು `ಸಿ~ ಎಂಬ ಮೂರು ಭಾಗಗಳಲ್ಲಿ ಗುರುತಿಸಿದ್ದು, ಸಿ ಗುಂಪಿನಲ್ಲಿ ಸ್ಥಾನ ಪಡೆದ ಕಂಪೆನಿಗಳ ಗುತ್ತಿಗೆ ರದ್ದತಿ ಮಾಡಬೇಕು ಎಂದು ಹೇಳಿದೆ. ವ್ಯಾಪಕ ಅಕ್ರಮಗಳನ್ನು ಎಸಗದ, ಸಣ್ಣಪುಟ್ಟ ಅಕ್ರಮಗಳಲ್ಲಿ ಭಾಗಿಯಾಗಿರುವ ಎ ವರ್ಗದ 45 ಕಂಪೆನಿಗಳಿಗೆ ಹಲವು ಕಠಿಣ ಷರತ್ತಿನ ಮೇಲೆ ಗಣಿಗಾರಿಕೆ ಪುನರಾರಂಭ ಮಾಡಲು ಅನುಮತಿ ಕೊಡಬಹುದು ಎಂದು ತಿಳಿಸಿದೆ.ವಾರ್ಷಿಕ ಉತ್ಪಾದನಾ ಗುರಿ ಸಾಧನೆ ಸಾಧ್ಯವಾಗುವಂತೆ ಎ ವರ್ಗದ ಗಣಿ ಗುತ್ತಿಗೆ ಸಂಬಂಧದ ನಿಯಮಗಳನ್ನು ಬದಲಾವಣೆ ಮಾಡಬೇಕು. ಗಡಿ ಗುರುತುಗಳನ್ನು ಬಂದೋಬಸ್ತ್ ಮಾಡಿ ಅಕ್ರಮಗಳು ನಡೆಯದಂತೆ ಎಚ್ಚರ ವಹಿಸಬೇಕು. ಪರಿಸರ ಸಂರಕ್ಷಣೆ ಯೋಜನೆ ಕಡ್ಡಾಯವಾಗಬೇಕು. ಈ ಅದಿರನ್ನು ರಾಜ್ಯದ ಅಥವಾ ನೆರೆಹೊರೆ ರಾಜ್ಯಗಳ ಉಕ್ಕು ಉದ್ಯಮಗಳು ಬಳಸಲು ಮಾತ್ರ ಅವಕಾಶ ಕೊಡಬೇಕು. ದರದ ಕಾರಣಕ್ಕೆ ದೇಶಿ ಉದ್ಯಮಗಳು ಅದಿರು ಖರೀದಿ ಮಾಡದಿದ್ದರೆ ರಫ್ತು ಅವಕಾಶ ಇರಬೇಕು.ಅದಿರು ಗಣಿಗಾರಿಕೆಗೆ ಮಿತಿ ಹಾಕಬೇಕು. ಮೂರು ಕೋಟಿ ಟನ್ ಹೊರತೆಗೆಯಲು ಅನುಮತಿ ಕೊಡಬೇಕು. ಇದರಲ್ಲಿ 2.5ಕೋಟಿ  ಟನ್ ಬಳ್ಳಾರಿಯಲ್ಲಿ, 5ಕೋಟಿ  ಟನ್ ಚಿತ್ರದುರ್ಗ ಮತ್ತು ತುಮಕೂರು ಜಿಲ್ಲೆಗಳಲ್ಲಿ ತೆಗೆಯಬೇಕು ಎಂದು ಪಿ.ವಿ. ಜಯಕೃಷ್ಣ ನೇತೃತ್ವದ ಸಮಿತಿ ಸಲಹೆ ಮಾಡಿದೆ. ಸಮಿತಿ ವರದಿಯನ್ನು ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ಅರಣ್ಯ ಪೀಠ ಈ ತಿಂಗಳ 10ರಂದು ಪರಿಶೀಲಿಸಲಿದೆ.ಅದಿರು ಮಾರಾಟ ಇ- ಹರಾಜು ಮೂಲಕ ಸುಪ್ರೀಂ ಕೋರ್ಟ್ ರಚಿಸಿರುವ ಉಸ್ತುವಾರಿ ಸಮಿತಿ ಸಮ್ಮುಖದಲ್ಲಿ ನಡೆಯಬೇಕು. ಅದಿರು ಗುಣಮಟ್ಟ, ತೂಕ ಸೇರಿದಂತೆ ಎಲ್ಲ ವಿವರಗಳನ್ನು ಪ್ರಕಟಪಡಿಸಬೇಕು. ಹರಾಜು ಸಮಯದಲ್ಲಿ ಶೇ. 90 ಹಣವನ್ನು ಗುತ್ತಿಗೆದಾರರಿಗೆ ಕೊಡಬೇಕು. ಉಳಿದ ಹಣ ಉಸ್ತುವಾರಿ ಸಮಿತಿಯಲ್ಲಿ ಠೇವಣಿ ಇರಬೇಕು ಎಂದು ಸಮಿತಿ ವರದಿಯಲ್ಲಿ ಸ್ಪಷ್ಟಪಡಿಸಿದೆ. ಗಣಿ ಪ್ರದೇಶ ಪೂರ್ಣವಾಗಿ ಅಥವಾ ಭಾಗಶಃ ಅರಣ್ಯದೊಳಗೆ ಇದ್ದರೆ (ಕರ್ನಾಟಕದಲ್ಲಿ) ಗಣಿಗಾರಿಕೆ ಪುನರಾರರಂಭಕ್ಕೆ ಪರಿಸರ ಇಲಾಖೆ ಅನುಮೋದನೆ ಕಡ್ಡಾಯವಾಗಬೇಕು.ಬಿ ವರ್ಗದ ಗಣಿ ಗುತ್ತಿಗೆಗೆ ಸಂಬಂಧಿಸಿದಂತೆ `ಅರಣ್ಯ ಸಂಶೋಧನಾ ಮಂಡಲಿ~ (ಐಸಿಎಫ್‌ಆರ್‌ಇ) ಸಿದ್ಧಪಡಿಸಿರುವ ಪರಿಸರ ಪುನರ್ ನಿರ್ಮಾಣ ಯೋಜನೆಯನ್ನು ಕಾಲಮಿತಿಯಡಿ ಜಾರಿ ಮಾಡಬೇಕು. ಇದಕ್ಕೆ ತಗಲುವ ವೆಚ್ಚವನ್ನು ಗುತ್ತಿಗೆದಾರರು ಭರಿಸಬೇಕು ಎಂದು ಸಿಇಸಿ ಹೇಳಿದೆ.ಗುತ್ತಿಗೆ ಪ್ರದೇಶದಾಚೆಗೆ ಅಕ್ರಮ ಗಣಿಗಾರಿಕೆ ನಡೆದಿದ್ದರೆ ಪ್ರತಿ ಹೆಕ್ಟೇರ್‌ಗೆ ಐದು ಕೋಟಿ ರೂಪಾಯಿ, ದಾಸ್ತಾನು, ರಸ್ತೆ ಮತ್ತು ಕಚೇರಿಗಳಿಗಾಗಿ ಅತಿಕ್ರಮಣ ನಡೆದಿದ್ದರೆ ಹೆಕ್ಟೇರ್‌ಗೆ ಒಂದು ಕೋಟಿ ದಂಡ ವಿಧಿಸಬೇಕು.ಅಂತರರಾಜ್ಯ ಗಡಿಗೆ ಅಂಟಿಕೊಂಡಿರುವ 7 ಗುತ್ತಿಗೆಗಳ ಭವಿಷ್ಯ (ಸದ್ಯ ಅಮಾನತಿನಲ್ಲಿದೆ) ವನ್ನು ಅಂತಿಮವಾಗಿ ಗಡಿ ಗುರುತಿಸಿದ ಬಳಿಕ ತೀರ್ಮಾನಿಸಬೇಕು. ಯಾವ ಕಂಪೆನಿ ಎಷ್ಟು ಪ್ರಮಾಣದಲ್ಲಿ ಅಕ್ರಮ ಎಸಗಿದೆ ಎಂಬ ಆಧಾರದಲ್ಲಿ ಅವುಗಳ `ಹಣೆಬರಹ~ ನಿರ್ಧರಿಸಬೇಕು ಎಂದು ಸಿಇಸಿ ಹೇಳಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry