ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

49ನೇ ರಾಷ್ಟ್ರೀಯ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಷಿಪ್: ಕರ್ನಾಟಕಕ್ಕೆ ಫೇವರಿಟ್ ಪಟ್ಟ

Last Updated 23 ಜನವರಿ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಉದ್ಯಾನ ನಗರಿಯಲ್ಲಿ ಮಂಗಳವಾರ ಆರಂಭವಾಗಲಿರುವ 49ನೇ ರಾಷ್ಟ್ರೀಯ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಳೆದ ಸಲದ ಚಾಂಪಿಯನ್ ಆತಿಥೇಯ ಕರ್ನಾಟಕವೇ ಈ ಸಲವೂ ಸಮಗ್ರ ಪ್ರಶಸ್ತಿ ಜಯಿಸುವ ಫೇವರಿಟ್. 

 ಜನವರಿ 24ರಿಂದ 28ರ ವರೆಗೆ ಚೆನ್ನಮ್ಮನ ಕೆರೆ ಅಚ್ಚುಕಟ್ಟುವಿನಲ್ಲಿರುವ ಮೈದಾನದಲ್ಲಿ ಈ ಚಾಂಪಿಯನ್‌ಷಿಪ್ ನಡೆಯಲಿದೆ. ಸ್ಕೇಟರ್‌ಗಳ ಜುಯ್... ಜುಯ್... ಎನ್ನುವ ಸದ್ದು ಸ್ಕೇಟಿಂಗ್ ಪ್ರಿಯರನ್ನು ಕಾತರದಿಂದ ಕಾಯುವಂತೆ ಮಾಡಿದೆ.

21 ರಾಜ್ಯಗಳ 700ಕ್ಕೂ ಹೆಚ್ಚು ಸ್ಪರ್ಧಿಗಳು ಇಲ್ಲಿ ಪೈಪೋಟಿ ನಡೆಸಲಿದ್ದಾರೆ. ಆತಿಥೇಯ ತಂಡದಲ್ಲಿ 68 ಸ್ಪರ್ಧಿಗಳಿದ್ದಾರೆ. ಬೆಳಿಗ್ಗೆ 10.30ರಿಂದ ರಾತ್ರಿ 9.30ರ ವರೆಗೆ ಸ್ಪರ್ಧೆಗಳು ನಡೆಯಲಿವೆ. ಇದಕ್ಕಾಗಿ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ.

ಕಳೆದ ವರ್ಷ ವಿಶಾಖ ಪಟ್ಟಣದಲ್ಲಿ ನಡೆದ 48ನೇ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ ಚಾಂಪಿಯನ್ ಆಗಿತ್ತು. 42 ಚಿನ್ನದ ಪದಕಗಳನ್ನು ಜಯಿಸಿತ್ತು. ಈ ವರ್ಷ ಪದಕದ ಸಂಖ್ಯೆ ಅರ್ಧ ಶತಕದ ಗಡಿ ದಾಟಬೇಕು ಎನ್ನುವ ಗುರಿಯನ್ನು ಕರ್ನಾಟಕ ತಂಡದ ಕೋಚ್ ಶ್ರೀಕಾಂತ್‌ರಾವ್ ಹೊಂದಿದ್ದಾರೆ.

 48 ವರ್ಷ ನಡೆದ ರಾಷ್ಟ್ರೀಯ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕ 28 ಸಲ ಪಾಲ್ಗೊಂಡಿದೆ. ಅದರಲ್ಲಿ 18 ಸಲ ಸಮಗ್ರ ಪ್ರಶಸ್ತಿಯನ್ನು ಬಾಚಿಕೊಂಡಿದೆ. ಸತತ ಆರು ವರ್ಷ ಚಾಂಪಿಯನ್ ಆಗಿರುವ ಆತಿಥೇಯರು ತವರು ನೆಲದ ಅಭಿಮಾನಿಗಳ ಸಮ್ಮುಖದಲ್ಲಿ ಏಳನೇ ಸಲ ಚಾಂಪಿಯನ್ ಆಗುವ ಗುರಿ ಹೊಂದಿದ್ದಾರೆ. ಈ ಸಲವೂ ಕರ್ನಾಟಕ ಸಮಗ್ರ ಪ್ರಶಸ್ತಿ ಜಯಿಸುವ ಫೇವರಿಟ್ ಎನ್ನುವುದಕ್ಕೆ ಈ ಅಂಕಿ ಅಂಶಗಳೇ ಸಾಕ್ಷಿ.

1991ರಲ್ಲಿ ಮೈಸೂರಿನಲ್ಲಿ ಸಬ್ ಜೂನಿಯರ್ ವಿಭಾಗದ ಸ್ಪೀಡ್ ಸ್ಕೇಟಿಂಗ್ ಚಾಂಪಿಯನ್‌ಷಿಪ್ ನಡೆದಿತ್ತು. ಸೀನಿಯರ್ ವಿಭಾಗದ ಸ್ಪರ್ಧೆಗಳು ಉದ್ಯಾನ ನಗರಿಯಲ್ಲಿ 1990ರ ನಂತರ ಇದೇ ಮೊದಲ ಬಾರಿಗೆ ನಡೆಯುತ್ತಿದೆ. ಆದ್ದರಿಂದ ಸ್ಕೇಟಿಂಗ್ ಪ್ರಿಯರ ಕುತುಹಲವೂ ಹೆಚ್ಚಿದೆ.

8ರಿಂದ 16 ವರ್ಷದೊಳಗಿನವರು ಹಾಗೂ ಮೇಲ್ಪಟ್ಟವರ ಒಟ್ಟು ಐದು ವಿಭಾಗದಲ್ಲಿ ಸ್ಪರ್ಧೆಗಳು ನಡೆಯಲಿವೆ. 300, 500, 1000ಮೀ ವಿಭಾಗದ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.

ಚೈನಿಸ್ ತೈಪಿಯಾದಲ್ಲಿ ಕಳೆದ ವರ್ಷ ನಡೆದ ಏಷ್ಯನ್ ಸ್ಕೇಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಕಂಚು ಜಯಿಸಿದ್ದ ಮೈಸೂರಿನ ವರ್ಷಾ ಎಸ್. ಪುರಾಣಿಕ (ಮಹಿಳೆಯರ ಶಾರ್ಟ್ ಸ್ಪರ್ಧೆ), ಆಕಾಶ್ ಆರಾಧ್ಯ (ಪುರುಷರ ವಿಭಾಗ), ದೀರ್ಘ ದೂರದ ಸ್ಕೇಟಿಂಗ್ ವಿಭಾಗದಲ್ಲಿ ಎಚ್.ಎ. ಪ್ರಜ್ಞಾ, 16 ವರ್ಷದೊಳಗಿನವರ ವಿಭಾಗದಲ್ಲಿ ಅಖಿಲರಾಯ್ ಚೌದ್ರಿ ಹಾಗೂ ಪೃಥಿರಾಜ್ ಹಾಗೂ ವಿ. ವರ್ಷಿತ್ ಕರ್ನಾಟಕದ ನೆಚ್ಚಿನ ಸ್ಪರ್ಧಿಗಳು.

ಪ್ರತೀಕ್ ಅನುಪಸ್ಥಿತಿ: ಕಳೆದ ವರ್ಷ ಐದು ಚಿನ್ನದ ಪದಕಗಳನ್ನು ಜಯಿಸಿದ್ದ ಪ್ರತೀಕ್ ಈಚಾಂಪಿಯನ್‌ಷಿಪ್‌ನಲ್ಲಿ ಆಡುತ್ತಿಲ್ಲ. ಅಭ್ಯಾಸ ನಡೆಸುವ ವೇಳೆ ಅವರು ಗಾಯಗೊಂಡಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT