ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

4ನೇ ಬಾರಿ ಮೋದಿ ಮುಖ್ಯಮಂತ್ರಿ

ಪ್ರಮಾಣ ವಚನ ಸ್ವೀಕಾರಕ್ಕೆ ಸಾಕ್ಷಿಯಾದ ಸಾವಿರಾರು ಜನ
Last Updated 26 ಡಿಸೆಂಬರ್ 2012, 19:35 IST
ಅಕ್ಷರ ಗಾತ್ರ

ಗುಜರಾತ್ (ಪಿಟಿಐ): ರಾಜ್ಯದಲ್ಲಿ ಸತತವಾಗಿ ಮೂರನೇ ಬಾರಿಗೆ ಬಿಜೆಪಿಯನ್ನು ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದ ನರೇಂದ್ರ ಮೋದಿ ಬುಧವಾರ ನಾಲ್ಕನೇ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು.

ಸರ್ದಾರ ವಲ್ಲಭಭಾಯ್ ಪಟೇಲ್ ಕ್ರೀಡಾಂಗಣದಲ್ಲಿ ನೆರೆದಿದ್ದ ಗಣ್ಯರು, ಸಾಧು, ಸಂತರು, ಬಿಜೆಪಿ ನಾಯಕರು ಸೇರಿದಂತೆ ಸಾವಿರಾರು ಜನರ ಸಮ್ಮುಖದಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ರಾಜ್ಯಪಾಲ ಕಮಲಾ ಬೆನಿವಾಲ್ ಅವರು ಮೋದಿ ಅವರಿಗೆ ಪ್ರಮಾಣ ವಚನ ಬೋಧಿಸಿದರು.

ಪ್ರಮುಖ ವಿರೋಧ ಪಕ್ಷವಾದ ಕಾಂಗ್ರೆಸ್, ಕೇಶುಭಾಯ್ ಪಟೇಲ್ ಅವರ ಗುಜರಾತ್ ಪರಿವರ್ತನ ಪಕ್ಷ ಮತ್ತು ಎನ್‌ಡಿಎ ಮೈತ್ರಿಕೂಟದ ಪ್ರಮುಖ ಅಂಗಪಕ್ಷವಾದ ಜೆಡಿಯು ಸಮಾರಂಭವನ್ನು ಬಹಿಷ್ಕರಿಸಿದ್ದವು.ಮೋದಿ ಹೊಸ ಸಂಪುಟದ 16 ಜನರು ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಸ್ವೀಕರಿಸಿದವರ ಪೈಕಿ 7 ಜನ ಸಂಪುಟ ದರ್ಜೆ ಸಚಿವರು ಮತ್ತು 9 ಜನ ರಾಜ್ಯ ಸಚಿವರು ಸೇರಿದ್ದಾರೆ.

ಒಗ್ಗಟ್ಟು ಪ್ರದರ್ಶನ: ಮೋದಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ಬಿಜೆಪಿ ನಾಯಕರ ಒಗ್ಗಟ್ಟು ಪ್ರದರ್ಶನದ ವೇದಿಕೆಯಂತೆ ಕಂಡುಬಂತು. ಬಿಜೆಪಿ ಅಧ್ಯಕ್ಷ ನಿತಿನ್ ಗಡ್ಕರಿ, ಹಿರಿಯ ನಾಯಕರಾದ ಎಲ್.ಕೆ. ಅಡ್ವಾಣಿ, ಅರುಣ್ ಜೇಟ್ಲಿ, ಸುಷ್ಮಾ ಸ್ವರಾಜ್, ಬಿಜೆಪಿ ಮುಖ್ಯಮಂತ್ರಿಗಳಾದ ಶಿವರಾಜ್ ಸಿಂಗ್ ಚೌಹಾಣ್ (ಮಧ್ಯಪ್ರದೇಶ), ರಮಣ್‌ಸಿಂಗ್ (ಛತ್ತೀಸ್‌ಗಡ), ಜಗದೀಶ ಶೆಟ್ಟರ್ (ಕರ್ನಾಟಕ), ಅಕಾಲಿದಳದ ಪ್ರಕಾಶ್ ಸಿಂಗ್ ಬಾದಲ್ (ಪಂಜಾಬ್), ಬಿಹಾರ ರಾಜ್ಯ ಬಿಜೆಪಿ ಘಟಕದ ಅಧ್ಯಕ್ಷ ಸಿ.ಪಿ. ಠಾಕೂರ್ ಹಾಜರಾಗಿ ಪಕ್ಷದ ಒಗ್ಗಟ್ಟು ಪ್ರದರ್ಶಿಸಿದರು.

ತಮಿಳುನಾಡು ಮುಖ್ಯಮಂತ್ರಿ ಜೆ. ಜಯಲಲಿತಾ, ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ, ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ, ಆರ್‌ಪಿಐ ನಾಯಕ ರಾಮ್‌ದಾಸ್ ಅಠಾವಳೆ, ಐಎನ್‌ಎಲ್‌ಡಿ ಪಕ್ಷದ ಮುಖ್ಯಸ್ಥ ಓಂಪ್ರಕಾಶ್ ಚೌಟಾಲಾ ಸೇರಿದಂತೆ ಅನೇಕರು ಸಮಾರಂಭಕ್ಕೆ ಮೆರಗು ತಂದರು.

ಕಣ್ತುಂಬಿಕೊಂಡ ತಾಯಿ
ನೂರಾರು ಸಾಧು, ಸಂತರ ಜತೆ ಮೋದಿ ಅವರ ತಾಯಿ ಹೀರಾಬೆನ್ ಅವರು, ಮಗನ ಐತಿಹಾಸಿಕ ಸಾಧನೆಯ ಕ್ಷಣಗಳನ್ನು ಕಣ್ತುಂಬಿಕೊಂಡರು. ಹೂವುಗಳಿಂದ ಅಲಂಕರಿಸಿದ ತೆರೆದ ವಾಹನದಲ್ಲಿ 62 ವರ್ಷದ ಮೋದಿ ವಿಜಯದ ಸಂಕೇತ ತೋರಿಸುತ್ತ ಕ್ರೀಡಾಂಗಣದಲ್ಲಿ ನೆರೆದಿದ್ದ ಸಾವಿರಾರು ಬೆಂಬಲಿಗರಿಗೆ ಅಭಿನಂದನೆ ಸಲ್ಲಿಸಿದರು. ಕಿಕ್ಕಿರಿದು ತುಂಬಿದ್ದ ಕ್ರೀಡಾಂಗಣದಲ್ಲಿ 2.50 ಲಕ್ಷಕ್ಕೂ ಹೆಚ್ಚು ಅಭಿಮಾನಿಗಳಿದ್ದರು ಎಂದು ಅಂದಾಜಿಸಲಾಗಿದೆ.

ಜೀವನದ ಮರೆಯಲಾಗದ ದಿನ
`ನಾಲ್ಕನೇ ಬಾರಿ ಗುಜರಾತ್ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಈ ದಿನ ನನ್ನ ಜೀವನದಲ್ಲಿ ಎಂದಿಗೂ ಮರೆಯಲಾಗದ ಅತ್ಯಂತ ಮಹತ್ವದ ದಿನ. ರಾಜ್ಯದ ಜನರು ನನ್ನ ಮೇಲಿಟ್ಟ ಭರವಸೆ ಹಾಗೂ ವಿಶ್ವಾಸವನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ' ಎಂದು ಮೋದಿ ಸಮಾರಂಭದ ನಂತರ ಟ್ವಿಟ್ಟರ್‌ನಲ್ಲಿ ಬರೆದಿದ್ದಾರೆ.

ಹೊಸಬರೊಂದಿಗೆ ಆರೋಪಿಗಳಿಗೂ ಮಣೆ
ಈ ಬಾರಿಯ ಸಂಪುಟದಲ್ಲಿ 11 ಜನ ಹೊಸಬರಿಗೆ ಅವಕಾಶ ಮಾಡಿಕೊಡಲಾಗಿದೆ. ಮೋದಿ ಆಪ್ತ ಆನಂದಿ ಪಟೇಲ್ ಪುನಃ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಭ್ರಷ್ಟಾಚಾರ, ಅಕ್ರಮ ಗಣಿಗಾರಿಕೆ ಮತ್ತು ಕೊಲೆ ಆರೋಪ ಎದುರಿಸುತ್ತಿದ್ದರೂ, ಕಾಂಗ್ರೆಸ್‌ನ ಅತಿರಥ ಮಹಾರಥರನ್ನು ಸೋಲಿಸಿದ ಒಂದೇ ಕಾರಣಕ್ಕೆ ಶಕ್ತಿಸಿನ್ಹಾ ಸೋಲಂಕಿ ಭೋಕಿರಿಯಾ ಅವರಿಗೆ ಮೋದಿ ಸಂಪುಟದಲ್ಲಿ ಸ್ಥಾನ ಕಲ್ಪಿಸಿದ್ದಾರೆ.

ಸೋಲಂಕಿ ಮೀನುಗಾರಿಕೆ ಗುತ್ತಿಗೆ ಹಗರಣದಲ್ಲಿ 400 ಕೋಟಿ ರೂಪಾಯಿ ಅವ್ಯವಹಾರದ ಆರೋಪ ಹೊತ್ತಿದ್ದಾರೆ. ಪೋರ್‌ಬಂದರ್ ಶಾಸಕ ಭೋಕಿರಿಯಾ ಮೇಲೆ ಕೊಲೆ ಮತ್ತು ಅಕ್ರಮ ಗಣಿಗಾರಿಕೆ ಆರೋಪಗಳಿವೆ.

ದೂರ ಸರಿದ ಆಪ್ತರು
ಪಶ್ಚಿಮ ರಾಜ್‌ಕೋಟ್‌ನಿಂದ ಏಳು ಬಾರಿ ಆಯ್ಕೆಯಾದ ಮಾಜಿ ಹಣಕಾಸು ಸಚಿವ ವಾಜು ವಾಲಾ ಹಾಗೂ ಕಳೆದ ಸಂಪುಟದಲ್ಲಿ ಸಂಪುಟ ದರ್ಜೆಯ ಸಚಿವರಾಗಿದ್ದ ನರೋತ್ತಮ್ ಪಟೇಲ್, ಮಾಂಗು ಪಟೇಲ್ ಸಮಾರಂಭದಿಂದ ದೂರ ಉಳಿದರು.

ಕಳೆದ ಸಂಪುಟದಲ್ಲಿ ಸ್ಥಾನ ಪಡೆದಿದ್ದ ಜಸ್ವಂತ್ ಸಿನ್ಹಾ ಭಬೋರ್, ವಾಸನ್ ಅಹಿರ್, ಈಶ್ವರ್ ಸಿನ್ಹಾ ಪಟೇಲ್, ಜಯದ್ರತ ಸಿನ್ಹಾ ಪಾರ್ಮಾ, ಜೀತು ಸುಖಾಡಿಯಾ, ಶಹಾಬುದ್ದೀನ್ ನಕಲಿ ಎನ್‌ಕೌಂಟರ್ ಪ್ರಕರಣದಲ್ಲಿ ಬಂಧಿತರಾಗಿದ್ದ ಮಾಜಿ ಗೃಹ ಸಚಿವ ಹಾಗೂ ಮೋದಿ ಆಪ್ತ ಅಮಿತ್ ಷಾ ಅವರು ಈ ಬಾರಿಯ ಸಂಪುಟದಲ್ಲಿ ಸ್ಥಾನ ಪಡೆದಿಲ್ಲ.

ಎದ್ದುಕಂಡ ಗೈರು
ಈ ಬಾರಿ ಸಚಿವ ಸಂಪುಟದಲ್ಲಿ ಅನೇಕ ಹೊಸ ಮುಖಗಳಿಗೆ ಮಣೆ ಹಾಕಲಾಗಿದ್ದು, ಕಳೆದ ಸರ್ಕಾರದಲ್ಲಿದ್ದ ಅನೇಕ ಸಚಿವರು, ಪ್ರಭಾವಿ ಶಾಸಕರು ಸಮಾರಂಭಕ್ಕೆ ಗೈರು ಹಾಜರಾಗಿದ್ದುದು ಎದ್ದು ಕಾಣುತಿತ್ತು. ಇದು ಅನೇಕ ಅನುಮಾನಗಳಿಗೆ ಅವಕಾಶ ಮಾಡಿಕೊಟ್ಟಿದೆ.ನಿರೀಕ್ಷೆಯಂತೆ ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷವಾದ ಜೆಡಿಯು ನಾಯಕ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಸಮಾರಂಭದಿಂದ ದೂರ ಉಳಿದರು. ಆದರೆ, ಉಪ ಮುಖ್ಯಮಂತ್ರಿ ಹಾಗೂ ಬಿಜೆಪಿಯ ನಾಯಕ ಸುಶೀಲ್ ಕುಮಾರ್ ಅವರ ಅನುಪಸ್ಥಿತಿ ಆಶ್ಚರ್ಯ ಮೂಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT