ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

496 ಹಳ್ಳಿಗಳಲ್ಲಿ ನೀರಿನ ಸಮಸ್ಯೆ

Last Updated 21 ಅಕ್ಟೋಬರ್ 2011, 11:20 IST
ಅಕ್ಷರ ಗಾತ್ರ

ಕೋಲಾರ: ಬರದ ಬಾಯಿಗೆ ಸಿಲುಕಿರುವ ಜಿಲ್ಲೆಯಲ್ಲಿ ಅಕ್ಟೋಬರ್‌ನಿಂದ ಡಿಸೆಂಬರ್‌ವರೆಗೆ ಕುಡಿಯುವ ನೀರಿನ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆ ಇದೆ. ಮಳೆಗಾಲದಲ್ಲೆ ನೀರಿನ ಕೊರತೆಯನ್ನು ಎದುರಿಸಿ ಸುಸ್ತಾಗಿರುವ ಜಿಲ್ಲೆಯ ಜನ, ಅದರಲ್ಲೂ ನೂರಾರು ಹಳ್ಳಿಗಳ ಜನಕ್ಕೆ ಇನ್ನಷ್ಟು ಕಷ್ಟ ಎದುರಾಗಲಿದೆ.

496 ಹಳ್ಳಿ: ಈ ಅವಧಿಯಲ್ಲಿ ಜಿಲ್ಲೆಯ 496 ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಲಿದೆ ಎಂದು ಜಿಲ್ಲಾಡಳಿತ ಅಂದಾಜು ಮಾಡಿದೆ. ಬಂಗಾರಪೇಟೆ ಮತ್ತು ಮಾಲೂರು ತಾಲ್ಲೂಕುಗಳಲ್ಲಿ ಈ ಸಮಸ್ಯೆ ಹೆಚ್ಚು ಎಂಬುದು ಗಮನಾರ್ಹ. ಈ ದೃಷ್ಟಿಯಿಂದ ಶ್ರೀನಿವಾಸಪುರ ತಾಲ್ಲೂಕು ಸಮಾಧಾನಕರ ಸ್ಥಿತಿಯಲ್ಲಿದೆ ಎಂಬುದು ವಿಶೇಷ.

ಮೂಲಗಳ ಪ್ರಕಾರ, ಬಂಗಾರಪೇಟೆಯ 147, ಮಾಲೂರಿನ 113, ಕೋಲಾರದ 97, ಮುಳಬಾಗಲಿನ 89 ಮತ್ತು ಶ್ರೀನಿವಾಸಪುರದ 50 ಗ್ರಾಮಗಳನ್ನು ಸಮಸ್ಯಾತ್ಮಕ ಎಂದು ಗುರುತಿಸ ಲಾಗಿದೆ.  ಅಸಮರ್ಪಕ ಮಳೆಯ ಪರಿಣಾಮವಾಗಿ ಕೆರೆಗಳಿಗೆ ನೀರು ಬಾರದಿರುವುದೂ, ಇರುವ ಕೊಳವೆಬಾವಿಗಳಲ್ಲಿ ನಿರೀಕ್ಷೆಯಷ್ಟು ನೀರು ದೊರಕದಿರುವುದೂ ಸನ್ನಿವೇಶದ ತೀವ್ರತೆಯನ್ನು ಇನ್ನಷ್ಟು ಹೆಚ್ಚಿಸಿದೆ. 

405 ಬಾವಿ: ಹೀಗಾಗಿಯೇ ಇಡೀ ಜಿಲ್ಲೆ ಯಾದ್ಯಂತ 405 ಹೊಸ ಕೊಳವೆಬಾವಿಗಳನ್ನು ಕೊರೆಯುವ ಅನಿವಾರ್ಯವೂ ಎದುರಾಗಿದೆ. ಬಂಗಾರಪೇಟೆಯಲ್ಲಿ ಅತಿ ಹೆಚ್ಚು 114 ಬಾವಿ ಕೊರೆಯಲು ಆಡಳಿತ ನಿರ್ಧರಿಸಿದೆ.

ಉಳಿದಂತೆ ಮಾಲೂರಿನಲ್ಲಿ 100, ಕೋಲಾರದಲ್ಲಿ 97, ಮುಳಬಾಗಲು ಮತ್ತು ಶ್ರೀನಿವಾಸಪುರದಲ್ಲಿ ತಲಾ 47 ಹೊಸಕೊಳವೆ ಬಾವಿಗಳನ್ನು ಕೊರೆಯಲು ಯೋಜನೆ ರೂಪಿಸಲಾಗಿದೆ. ಅದಕ್ಕೆ ಪೂರಕವಾಗಿ 439 ಹೊಸ ಪಂಪ್‌ಸೆಟ್ ಮತ್ತು ಪೈಪ್‌ಲೈನ್‌ಗಳನ್ನು ಕೂಡ ಅಳವಡಿಸಬೇಕಾಗಿದೆ.

ಹೊಸ ಕೊಳವೆ ಬಾವಿಗಳನ್ನು ಕೊರೆಯಲು  6.23 ಕೋಟಿ ರೂಪಾಯಿ ಅಗತ್ಯವಿದೆ. ಹಾಗೆಯೇ ಹೊಸ ಪಂಪ್‌ಸೆಟ್, ಪೈಪ್‌ಲೈನ್‌ಗಳಿಗೆ 18.13 ಕೋಟಿ ರೂಪಾಯಿ ಅಗತ್ಯವಿದೆ. ಹೊಸ ಕೊಳವೆಬಾವಿ ಮತ್ತು ಪಂಪ್‌ಸೆಟ್ ಸೇರಿದಂತೆ ಒಟ್ಟಾರೆಯಾಗಿ ಜಿಲ್ಲೆಗೆ 24,37 ಕೋಟಿ ರೂಪಾಯಿ ಅಗತ್ಯವಿದೆ ಎಂಬುದು ಜಿಲ್ಲಾಡಳಿತದ ಅಂದಾಜು. ಅದರಲ್ಲಿ ಕೋಲಾರಕ್ಕೆ 6.40 ಕೋಟಿ, 4.73 ಕೋಟಿ, ಬಂಗಾರಪೇಟೆಗೆ 6.40 ಕೋಟಿ, ಮುಳಬಾಗಲಿಗೆ 4.87 ಕೋಟಿ, ಶ್ರೀನಿವಾಸಪುರಕ್ಕೆ 1.94 ಕೋಟಿ ಅಗತ್ಯವಿದೆ.

ಇದು ರಾಜ್ಯ ಸರ್ಕಾರವು ಜಿಲ್ಲೆಯ ಮೂರು ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸುವ ಮೊದಲೇ ಜಿಲ್ಲಾಡಳಿತ ಸಿದ್ಧಪಡಿಸಿದ್ದ ಕುಡಿಯುವ ನೀರಿನ ಸಮಸ್ಯೆ ನಿವಾರಣೆಯ ರೂಪುರೇಷೆ.

ಮಳೆ ಬರದಿರುವುದರಿಂದ ಈ ಸಮಸ್ಯೆ ಇನ್ನಷ್ಟು ಹೆಚ್ಚಾಗಲೂಬಹುದು ಎಂಬುದು ಅಧಿಕಾರಿಗಳ ಅಂದಾಜು. ಸದ್ಯಕ್ಕೆ ಜಿಲ್ಲಾಧಿಕಾರಿಗಳ ಬಳಿ 4.5 ಕೋಟಿ ರೂಪಾಯಿ ಇದೆ. ಅಗತ್ಯ ಬಿದ್ದರೆ ಇನ್ನಷ್ಟು ಹಣ ಬಿಡುಗಡೆ ಮಾಡಲು ಸರ್ಕಾರ ಸಿದ್ಧವಿದೆ ಎಂಬುದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಎನ್.ಶ್ರೀನಿವಾಸಾಚಾರಿಯವರು ನೀಡಿರುವ ಭರವಸೆ.

ಅಸಲಿ ಸಮಸ್ಯೆ: ಕೊಳವೆ ಬಾವಿ ಕೊರೆದರೆ ಸಮಸ್ಯೆ ಪರಿಹಾರವಾಗಬಹುದು ಎಂಬ ನಿರೀಕ್ಷೆಯಲ್ಲಿ ಯೋಜನೆಯನ್ನು ಸಿದ್ಧಪಡಿಸಿರುವ ಜಿಲ್ಲಾಡಳಿತದ ಮುಂದೆ, ವಿಫಲವಾಗುತ್ತಿರುವ ಕೊಳವೆಬಾವಿಗಳು ಸವಾಲನ್ನು ಒಡ್ಡಿರುವುದು ಸದ್ಯದ ವ್ಯಂಗ್ಯ.

ಏಕೆಂದರೆ, 2011-12ನೇ ಸಾಲಿನಲ್ಲಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ತುರ್ತು ಕಾಮಗಾರಿಗಳ ಅಡಿಯಲ್ಲಿ ಅನು ಮೋದನೆಗೊಂಂತೆ ಈಗಾಗಲೇ 324 ಕೊಳವೆ ಬಾವಿಗಳನ್ನು ಕೊರೆಯಲಾಗಿದೆ.

ಆದರೆ ಅವುಗಳ ಪೈಕಿ 77 ಕೊಳವೆಬಾವಿಗಳು ವಿಫಲವಾಗಿವೆ. ಸಂಸತ್ ಸದಸ್ಯರ ನಿಧಿಯೂ ಸೇರಿದಂತೆ ಕುಡಿಯುವ ನೀರಿನ ಅಭಾವದ ಅನುದಾನದ ಅಡಿಯಲ್ಲಿ ಕೊರೆಯಲಾಗಿರುವ ಈ ಬಾವಿಗಳು ನಿರಾಶೆ ಮೂಡಿಸಿರುವ ಹೊತ್ತಲ್ಲೇ ಬರವೂ ಬಂದು ಅಣಕಿಸುತ್ತಿದೆ.

ಸಾವಿರಾರು ಕೆರೆಗಳಿದ್ದ ಹೆಮ್ಮೆಯ ಇತಿಹಾಸವುಳ್ಳ ಜಿಲ್ಲೆಯ ಕೆರೆಗಳಲ್ಲಿ ಈಗ ಮಳೆ ನೀರು ಇಂಗುತ್ತಿಲ್ಲ. ತುಂಬುತ್ತಲೂ ಇಲ್ಲ. ಏಕಕಾಲದಲ್ಲಿ ಕೃಷಿ ಚಟುವಟಿಕೆಗಳಿಗೆ ಮತ್ತು ಕುಡಿಯಲಿಕ್ಕೆ ನೀರಿನ ಅಭಾವ ತಲೆದೋರಿರುವುದು ಜನರ ಕಷ್ಟವನ್ನು ಹೆಚ್ಚು ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT