ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4ನೇ ತಲೆಮಾರಿನ ಪ್ರೊಸೆಸರ್

Last Updated 2 ಜುಲೈ 2013, 19:59 IST
ಅಕ್ಷರ ಗಾತ್ರ

ಋತುಚಕ್ರ ತಿರುಗುವುದು, ಕಾಲನೆದೆ ಮರುಗುವುದು
ಮೃತನ ಮಣ್ಣಿಂದ ಹೊಸ ಹುಲ್ಲು ಮೊಳೆಯುವುದು
ಕ್ಷಿತಿ ಗರ್ಭ ಧರಿಸುವಳು ಮತ್ತುದಿಸುವುದು ಜೀವ
ಸತತ ಕೃಷಿಯೋ ಪ್ರಕೃತಿ
-ಮಂಕುತಿಮ್ಮ


ಸರ್ವಕಾಲಕ್ಕೂ, ಸರ್ವ ವಿಷಯಗಳಿಗೂ ಅನ್ವಯಿಸುವಂತಹ ಸಾರ್ವಕಾಲಿಕ ಪದ್ಯವಿದು. ಇಡೀ ಜಗತ್ತಿನ ಪ್ರತಿಚರಾಚರ ವಸ್ತು-ದ್ರವ್ಯ ಸತತವಾಗಿ ಬದಲಾವಣೆ ಕಾಣುತ್ತಲೇ ಇರುತ್ತವೆ.

ಯಂತ್ರ, ಗಣಕಗಳೂ ಇದಕ್ಕೆ ಹೊರತಲ್ಲ. ಗಣಕ ಪ್ರಪಂಚದಲ್ಲಿಯಂತೂ ಪ್ರತಿನಿತ್ಯ ಏನಾದರೊಂದು ಹೊಸತು ಸೃಷ್ಟಿಯಾಗುತ್ತಲೇ ಇರುತ್ತದೆ. ಈಗ ಇರುವುದೂ ಹೊಸತನಕ್ಕೆ ತೆರೆದುಕೊಂಡು ಇನ್ನಷ್ಟು ಹೊಸತಾಗಿ ಕಂಗೊಳಿಸುತ್ತದೆ. ಗಣಕದ ಮಿದುಳು ಎನಿಸಿಕೊಂಡಿರುವ ತಂತ್ರಾಂಶ(ಸಾಫ್ಟ್‌ವೇರ್) ಇರಲಿ, ಯಾಂತ್ರಿಕಾಂಶ (ಹಾರ್ಡ್‌ವೇರ್) ಆಗಿರಲಿ ಬದಲಾವಣೆಗೆ ಒಳಗಾಗುತ್ತಲೇ ಇರುತ್ತವೆ.

ಸದ್ಯ ಗಣಕದ ಯಾಂತ್ರಿಕಾಂಶ ತಯಾರಕರಲ್ಲಿ ವಿಶ್ವದಲ್ಲೇ ಮುಂಚೂಣಿಯಲ್ಲಿರುವ ಅಮೆರಿಕದ ಬಹುರಾಷ್ಟ್ರೀಯ ಕಂಪೆನಿ `ಇಂಟೆಲ್' ತನ್ನ ನಾಲ್ಕನೇ ತಲೆಮಾರಿನ ಗಣಕದ ಪ್ರಧಾನ ಸಂಸ್ಕಾರಕ ಅಂದರೆ `ಪ್ರೊಸೆಸರ್' (ಇಂಟೆಲ್ ಕೋರ್) ಭಾರತದಲ್ಲಿ ವಾರದ ಹಿಂದಷ್ಟೇ ಬಿಡುಗಡೆ ಮಾಡಿದೆ.

ಗಮನಾರ್ಹ ಪ್ರಮಾಣದಲ್ಲಿ ವಿದ್ಯುತ್ ಉಳಿತಾಯ ಎಂಬುದೇ ಈ ಪ್ರೊಸೆಸರ್ ಹೆಚ್ಚುಗಾರಿಕೆ.
ಹೌದು, ಸದ್ಯ ಅಭಿವೃದ್ಧಿಯ ಪಥದಲ್ಲಿರುವ ಭಾರತದಂತಹ ದೇಶಗಳಲ್ಲಿ ತೀವ್ರ ಕೊರತೆಯಾಗಿರುವ ಸಂಪನ್ಮೂಲಗಳಲ್ಲಿ ವಿದ್ಯುತ್ ಕೂಡ ಒಂದು. ಇದನ್ನು ಮನಗಂಡೇ ವಿದ್ಯುತ್ ಉಳಿತಾಯದ ಪ್ರೊಸೆಸರ್ ಸಂಶೋಧನೆ- ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡಲಾಗಿದೆ. ಕಳೆದ ತಲೆಮಾರಿನ ಪ್ರೊಸೆಸರ್‌ಗಿಂತ ಇದು ಸರಾಸರಿ ಶೇ 15ಕ್ಕೂ ಹೆಚ್ಚು ಕ್ಷಮತೆ ಹೊಂದಿದೆ ಎನ್ನುತ್ತದೆ ಕಂಪೆನಿ.

ಕಂಪೆನಿ ಹೇಳುವ ವೈಶಿಷ್ಟ್ಯ
ಬಹಳ ಭಿನ್ನ ಗುಣದ ಬ್ಯಾಟರಿ ಒಳಗೊಂಡಿದ್ದು, ಶೇ 15ರಷ್ಟು ವಿದ್ಯುತ್ ಉಳಿತಾಯ ಇದರಿಂದ ಸಾಧ್ಯ

*  ಬ್ಯಾಟರಿಯ ಕಾರ್ಯಕ್ಷಮತೆ ಇದರಲ್ಲಿ ಅಧಿಕ. ಸದ್ಯ ಬಳಕೆಯಲ್ಲಿರುವ ಪ್ರೊಸೆಸರ್‌ಗಳಿಗಿಂತ ಶೇ 50ರಷ್ಟು ಅಧಿಕ ಕಾರ್ಯಕ್ಷಮತೆ ಇದಕ್ಕಿದೆ

*  ಪರ್ಸನಲ್ ಕಂಪ್ಯೂಟರ್ ಹಾಗೂ ಟ್ಯಾಬ್ಲೆಟ್‌ಗಳಿಗೆ ಹೊಂದಿಕೆಯಾಗುವಂತಹ `2-ಇನ್-1' ಪ್ರೊಸೆಸರ್ ಇದಾಗಿದೆ

*  ಈವರೆಗೆ ಸಿದ್ಧಗೊಂಡ ಕಂಪ್ಯೂಟರ್‌ಗಳೆಲ್ಲದಕ್ಕಿಂತಲೂ ಎರಡು ಪಟ್ಟು ಅಧಿಕ ವೇಗದ ಪ್ರೊಸೆಸರ್ ಇದಾಗಿದೆ

*  ಹೈ-ಡೆಫೆನಿಷನ್ ವಿಡಿಯೊ, ಅಂದರೆ ಅತ್ಯಧಿಕ ಪ್ರಮಾಣದ ರೆಸಲ್ಯೂಷನ್ ಹಾಗೂ ಹೆಚ್ಚು ಸ್ಫುಟವಾದ ವಿಡಿಯೊ-ಚಿತ್ರ ದೃಶ್ಯಾವಳಿ ವೀಕ್ಷಣೆ ಇದರಿಂದ ಸಾಧ್ಯ

*  ಸದ್ಯದ ಪ್ರೊಸೆಸರ್‌ಗಳಿಗೆ ಹೋಲಿಸಿದರೆ ಚಿತ್ರಗಳನ್ನು 20 ಪಟ್ಟು ವೇಗದಲ್ಲಿ ಪರಿಷ್ಕರಿಸಬಹುದು(ಎಡಿಟ್), ಇತರೆ ಫೋಲ್ಡರ್‌ಗೆ ಅಥವಾ ಗಣಕದೊಟ್ಟಿಗೆ ಹಂಚಿಕೊಳ್ಳಬಹುದು(ಶೇರ್ ಮಾಡಬಹುದು)

*  ಜಿ.ಟಿ 3 ಗ್ರಾಫಿಕ್ ವಿನ್ಯಾಸವನ್ನು ಇದಕ್ಕೆ ಅಳವಡಿಸಿರುವುದರಿಂದ ಗ್ರಾಫಿಕ್‌ಗಳನ್ನು, ಚಿತ್ರಗಳನ್ನು ಇನ್ನಷ್ಟು ಸ್ಫುಟವಾಗಿ ನೋಡಬಹುದು

* ಭದ್ರತೆಯ ವಿಚಾರದಲ್ಲೂ ಅತ್ಯುತ್ತಮವಾಗಿದೆ. ಇದರಲ್ಲಿನ ವ್ಯವಸ್ಥೆಯನ್ನು ಮೇಲ್ದರ್ಜೆಗೆ ಏರಿಸಲಾಗಿದೆ. ಇಂಟೆಲ್ ಐಡೆಂಟಿಟಿ ಪ್ರೊಟೆಕ್ಷನ್ ಟೆಕ್ನಾಲಜಿ-4 ಹ್ಯಾಕರ್ಸ್‌ಗಳಿಂದ ಒಂದು ಹಂತದ ಸುರಕ್ಷೆ ನೀಡುತ್ತದೆ ಎಂದು ಕಂಪೆನಿ ಹೇಳಿಕೊಂಡಿದೆ. ವಿಶೇಷವಾಗಿ ಪಾಸ್‌ವರ್ಡ್, ಆನ್‌ಲೈನ್ ವ್ಯವಹಾರ ಹಾಗೂ ದತ್ತಾಂಶ ಅನ್ಯರ ಪಾಲಾಗುವುದನ್ನು ಹೆಚ್ಚು ಪರಿಣಾಮಕಾರಿಯಾಗಿ ತಡೆಯುತ್ತದೆ

*  ಮಾಹಿತಿ ಚೋರರಿಗೆ ಸವಾಲೆಸೆಯುವಂತೆ ಹೊಸ ಪ್ರೊಸೆಸರ್ ರೂಪಿಸಲಾಗಿದೆ. ಇದರಲ್ಲಿ ಆ್ಯಂಟಿ-ಥೆಫ್ಟ್ ಟೆಕ್ನಾಲಜಿ -5, ಅಂದರೆ ಮಾಹಿತಿ ಕಳವು ನಿಬರ್ಂಧ ತಂತ್ರಜ್ಞಾನ ಅಳವಡಿಸಿರುವುದರಿಂದ ಕಳವು ನಡೆದರೂ ಸುಲಭದಲ್ಲಿ ಪತ್ತೆ ಹಚ್ಚಬಹುದಾಗಿದೆ ಎನ್ನುತ್ತದೆ ಇಂಟೆಲ್

* ವೈರ್‌ಲೆಸ್ ಹಾಟ್‌ಸ್ಪಾಟ್‌ಗಳಿಗೆ ವೇಗವಾಗಿ ಸಂಪರ್ಕ ಬೆಸೆಯುತ್ತದೆ. ಇದರಲ್ಲಿ ವೈರ್‌ಲೆಸ್ ಡಿಸ್‌ಪ್ಲೇ ಇರುವುದರಿಂದ ಟಿವಿ, ಇಲ್ಲವೇ ಪ್ರೊಜೆಕ್ಟರ್‌ಗಳಿಗೆ ಹೆಚ್ಚು ಸರಾಗವಾಗಿ ಸಂಪರ್ಕ ಕಲ್ಪಿಸಬಹುದು

* ಗಣಕವನ್ನು ಚಾಲು ಮಾಡಿದಾಗ ಹಳೆಯದಕ್ಕಿಂತ ಶೇ 8ರಷ್ಟು ಕ್ಷಿಪ್ರಗತಿಯಲ್ಲಿ ಕಾರ್ಯನಿರ್ವಹಿಸಲು ಆರಂಭಿಸುತ್ತದೆ

* ಸ್ಪರ್ಶ ಸಂವೇದಿ ಪರದೆಯಲ್ಲಿ ಪ್ರತಿ ಸ್ಪರ್ಶವೂ ಕೂಡ ಹೆಚ್ಚು ಸಹಜವಾಗಿರುತ್ತದೆ 

ಗಣಕ ಯಾಂತ್ರೀಕಾಂಶಗಳ ತಯಾರಿಕಾ ಕ್ಷೇತ್ರದಲ್ಲಿ ದೊಡ್ಡ ಕಂಪೆನಿ ಇಂಟೆಲ್. ಆದಾಯ ದೃಷ್ಟಿಯಿಂದಲೂ ಮೊದಲ ಸ್ಥಾನದಲ್ಲಿ ನಿಲ್ಲುವಂತಹದ್ದು. ರಾಸಾಯನ ಶಾಸ್ತ್ರಜ್ಞ ಗೋರ್ಡನ್ ಮೋರ್ ಹಾಗೂ ಭೌತ ವಿಜ್ಞಾನಿ ರಾಬರ್ಟ್ ಜತೆಗೂಡಿ 1968ರಲ್ಲಿ ಈ ಕಂಪೆನಿಯನ್ನು ಸ್ಥಾಪಿಸಿದರು. `ಇಂಟಿಗ್ರೇಟೆಡ್ ಎಲೆಕ್ಟ್ರಾನಿಕ್ಸ್' ಎಂಬುದರ ಸಂಕ್ಷಿಪ್ತ ರೂಪವೇ `ಇಂಟೆಲ್'.

1971ರಲ್ಲಿ ಮೊದಲ ವಾಣಿಜ್ಯ ಮೈಕ್ರೊ ಪ್ರೊಸೆಸರ್ ಚಿಪ್‌ಗಳನ್ನು ಇದು ತಯಾರಿಸಿತು. ಪಿಸಿಗಳಿಗೆ ಮೈಕ್ರೊ  ಪ್ರೊಸೆಸರ್ ಅಳವಡಿಸುವ ಮೂಲಕ ಕಂಪೆನಿ ಇನ್ನಷ್ಟು ಎತ್ತರಕ್ಕೆ ಬೆಳೆಯಿತು.

`ವಿದ್ಯುತ್ ಉಳಿತಾಯ'
4ನೇ ತಲೆಮಾರಿನ ಇಂಟೆಲ್ ಕೋರ್ ಪ್ರೊಸೆಸರ್‌ನಲ್ಲಿ ಅತಿ ಮಹತ್ವದ ಸೇರ್ಪಡೆ ಎಂದರೆ ಬ್ಯಾಟರಿ ಲೈಫ್. ಗಣಕಕ್ಕೆ ವಿದ್ಯುತ್ ಪೂರೈಸುವ ಬ್ಯಾಟರಿ ಸಾಮರ್ಥ್ಯ ಹೆಚ್ಚು ಮಾಡಿರುವುದು. ಇಷ್ಟೊಂದು ವಿದ್ಯುತ್ ಉಳಿತಾಯದ ಬ್ಯಾಟರಿ ಈ ಮೊದಲು ಇರಲಿಲ್ಲ. ಅಲ್ಲದೆ `ಸಿಪಿಯು' (ಕೇಂದ್ರಿಯ ಸಂಸ್ಕರಣಾ ಘಟಕ) ಕ್ಷಮತೆ ಕೂಡ ಪರಿಣಾಮಕಾರಿ.
-ದೇಬ್‌ಜಾನಿ ಘೋಷ್, ಇಂಟೆಲ್ ದಕ್ಷಿಣ ಏಷ್ಯಾ ಕಾರ್ಯನಿರ್ವಾಹಕ ನಿರ್ದೇಶಕ


ಗಣಕ ಯಾಂತ್ರೀಕಾಂಶ ತಯಾರಿಕೆ-ಮೊದಲ 5 ಕಂಪೆನಿ
1. ಇಂಟೆಲ್
2. ಸ್ಯಾಮಸಂಗ್ ಎಲೆಕ್ಟ್ರಾನಿಕ್ಸ್
3. ಕ್ವಾಲಕಂ
4. ಟೆಕ್ಸಾಸ್ ಇನ್ಸ್ಟ್ರೂಮೆಂಟ್
5. ತೋಷಿಬಾ ಸೆಮಿಕಂಡಕ್ಟರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT